ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಾತಾಪಿತರಿಂದ ಮಕ್ಕಳಿಗೆ ಭೌತಿಕವಾದ ಶರೀರ ಪ್ರಾಪ್ತವಾಗುತ್ತದೆ. ಈ ಭೌತಿಕವಾದ ಶರೀರದೊಂದಿಗೆ ರೂಪ ಸಾಮ್ಯತೆಗಳು, ಚಲನ-ವಲನ, ಮಾತು-ಕೃತಿ, ರೀತಿ-ನೀತಿ, ನಡತೆ-ನಡವಳಿಕೆಗಳು, ಸಂಸ್ಕಾರ-ಸಂಸ್ಕೃತಿ, ಹವ್ಯಾಸ-ಅಭ್ಯಾಸಗಳೂ ವಂಶವಾಹಿನಿಯ ಮೂಲಕ ಅವರ ಸಂತಾನಕ್ಕೆ ವರ್ಗಾವಣೆಯಾಗುವುದು ಸಹಜವಾಗಿದೆ.
ಕೆಲವರಲ್ಲಿ ಮಾತಾಪಿತರ ಗುಣಾಂಶಗಳು ಅಧಿಕವಾಗಿದ್ದರೆ ಹಲವರಲ್ಲಿ ನಿಮಿತ್ತ ಮಾತ್ರವಾಗಿರಬಹುದು. ಸಾಹಿತ್ಯ, ಸಂಗೀತ, ಕಲೆ, ಹವ್ಯಾಸಕ್ಕೆ ಸಂಬಂಧಿಸಿದಂತೆ ಹಲವು ಉದಾಹರಣೆಗಳು ಕಾಣಸಿಗುತ್ತವೆ. ಸಾಹಿತಿಯ ಮಗ/ಮಗಳು ಸಾಹಿತಿಯಾಗಿರುವುದು. ನಾಟಕ/ಚಲನಚಿತ್ರ ನಟರ ಮಕ್ಕಳು ಅಭಿನಯ ಕ್ಷೇತ್ರದಲ್ಲಿ ಮಿಂಚುವುದು. ಸಂಗೀತಗಾರರ ಮಕ್ಕಳು ಅದೇ ಕ್ಷೇತ್ರದಲ್ಲಿ ಖ್ಯಾತರಾಗುವುದು ಇದೆ. ಬಯಲು ವಿಶ್ವವಿದ್ಯಾಲಯದ ಎಂದು ಕರೆಯಲ್ಪಡುವ ಯಕ್ಷರಂಗದಲ್ಲೂ ತಂದೆ ಮಕ್ಕಳ ಹೆಸರು ಆಗಾಗ ಕೇಳಿಬರುತ್ತದೆ.
ಕೆರೆಮನೆ ಕುಟುಂಬದಲ್ಲಿ ಕೆಲವರು, ಚಿಟ್ಟಾಣಿಯವರ ಮಗ, ಜಲವಳ್ಳಿಯವರ ಮಗ, ಪುತ್ತೂರು ಸೀನಪ್ಪ ಭಂಡಾರಿಯವರ ಪುತ್ರ ಶ್ರೀಧರ ಭಂಡಾರಿ ಹಾಗೂ ಕೆಲವು ಭಾಗವತರ ಮಕ್ಕಳು ಭಾಗವತರಾಗಿ ಖ್ಯಾತಿಗಳಿಸಿದಿದ್ದುಂಟು. ಸುಮಾರು ಒಂದು ದಶಕದಿಂದ ಈಚೆಗೆ ಕೊಂಡದಕುಳಿ ರಾಮಚಂದ್ರ ಹೆಗ್ಗಡೆಯವರ ಮಗಳು ಅಶ್ವಿನಿಯವರು ಬಹಳಷ್ಟು ಹೆಸರು ಮಾಡಿದ್ದಾರೆ. ಈಗ ಅಶ್ವಿನಿಯವರ ಸಾಲಿಗೆ ಹೊಸತಾದ ಹೆಸರೊಂದು ತೆಂಕಿನಿಂದ ಸೇರ್ಪಡೆಗೊಂಡು ಬಹಳಷ್ಟು ಚಲಾವಣೆಯಲ್ಲಿದ್ದಾರೆ ಆಜ್ಞಾ ಸೋಹಮ್.
