ಮನುಷ್ಯ ಯೋಜನೆ ಮಾಡುವಂತೆಯೇ ಬದುಕುತ್ತಾನೆ. ಅನುಭವಿಸುತ್ತಾನೆ. ಸಮಾಜ ಜೀವಿಯಾಗಿ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾನೆ. ಈ ಮಣ್ಣಿನಿಂದ ಬಂದ ಅವನಿಗೆ ಈ ಮಣ್ಣಿನಂಶ ಅಂಟಿಕೊಂಡೇ ಇರುತ್ತದೆ. ಹೂವಿಗೆ ಸುವಾಸನೆ ಇರುವಂತೆ ವ್ಯಕ್ತಿಗೆ ತಾನು ಜನ್ಮ ತಾಳಿದ ಭೂಮಿಯ ವಾಸನೆ, ಸತ್ವ, ಅದರಿಂದ ವ್ಯಕ್ತಿತ್ವ ಬೆಳೆಯುತ್ತದೆ. ಅದಕ್ಕಾಗಿ ಅವನು ತನ್ನ ಜೀವನವನ್ನು ಅರಳಿಸಿಕೊಳ್ಳಲು ಹಲವು ರೀತಿಯ ಸಾಮಾಜಿಕ ಘಟನೆಗಳಿಗೆ ತುತ್ತಾಗುತ್ತಾನೆ. ಅದರ ಅನುಭವದಿಂದ ಈ ಸಮಾಜಕ್ಕೆ ಏನಾದರೂ ಒಳ್ಳೆ ಕಾರ್ಯಮಾಡಿ ಮಣ್ಣಿನ ಋಣವನ್ನು ತೀರಿಸುವಲ್ಲಿ ವೈಯಕ್ತಿಕವಾಗಿಯಾಗಲಿ ಇಲ್ಲವೇ ಇಡೀ ಕುಟುಂಬವೇ ಆಗಲಿ ಇಲ್ಲದಿದ್ದಲ್ಲಿ ಊರಿಗೆ ಊರೇ ಮುಂದಾಗುತ್ತದೆ. ಅದರಲ್ಲಿ ಸಾರ್ಥಕತೆ ಆನಂದ ಕಂಡುಕೊಳ್ಳುವುದು ಸಹಜ ಧರ್ಮವಾಗಿ ಬಿಡುತ್ತದೆ. ಈ ಭೂಮಿಯ ಮಹಿಮೆಯೇ ಹೀಗೆ ಎಂದು ಹೇಳಿದರೆ ಅತಿಶಯೋಕ್ತಿಯಾಗದು.
ಧಾರ್ಮಿಕ, ಸಾಂಸ್ಕೃತಿಕ, ಪುರಾಣ, ಇತಿಹಾಸ, ಇತ್ತೀಚಿನ ಸ್ವಾತಂತ್ರ್ಯ ಹೋರಾಟ ಯಾವುದೇ ಪುಟಗಳನ್ನು ತಿರುವಿ ಹಾಕಿದರೂ ಈ ಮಣ್ಣಿಗಾಗಿ ಈ ತಾಯಿನಾಡಿಗಾಗಿ ಅದೆಷ್ಟು ತ್ಯಾಗ, ಬಲಿದಾನ, ಸೇವೆ, ಶ್ರಮ, ಹೋರಾಟ ಆಗಿಹೋಗಿವೆ; ರಾಮನಿಗಾಗಿ ಒಂದು ಸಣ್ಣ ಪ್ರಾಣಿ ಮಾಡಿದ ಸೇವೆ ಅಳಿಲು ಸೇವೆಯಾಗಿ ನಾಡಿನಲ್ಲಿ ಆದರ್ಶವಾಗಿ ಮೆರೆದಿದೆಯಲ್ಲವೇ!
ಅದರಂತೆ ಈ ಸಮಾಜದ ಸೇವೆಯಲ್ಲಿ ಪತ್ರಿಕೋದ್ಯಮದ ಹಾದಿಯಲ್ಲಿ ‘ಬ್ರಹ್ಮತೇಜ’ ಒಂದು ವಿಶ್ವಧರ್ಮ/ಸೇವಾ ದತ್ತಿ ಸ್ಥಾಪಿಸಿ ಅದರ ವತಿಯಿಂದ ಮುಂದಾಗಿದೆ.

