ಕಲ್ಪ ಮೀಡಿಯಾ ಹೌಸ್ | ಗುರುಪುರ |
“ಗುರುಪುರ ಗೋಳಿದಡಿ ಗುತ್ತಿನಲ್ಲಿ ಇದೇ ತಿಂಗಳ 17ರಿಂದ 19ರವರೆಗೆ ಮೂರು ದಿನಗಳ ಕಾಲ ಗುತ್ತುದ ವರ್ಸೊದ ಪರ್ಬೊ 12ನೇ ವಾರ್ಷಿಕ ಉತ್ಸವ ಕಾರ್ಯಕ್ರಮ ಜರುಗಲಿದೆ” ಎಂದು ಗುತ್ತಿನ ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹೇಳಿದರು.
ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಬ್ರಹ್ಮಋಷಿ ಕೆ.ಎಸ್ ನಿತ್ಯಾನಂದರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ದೇವತಾಕಾರ್ಯಗಳು ಸಂಪನ್ನಗೊಳ್ಳಲಿದೆ. ಈ ವಿಶೇಷ ಸಂಭ್ರಮಾಚರಣೆಯಲ್ಲಿ ಆಸಕ್ತರು, ಗುತ್ತಿನವರು, ಬೀಡಿನವರು, ಬಾವ ಮತ್ತು ಬಾರಿಕೆ ಮನೆತನದವರು ಹಾಗೂ ಈ ಮನೆತನಗಳ ಗಡಿಕಾರರು ಆಗಮಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನಾ ಸತ್ಸಂಗ, ಧಾರ್ಮಿಕ ಸಭೆ, ಗ್ರಾಮೀಣ ಸಂತೆ, ಗ್ರಾಮೀಣ ಭಾಗದ ಪುರುಷರಿಗೆ ಮತ್ತು ಮಹಿಳೆಯರಿಗೆ ಶಕ್ತಿ ಕಲ್ಲು ಎತ್ತುವ ಸ್ಪರ್ಧೆ, ನಿರಂತರ ಊಟೋಪಚಾರ, ಅತಿಥಿ ಸತ್ಕಾರಗಳೊಂದಿಗೆ ಜರಗಲಿರುವುದು” ಎಂದು ಮಾಹಿತಿ ನೀಡಿದರು.
ಗುತ್ತಿನ ವೈಶಿಷ್ಟ್ಯತೆ
ಗುತ್ತು, ಬಾವ, ಬಾರಿಕೆ (ಬರ್ಕೆ) ಬೀಡು, ಅರಸು ಮನೆತನಗಳು ಪ್ರಾಚೀನ ಭಾರತದ ಕಾಲದಿಂದಲೂ ಸಮಾಜಕ್ಕೆ ನೆಮ್ಮದಿಯ ಬದುಕನ್ನು ತಾವು ಅನುಸರಿಸುತ್ತಿದ್ದ ಧರ್ಮಾಡಳಿತ ಹಿನ್ನಲೆಯಿಂದ ನಿರ್ವಹಿಸುತ್ತಾ ಬಂದಿರುತ್ತದೆ. ದೇಶದಾದ್ಯಂತ ಅಲ್ಲಲ್ಲಿನ ಪ್ರಾದೇಶಿಕತೆಗೆ ಅನುಗುಣವಾಗಿ ಈ ಮನೆತನಗಳು ಬೇರೆ ಬೇರೆ ಹೆಸರಿನಲ್ಲಿ ಸಮಾಜದಲ್ಲಿ ಗುರುತಿಸಲ್ಪಟ್ಟಿದೆ. ಈ ರೀತಿಯ ಧರ್ಮಾಡಳಿತ ಭಾಗದಲ್ಲಿ ಗುತ್ತಿನ ಮನೆಗಳು ತಮ್ಮ ನ್ಯಾಯ ನಿರ್ವಹಣೆ, ಸಾಮಾಜಿಕ ನ್ಯಾಯಗಳಿಂದ ಜನ ಮಾನಸದಲ್ಲಿ ಭಕ್ತಿ ಪೂರ್ವಕವಾಗಿ ಗೌರವಾದರಗಳಿಂದ ಭದ್ರವಾದ ಸ್ಥಾನವನ್ನು ಪಡೆದಿದ್ದವು. ಕಾಲಕ್ರಮೇಣದಲ್ಲಿ ಬದಲಾವಣೆಗೊಳ್ಳುತ್ತಾ ಬಂದ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯಲ್ಲಿ ಈ ಮನೆತನಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡರೂ ಈ ದೇಶದ ಗ್ರಾಮೀಣ ಭಾಗಗಳಲ್ಲಿ ದೇವತಾರಾಧನೆ ಮತ್ತು ದೈವರಾಧನೆಯಲ್ಲಿ ಅದರ ನಿರ್ವಹಣೆಯಲ್ಲಿ ಮಾತ್ರ ಇಂದಿಗೂ ತಮ್ಮ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬಂದಿದೆ.
