ಚಳ್ಳಕೆರೆ: ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ನಸುಕಿನಲ್ಲಿ ನಡೆದಿದೆ.
ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಹಳ್ಳಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 150ರಲ್ಲಿ, ತಳಕು ಕಡೆಯಿಂದ ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿ ಹಾಗೂ ಮೊಳಕಾಲ್ಮೂರು ಕಡೆಯಿಂದ ಬೂದಿ ತುಂಬಿಕೊಂಡು ಬರುತ್ತಿದ್ದ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಹಗರಿಬೊಬ್ಬನಹಳ್ಳಿಯ ಲಾರಿ ಡ್ರೈವರ್ ಶಿವರಾಜ್(35) ಮತ್ತು ಟಿಪ್ಪರ್ ಲಾರಿ ಚಾಲಕ ಮಧ್ಯಪ್ರದೇಶದ ಸುರೇಂದ್ರ ಡಾಕಡ್(50) ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಬೂದಿ ಲಾರಿಯಲ್ಲಿದ್ದ ಬೊಮ್ಮಲಿಂಗನಹಳ್ಳಿ ಗ್ರಾಮದ ಪ್ರಕಾಶ್, ಆಂಜನೇಯ, ತಿಪ್ಪೇಶಿ, ತಿಪ್ಪೇಸ್ವಾಮಿ ಅವರುಗಳಿಗೆ ತೀವ್ರತರವಾದ ಗಾಯಗಳಾಗಿದ್ದು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪಿಎಸ್‌ಐ ಕೆ. ಸತೀಶ್ ನಾಯ್ಕ್ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post