ದೇಶದ ದಕ್ಷಿಣದ ಕನ್ಯಾಕುಮಾರಿ ರಾಮೇಶ್ವರದಿಂದ ಹಿಡಿದು, ಉತ್ತರದ ಬದರಿನಾಥ, ಹರಿದ್ವಾರ, ಕಾಶಿ, ಕಾಶ್ಮೀರ ಇತ್ಯಾದಿ ಕ್ಷೇತ್ರಗಳಲ್ಲಿ ದರ್ಶನ, ಪತ್ರ ನದಿಗಳಾದ ಗಂಗೆ, ಯಮುನೆ, ಸರಸ್ವತಿ, ಪಾಲ್ಗುಣಿ, ಅಲಕಾನಂದ, ನರ್ಮದಾ, ಸಿಂಧು, ಭಾಗೀರಥಿ, ಮಂದಾಕಿನಿ, ತ್ರಿವೇಣಿ ಸ್ನಾನ- ರಮಣೀಯ ಕಲಾವಂತಿಕೆಯ ಪ್ರೇಕ್ಷಣೀಯ ಸ್ಥಳಗಳ ದರ್ಶನದಿಂದ ನಮ್ಮ ನಾಡಿನ ಹಿರಿಯರು ಈ ದೇಶಕ್ಕೆ ಧರ್ಮ, ಸಂಸ್ಕೃತಿ, ಇತಿಹಾಸ ಕಲೆಗಾಗಿ ಮಾಡಿದ ಶ್ರಮ, ತ್ಯಾಗ, ಹೋರಾಟ ಇವುಗಳ ಜೊತೆಜೊತೆಯಲ್ಲಿ ಆದರ್ಶರೀತಿ ಬಾಳಿ ಬದುಕಿದ ರೀತಿಯನ್ನು ತಿಳಿದು ಮನ ರೋಮಾಂಚನಗೊಂಡಿತು.
ಬಾಳಿಗೊಂದು ಸ್ಫೂರ್ತಿ ನೀಡಿತು. ಪ್ರವಾಸ ಮುಗಿಸಿದ ನಮ್ಮ ಮನಸ್ಸಿನಲ್ಲಿ ಪ್ರಸಕ್ತ ದೇಶದ ಪರಿಸ್ಥಿತಿಯಲ್ಲಿ ಜನರು ತಮ್ಮ ಜೀವನದಲ್ಲಿ ಧಾರ್ಮಿಕತೆಯಲ್ಲಿರುವ ನಿರುತ್ಸಾಹ, ದೇಶದ ಹಿರಿಯ ಪ್ರಾತಃಸ್ಮರಣೀಯ ವ್ಯಕ್ತಿಗಳ ಬಗ್ಗೆ ಇರುವ ಅಜ್ಞಾನ, ದೇಶದ ಇತಿಹಾಸ, ಪುರಾಣಗಳ ಬಗ್ಗೆ ಇರುವ ತಪ್ಪು ಕಲ್ಪನೆ, ಯುವಪೀಳಿಗೆಯಲ್ಲಿ ಕಂಡು ಬರುತ್ತಿರುವ ಪಾಶ್ಚಾತ್ಯ ನಾಗರಿಕತೆಯ ಅನುಕರಣೆ ಹಾಗೂ ಸ್ವೇಚ್ಛಾಚಾರ, ರಾಷ್ಟ್ರೀಯ ಹಿತದೃಷ್ಟಿಯ ಮನೋಭಾವನೆಯ ಲೋಪ, ಇವೆಲ್ಲದರಿಂದ ನಮ್ಮ ಸಮಾಜ ತತ್ತರಿಸಿ ಹೋಗುತ್ತಿರುವುದರ ಬಗ್ಗೆ ಚಿಂತೆ ಮೂಡಿತು. ದೇಶದಲ್ಲಿ ವಿದ್ಯಾಭ್ಯಾಸದ ನೀತಿ, ನಾಯಕರ ನಡವಳಿಕೆ, ದೇಶದ ಪರಿಸ್ಥಿತಿಯು ಯಾವುದೇ ರೀತಿಯಲ್ಲಿ ಭಾರತೀಯ ಜೀವನಕ್ಕೆ ಪೋಷಕವಾಗಿದೆ, ಧಾರ್ಮಿಕ ಆಚರಣೆಗೆ ಬೆಂಬಲವಿಲ್ಲದೆ, ದೇಶದ ಆಚಾರ ವಿಚಾರಗಳಿಗೆ ಪ್ರೋತ್ಸಾಹಲ್ಲದೆ ಧರ್ಮ, ಪುರಾಣ, ಇತಿಹಾಸಗಳಿಗೆ ಉತ್ತೇಜನಲ್ಲದೆ ಸೊರಗುತ್ತಿರುವುದರ ಬಗ್ಗೆ ಮನಸ್ಸು ನೊಂದಿತು.