ಇವರು ತೆಂಕಣದ ದ್ವಾರದಿಂದ ಓಡ್ಡೊಲಗ ಕೊಟ್ಟವರಾದರೂ ಉಭಯ ತಿಟ್ಟುಗಳಲ್ಲೂ ಪಳಗಿದ ಕಲಾವಿದೆ. ಆಜ್ಞಾ ಸೋಹಮ್ ಹೆಸರೇ ಒಂದು ಮಂತ್ರವಾಗಿದೆ. ಹೆಚ್ಚಿನ ಉಪನಿಷತ್ತುಗಳಲ್ಲಿ ಉಲ್ಲೇಖಿಸಲ್ಪಡುವ ಅವನೇ ನಾನು ಎಂಬುದನ್ನು ಮಂತ್ರವಾಗಿ ಸೋಹಮ್/ಸೋಹಂ ಎಂದು ಉಚ್ಚರಿಸಲಾಗುತ್ತದೆ.
ಆಜ್ಞಾ ಸೋಹಮ್ ತೆಂಕುತಿಟ್ಚಿನ ಹೆಸರಾಂತ ಕಲಾವಿದ, ಪ್ರಸಂಗಕರ್ತ, ಸಂಘಟಕ, ಯಕ್ಷಗಾನ ವಿಮರ್ಶಕ, ಸಂಪಾದಕ, ಯಕ್ಷ ಪತ್ರಿಕೋದ್ಯಮಿ ತಾರಾನಾಥ ವರ್ಕಾಡಿ ಹಾಗೂ ವೈದ್ಯರಾದ ಡಾ. ಪ್ರೇಮಲತಾ ದಂಪತಿಗಳ ಸುಪುತ್ರಿ. ತಾರಾನಾಥ ವರ್ಕಾಡಿ ತೆಂಕುತಿಟ್ಟು ಯಕ್ಷರಂಗದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯಿಂದ ಪರಿಚಿತರು. ಸಣ್ಣ ಸಣ್ಣ ವಾಕ್ಯಗಳ ಪದಲಾಲಿತ್ಯಗಳಿಂದ ಕೂಡಿದ ಅರ್ಥಗಾರಿಕೆ. ಸಮತೋಲನದ ನಾಟ್ಯಾಭಿನಯದಿಂದ ಯಕ್ಷರಸಿಕರ ಅಂತರಂಗದೊಳಗೆ ಇಳಿಯುವ ಕಲೆ ಬಲ್ಲವರು. ತನಗೆ ದೊರೆತ ಚಿಕ್ಕ ಪಾತ್ರವನ್ನೂ ಚೊಕ್ಕದಾಗಿ ಅಭಿಯಿಸುವ ಕೌಶಲ್ಯ ತಾರಾನಾಥ ವರ್ಕಾಡಿಯವರದು. ವಿಷ್ಣು, ರಾಮ, ಕೃಷ್ಣ, ಸುಧನ್ವ ಮುಂತಾದ ಪಾತ್ರಗಳು ವರ್ಕಾಡಿಯವರಿಗೆ ತಾರಮೌಲ್ಯ ತಂದುಕೊಟ್ಟಿವೆ.
ಇನ್ನು, ವಿವಿಧ ಮೇಳಗಳಲ್ಲಿ ಸುಮಾರು ಮೂವತ್ತೈದು ವರ್ಷಗಳ ತಿರುಗಾಟ ನಡೆಸಿದವರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರೂ ಆಗಿದ್ದರು. ಹಲವು ವರ್ಷಗಳಿಂದ ಬೆಳ್ಮಣ್ಣಿನಲ್ಲಿ ನೆಲೆಸಿರುವ ಅವರು ಆಜ್ಞಾ ಸೋಹಮ್ ಎಂಬ ಪ್ರಕಾಶನ ಸಂಸ್ಥೆಯಿಂದ ’ಬಲ್ಲಿರೇನಯ್ಯ’ ಎಂಬ ಯಕ್ಷಗಾನ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ. ವರ್ಕಾಡಿಯವರೇ ಬರೆಯುವ ’ಕೇಳಿ’ ಎಂಬ ಸಂಪಾದಕೀಯ ಬರಹ, ’ಅಹೋ ದಕ್ಕಿತು’ ಎಂಬ ಓದುಗರ ಅಂಕಣ, ’ಡಂಗುರ’ ಎಂಬ ತಿಂಗಳ ಕಾರ್ಯಕ್ರಮಗಳ ಪಕ್ಷಿನೋಟಗಳಿಂದ ಸಂತುಳಿತಗೊಂಡ ವಿಶಿಷ್ಟವಾದ ಯಕ್ಷಪತ್ರಿಕೆ ’ಬಲ್ಲಿರೇನಯ್ಯ.’