ತುಳುನಾಡಿನಲ್ಲಿ ಗುತ್ತಿನ ಮನೆಗಳು ಎಂದು ಕರೆಯಲ್ಪಡುವ ಈ ಮನೆತನಗಳು ದೇಶದಾದ್ಯಂತ ಬೇರೆ ಬೇರೆ ಹೆಸರಿನಲ್ಲಿ ಅಲ್ಲಿನ ಪ್ರಾದೇಶಿಕತೆಗೆ ಅನುಗುಣವಾಗಿ ಗುರುತಿಸಿಕೊಂಡಿದೆ.
ಗುತ್ತಿನ ಮನೆ
ಜನರ ಭಾರವನ್ನು ಹೊರುವವರು ಎಂಬ ಅರ್ಥದಲ್ಲಿ “ಗುತ್ತು” ಎಂಬ ಶಬ್ದ ಬಳಕೆಯಲ್ಲಿದೆ. ಭಾರವಾಹಕ ಅಂದರೆ ಹಿಂದಿನ ಕಾಲದಲ್ಲಿ ತಲೆಹೊರೆಯಲ್ಲಿ ಸಾಮಾನುಗಳನ್ನು ತಲೆಹೊರೆಯಲ್ಲಿ ಸಾಗಣೆ ಸಾಗಿಸುತ್ತಿದ್ದ ಭಾಗದಲ್ಲಿ ಗೆಟ್ಟಣೆ, ರಟ್ಟೆ, ಗುತ್ತಿನ ಕಂಬ ಹೀಗೆ ಮಧ್ಯ ದಾರಿಯಲ್ಲಿ ವ್ಯವಸ್ಥೆ ಇರುತ್ತಿತ್ತು. ಇದು ಈ ಹೊರೆಯನ್ನು ಸಾಗಿಸುತ್ತಿದ್ದ ವ್ಯಕ್ತಿಯ ತಲೆಯ ಎತ್ತರಕ್ಕೆ ಇರುತ್ತಿತ್ತು. ಹೊರೆ ಸಾಗಿಸುವ ವ್ಯಕ್ತಿಗಳು ಆಯಾಸವಾದಾಗ ಇದರ ಮೇಲೆ ಆ ಹೊರೆಯನ್ನು ತತ್ಕಾಲಕ್ಕೆ ಇಳಿಸಿ, ಆಯಾಸ ಪರಿಹರಿಸಿಕೊಂಡು ಪುನರಪಿ ಯಾವುದೇ ವ್ಯಕ್ತಿಯ ಸಹಾಯ ಇಲ್ಲದೇ ಆ ಹೊರೆಯನ್ನು ಈ ಕಟ್ಟೆಯಿಂದ ತಾನೇ ತಲೆ ಮೇಲೆ ಇಟ್ಟು ಮುಂದೆ ನಡೆಯುತ್ತಿದ್ದರು. ಅದನ್ನು ಗುತ್ತು” ಇಲ್ಲವೇ “ಗುತ್ತಿನ ಕಂಬ” ಎಂದು ಕರೆಯುತ್ತಿದ್ದರು.
