ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೀಗೆ ದಶಾವತಾರದ ಕಲ್ಪನೆ ಮನು ಕುಲದ ಹುಟ್ಟು ಬೆಳವಣಿಗೆಗೆ ಮತ್ತು ಭವಿಷ್ಯವನ್ನು ಸಾಂಕೇತಿಕವಾಗಿ ಚಿತ್ರಿಸುವ ಚರಿತ್ರೆಯಾಗಿದೆ. ಈ ನಂಬಿಕೆಗಳು ವೈಚಾರಿಕತೆ ಒರೆಗಲ್ಲಿನಲ್ಲಿ ಹೊಸ ಅರ್ಥವನ್ನೇ ಹೊಳೆಯಿಸುತ್ತವೆ.
ಪುರಾಣಗಳು ಸಾರುವ ದಶಾವತಾರಗಳು ಜೀವವಿಕಾಸದ ವಾದದ ವ್ಯಾಖ್ಯೆಗಳು ಸಾಮ್ಯತೆಗಳನ್ನು ಹೊಂದಿವೆ. ಈ ಬಗ್ಗೆ ಸಾಕಷ್ಟು ಚರ್ಚೆ-ಜಿಜ್ಞಾಸೆಗಳೂ ನಡೆದಿವೆ. ಬಹುತೇಕ ಎಲ್ಲ ಧರ್ಮ, ಸಂಸ್ಕೃತಿಗಳೂ, ತಮ್ಮವೇ ಆದ ಸೃಷ್ಟಿ ಕಥನಗಳನ್ನೂ ಹೊಂದಿವೆ. ಇವು ಕಥನಗಳನ್ನು ಹೊಂದಿವೆ. ಇವು ಪ್ರಾಂತೀಯವಾಗಿ ಕೂಡ ಭಿನ್ನವಾಗಿರುವುದುಂಟು.
ಇಡೀ ವಿಶ್ವವೊಂದು ಚಮತ್ಕಾರ. ಅದರಲ್ಲಿ ಅನಂತ ಗ್ರಹತಾರೆಗಳು, ಆಕಾಶಗಂಗೆಗಳು, ನಿಹಾರಿಕೆಗಳು, ಕಪ್ಪುರಂಧ್ರಗಳು ಒಂದನ್ನೊಂದು ಸುತ್ತುತ್ತ ಒಂದಾಗುವ ಅನಂತಕ್ರಿಯೆ. ಈ ಚಮತ್ಕಾರವೆನ್ನಿಸುವ ವಿಶ್ವದಲ್ಲಿ ನಮ್ಮ ತಿಳಿವಳಿಕೆಗೆ ನಿಲುಕಿರುವಂತೆ, ಸಂಶೋಧಕ ವಿಜ್ಞಾನಗಳ ಅಧ್ಯಯನಗಳು ಸಾರುವಂತೆ ಭೂಮಿಯೊಂದೇ ಫಲಿತ ಅಂಡ. ನಮ್ಮ ಭೂಮಿಯಲ್ಲಿ ಜೀವೋತ್ಪತ್ತಿ ಹೇಗಾಯಿತು ಎಂಬುದು ಎಲ್ಲರ ತಲೆಯನ್ನು ನಾಗರಿಕತೆ ನಮ್ಮಲ್ಲಿ ಉಯದವಾದಾಗಿನಿಂದ ಕಾಡುತ್ತಿರುವ ವಿಷಯ.
ವಿಕಾಸದ ವಾದ
ಸುಮಾರು 380 ಕೋಟಿ ವರ್ಷಗಳ ಹಿಂದೆ ಪ್ರಾರಂಭವಾದ ಜೀವ ವಿಕಾಸವು ಮಾನವನ ಉದಯದೊಂದಿಗೆ ಒಂದು ಹಂತ ತಲುಪಿದೆ ಎನ್ನಬಹುದು. ಇನ್ನೇನಿದ್ದರೂ ಸೂಪರ್ ಹ್ಯೂಮನ್‌ನ ವಿಕಾಸ. ಮ್ಯುಟೇಶನ್ ಅಥವಾ ಪರಿವರ್ತನೆಯು ಜೀವವಿಕಾಸದ ಪ್ರಮುಖ ಲಕ್ಷಣವೆಂಬುದನ್ನು ಗಮನಿಸಿದಾಗ ಈ ಸೂಪರ್ ಹ್ಯೂಮನ್ ಉದ್ಬವ ಅಸಾಧ್ಯವೇನಲ್ಲ.
