ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹತ್ತು ಎಂಬುದು ಪೂರ್ಣದ್ಯೋತಕವಾಗಿದೆ. ಪೂರ್ಣಜ್ಞಾನ, ಪೂರ್ಣೈಶ್ವರ್ಯ, ಪೂರ್ಣಾನಂದ, ಪೂರ್ಣತೇಜ, ಪೂರ್ಣಶಕ್ತಿ, ಪೂರ್ಣಪ್ರಭ ಎಲ್ಲವೂ ಪರಮಾತ್ಮನಲ್ಲಿ ಮಾತ್ರ ಕಾಣಬಹುದು. ಸನಾತನನು ಅನಾದಿ ವೇದವೇದ್ಯನೆಂಬುದು ಭಾಗವತದ ವಚನವಾಗಿದೆ, ಸದಾ ವಂದ್ಯನಾಗಿರುವವನು, ವೇದಪ್ರತಿಪಾದ್ಯನು ಭಗವಂತ. ಅವನು ಪರಿಪೂರ್ಣ ಸರ್ವತ್ರ ವ್ಯಾಪ್ತನಿದ್ದಾನೆ.
ವಿಷ್ಣುವು ದಶಾವತಾರವೆತ್ತಿದ ಎಂಬ ಕತೆ ಇದೆ. ಹೀಗೆ ದಶಾವತಾರ ಎತ್ತಿದ್ದು ಧರ್ಮ ಸಂಸ್ಥಾಪನೆಗಾಗಿ ಎಂಬ ಗೀತೆಯ ಕಾವ್ಯಾತ್ಮಕ ವಿವರವೂ ಇದೆ. ಈ ದಶಾವತಾರಗಳು ಕತೆಗಾಗಿ ಹಲವರ ಗ್ರಹಿಕೆಗೆ ಬಂದರೂ ಸೂಕ್ಷ್ಮವಾಗಿ ಗಮನಿಸಿದರೆ ಇವು ಕತೆಗಳಷ್ಟೇ ಅಲ್ಲ ಎಂಬುದನ್ನು ಗಮನಿಸಬಹುದು. ಇದರ ಹಿಂದಿರಬಹುದಾದ ಸಂಕೇತಾರ್ಥಗಳನ್ನು ಇಲ್ಲಿ ಅವಲೋಕಿಸಲಾಗಿದೆ.
ದಶವತಾರದೊಳಗಿನ ತತ್ವಸಾರ
ಸನಾತನ ಧರ್ಮವು, ಮಾನವನ ಮೂಲ ಆಧಾರ ತತ್ವ. ಸನಾತನಧರ್ಮ ಹಾಗೂ ವೇದಗಳು ನಾಣ್ಯದ ಎರಡು ಮುಖಗಳಂತೆ. ಇವುಗಳು ಬದಲಾಗುತ್ತವೆಯೇ ಹೊರತು ಆದಿ ಅಂತ್ಯ ಇಲ್ಲದವುಗಳು. ಮಾನವನು ಅಧರ್ಮಕ್ಕೆ ಮೊರೆಹೋದಾಗ ಪರಮಾತ್ಮನು ಅವತರಿಸಿ ಅವುಗಳನ್ನು ಸರಿಪಡಿಸುತ್ತಾನೆ.
ಸನಾತನನು ಅನಾದಿ ವೇದವೇದ್ಯನೆಂಬುದು ಭಾಗವತದ ವಚನವಾಗಿದೆ, ಸದಾ ವಂದ್ಯನಾಗಿರುವವನು, ವೇದಪ್ರತಿಪಾದ್ಯನು ಭಗವಂತ. ಅವನು ಪರಿಪೂರ್ಣ ಸರ್ವತ್ರ ವ್ಯಾಪ್ತನಿದ್ದಾನೆ. ಜೀವನಾದರೂ ಪೂರ್ಣನೆಂದು ಕರೆಸಿಕೊಂಡರೂ ಜೀವನ ಪೂರ್ಣತ್ವವಾದರೂ ಅವನ ಯೋಗ್ಯತಾನುಸಾರವಾಗಿ ಮಾತ್ರ ಪೂರ್ಣ. ಆದ್ದರಿಂದ ಸನಾತನ ಧರ್ಮವು, ವೇದವು ಎರಡೂ ಒಂದರಿಂದ ಮತ್ತೊಂದು ಪ್ರತ್ಯೇಕವಾಗಿರುವುದಿಲ್ಲ ಮತ್ತು ಅಂತಹ ವೇದ ಸಂರಕ್ಷಿಸಲು ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಲು ಪರಮಾತ್ಮನು ಮತ್ಸ್ಯಾವತಾರ ತಾಳಿ ವೇದವನ್ನು ಸಂರಕ್ಷಿಸುತ್ತಾನೆ.
