ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಾಮಾವತಾರ
ರಾಮಾಯಣದ ಕಥೆಯನ್ನು ತಾತ್ತ್ವಿಕ ದೃಷ್ಟಿಯಿಂದ ದರ್ಶಿಸಬೇಕು. ನಮ್ಮ ಹೃದಯ ಸಿಂಹಾಸನದಲ್ಲಿ ವಿರಾಜಮಾನನಾಗಿರುವವನೇ ಶ್ರೀರಾಮ. ಹತ್ತು ಇಂದ್ರಿಯಗಳನ್ನು ಹೊಂದಿರುವ ಈ ಶರೀರವೇ ಒಂದು ರಥ, ದಶರಥ. ಸತ್ತ್ವ, ರಜ ಮತ್ತು ತಮವೆಂಬ ಮೂರು ಗುಣಗಳೇ ಕ್ರಮವಾಗಿ ಕೌಸಲ್ಯೆ, ಸುಮಿತ್ರೆ ಹಾಗೂ ಕೈಕೇಯಿ ಅಥವಾ ವಿಭೀಷಣ, ರಾವಣ ಹಾಗೂ ಕುಂಭಕರ್ಣ. ಯಾವುದೇ ಯುದ್ಧಕ್ಕೆ ವಿರುದ್ಧವಾದದ್ದೇ ಉತ್ತರದಲ್ಲಿರುವ ಮತ್ತು ಎತ್ತರದಲ್ಲಿರುವ ಅಯೋಧ್ಯೆ. ಅಧೋಮುಖದಲ್ಲಿರುವುದೇ ಲಂಕೆ. ಸೀತೆಯೇ ಪ್ರಕೃತಿಮಾತೆ. ನಮ್ಮಲ್ಲಿ ಅಂತರ್ಗತವಾಗಿರುವ ರಾವಣತ್ವದಿಂದಾಗಿ ಪ್ರಕೃತಿ ಮಾತೆಯು ಅಪಹರಿಸಲ್ಪಟ್ಟಾಗ, ಅಧೋಮುಖವಾದ ಪ್ರಕೃತಿಯನ್ನು ಊರ್ಧ್ವಮುಖಕ್ಕೆ ಗಮನಿಸಿ ಮೇಲಕ್ಕೆ ತರುವುದೇ ರಾಮಾಯಣ ಕಥಾನಕ, ಸಾಧನಾ ಮಾರ್ಗ.
ಮೂಲಾಧಾರಾದಿ ಷಟ್ಚಕ್ರಗಳೇ ಆರು ಕಾಂಡಗಳು. ಏಳನೇ ಉತ್ತರಕಾಂಡವು ಸಹಸ್ರಾರವನ್ನು ಪ್ರತಿನಿಧಿಸುತ್ತದೆ. ಅದಕ್ಕೆ ಪ್ರಾಣಶಕ್ತಿಯೆಂಬ ಹನುಮಂತನನ್ನು ನೇಮಿಸಿ(ನಿಯಮಿಸಿ), ಸಂಸಾರ ಸಾಗರವನ್ನು ಉಲ್ಲಂಘನ ಮಾಡಿ (ಉತ್+ಲಂಘನ) ಮೊದಲೆರಡು ಗುಣಗಳನ್ನು ಸಂಹರಿಸಿ, ಮೂರನೇ ಸತ್ತ್ವಗುಣದ ವಿಭೀಷಣನ ಸಹಕಾರದಿಂದ, ಪ್ರಕೃತಿಯನ್ನು ಮೇಲಕ್ಕೆ ತರಬೇಕೆಂಬುದು ಸಾರಾಂಶ. ಜಾಂಬವಂತರೇ ಅಪಾನವಾಯು. ಅಂಗದನೇ ಅಂಗ-ಅಂಗಗಳನ್ನು ವ್ಯಾಪಿಸಿರುವ ವ್ಯಾನವಾಯು. ನೀಲನೆಂದರೆ ಉದಾವನವಾಯು. ನಳನೇ ಸಮಾನವಾಯು. ಸಕಲ ಸದ್ಗುಣ ಸಂಪನ್ನರಾಗಿ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗುವುದೇ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ.
ಶ್ರೀರಾಮನು ಆದರ್ಶ ಮರ್ಯಾದಾ ಪುರುಷೋತ್ತಮ, ಅವರ ಚರಿತೆಯಾದ ರಾಮಾಯಣ ಮಹಾಕಾವ್ಯವಾಗಿದೆ. ಇವನು ಜೀವನದ ಎಲ್ಲಾ ರಂಗದಲ್ಲೂ ಆದರ್ಶವನ್ನೇ ಮೆರೆದನು. ಇದು ಒಂದು ಯುಗ ಧರ್ಮದ ಸಂಕೇತವೂ ಹೌದು. ತಾವು ನಂಬಿದ ತತ್ವಗಳಿಗಾಗಿ ತ್ಯಾಗಮಾಡಬಲ್ಲ ಒಂದು ಜನಾಂಗದ ಮೌಲ್ಯವನ್ನು ಈ ಅವತಾರ ಪ್ರತಿನಿಧಿಸುತ್ತದೆ. ಚಾರಿತ್ರಿಕ ದೃಷ್ಟಿಯಿಂದ, ಇದು ಕ್ಷತ್ರಿಯ ಪಾರಮ್ಯವನ್ನು ಹೇಳುತ್ತದೆ. ರಾಮಾಯಣ ಒಂದು ಅರ್ಥದಲ್ಲಿ ಒಂದು ಕಾಲದ ರಾಜಕೀಯ ಚರಿತ್ರೆ ಕೂಡ ಹೌದು.