ಆಧುನಿಕರಲ್ಲಿ ಜೀವವಿಕಾಸವನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಿದ ಪ್ರಥಮರೆಂದರೆ ಇಂಗ್ಲೆಂಡಿನ ಚಾರ್ಲ್ಸ್ ಡಾರ್ವಿನ್. ಅವರ ಪ್ರಕಾರ ವಿಕಾಸವೆಂದರೆ ಒಂದರಿಂದ ಇನ್ನೊಂದರ ರೂಪಾಂತರ. ಮೀನು, ಅದರಿಂದ ಕೂರ್ಮ, ಅದರಿಂದ ಸಿಂಹ, ಅದರಿಂದ ನರ, ನರನಿಂದ ಮಾನವ (ಮನಸ್ಸು, ಬುದ್ಧಿಉಳ್ಳವ) ಹೀಗೆ ಜೀವವಿಕಾಸ.
ಅದರಂತೆ ಜೀವವು ಚತುರ್ವಿಧವಾಗಿ ವಿಕಾಸ ಹೊಂದಿದೆ. ಜಲಚರ, ಭೂಚರ, ಖೇಚರ ಹಾಗೂ ಸ್ಥಿರ (ಗಿಡಮರಗಳು) ಈ ನಾಲ್ಕು ಮುಖದ ಬೆಳವಣಿಗೆಯೇ ಚತುರ್ಮುಖ ಬ್ರಹ್ಮ! ಜೀವವು ಒಂದನ್ನೊಂದು ಉಪಯೋಗಿಸಿಕೊಂಡೋ ಆಹಾರವಾಗಿಸಿಕೊಂಡೋ ಜೀವವಿಕಾಸ ಹೊಂದಿದೆ. ಈ ಪ್ರಕ್ರಿಯೆ ಅನಂತ ಹಾಗೂ ನಿರಂತರ. ಒಂದನ್ನೊಂದು ತಿಂದು ಬದುಕುವ ಕ್ರಿಯೆ ನಡೆಯುತ್ತಿರುವುದನ್ನು ಕಂಡು ದೇವರು ಸೃಷ್ಟಿಯನ್ನು ಅರ್ಧದಲ್ಲಿಯೇ ನಿಲ್ಲಿಸಿದನೋ ಎಂಬ ಒಂದು ವಾದವಿದೆ ಕೂಡ.
ದಶಾವತಾರದಲ್ಲಿ ಜೀವ ವಿಕಾಸ
ಹಿಂದೂ ಧರ್ಮದ ನಂಬಿಕೆಯಲ್ಲಿರುವ ವಿಷ್ಣುವಿನ ಮತ್ಸ್ಯ ಕೂರ್ಮಾದಿ ದಶಾವತಾರಗಳು ಈ ವಿಕಾಸವಾದಕ್ಕೆ ಹತ್ತಿರದ ವ್ಯಾಖ್ಯೆಗಳನ್ನು ನೀಡುತ್ತವೆ. ಆಧುನಿಕ ಜೀವವಿಜ್ಞಾನವು ಜೀವೋತ್ಪತ್ತಿಯು ನೀರಿನಲ್ಲಿ ಉಂಟಾಯಿತು ಅನ್ನುತ್ತದೆ. ಏಕಕೋಶ ಜೀವಿಯ ಉಗಮದಿಂದ ಪ್ರಾರಂಭವಾಗಿ, ಮೀನು ನೀರಿನಲ್ಲಿ ವಿಕಾಸಗೊಂಡ ಎಲ್ಲ ಜೀವಿಗಳ ಅಂತಿಮ ಹಂತದ ಪ್ರಾಣಿ. ಹಾಗಾಗಿ ಮತ್ಸ್ಯಾವತಾರದ ಸಂಕೇತ. ಅಲ್ಲದೇ ವಿಷ್ಣು ಮತ್ಸ್ಯ ರೂಪದಿಂದ ಬಂದು ಮನು ಚಕ್ರವರ್ತಿಯನ್ನು ಇತರ ಸಮಸ್ತ ಜೀವಜಾತಿಗಳನ್ನು ಕಾಪಾಡಿದ, ಆಹಾರ ಒದಗಿಸದ ಎನ್ನುವುದು ಎರಡನೆಯ ವಿಷಯ. ಮೂರನೇ ವಿಷಯವೆಂದರೆ, ಸಮುದ್ರದಲ್ಲಿ ಜೀವಿಗಳು ತುಂಬಿ ವಾಸಸ್ಥಾನಕ್ಕಾಗಿ ನಡೆದ ಘರ್ಷಣೆಯನ್ನು ತಪ್ಪಿಸಿದ್ದು, ಪ್ರಕೃತಿಯು ಕಂಡುಕೊಂಡ ಉಪಾಯವೇ ವಿಕಾಸವಾದ.