ಸಂಸ್ಕಾರವಂತ ಸಂಸಾರದಲ್ಲಿ ಜನಿಸಿರುವ ಆಜ್ಞಾ ಅವರಿಗೆ ಜೀಕುವ ತೊಟ್ಟಿಲಿನೊಂದಿಗೆ ಕೇಳಿದ ಲಾಲಿಹಾಡಲ್ಲೂ ಯಕ್ಷಗಾನ ಬೆರೆತಿತ್ತು. ತಂದೆಯವರಿಂದ ಬಳುವಳಿಯಾಗಿ ಬಂದಿರುವ ಯಕ್ಷಗಾನ ಬಾಲ್ಯದಲ್ಲೇ ಮೈತಬ್ಬಿ ನವಿರೇಳಿಸುತ್ತಿತ್ತು.
ತೆಂಕುತಿಟ್ಟು ಶೈಲಿಗೆ ಮನೆಯೇ ಮೊದಲ ಪಾಠಶಾಲೆಯಾಗಿ ತಂದೆಯೇ ಪ್ರಥಮ ಗುರುವಾದರು. ಬಡಗುತಿಟ್ಟು ನಾಟ್ಯಗಾರಿಕೆಗೆ ಪ್ರಸಿದ್ಧ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರ ಗರಡಿಯಲ್ಲಿ ಪಳಗಿದ ಆಜ್ಞಾ ಅವರು ಧನ್ಯರು. ಮುಂದೇ ಸುಬ್ರಮಣ್ಯ ಪ್ರಸಾದ್, ಶೈಲೇಶ್ ನಾಯಕ್ ಅವರಿಂದಲೂ ಯಕ್ಷಶಿಕ್ಷಣ ಪಡೆದರು. ಆಜ್ಞಾ ಅವರು ಎಂಟನೆಯ ತರಗತಿಯಲ್ಲಿರುವಾಗ ಯಕ್ಷರಂಗ ಪ್ರವೇಶ ಮಾಡಿದವರು. ಮೊದಲು ಗೆಜ್ಜೆ ಕಟ್ಟಿದ್ದು ಜಾಂಬವತಿ ಕಲ್ಯಾಣದ ಜಾಂಬವತಿ ಪಾತ್ರಕ್ಕೆ. ತನ್ನ ಪ್ರತಿಭೆಯ ಕ್ಷಿತಿಜವನ್ನು ಯಕ್ಷಗಾನ, ಶಾಲಾ ಶಿಕ್ಷಣಕ್ಕೆ ಸೀಮಿತ ಗೊಳಿಸಿಕೊಂಡವರವರಲ್ಲ. ರಂಗಭೂಮಿಯ ಶಿಕ್ಷಣವನ್ನು ಜಗನ್ ಪವಾರ್ ಅವರಿಂದ ಸಂಗೀತವನ್ನು ಶ್ರೀಮತಿ ರಾಧಾ ನಾಯಕ್ ಅವರಿಂದ ಪಡೆದರು. ಸೇಯಕನ್ ವಿಜಿ ಎಂಬ ಗುರುಗಳಿಂದ ಕರಾಟೆಯ ಪಟ್ಟುಗಳನ್ನೂ ಕರಗತ ಮಾಡಿಕೊಂಡವರು ಆಜ್ಞಾ ಸೋಹಮ್.
ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದಿರುವ ಆಜ್ಞಾ ಅವರು ಪಠ್ಯ ಶಿಕ್ಷಣದಲ್ಲೂ ಅಗ್ರಸ್ಥಾನವನ್ನು ಕಾಯ್ದಕೊಂಡವರು. ಪ್ರಸ್ತುತ ಮೂಲ್ಕಿಯ ವಿಜಯ ಕಾಲೇಜಿನಲ್ಲಿ ಅಂತಿಮ ವರ್ಷದ ವಿಜ್ಞಾನ ಸ್ನಾತಕ ಪದವಿ ವ್ಯಾಸಂಗದಲ್ಲಿ ನಿರತರು. ಆಜ್ಞಾ ಅವರು ಯಕ್ಷಗಾನದಲ್ಲಿ ನಿರ್ವಹಿಸಿದ ಪಾತ್ರಗಳ ಯಾದಿ ಹನುಮ ಬಾಲದಂತಿದೆ. ಸುದರ್ಶನ ವಿಜಯದ ಸುದರ್ಶನ, ಸುವರ್ಣಶಾಲಿನಿ ಪ್ರಸಂಗದ ಭೂದೇವಿ, ಜಾಂಬವತಿ ಕಲ್ಯಾಣದ ಕೃಷ್ಣ, ಸೀತಾಪಹಾರದ ಸೀತೆ, ಲಕ್ಷ್ಮೀ ಸ್ವಯಂವರದ ಲಕ್ಷ್ಮೀ, ಗದಾಯುದ್ಧದ ಅಶ್ಷತ್ಥಾಮ, ಕಚ-ದೇವಯಾನಿಯ ಶರ್ಮಿಷ್ಠೆ, ನರಕಾಸುರ ಮೋಕ್ಷದ ಕೃಷ್ಣ, ಸತ್ಯಭಾಮೆ, ಕೃಷ್ಣಾರ್ಜುನ ಕಾಳಗದ ಸುಭದ್ರಾ, ಅಂದಕ ಮೋಕ್ಷದ ಪಾರ್ವತಿ, ಇತ್ಯಾದಿ ಪಾತ್ರಗಳನ್ನು ಯಕ್ಷರಸಿಕರು ಮೆಚ್ಚುವಂತೆ ಅಭಿನಯಿಸಿದವರು. ತಲಪಾಡಿ ಯಕ್ಷೋತ್ಸವ 2018ರಲ್ಲಿ ಬಾನುಕ, 2019ರಲ್ಲಿ ಕಾರ್ತವೀರ್ಯಾರ್ಜುನ ಕಾಳಗದ ಕಾರ್ತವೀರ್ಯಾರ್ಜನನ ಮಡದಿಯ ಪಾತ್ರಮಾಡಿ ಯಕ್ಷ ವಿಮರ್ಶಕರೂ ಮೆಚ್ಚುವಂತೆ ಮಾಡಿದ್ದಾರೆ. ಪಂಚವಟಿ ಪ್ರಸಂಗದ ಮಾಯಾ ಶೂರ್ಪನಖಿ, ಸೀತೆ, ತಾಟಕಿವಧೆಯ ರಾಮ, ಶ್ವೇತಕುಮಾರ ಚರಿತ್ರೆಯ ರಂಭೆ ಮೊದಲಾದ ಪಾತ್ರಗಳನ್ನು ಪ್ರಬುದ್ಧವಾಗಿ ನಿರ್ವಹಿಸಿದ್ದಾರೆ.
ಕಾಲೇಜಿನ ಕಾರ್ಯಕ್ರಮ ಶೃಂಗಾರ ವಿಹಾರ ನಾಟ್ಯ ವೈಭವದ ಜಯಂತನಾಗಿ, ಬಡಗುತಿಟ್ಟು ಯಕ್ಷನೃತ್ಯದಲ್ಲಿ ಕೃಷ್ಣನಾಗಿ ನಾಟ್ಯಾಭಿನಯ ಮಾಡಿದ್ದಾರೆ. ಪುತ್ತೂರಿನಲ್ಲಿ ’ನಾಟ್ಯ ವೈಭವ’, ಎಡನೀರು, ಇರುವೈಲು, ಚೀರುಂಭಾ ಭಗವತಿ, ತಲಕಳ ಮೇಳಗಳಲ್ಲಿ ವಿವಿಧ ಪಾತ್ರಗಳ ನಿರ್ವಹಣೆ ಮಾಡಿದ್ದಾರೆ. ಆಜ್ಞಾ ಅವರು ಆಟಕ್ಕೂ ತಾಳಮದ್ದಲೆ ಕೂಟಕ್ಕೂ ತಮ್ಮನ್ನು ತಾವು ಸರಿತೂಗಿಸಿಕೊಂಡವರು. ಗರುಡ ಗರ್ವಭಂಗದ ನಾರದ, ಭೀಷ್ಮ ವಿಜಯದ ಸಾಲ್ವ, ಸುಧನ್ವ ಮೋಕ್ಷದ ಪ್ರಭಾವತಿಯಾಗಿ ಅರ್ಥ ಹೇಳಿದ ಹೆಗ್ಗಳಿಕೆ ಆಜ್ಞಾ ಅವರದು.