ಕೃಷ್ಣಾವತಾರ
ಶ್ರೀಕೃಷ್ಣನು ಭಗವಂತನ ಎಂಟನೇ ಅವತಾರ. ಇದು ಎಂಟು ವಸುಗಳ (ಸಂಪತ್ತು), ಎಂಟು ಸಿದ್ಧಿಗಳ, ಎಂಟು ಲಕ್ಷ್ಮೀ ಸ್ವರೂಪದ ಹಾಗೂ ಎಂಟು ಪ್ರಕೃತಿಯ ರೂಪದ ಸಂಕೇತ. ಆದ್ದರಿಂದಲೇ, ಅಷ್ಟಮಿಯಂದು ಅವತರಿಸಿದ್ದು. ಕೃಷ್ಣ ಎಂದರೆ ಕಪ್ಪು ದಕ್ಷಿಣಾಯನವೂ ಕಪ್ಪು. ಶ್ರಾವಣ ಮಾಸದ ಬಹುಳವೂ ಕಪ್ಪು.
ರಾತ್ರಿಯೂ ಕಪ್ಪು. ಕಾರಾಗೃಹದ ವಾತಾವರಣವೂ ಕಪ್ಪು. ಮಳೆಯ ಕಾಲ ಬೇರೆ! ಕಾರಿರುಳು. ಮೋಡದಿಂದ ಆಕಾಶವೂ ಕಪ್ಪು. ಅಂಥಾ ಮಧ್ಯರಾತ್ರಿಯಲ್ಲಿ ಪರಂಜ್ಯೋತಿಸ್ವರೂಪನಾದ ಪರಮಾತ್ಮನ ಅವತಾರ! ಹಾಗೆಯೇ ಈ ಜಗತ್ತೇ ಮಾಯೆಯಿಂದ ಅಂಧಕಾರಮಯವಾಗಿದೆ. ಮೇಲಾಗಿ, ಅಹಂಕಾರವೆಂಬ ಅಂಧಕಾರ ಬೇರೆ! ಅಜ್ಞಾನವೆಂಬ ತಿಮಿರವೂ ಸೇರಿದೆ. ಸೂರ್ಯನ ಬೆಳಕೇ ನಮಗೆ ಆತ್ಮಜ್ಞಾನಕ್ಕೆ ಮರೆಯಾಗಿದೆ! ಇಂಥಾ ಸಂಸಾರ ಸಾಗರದಲ್ಲಿರುವ ನಾವು ಕತ್ತಲೆಯಲ್ಲಿ ಕಾಡಿನಲ್ಲಿದ್ದಂತಾಗಿದೆ. ವಿಷಯಾಸಕ್ತಿಗಳಿಂದ ಕೂಡಿದ ಕುಂಡಲಿನೀ ಕಾಳಸರ್ಪವನ್ನು ಮರ್ದನ ಮಾಡುವ ಶ್ರೀಕೃಷ್ಣ ಅಹಂಕಾರವನ್ನು ತುಳಿಯುತ್ತಾನೆ. ಆತ್ಮ ಸಾಕ್ಷಾತ್ಕಾರವೆಂಬ ವಿಷ್ಣುಪದವನ್ನು ಹೊಂದುವಂತೆ ಮಾಡುತ್ತಾನೆ.
ರಾಮನು ಆದರ್ಶ ಪರನಾದರೆ, ಕೃಷ್ಣ ತಂತ್ರಗಾರ, ರಾಜಕೀಯ, ಚಾಣಾಕ್ಷ. ಜನರಲ್ಲಿ ಬೇರು ಬಿಟ್ಟಿದ್ದ ಮೌಲ್ಯಗಳು, ಆದರ್ಶಗಳು ಮಾಯವಾಗಿ ಕುಟಿಲತೆ ಬೆಳೆಯಲು ಆರಂಭವಾಗಿದ್ದ ದಿನಗಳಲ್ಲಿ ಚಾಣಾಕ್ಷತೆಯಿಂದ ಸತ್ಯ ಮಾರ್ಗವನ್ನು ಎತ್ತಿ ಹಿಡಿಯುವ ಆದರ್ಶದ ಕತೆಯಾಗಿ ಕೃಷ್ಣ ಚರಿತೆ ಕಾಣಿಸುತ್ತದೆ. ಕೃಷ್ಣ ಗೊಲ್ಲ. ಅವನು ಕ್ಷತ್ರಿಯನಲ್ಲ. ಆದರೂ ವಿಪ್ರ, ಕ್ಷತ್ರಿಯರಿಗೆಲ್ಲ ಪೂಜನೀಯನಾಗಿದ್ದನು. ಇದು ಆ ಕಾಲದ ವರ್ಣಸಂಕರವನ್ನೂ ಪ್ರತಿನಿಧಿಸುತ್ತದೆ. ಕೃಷ್ಣನ ಸಾರಥ್ಯದಲ್ಲಿ ನಡೆದ ಮಹಾಭಾರತದ ಕತೆ ಒಂದು ಪರಿವರ್ತನೆಯ ಸೂಚಕವೂ ಹೌದು.
Get in Touch With Us info@kalpa.news Whatsapp: 9481252093
Discussion about this post