ಇನ್ನು ಕೂರ್ಮಾವತಾರ; ಈ ಘರ್ಷಣೆಯೊಂದಿಗೆ ಪ್ರಕೃತಿಯು ಜಲಚರಗಳ ರಚನೆಯಲ್ಲಿ ಪರಿವರ್ತನೆ ಮಾಡಿತು. ಅಂದರೆ ಮ್ಯುಟೇಶನ್ ಅನಿವಾರ್ಯವಾಯಿತು. ನೀರಿನಿಂದ ಜೀವಿಗಳು ಭೂಮಿಯ ಮೇಲೆ ಬರಲೇಬೇಕಾಯಿತು. ಕೂರ್ಮವು ಉಭಯವಾಸಿ. ಅಂದರೆ ವಿಕಾಸವು ನೀರಿನಿಂದ ಭೂಮಿಯ ಮೇಲೆ ಬಂದಿದೆ. ಈ ವಿಕಾಸವು ನೀರಿನಿಂದ ಭೂಮಿಯ ಮೇಲೆ ಬಂದಿದೆ. ಈ ವಿಕಾಸವನ್ನು ಜೀವವಿಜ್ಞಾನಿಗಳೂ ಒಪ್ಪುತ್ತಾರೆ.
ಆದರೆ ಕೂರ್ಮವೇ ಅವತಾರದ ರೂಪ ಯಾಕೆ? ಆ ಸಂದರ್ಭದಲ್ಲಿ ಭೂಮಿಯ ಪರಿಸ್ಥಿತಿ ಹೇಗಿತ್ತು? ಆಗ ಭೂಮಿಯ ಮೇಲೆ ಇನ್ನೂ ಅದೇ ಬಿಸಿ ವಾತಾವರಣ ಇತ್ತು. ಭೂಮಿಯ ಮೇಲೆ ಜೀವ ಬದುಕಲು ವಾತಾವರಣ ತಣ್ಣಗಾಗಬೇಕಿತ್ತು. ಅದಕ್ಕೆ ವಾತಾವರಣ ನಿರ್ಮಾಣಕ್ಕಾಗಿ ಬಹುಶಃ ಆಗ ಪ್ರಕೃತಿಯು ದೊಡ್ಡ ಹೋರಾಟವನ್ನೇ ನಡೆಸಿದಂತೆ ತೋರುತ್ತದೆ. ಈ ತಲ್ಲಣ ಹೊಯ್ದಾಟವೇ ದೇವಾಸುರರ ಸಮುದ್ರ ಮಥನದ ಸಂಕೇತವಿರಬಹುದೇ? ಈ ಹಂತದಲ್ಲಿ ಭೂಮಿ ಹಾಗೂ ಸಮುದ್ರಗಳು ತಮ್ಮ ಎಲ್ಲೆಗಳನ್ನು ಗುರುತು ಮಾಡಿಕೊಂಡಂತೆ ಕಾಣುತ್ತದೆ. ದೊಡ್ಡದೊಡ್ಡ ಪರ್ವತಗಳ ನಿರ್ಮಾಣ ಈ ಹಂತದಲ್ಲಿ ಆದ ಸಂಕೇತವೇ ಮಂದರಗಿರಿ ಹಾಗೂ ಸರೀಸೃಪಗಳು ಭೂಮಿಯ ಮೇಲೂ ಬದುಕುವಂತೆ ವಿಕಾಸ ಹೊಂದಿರುವುದು. ಗ್ರೀಕ್ ಪುರಾಣಗಳಲ್ಲಿ ಬರುವ ಕ್ರ್ಯಾಕನ್ ಮುಂತಾದ ಬೃಹದ್ಗಾತ್ರದ ಜೀವಿಗಳ ಕಲ್ಪನೆಯೂ ಇದನ್ನೇ ಹೇಳುತ್ತದೆ. ಅಮೃತವು ಸಮುದ್ರದಿಂದ ಹೊರ ಬಂತು ಅಂದರೆ ತಣ್ಣಿರಿನ, ಸಿಹಿ ನೀರಿನ ಮಳೆ ಸುರಿಯಿತು. ಭೂಮಿ ಮೇಲಿನ ಜೀವಿಗಳಿಗೆ ಅದೇ ಜೀವಾಮೃತ.
