ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ (Dadasaheb Phalke)ಭಾಜನರಾಗಿರುವ ಕನ್ನಡದ ಹಿರಿಯ ನಟ ಅನಂತನಾಗ್ (Ananthnag) ಅವರ ನಿವಾಸಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಬೆಂಗಳೂರಿನಲ್ಲಿರುವ ಅನಂತ್ ನಾಗ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವರು, ಹಿರಿಯ ನಟರನ್ನು ಹೃದಯಪೂರ್ವಕವಾಗಿ ಅಭಿನಂದಿಸಿ, ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಕನ್ನಡ ಚಿತ್ರರಂಗಕ್ಕೆ ಅನಂತ್ ನಾಗ್ ಅವರು ನೀಡಿರುವ ಕೊಡುಗೆಯನ್ನು ಈ ಸಂದರ್ಭದಲ್ಲಿ ಸಚಿವರು ಸ್ಮರಿಸಿದರು.
Dadasaheb Phalke : ಐದು ದಶಕಗಳ ಚಿತ್ರರಂಗದ ಸೇವೆ
ಈ ವೇಳೆ ಮಾತನಾಡಿದ ವಿ. ಸೋಮಣ್ಣ, ಭಾರತೀಯ ಚಿತ್ರರಂಗಕ್ಕೆ, ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ಅನಂತ್ ನಾಗ್ ಅವರು ಕಳೆದ ಐದು ದಶಕಗಳಿಂದ ಸಲ್ಲಿಸಿರುವ ಸೇವೆ ಅಪೂರ್ವವಾದದ್ದು ಎಂದು ಹೇಳಿದರು.
ತಮ್ಮ ವಿಶಿಷ್ಟ ಅಭಿನಯ, ವಿಭಿನ್ನ ಪಾತ್ರಗಳ ಆಯ್ಕೆ ಹಾಗೂ ದೀರ್ಘಕಾಲದ ಕಲಾಸೇವೆಯ ಮೂಲಕ ಅನಂತ್ ನಾಗ್ ಅವರು ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಅವರ ಕಲಾಸೇವೆಗೆ ದೇಶದ ಅತ್ಯುನ್ನತ ಚಿತ್ರರಂಗದ ಗೌರವ ದೊರೆತಿರುವುದು ಸಂತಸದ ವಿಚಾರ ಎಂದು ಸಚಿವರು ಹೇಳಿದರು.
ಕನ್ನಡಿಗರಿಗೆ ಹೆಮ್ಮೆಯ ಕ್ಷಣ
ಡಾ. ರಾಜ್‌ಕುಮಾರ್ ಅವರ ನಂತರ ಮತ್ತೊಬ್ಬ ಕನ್ನಡಿಗರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ವಿ. ಸೋಮಣ್ಣ ಅಭಿಪ್ರಾಯಪಟ್ಟರು.
Also Read>> ಬೆಂಗಳೂರು ರೈಲು ನಿಲ್ದಾಣದಲ್ಲಿ ‘ಆಶೀರ್ವಾದದ ದೀಪ’ | ರೈಲ್ವೆ ಸಿಬ್ಬಂದಿಗೆ ಸಚಿವ ಸೋಮಣ್ಣ ಸನ್ಮಾನ
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರ ಸಾಧನೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿರುವುದು ಸಂತಸದ ಬೆಳವಣಿಗೆಯಾಗಿದ್ದು, ಅನಂತ್ ನಾಗ್ ಅವರಂತಹ ಹಿರಿಯ ಕಲಾವಿದರಿಗೆ ದೊರೆಯುತ್ತಿರುವ ಗೌರವ ಮುಂದಿನ ಪೀಳಿಗೆಯ ಕಲಾವಿದರಿಗೂ ಪ್ರೇರಣೆಯಾಗಲಿದೆ ಎಂದು ಅವರು ಹೇಳಿದರು.
ಅನಂತ್ ನಾಗ್ ಅವರ ನಿವಾಸಕ್ಕೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಚಿತ್ರರಂಗದ ವಿವಿಧ ವಿಚಾರಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