ಇದರ ನಿವಾರಣೆಗಾಗಿ ಸ್ವಲ್ಪವಾದರೂ ಅಳಿಲು ಸೇವೆಗೆ ಮನಸ್ಸು ತವಕಿಸುತ್ತಿತ್ತು. ಶ್ರೀರಾಮನ ಸೇವೆ ಮಾಡಿದ ಅಳಿಲಿನ ಸ್ಮರಣೆ ಆಚಂದ್ರಾರ್ಕವಾಗಿದೆ. ಆದರೆ ಇಂದಿನ ಇಂಥ ಅದೆಷ್ಟೋ ಅಳಿಲು ಸೇವೆ ನಡೆದರೂ ಆ ಕಾಲದ ಆದರ್ಶ ನಾಯಕತ್ವ ಇಂದಿನದಾಗಿಲ್ಲ. ಸ್ವಾರ್ಥಕ್ಕೆ ಸೇವೆ ಸಮಾಜಮಯವಾಗಿದೆ. ತತ್ವನಿಷ್ಠೆ, ಸಮಾಜಸೇವೆ, ನಿಸ್ವಾರ್ಥದಿಂದ ಅದೆಷ್ಟು ಜನರಲ್ಲಿದೆ! ನನ್ನಲ್ಲಿ ಆ ಅಳಿಲಿನಂಥ ಕಿಂಚಿತ್ ಕಾರ್ಯ ಈ ಸಾಮಾಜಿಕ ಜೀವನದಲ್ಲಿ ಮಾಡಬಾರದೇಕೆ ಎಂಬ ಚೇತನ, ಚಿಂತನೆ, ನನ್ನ ಮನಸ್ಸಿನಲ್ಲಿ ಅರಳಿಸುತ್ತಿತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ.

ಸಕ್ರಿಯ ಕಾರ್ಯಕರ್ತನಾಗಿ ಕರ್ನಾಟಕದ ಹಲವು ಕಡೆ ಪ್ರಯಾಣಿಸಿ, ಬ್ರಾಹ್ಮಣರ ಸಂಘಟನೆ, ಬೆಂಗಳೂರು ನಗರ ಬ್ರಾಹ್ಮಣರ ಸಂಘಟನೆಯ ಜವಾಬ್ದಾರಿ, ಹೊಣೆ, ಗಾಯತ್ರಿ ಚಿಂತನ ವರ್ಷದಲ್ಲಿ ಕರ್ನಾಟಕದಾದ್ಯಂತ ಮನೆ ಮನೆಗಳಲ್ಲಿ ಬ್ರಾಹ್ಮಣರ ತ್ರಿಮತಸ್ಥ ಗುರುಗಳಾದ ಶ್ರೀಶಂಕರ, ಮಧ್ವಾಚಾರ್ಯ, ರಾಮಾನುಜರ ಭಾವಚಿತ್ರಗಳ ಕ್ಯಾಲೆಂಡರ್ ಮುದ್ರಿಸುವಂತೆ ಯೋಜನೆ ಮಾಡಿ ಬ್ರಾಹ್ಮಣರಲ್ಲಿ ಧಾರ್ಮಿಕ ಜಾಗೃತಿ ಕಾರ್ಯದಲ್ಲಿ ಶ್ರಮಿಸಿದನು. ಹೀಗೆ ಇದೇ ಹಾದಿಯಲ್ಲಿ ಮುಂದುವರೆಯುತ್ತಿರುವ ವೆಂಕಟರಾಮಯ್ಯನಲ್ಲಿ ಯಾವುದಾದರೊಂದು ಮಾಧ್ಯಮದ ಮುಖಾಂತರ ಈ ಸಮಾಜದಲ್ಲಿ ಧಾರ್ಮಿಕ, ಪ್ರಚಾರ ಹಿಂದೂ ಧರ್ಮದ ಮತಕ್ಕೆ ಶ್ರಮಿಸಿದ ಮಹಾಪುರುಷರ ಹಾಗೂ ಸಾಮಾಜಿಕ ಜಾಗೃತಿಯನ್ನುಂಟು ಮಾಡುವ ವಿಷಯ ಲೇಖನಗಳನ್ನು ಪ್ರಕಟಿಸಿ ಈ ಸಮಾಜದ ಋಣವನ್ನು ತೀರಿಸುವ ಒಂದು ಪುಣ್ಯ ಕಾರ್ಯ ಪ್ರಾರಂಭಿಸುವುದಕ್ಕೆ ಒಂದು ಯೋಜನೆ ಮಾಡಬೇಕಾಗಿದೆ.