ವರಾಹಾವತಾರಕ್ಕೂ ಇಂತಹದೇ ಪುಷ್ಟೀಕರಣಗಳಿವೆ. ಮೀಟಿಯರ್‌ಗಳ ನಿರಂತರ ಹೊಡೆತದಿಂದ ಭೂಮಿ ತನ್ನ ಕಕ್ಷೆಯನ್ನು ಬದಲಿಸಿದ್ದಾಗಿ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಅಂದರೆ ಸಮುದ್ರ ಮಥನದಿಂದ ಉಂಟಾದ ತಲ್ಲಣದಿಂದಾಗಿ ಬಹುಶಃ ಭೂಮಿ ತನ್ನ ಕಕ್ಷೆಯಿಂದ ಜಾರಿರಬೇಕು. ಹಿಂದೊಮ್ಮೆ ಭೂಮಿ ತನ್ನ ಕಕ್ಷೆಯಿಂದ ಜಾರಿದ್ದ ವಿಷಯವನ್ನು ಆಧುನಿಕ ಭೂವಿಜ್ಞಾನಿಗಳೂ ಒಪ್ಪುತ್ತಾರೆ. ಈ ವಿಶ್ವ ಸಮುದ್ರದಲ್ಲಿ ಹೀಗೆ ಜಾರಿದ ಭೂಮಿಯನ್ನು ಎತ್ತಲು ವರಾಹವತಾರ. ವರಾಹವು ತನ್ನ ಕೋರೆಗಳಿಂದ ಭೂಮಿಯನ್ನು ಕಕ್ಷೆಯಲ್ಲಿ ಸ್ಥಾಪಿಸಿದೆ. ಆದರೆ ವರಾಹವೇ ಯಾಕೆ? ವರಾಹವು ಕೂರ್ಮದಂತೆ ಉಭಯವಾಸಿಯಲ್ಲ. ಆದರೆ ನಮ್ಮ ತಿಳಿವಳಿಕೆಯಂತೆ ವರಾಹ ಕಸ ತಿಂದು ಬದುಕುವ ಪ್ರಾಣಿ. ಮಂಥನದಿಂದ ಬಗ್ಗಡಗೊಂಡ ಸಮುದ್ರದಲ್ಲಿ ಮೋರೆ ಹಾಕಿ ಹುಡುಕಿ ಮೇಲೆತ್ತುವುದು ವರಾಹ ಮಾತ್ರ. ಅಲ್ಲದೇ ವರಾಹವು ಭೂಚರ ಪ್ರಾಣಿಗಳಲ್ಲಿ ಅತ್ಯಂತ ಕನಿಷ್ಠ ಮಟ್ಟದ ಪ್ರಾಣಿಗಳ ವಿಕಾಸದಲ್ಲಿ ಬಹುಶಃ ಕೊನೆಯದು. ಇದೊಂದು ವಿಸ್ಮಯ ತರಿಸುವ ಅವಲೋಕನ.