ಯಕ್ಷಗಾನ, ತಾಳಮದ್ದಲೆಯಂತಹ ಅಭಿಜಾತ ಕಲೆಯೊಂದಿಗೆ ಆಜ್ಞಾ ಅವರು ಹಲವು ಪ್ರತಿಭೆಗಳ ಆಗರವಾಗಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ಕಾರ್ಯಕ್ರಮ ನಿರೂಪಣೆ, ಪತ್ರಿಕೆಯ ಪುಟ ವಿನ್ಯಾಸ, ನಾಟಕಗಳಲ್ಲಿ ಅಭಿನಯ, ಸಂಗೀತ, ಕರಾಟೆ, ಛಾಯಾಗ್ರಹಣ, ಲೇಖನ, ಕಥೆ, ಕವನ, ಪ್ರಬಂಧ ಬರೆಯುವುದು, ಭಾಷಣ ಮಾಡುವುದು ಇತ್ಯಾದಿ ಇವರ ಹವ್ಯಾಸ. ಅಂತರ್ ಕಾಲೇಜು ಮಟ್ಟದ ಅನೇಕ ಸಂಕಿರಣ, ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವ ಅವರದು.
ಅವರ ಸಾಧನೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಮೇ 2019 ರಲ್ಲಿ ಬಲ್ಯಾಯ ಸಂಘದಿಂದ ಸನ್ಮಾನ, ಡಿಸೆಂಬರ್ 2019 ರಲ್ಲಿ ಪುತ್ತೂರು ಯುವಸಂಘದಲ್ಲಿ ಪ್ರತಿಭಾ ಪುರಸ್ಕಾರ, ಗೋವಿಂದದಾಸ ಕಾಲೇಜಿನಲ್ಲಿ ಜನವರಿ 2020ರಲ್ಲಿ ನಡೆದ ಯಕ್ಷಯಾನ’ ವಿಶ್ವವಿದ್ಯಾಲಯ ಮಟ್ಟದ ಅಂತರಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ’ ’ಪುಂಡುವೇಷ’ ವಿಭಾಗದಲ್ಲಿ ನರಕಾಸುರ ಮೋಕ್ಷದ ’ಶ್ರೀಕೃಷ್ಣನ’ ಪಾತ್ರಕ್ಕೆ ಪ್ರಥಮ ಬಹುಮಾನ ಪಡೆದಿರುವರು. ವಿಜಯಾ ಕಾಲೇಜಿನ 2019-2020ರ ಶೈಕ್ಷಣಿಕ ವರ್ಷದಲ್ಲಿ ಸಾಹಿತ್ಯಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಹಲವು ಸಾಹಿತ್ಯ ಕಾರ್ಯಕ್ರಮಗಳನ್ನು ಸಂಯೋಜಿಸಿದ ಹಿರಿಮೆ ಆಜ್ಞಾ ಅವರದು. ಫೆಬ್ರವರಿ 2020ರಲ್ಲಿ ಯಕ್ಷತಾರಾ ಮೇಳ ಎಂಬ ಸಂಸ್ಥೆಯ ಸ್ಥಾಪನೆ. ಸಿರಿಬಾಗಿಲು ಪ್ರತಿಷ್ಠಾನ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರ ವಿಭಾಗದಲ್ಲಿ ಕೊರೋನಾ ದಿಗ್ಬಂಧನ-ನಾನು ಕಲಿತ ಪಾಠ ವಿಷಯದಲ್ಲಿ ಪ್ರಬಂಧ ಬರೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಇತ್ತೀಚೆಗೆ, ತೆರೆಮರೆಯಲ್ಲಿರುವ ಯಕ್ಷಗಾನ ಕಲಾವಿದೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹುರಿಗೆಜ್ಜೆ (ಯಕ್ಷಕನ್ಯೆ) ಬ್ಲಾಗ್ ಮತ್ತು ಪೇಜ್ ಬರವಣಿಗೆ ಪ್ರಾರಂಭಿಸಿದ್ದಾರೆ. ಬಜಪೆ ವಿಜಯ ವಿಠ್ಠಲ ಯಕ್ಷಗಾನ ಕೇಂದ್ರ ನನ್ನ ಕಲಾಸಕ್ತಿಗೆ ಒದಗಿಸಿದ ಅನೇಕ ಅವಕಾಶಗಳನ್ನು ಮನದಾಳದಿಂದ ನೆನೆಯುತ್ತಾರೆ.