ಯೋಜನೆ ತಯಾರಿ ಮಾಡುವ ಅಭಿಪ್ರಾಯ, ಚರ್ಚೆ ಹಾಗೂ ಮಂಥನ ಕೈಗೊಂಡು, ಒಂದು ಮಾಸಿಕ ಪತ್ರಿಕೆಯನ್ನು ಹೊರತರುವ ಅಭಿಪ್ರಾಯಕ್ಕೆ ಬರಲಾಯಿತು. ಅದರಂತೆ ಅನೇಕ ಧಾರ್ಮಿಕ ಪುಸ್ತಕಗಳನ್ನು, ಲೇಖನಗಳನ್ನು ಓದತೊಡಗಿದರು. ಇದರಿಂದ ಪ್ರೇರಿತರಾಗಿ ಮುಂಜಾನೆ ಪತ್ರಿಕೆಯ ಉಪಸಂಪಾದಕರಾಗಿದ್ದ ಹಿರಣ್ಣಯ್ಯನವರು, ಬಿ. ಎಸ್. ನಂಜುವಮ್ಮಯ್ಯ, ಸತ್ಯನಾರಾಯಣ (ಹೊರಸ) ವಿದ್ವಾನ್ ಎನ್. ರಂಗನಾಥಶರ್ಮಾ ಇವರುಗಳ ಮಾರ್ಗದರ್ಶನ ಪಡೆದು, ಒಂದು ಮಾಸಪತ್ರಿಕೆಯನ್ನು ಹೊರತರಲು ಉದ್ದೇಶಿಸಲಾಯಿತು. ಪತ್ರಿಕೆಯ ಉದ್ದೇಶ, ಧ್ಯೇಯ ಧೋರಣೆಗಳಿಗೋಸ್ಕರ ಪ್ರಸಿದ್ಧ ಲೇಖಕರಾದ ಶ್ರೀವರದದೇಶಿಕಾಚಾರ್, ಶ್ರೀಭಾರತೀ ರಮಣಾಚಾರ್, ಶ್ರೀ ರಂಗನಾಥಶರ್ಮ, ಶ್ರೀ ಬಾಲಗಣಪತಿ ಭಟ್ಟ, ಪದ್ಮನಾಭ ಮುಂತಾದವರಿಂದ ಮಾರ್ಗದರ್ಶನ ಪಡೆಯಲಾಯಿತು. ಪತ್ರಿಕೆಯ ವಿನ್ಯಾಸ, ರೂಪರೇಷೆಗಳನ್ನೂ, ಮುದ್ರಣ ಮಾಹಿತಿಯನ್ನು ನೀಡುವಲ್ಲಿ ಶ್ರೀ ನಂಜುಮ್ಮಯ್ಯ ತುಂಬು ಆಸಕ್ತಿವಹಿಸಿ ನೆರವಾದರು. ಕೇಸರಿ ಮುದ್ರಾಣಾಲಯದಲ್ಲಿ ‘ಬ್ರಹ್ಮತೇಜ’ ಪ್ರಥಮ ಸಂಚಿಕೆ ಪ್ರಕಟಗೊಂಡು, ಶ್ರೀ ಶ್ರೀ ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥಸ್ವಾಮಿಗಳವರ ಅಮೃತಹಸ್ತದಿಂದ ದಿನಾಂಕ 01.04.1985ರಂದು ಬೆಂಗಳೂರು ಶ್ರೀ ಶೃಂಗೇರಿ ಶಂಕರಮಠದಲ್ಲಿ ಸಮಾರಂಭವನ್ನೇರ್ಪಡಿಸಿ ಯಶಸ್ವಿಯಾಗಿ ಬಿಡುಗಡೆಯಾಯಿತು.