ನಂತರದ ಅವತಾರ ನರಸಿಂಹಾವತಾರ. ಇಲ್ಲಿಂದಲೇ ಪ್ರಾಣಿಗಳ ವಿಕಾಸವು ಶ್ರೇಷ್ಠತೆಯತ್ತ ಸಾಗಿತು ಅನ್ನಬಹುದು. ಒಂದನ್ನೊಂದು ಕೊಂದು ತಿಂದು ಬದುಕುವ ವಿಕಾಸವು ಈ ಘಟ್ಟದಲ್ಲಿ ಪರಾಕಾಷ್ಠತೆಯನ್ನು ಮುಟ್ಟಿರಬಹುದು. ಸಿಂಹ ಪ್ರಾಣಿವರ್ಗದಲ್ಲೇ ಶ್ರೇಷ್ಠ. ಹಿಂಸೆಗೆ ಇನ್ನೊಂದು ಹೆಸರು ಈ ಸಿಂಹವೇ. ಸಿಂಹ ವನರಾಜ. ತನ್ನ ರಾಜ್ಯವನ್ನು ಕಾಯ್ದುಕೊಳ್ಳುವ ಕಠಿಣ ಕಾಲವದು. ಉಳಿವಿಗಾಗಿ ಹೋರಾಟದ ಚರಮ ಸನ್ನಿವೇಶ. ಈ ಸಮಯದಲ್ಲಿ ಇನ್ನೂ ವಿಕಸನ ಹಂತದಲ್ಲಿದೆ ಜೀವಸಂಕುಲ. ಕ್ಲಿಷ್ಟಕರ ಮೆದುಳಿನ ಬೆಳವಣಿಗೆ ಬಹುಶಃ ಇಲ್ಲಿಂದಲೇ ಪ್ರಾರಂಭವಾಗಿದೆ. ವಿಷ್ಣು ಹಿರಣ್ಯಾಕ್ಷನನ್ನು ಕೊಂದು, ಭೂಮಿಯನ್ನು ಅದರ ಕಕ್ಷೆಯಲ್ಲಿ ಮತ್ತೆ ಸುಸ್ಥಿರಗೊಳಿಸಿದ, ನಂತರ ಅವನ ತಮ್ಮ ಹಿರಣ್ಯಕಶ್ಯಪು ಹಿಂಸೆಯತ್ತ ಸಾಗಿದ್ದು ಈ ಸಿಂಹದ ಸಂಕೇತಿವಿರಬಹುದು. ಹಿಂಸೆಯ ನಿಯಂತ್ರಣ ಕೇವಲ ಶಕ್ತಿಯಿಂದ ಸಾಧ್ಯವಿಲ್ಲ. ಅದಕ್ಕೆ ತಕ್ಕ ತಂತ್ರಗಳನ್ನು ಹೆಣೆಯುವ ಬುದ್ಧಿವಂತಿಕೆಯೂ ಬೇಕು. ಅದಕ್ಕಾಗಿಯೇ ಸಿಂಹದೊಂದಿಗೇ ಬುದ್ಧಿಯ ಸಂಕೇತವಾದ ಮನುಷ್ಯನ ವಿಕಾಸವಾಗಿರಬಹುದು. ಅದರ ಸಂಕೇತವೇ ಶಕ್ತಿ ಯುಕ್ತಿಗಳ ಸಂಗಮ, ಮಿಶ್ರಣದ ನರಸಿಂಹಾವತಾರ. ಪ್ರಾಣಿಗಳಿಂದ ಮನುಷ್ಯನಾಗುವ ಮ್ಯುಟೇಶನ್ ಪ್ರಕ್ರಿಯೆ. ಮನುಷ್ಯನ ಮುದುಳಿನ ಕ್ಲಿಷ್ಟ ರಚನೆಗೂ, ಬ್ರಹ್ಮಾಂಡದ ಅನೂಹ್ಯ ಗಾತ್ರಕ್ಕೂ ಇರುವ ಸಂಬಂಧವನ್ನು ವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಇದು ಇನ್ನೊಂದು ಅದ್ಭುತ ವಿಷಯ!