ಹತ್ತು ಎಂಬುದು ಪೂರ್ಣದ್ಯೋತಕವಾಗಿದೆ. ಪೂರ್ಣಜ್ಞಾನ, ಪೂರ್ಣೈಶ್ವರ್ಯ, ಪೂರ್ಣಾನಂದ, ಪೂರ್ಣತೇಜ, ಪೂರ್ಣಶಕ್ತಿ, ಪೂರ್ಣಪ್ರಭ ಎಲ್ಲವೂ ಪರಮಾತ್ಮನಲ್ಲಿ ಮಾತ್ರ ಕಾಣಬಹುದು. ಇವುಗಳನ್ನು ಮಾನವರು ಅವರವರ ಯೋಗ್ಯತಾನುಸಾರ ಹೊಂದಬೇಕಾದಲ್ಲಿ ಏಕೈಕ ಮಾರ್ಗವೆಂದರೆ ನಾರಾಯಣ ಅಷ್ಟಾಕ್ಷರಮಂತ್ರ ಜಪ ಎಂದು ಆಗಿಂದ್ದಾಗೆ ನಮಗೆ ಜ್ಞಾಪಿಸುತ್ತಿದ್ದರು. ಓಂ ನಮೋ ನಾರಾಯಣಾಯ ಎಂಬ ಪದದಲ್ಲಿರುವ ಅಕ್ಷರಗಳನ್ನು ವಿಶ್ವ ತೈಜಸ, ಪ್ರಾಜ್ಞ, ತುರ್ಯ, ಆತ್ಮ, ಅಂತರಾತ್ಮ, ಪರಮಾತ್ಮ ಜ್ಞಾನಾತ್ಮ ಎಂದು ತಿಳಿಯಲಾಗಿದೆ. ಆ ಒಂದೊಂದು ನಾಮವನ್ನು ಸಂಖ್ಯಾಶಾಸ್ತ್ರದ ಪ್ರಕಾರ ವಿಶ್ಲೇಷಿಸಿದರೆ ಒಂದೊಂದು ನಾಮದ ಸಂಖ್ಯೆಯೂ 10 ರಿಂದ ಕೂಡಿರುತ್ತದೆ. ಇದರ ಮರ್ಮವೆಂದರೆ ಪರಮಾತ್ಮ ಸರ್ವದಾ ಪೂರ್ಣ, ಅವನ ಸಾಮೀಪ್ಯ ಸೇರಬೇಕಾದಲ್ಲಿ ನವವಿಧ ಭಕ್ತಿಯು ಬಹುಮುಖ್ಯ. ನವವಿಧ ಭಕ್ತಿಯಿಂದ ಪರಮಾತ್ಮನನ್ನು ಸ್ತುತಿಸಿದಲ್ಲಿ ಅವನ ಸಾಮೀಪ್ಯ ಸೇರಬಹುದು. ಅಂದರೆ ಪೂರ್ಣ ಎಂಬುದು ಸೊನ್ನೆ ಅದರ ಮುಂದೆ ಒಂದನ್ನು (1) ಸೇರಿಸಿದರೆ ಪರಿಪೂರ್ಣವಾಗುತ್ತದೆ. ಅಂದರೆ ಜೀವನು 0ಆದರೆ ಅವನ ಮುಂದೆ ಪರಮಾತ್ಮನು ಸಂಖ್ಯೆ 1ರಂತೆ ಬರಬೇಕು. ಈ 1ನ್ನು ಪಡೆಯಲು ಉಳಿದ 9 ಗುಣಗಳು ಬೇಕು ಅವೇ ನವವಿಧ ಭಕ್ತಿಗಳು ಆದ್ದರಿಂದ 10 ಇದ್ದರೆ ಮಾತ್ರ ಜೀವನು ಪರಿಪೂರ್ಣನಾಗುತ್ತಾನೆ.
ಹಿಂದೂ ತ್ರಿಮೂರ್ತಿಗಳಲ್ಲಿ ಎರಡನೆಯವನೇ ವಿಷ್ಣು ಅಥವಾ ಮಹಾವಿಷ್ಣು. ಕೇಂದ್ರಾಭಿಗಮನ ಶಕ್ತಿಯಾಗಿದ್ದು ಸತ್ವಗುಣದ ಪ್ರತೀಕವೂ ಆಗಿದ್ದಾನೆ. ಶಬ್ದ ನಿಷ್ಪತ್ತಿಯಿಂದ ವಿಷ್ಣು ಎಂಬುದಕ್ಕೆ ಅರ್ಥ ಎಲ್ಲವನ್ನೂ ವ್ಯಾಪಿಸಿಕೊಂಡವನು, ಎಲ್ಲದರಲ್ಲೂ ಅಂತರ್ಗತವಾಗಿರುವವನು ಎಂದು. ಹೀಗೆ ಜಗದ್ವ್ಯಾಪಿಯೂ ಜಗದಂತರ್ಗತವಾಗಿಯೂ ಇರುವ ಪರತತ್ವವೇ ವಿಷ್ಣು.