ಬ್ರಹ್ಮತೇಜ ಬಳಗವು 40000 ಕ್ಕೂ ಹೆಚ್ಚು ಸ್ಫರ್ಧಿಗಳಿಗೆ ಬಹುಮಾನ ತರಿಸಿತು. ಬ್ರಹ್ಮತೇಜ ವೆಂಕಟರಾಮಯ್ಯನವರು. ಎಚ್.ಪಿ.ಗೆ ಆಕರ್ಷಿತರಾಗಿ ಅಲ್ಲಿ ಶ್ರೀರಾಮ ಶಿಲಾಪೂಜೆಯ ಉತ್ಸವದಲ್ಲಿ ಪಾಲ್ಗೊಂಡರು. ಬೆಂಗಳೂರು ನಗರದಲ್ಲಿ ಧಾರ್ಮಿಕ ಪ್ರಚಾರಕ್ಕಾಗಿ 2 ಅಲಂಕೃತ ಆಟೋರಿಕ್ಷಾಗಳು ಬೆಂಗಳೂರಿನಾದ್ಯಂತ ಸಂಚರಿಸಿದವು ಹಾಗೂ 2 ದೊಡ್ಡ ರಥಗಳು (1) ಕಾಲಭೈರವ ರಥ ಆದಿಚುಂಚನಗಿರಿಯಿಂದ ಬೆಂಗಳೂರು ಮಾರ್ಗವಾಗಿ ಅಯೋಧ್ಯೆವರೆಗೂ ಮತ್ತು (2) ಮಂಜುನಾಥ ರಥ ಧರ್ಮಸ್ಥಳದಿಂದ ಬೆಂಗಳೂರು ಮಾರ್ಗವಾಗಿ ಅಯೋಧ್ಯೆಗೆ ಕಳಿಸಲ್ಪಟ್ಟಿತು.

ಭಜನಾ ಸಾಮ್ರಾಟ್ ಡಾ. ಬ್ರಹ್ಮತೇಜ ವೆಂಕಟರಾಮಯ್ಯ
ಹೊಳೇನರಸೀಪುರದ ದಿವಂಗತ ವೇದಬ್ರಹ್ಮ ಶ್ರೀಕಂಠಯ್ಯ ಹಾಗೂ ಸದ್ಗುಣ ಸಂಪನ್ನೆ ಶ್ರೀಮತಿ ಗುಂಡಮ್ಮನವರಲ್ಲಿ 1937ರ ಆಷಾಢ ಮಾಸದಲ್ಲಿ ಜನನ, ವಿದ್ಯಾಭ್ಯಾಸದ ನಂತರ ಐಟಿಐನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ 1975ರಲ್ಲಿ ದೇಶದ ತುರ್ತುಪರಿಸ್ಥಿತಿಯಲ್ಲಿ ಭಾಗಿ, 1978ರಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಂಘವನ್ನು ಕರ್ನಾಟಕದಲ್ಲಿ ತರುವುದರಲ್ಲಿ ಹಾಗೂ ಸರ್ಕಾರದ ಬೃಹತ್ ಉದ್ದಿಮೆಗಳಲ್ಲಿ ಬ್ರಾಹ್ಮಣರ ಸಂಘಟನೆಯನ್ನು ಹಾಗೂ ಐಟಿಐ ಬ್ರಾಹ್ಮಣ ಸಂಘವನ್ನು ಸ್ಥಾಪಿಸಿ ಆನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿರುತ್ತಾರೆ.
1985ರಲ್ಲಿ ಬ್ರಹ್ಮತೇಜ ಧಾರ್ಮಿಕ ಮಾಸಪತ್ರಿಕೆಯನ್ನು ಬಿಡುಗಡೆ ಮಾಡಿ ಪತ್ರಿಕಾ ರಂಗದಲ್ಲಿ ಕ್ರಾಂತಿಯನ್ನು ಮಾಡಿ ಅದೇ ಹೆಸರಿನಿಂದ ಇಂದಿಗೂ ಗುರುತಿಸಿಕೊಂಡಿರುವ ಹೆಗ್ಗಳಿಕೆ ನಿಮ್ಮದು.