ಈ ಹಂತದಲ್ಲಿ ಜೀವವಿಕಾಸವು ಕೊನೆಗೊಳ್ಳುವ ಮಟ್ಟವನ್ನು ತಲುಪಿದೆ ಅನ್ನಿಸುತ್ತದೆ. ಬಹುಶಃ ಅಂದಿನಿಂದ ಈ ದಿನದವರೆಗೂ ಎಲ್ಲ ಜೀವಿಗಳಲ್ಲಿ, ಅದರಲ್ಲೂ ಮನುಷ್ಯನಲ್ಲಿ ಮಿದುಳಿನ ವಿಕಾಸ ಮುಂದುವರೆದಂತೆ ತೋರುತ್ತದೆ. ನಂತರ ಬರುವ ವಾಮನವತಾರವು ಮನುಷ್ಯನ ಬುದ್ಧಿಯ ವಿಕಾಸದ ಈ ಹಂತವನ್ನೇ ಹೇಳುತ್ತದೆ. ಭೂಮಿಯಲ್ಲಿ ಖಂಡಗಳ ಚಲನೆ, ತಾಕಲಾಟ ಇನ್ನೂ ನಿಂತಿಲ್ಲ. ನಿಯಂತ್ರಣಕ್ಕಾಗಿ ಶಕ್ತಿಗಳ ಮೇಲಾಟ. ಹೀಗೆ ಪದೇ ಪದೇ ಹೊಯ್ದಾಡುವ ಭೂಖಂಡಗಳನ್ನು ಸುಸ್ಥಿರಗೊಳಿಸಲು ವಾಮನ-ತ್ರಿವಿಕ್ರಮರ ಸಂಗಮ. ಉಪಟಳದ ಶಕ್ತಿಗಳನ್ನು ಬಹುಶಃ ಭೂಮಿ ಈ ಹಂತದಲ್ಲಿ ನಿಯಂತ್ರಿಸಿಕೊಂಡಿರಬಹುದು. ಅಡ್ಡಾದಿಡ್ಡಿಯಾಗಿ ಎದ್ದೆದ್ದು ಬರುವ ಭೂಭಾಗಗಳನ್ನು ತನ್ನ ಬಲದಿಂದ (ಅಸ್ಥಿರತೆಯನ್ನು-ಬಲಿ) ಪಾತಾಳಕ್ಕೆ ತಳ್ಳಿದ ಸಂಕೇತ. ಅದು ತ್ರಿವಿಕ್ರಮಾವತಾರದಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತವಾಗಿದೆ.
ಪರಶುರಾಮಾವತಾರವು ಜೀವವು ವಿಕಾಸಗೊಂಡು ಮನುಷ್ಯರೂಪವಾಗಿ ಮ್ಯುಟೇಶನ್ ಆಗಿ, ಉನ್ನತಿಗೇರಿ ಉದ್ಧಟವಾಗಿ ವರ್ತಿಸಿದಾಗ, ಇನ್ನಿತರ ಜೀವಿಗಳಿಗೆ ಕಂಟಕವಾದಾಗ ಪ್ರಕೃತಿಯೇ ಪುರುಷ ಹಾಗೂ ಪರಶುವಾಗಿ ತನ್ನ ಸಂತತಿಯನ್ನು ನಿಯಂತ್ರಿಸಿದೆ.
ನಂತರ ಬರುವ ರಾಮ, ಕೃಷ್ಣ ಬೌದ್ಧಾವತಾರಗಳು, ವಿಕಾಸದ ಚರಮ ಸೃಷ್ಟಿಯಾದ ಮಾನವನ ಶಕ್ತಿಯುಕ್ತಿ ಕುಯುಕ್ತಿಗಳ, ಅಂದರೆ ಮಿದುಳಿನ ವಿಕಾಸವೇ ಆಗಿದೆ. ಈ ಅವತಾರಗಳಲ್ಲೆಲ್ಲಾ ಮಾನವನ ಅತಿ ಬುದ್ಧಿವಂತಿಕೆಗಳು ಪ್ರಕೃತಿಯ ಅಂಕೆಯನ್ನು ಮೀರಿದಾಗ, ಅಶಾಂತಿ ವಿಜೃಂಭಿಸಿದಾಗ ಅಥವಾ ಅಸಹಜವಾಗಿ ವೃದ್ಧಿ ಹೊಂದಿದಾಗ ಸಮತೋಲನ ಕಾಯ್ದುಕೊಳ್ಳಲು ನಡೆದ ತಾಕಲಾಟದ ಸಂಕೇತಗಳೇ ಆಗಿವೆ. ರಾಮಾವತಾರವು ಮಂಗನಿಂದ ಮಾನವ ಎಂಬ ವಿಕಾಸವಾದಕ್ಕೆ ಅತ್ಯಂತ ಹತ್ತಿರವಾದ ವಿವರಣೆ. ಕೃಷ್ಣಾವತಾರವು, ಮಾನವನ ಮಿದುಳಿನ ವಿಕಾಸದ ಅಂತಿಮ ಹಂತ. ಜ್ಞಾನವನ್ನು ಅಪಾತ್ರರು ತಮ್ಮ ವಶಕ್ಕೆ ತೆಗೆದುಕೊಂಡು ಅದರಡಿಯಲ್ಲಿ ಅನಾಚಾರಗಳನ್ನು ಮಾಡುವ ಸಂದರ್ಭದಲ್ಲಿ ಈ ಪೊಳ್ಳು ಸಂಸ್ಕೃತಿಯಿಂದ ಜ್ಞಾನದ ಬಿಡುಗಡೆಯ ಸಂಕೇತವೇ ಬೌದ್ಧಾವತಾರ.