ವಿಷ್ಣುವಿನ ಕುರಿತ ಜನಪ್ರಿಯ ಚಿತ್ರಣ ಅವನು ಕ್ಷೀರಸಾಗರದ ಶೇಷಶಾಯಿಯಾಗಿ ಮಲಗಿರುತ್ತಾನೆ, ಅವನ ಕಾಲುಗಳನ್ನು ಲಕ್ಷ್ಮಿಯು ಒತ್ತುತ್ತಲಿದ್ದು, ನಾಭಿಯಿಂದ ಹುಟ್ಟಿರುವ ಕಮಲದಲ್ಲಿ ಬ್ರಹ್ಮನು ಕುಳಿತು ಸೃಷ್ಟಿಕಾರ್ಯವನ್ನು ನೆರವೇರಿಸುತ್ತಿರುತ್ತಾನೆ. ಇದು ಮೇಲ್ನೋಟಕ್ಕೆ ಕವಿಯ ಅತಿರಂಜಿತ ಕಲ್ಪನೆಯಂತೆ ಕಾಣುವ ಚಿತ್ರಣ. ಆದರೆ ಇದರ ಹಿಂದೆ ಅಪಾರ ಅರ್ಥಗಳಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಸಮುದ್ರ, ಜೀವರಾಶಿಯ ಜನನದ ಸಂಕೇತ, ಇದು ಹಾಲಿನ ಸಮುದ್ರ ಎಂಬುದು ಪರಿಶುದ್ಧತೆಯನ್ನು ಸಂಕೇತಿಸುತ್ತದೆ. ಇವನು ಮಲಗಿರುವ ಆದಿಶೇಷ ಲೋಕವನ್ನೆಲ್ಲ ಹೊತ್ತಿರುವವನು, ಇದು ಕಾಲವನ್ನು ಸಂಕೇತಿಸುತ್ತದೆ. ಲೋಕಗಳೆಲ್ಲವೂ ಕಾಲನಲ್ಲಿ ಜನಿಸಿ ಕಾಲನಲ್ಲಯೇ ಇರುತ್ತವೆ ಎಂಬ ಪರತತ್ವದ ಸಂಕೇತ ಇದು. ಸಾವಿರ ಹೆಡೆಗಳು ಆದಿಶೇಷನಿಗಿರುವುದು ಕಾಲ ಅಸಂಖ್ಯ ವಿಭಾಗಗಳ ಸಂಕೇತ. ಇದರ ಮೇಲೆ ಮಲಗಿರುವ ವಿಷ್ಣು ಸಹಜವಾಗಿಯೇ ಸೃಷ್ಟಿಯ ಚೇತನವನ್ನು ಪ್ರತಿನಿಧಿಸಿದ್ದಾನೆ, ಈ ಚೇತನ ಜೀವ ಅಥವಾ ಮಾನವನೇ ಆಗಬೇಕಿಲ್ಲ. ಅಸಂಖ್ಯಾತ ಆಕಾಶ ಗಂಗೆಯಲ್ಲಿ ತುಂಬಿ ಹೋಗಿರುವ ಬ್ರಹ್ಮಾಂಡವನ್ನು ಸೂಚಿಸುತ್ತಾನೆ, ಅವನ ನಾಭಿಯಲ್ಲಿ ಬ್ರಹ್ಮ ಯುಗಯುಗಗಳ ಸೃಷ್ಟಿ ಕಾರ್ಯವನ್ನು ಸಂಕೇತಿಸುತ್ತಾನೆ.
ಸರ್ಪವನ್ನು ಕಾಮದ, ಭೋಗದ ಸಂಕೇತವಾಗಿಯೂ ನೋಡಬಹುದು, ಇದು ಅಂತಿಮ ಮುಕ್ತಿ ಅಥವಾ ಮೋಕ್ಷವನ್ನು ಪಡೆಯುವವರೆಗೂ ಇದ್ದೇ ಇರುವಂತಹದು, ಅತೀಂದ್ರಿಯ ನೆಲೆಯಲ್ಲಿ ವಿಶ್ರಾಂತಿಯ ಬಳಿಕ ಮುಂದಿನ ಸೃಷ್ಟಿರಚನೆಗಾಗಿ ಭಗವಂತನಲ್ಲಿಯೇ ಉಳಿಯುವ ಬಯಕೆಯ ಪ್ರತೀಕವೂ ಇದಾಗಿರಬಹುದು. ವಿಷ್ಣುವಿನ ಕಾಲನ್ನು ಒತ್ತುತ್ತಿರುವ ಲಕ್ಷ್ಮೀ ಕೀರ್ತಿ, ಐಶ್ವರ್ಯ ಇತ್ಯಾದಿ ಲೌಕಿಕ ಸುಖಗಳ ಸಂಕೇತ, ಇದು ಚೇತನದ ಅಡಿಯಾಳಾಗಿದ್ದರೇ ಸರ್ವಜೀವ ವ್ಯಾಪಾರವೂ ಸುಗಮ ಎಂಬ ಅಂತರಾರ್ಥ ಇದರಲ್ಲಿದೆ.
(ನಾಳೆ: ದಶಾವತಾರಗಳ ಹಿಂದಿನ ಅಂತರಾರ್ಥ)
Get in Touch With Us info@kalpa.news Whatsapp: 9481252093
Discussion about this post