1989ರಲ್ಲಿ ವಿಶ್ವ ಹಿಂದು ಪರಿಷತ್ತಿನ ಶ್ರೀ ರಾಮ ಜನ್ಮಭೂು ಹೋರಾಟದಲ್ಲಿ ಬೆಂಗಳೂರು ನಗರದ ಜವಾಬ್ದಾರಿ, 1993 ಆದಿಶಂಕರ ಪ್ರತಿಷ್ಠಾನದಿಂದ ಅನೇಕ ಕಡೆ ಆದಿಶಂಕರ ತತ್ವ ಪ್ರಸಾರವನ್ನು ಸಪ್ತಾಹ ರೂಪದಲ್ಲಿ ನಡೆಸುತ್ತಾ ಬಂದಿರುತ್ತಾರೆ. 2013- ಅಖಿಲ ಕರ್ನಾಟಕ ಸತ್ಸಂಗ ಭಜನಾ ಮಂಡಳಿಯನ್ನು ಸ್ಥಾಪಿಸಿ, ಕ್ಷೇತ್ರ ದೇವಾಲಯದ ದರ್ಶನ, ದೇವರಿಗೆ ಅಭಿಷೇಕ, ಪೂಜೆ, ಭಜನೆಯನ್ನು ಅನೇಕ ದೇವಾಲಯಗಳಲ್ಲಿ ಪ್ರಾರಂಭ, ಕರ್ನಾಟಕದ ವಿವಿಧ ಭಾಗಗಳಲ್ಲಿ 250 ಭಜನಾ ಮಂಡಳಿಗಳನ್ನು ಸ್ಥಾಪನೆ. 2015 ಪ್ರಥಮ ರಾಜ್ಯಮಟ್ಟದ ಭಜನಾ ಸಮ್ಮೇಳನ ಆಯೋಜನೆ. ಹನುಮನ ಜಯಂತಿ ಭಜನಾ ದಿನವಾಗಲೆಂದು ಹನುಮ ರಥಯಾತ್ರೆ ಪ್ರಾರಂಭ, 2016 ಹಿಂದೂ ಧರ್ಮವನ್ನು ಒಗ್ಗೂಡಿಸಲು ಶಿವ, ಲಲಿತಾ, ವಿಷ್ಣು ಸಹಸ್ರನಾಮವನ್ನು (ಚಕ್ರಪಾರಾಯಣ)ವನ್ನು ಪ್ರಾರಂಭಿಸಿ ಅದರಲ್ಲಿ 15,000ಕ್ಕೂ ಹೆಚ್ಚಿನ ಜನರನ್ನು ಸಂಘಟಿಸಿದ್ದಾರೆ.
2017- ಉತ್ತರ ಕರ್ನಾಟಕದಲ್ಲಿ 10 ಜಿಲ್ಲೆಗಳ ಕೇಂದ್ರವನ್ನು ತೆರೆದು ಅಲ್ಲಿ 2,000ಕ್ಕೂ ಹೆಚ್ಚಿನ ಭಜನಾರ್ಥಿಗಳನ್ನು ಸಂಘಟಿಸಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ 2017ನೇ ಸಾಲಿನ ಬಿಬಿಎಂಪಿಯ ಪ್ರತಿಷ್ಟಿತ ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರಸಿರುತ್ತಾರೆ.
ಇವೆಲಲಕ್ಕೂ ಕಲಶವಿಟ್ಟಂತೆ ಇಂಡಿಯನ್ ವರ್ಚುಯಲ್ ಯುನಿವರ್ಸಿಟಿ ಫಾರ್ ಪೀಸ್ ಆಂಡ್ ಎಜುಕೇಷನ್, ಬೆಂಗಳೂರು ಇವರ ವತಿಯಿಂದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ತಮಗೆ ಗೌರವ ಡಾಕ್ಟರೇಟ್ (ಡಾಕ್ಟರೇಟ್ ಫಾರ್ ಭಜನಾ ಸಂಸ್ಕೃತಿ) ಪದವಿಯನ್ನು ನೀಡಿ ಗೌರವಿಸಿದೆ.
ನಿರೂಪಣೆ : ಹಿಂದಿ ಮಾರ್ತಾಂಡ ಕೆ.ವಿ. ಶ್ರೀನಿವಾಸಮೂರ್ತಿ







Discussion about this post