ಕಲ್ಕ್ಯಾವತಾರವು ಭವಿಷ್ಯದ ಸಂಕೇತ. ವಿಕಾಸವು ಆಗುವ ಭರದಲ್ಲಿ ಅಂಕೆ ಮೀರಿದಾಗ ಅದನ್ನು ಸಹಜ ಸ್ಥಿತಿಗೆ ತರಲು ಪ್ರಕೃತಿ ನಡೆಸುವ ಅಂತಿಮ ಹೋರಾಟವೇ ಇರಬಹುದು. ನಾವೀಗ ಈ ಹಂತದ ಆರಂಭದಲ್ಲಿದ್ದೇವೆ. ತಾನು ಅಮರನಾಗುವತ್ತ, ಕಾಲವನ್ನು ಗೆಲ್ಲುವತ್ತ ಮಾನವ ಸಾಗಿದಾಗ ಹಿಂಸೆಯು ಪ್ರಳಯರೂಪಿಯಾಗಿ ಬದಲಾಗಬಹುದು.
ಆ ಸಂಧಿ ಕಾಲದಲ್ಲೇ ಕಲ್ಕ್ಯಾವತಾರ. ಬಿಳಿ ಕುದುರೆಯನ್ನೇರಿ, ಹೊಳೆಯುವ ಖಡ್ಗ ಝಳಪಿಸಿ ಶಾಂತಿಯನ್ನು ಸ್ಥಾಪಿಸಿ ಮತ್ತೆ ಕೃತ ಅಥವಾ ಸತ್ಯಯುಗಕ್ಕೆ ಸೃಷ್ಟಿಯನ್ನು ಕರೆತರುವುದು. ಬಿಳಿಕುದುರೆಯು ವೇದವಾಙ್ಮಯದ ಸಂಕೇತವಾದರೆ, ಹೊಳೆಯುವ ಅಲುಗಿನ ಖಡ್ಗ ನಿಶಿತ ಬುದ್ಧಿಯ ಸಂಕೇತ! ಕಲ್ಕಿ ಅನ್ನುವುದು ಭವಿಷ್ಯವನ್ನೇ ಹೇಳುವ ಶಬ್ದ.
ಹೀಗೆ ಆಧುನಿಕ ವಿಕಾಸವಾದವು ಪರಮಾತ್ಮನ ದಶಾವತಾರಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತವಾಗಿರುವುದು ಕೌತುಕವೇ. ನಮ್ಮ ವಾಙ್ಮಯವು ವಿಜ್ಞಾನದ ಇಂತಹ ಅಸಂಖ್ಯ ವಿಷಯಗಳನ್ನು ಹೇಳುತ್ತದೆ. ಆದರೆ ಅದರಲ್ಲಿಯ ಸಂಕೇತಗಳನ್ನು ಪೂರ್ವಾಗ್ರಹಗಳನ್ನು ಬಿಟ್ಟು ಅಧ್ಯಯನ ಮಾಡಿದರೆ ಮತ್ತಷ್ಟು ಅಪೂರ್ವ ಹೊಳಹುಗಳು ದೊರೆಯಬಹುದು.
Get in Touch With Us info@kalpa.news Whatsapp: 9481252093
Discussion about this post