ಗುತ್ತಿನ ಮನೆಯ ಗಡಿಕಾರ!
ಜನ ಹಿತಕ್ಕಾಗಿಯೇ ಗುತ್ತಿನ ಮನೆಯ ಹಿರಿಯ ಗಡಿ ಹಿಡಿದು (ಸಮಾಜದ ಹಿತ ಚಿಂತನೆ ಮಾಡುವ ಧರ್ಮ ಬದ್ಧ ದೀಕ್ಷೆ) ತನ್ನೆಲ್ಲಾ ಕುಟುಂಬ ಸತಿ, ಸುತರಿಂದ ಆಧ್ಯಾತ್ಮಿಕವಾಗಿ ಹೊರಗುಳಿದು ಪೂರ್ತಿಯಾಗಿ ಸಮಾಜಕ್ಕಾಗಿಯೇ ತಮ್ಮನ್ನು ತಾವು ತೊಡಗಿಸಿಕೊಳ್ಳುವರೇ ಗಡಿಕಾರ ಎಂದು ಸಂಭೋದಿಸಲ್ಪಡುತ್ತಾರೆ. ಗಡಿಕಾರನು ಸತ್ಯವಂತನೂ, ಪ್ರಾಮಾಣಿಕನೂ, ರಾಜ ಪ್ರೀತನೂ, ದೇವ ಬ್ರಾಹ್ಮಣರಲ್ಲಿ ಗೌರವವಿಡುವವನೂ ಸಕಲರನ್ನೂ ಮೇಲು-ಕೀಳು ಎಂಬ ಭೇದವಿಲ್ಲದೆ ಏಕಭಾವದಿಂದ ನೋಡುವವನೂ ಆಗಿರಬೇಕು. ತನ್ನ ಸ್ವಂತ ಪರಿಶ್ರಮದಿಂದ ಜೀವನ ನಿರ್ವಹಣೆ, ನಿತ್ಯ ಧರ್ಮ ದೇವತೆಗಳ ಪೂಜೆ, ಪಂಚ ದೈವ ಆರಾಧನೆ, ನಿತ್ಯ ಚಾವಡಿ ಸಮಾರಾಧನೆ ಸುತ್ತದ ಸಮಾಜದ ಭಿನ್ನತೆಗಳನ್ನು, ನ್ಯಾಯಗಳನ್ನು ಪರಿಹರಿಸುವುದು ಇತ್ಯಾದಿಗಳಲ್ಲಿ ಭಿನ್ನತೆಯಾಗದಂತೆ ನೋಡಿಕೊಂಡು ಅದರ ಜತೆಯಲ್ಲಿ ತನ್ನ ಕೌಟುಂಬಿಕ ಜೀವನ ನಿರ್ವಹಣೆಯಲ್ಲಿ ಕೂಡಾ ಭಿನ್ನತೆಯಾಗದಂತೆ ನೋಡಿಕೊಂಡು ತನ್ನ ಜೀವನ ರೀತಿಯನ್ನು ನಿರ್ವಹಿಸುವುದು ಗಡಿಕಾರನ ಮೂಲಭೂತ ಕರ್ತವ್ಯಗಳಾಗಿವೆ.
ಗುರುಪುರ ಗೋಳಿದಡಿಗುತ್ತು!