ಯಕ್ಷಗಾನ ಕಲೆಯ ಆರಾಧಕರು, ಪತ್ರಕರ್ತರೂ ಆಗಿರುವ ತಂದೆ, ಶಿಸ್ತಿನ ವೈದ್ಯೆಯಾಗಿರುವ ತಾಯಿಯವರ ನಿರಂತರ ಪ್ರೋತ್ಸಾಹ, ಪ್ರೇರಣೆಯಿಂದ ಈ ಎಲ್ಲ ಸಾಧನೆ ಮಾಡಲು ಸಾಧ್ಯವಾಯಿತೆಂದು ಕೃತಜ್ಞತರಾಗುತ್ತಾರೆ. ಆಜ್ಞಾ ಸೋಹಮ್ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಲಿಟ್ಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲೆ, ನಯ್ಕಾಪು ಇಲ್ಲಿಂದ ಮಾಡಿದವರು. ಫ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಬೆಳ್ಮಣ್ಣಿನ ಲಕ್ಷ್ಮಿ ಜನಾರ್ದನ ಅಂತಾರಾಷ್ಟ್ರೀಯ ವಿದ್ಯಾಲಯದಿಂದ ಮಾಡಿ, ಬಿಎಸ್ಸಿ ಪದವಿಯನ್ನು ಮೂಲ್ಕಿಯ ವಿಜಯ ಕಾಲೇಜಿನಿಂದ ಮಾಡುತ್ತಿದ್ದಾರೆ.
ಸುಮಾರು ಎರಡು ದಶಕಗಳಿಂದ ಕರಾವಳಿಯಲ್ಲಿ ಮಹಿಳೆಯರ ಹಾಗೂ ಹೆಣ್ಮಕ್ಕಳ ಒಲವು ಯಕ್ಷಕಲೆಯತ್ತ ವಾಲಿದೆ. ಆಕಾಡೆಮಿ ಮಾಡದಷ್ಟು ಕಾರ್ಯವನ್ನು ಯಕ್ಷರಂಗಕ್ಕೆ ಸಂಬಂಧಿಸಿದ ಸಂಸ್ಥೆಗಳು ಮಾಡುತ್ತಿರುವುದು ಶ್ಲಾಘನೀಯ. ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಂತೆ ಹಲವಾರು ಕಾಲೇಜುಗಳಲ್ಲಿ ಯಕ್ಷತರಬೇತಿ ನೀಡುತ್ತಿರುವುದು ಅಭಿಜಾತ ಕಲೆಯ ಸೇವೆಯೇ ಆಗಿದೆ. ’ಅಹೋ ದಕ್ಕಿತು’ ಎಂಬಂತೆ ಅವಕಾಶಗಳನ್ನು ದಕ್ಕಿಸಿಕೊಂಡು ಕಠಿಣ ಪರಿಶ್ರಮದಿಂದ ಅರ್ಜಿಸಿದ ಆಜ್ಞಾ ಅವರ ಸಾಧನೆ ನಿಜಕ್ಕೂ ಅನನ್ಯವಾದದು. ಈ ಅನನ್ಯವಾದ ಸಾಧನೆ ಹುಡುಗಿಯರಿಗೆ ಮಾತ್ರವಲ್ಲ ಹುಡುಗರಿಗೂ ಒಂದು ಪ್ರೇರಕ ಶಕ್ತಿಯಾಗಲಿ. ಆಜ್ಞಾ ಅವರ ಭವಿತವ್ಯದ ಬದುಕಿನ ಕಿರೀಟದಲ್ಲಿ ಮತ್ತಷ್ಟು, ಮಗದಷ್ಟು ಸಾಧನೆಯ ಗರಿಗಳು ಪೋಣಿಸಲ್ಪಡಲಿ.
Get In Touch With Us info@kalpa.news Whatsapp: 9481252093
Discussion about this post