ಗುರುಪುರದ 12 ಗುತ್ತಿನ ಮನೆಗಳಲ್ಲಿ ಗೋಳಿದಡಿಗುತ್ತು ಕೂಡಾ ಒಂದಾಗಿದೆ. ಗುರುಪುರ (ಫಲ್ಗುಣಿ) ನದಿ ತಟಾಕದಲ್ಲಿ ಗೋಳಿದಡಿಗುತ್ತಿನ ಮನೆ ಇದೆ. ಗುತ್ತಿನ ಮನೆಯ ಪರಿಕಲ್ಪನೆ, ಅದರ ಸಮಾಜ ಮುಖಿ ಬದುಕನ್ನು ಮೂಲ ನೀತಿ-ನಿಯಮಗಳನ್ನು ಅನುಷ್ಠಾನಗೊಳಿಸಬೇಕೆಂಬ ಅರ್ಥೈಸಿಕೊಂಡು ಸಾಧ್ಯವಾದಷ್ಟು ಗುತ್ತಿನ ಆಡಳಿತದ ಉದ್ದೇಶದಿಂದ ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಬ್ರಹ್ಮಋಷಿ ಶ್ರೀ ಕೆ.ಎಸ್. ನಿತ್ಯಾನಂದರ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ ಗೋಳಿದಡಿಗುತ್ತಿನ ಮನೆಯು 2009ರಲ್ಲಿ ಪುನರ್ ನಿರ್ಮಾಣಗೊಂಡು, 2010ರ ಜನವರಿ ತಿಂಗಳ 18,19,20 ರಂದು ಈ ಗುತ್ತಿನ ಮನೆಯ ಗಡಿಸ್ವೀಕಾರವಾಗಿ ಗೃಹಪ್ರವೇಶೋತ್ಸವವು ಬ್ರಹ್ಮಋಷಿ ಶ್ರೀ ಕೆ.ಎಸ್. ನಿತ್ಯಾನಂದರ ನಿರ್ದೇಶನದಲ್ಲಿ ಗುತ್ತಿನ ಮನೆಯ ನೀತಿ-ನಿಯಮಗಳಿಗೆ ಬದ್ಧವಾಗಿ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಶ್ರೀವೈದ್ಯನಾಥ (ಶ್ರೀಮುಂಡಿತ್ತಾಯ), ಪಂಚದೇವತೆಗಳು ಈ ಗುತ್ತಿನ ಮನೆಯ ಧರ್ಮದೇವತೆಗಳಾಗಿದ್ದು, ಈ ಸಂಧರ್ಭದಲ್ಲಿ ಈ ದೈವಗಳ ಪುನರ್ ಪ್ರತಿಷ್ಟೆಯು ಶಾಸ್ರೋಕ್ತವಾಗಿ ಜರಗಿತು. ಇಂದಿನ ಈಕಾಲಘಟ್ಟದಲ್ಲಿ ಪ್ರತಿಯೊಬ್ಬರು ನೋಡಿ ಅರಿಯಬೇಕಾದ ನ್ಯಾಯಚಾವಡಿ, ಧರ್ಮ ಚಾವಡಿ, ಬ್ರಹ್ಮಸ್ಥಾನ ಸಹಿತವಾದ, ಅತ್ಯಾಕರ್ಷಕ ಕಾವ್ಯ ಶಿಲ್ಪಗಳಿಂದ ಈ ಗುತ್ತಿನ ಮನೆಯ ನಿರ್ಮಾಣವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಉಷಾಪ್ರಸಾದ ಶೆಟ್ಟಿ, ರವಿ ಭಟ್ ಎರ್ಮಾಳು, ರೋಹಿತ್ ಕುಮಾರ್ ಕಟೀಲು, ದಾಮೋದರ ನಿಸರ್ಗ, ಸದಾನಂದ ಗಾಂಭಿರ, ಕೆ. ಭಾಗ್ಯರಾಜ್ ಆಳ್ವ, ನವೀನ ಶೆಟ್ಟಿ ಪೆರ್ಮಾರಗುತ್ತು, ಸುನಿಲ ಪ್ರಭಾಕರ ಶೆಟ್ಟಿ, ಮಹಾಲಿಂಗ ನಾಯ್ಕ, ಶ್ವೇತ ಭಾಸ್ಕರ ಪೂಜಾರಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post