ಚನ್ನಗಿರಿ: ಚನ್ನಗಿರಿ ಕೆಳದಿ ಚನ್ನಮ್ಮನ ಊರು. ಹಿಂದೆ ಈ ಊರಿಗೆ ಹುಲಿಕೆರೆ ಎಂಬ ಹೆಸರಿತ್ತು. ಹಿಂದೆ ಈ ಪ್ರದೇಶ ಸಂಪೂರ್ಣ ಅರಣ್ಯಾವೃತವಾಗಿತ್ತು. ಈಗ ಆ ದಟ್ಟ ಕಾಡು, ಸನಿಹದ ಮಲ್ಲಿಗೆರೆ, ಜೋಳದಾಳ್ ವರೆಗೆ ಸರಿದು ಬಿಟ್ಟಿದೆ. ಇಲ್ಲಿನ ಕೋಟೆಯ ಶ್ರೀರಂಗನಾಥ, ಅದರ ಎತ್ತರಕ್ಕೆ ಅನತಿದೂರದಲ್ಲೇ ಮುದ್ದೇನಹಳ್ಳಿಯ ಶ್ರೀಮೌದ್ಗಲ್ ಆಂಜನೇಯ ಬೆಟ್ಟ ಇಲ್ಲಿನ ರಮಣೀಯ ತಾಣಗಳಾಗಿವೆ.
ಈ ನೆಲ ಎಷ್ಟು ಪವಿತ್ರವೆಂದರೆ ಮಹಾನ್ ದೇಶಪ್ರೇಮಿ, ಬ್ರಿಟಿಷರ ವಿರುದ್ಧ ಸಿಡಿದೆದ್ದ, ಸ್ವಾತಂತ್ರ್ಯ ಹೋರಾಟಗಾರ ‘ದೋಂಡಿಯಾ ವಾಘ್’ ಜನಸಿದ ಮಹತ್ವ ಪಡೆದುಕೊಂಡಿದೆ. ಹೈದರ್ ಅಲಿ ಸೈನ್ಯದಲ್ಲಿದ್ದು ಸಾವಿರ ಕುದುರೆ ಸವಾರರ ಪ್ರಮುಖನಾಗಿದ್ದು ಯುದ್ಧವನ್ನ ಗೆದ್ದು ಕೊಟ್ಟ ಅಪ್ರತಿಮ ಸಾಹಸಿ, ಚಾಣಾಕ್ಷ.
ಇಂತಹ ಚನ್ನಗಿರಿ ಈಗ ಮತ್ತೆ ಸುದ್ದಿಯಲ್ಲಿದೆ. ಇಡೀ ತಾಲೂಕಿನ ವಿಪ್ರರೆಲ್ಲ ಸಂಘಟಿತರಾಗಿರುವ ಸಂಕೇತವಾಗಿ ಚನ್ನಗಿರಿ ತಾಲೂಕು ಬ್ರಾಹ್ಮಣ ಮಹಾಸಭಾದ ಉದ್ಘಾಟನೆ ಇದೇ ನವೆಂಬರ್ 25 ರ ಭಾನುವಾರ ನಡೆಯಲಿದೆ.
ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಶ್ತೀ ಪಿ. ರಂಗನಾಥರಾವ್, ಉಪಾಧ್ಯಕ್ಷರುಗಳಾದ ಸರ್ವಶ್ರೀ ಸಂತೇಬೆನ್ನೂರು ಸುಮತೀಂದ್ರ ನಾಡಿಗ, ಬಸವಾಪಟ್ಟಣವಾಸಿ ಕೃಷಿಕ ಚಿದಂಬರ ದೀಕ್ಷಿತ್ ಹಾಗೂ ಚೈತನ್ಯದ ಚಿಲುಮೆ ಪ್ರಧಾನ ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಕಾವಲು ಇವರೇ ಅಲ್ಲದೆ, ನಿರ್ದೇಶಕ ಮಂಡಳಿಯ ಎಲ್ಲರೂ, ಇವರೊಂದಿಗೆ ಯುವಕರ ಚೈತನ್ಯದ ಚಿಲುಮೆಗಳಾಗಿರುವ ಸ್ಥಳೀಯ ವಿಪ್ರ ಯುವಕರ ತಂಡದ ಶ್ರಮ ಇದರ ಹಿಂದಿದೆ.
ಚನ್ನಗಿರಿಯ ಹಾಲಸ್ವಾಮಿ ಸಮುದಾಯ ಭವನದಲ್ಲಿ ಪ್ರಧಾನ ವೇದಿಕೆ ಸಜ್ಜಾಗಿದೆ. ಉದ್ಘಾಟಕರಾಗಿ ರಾಜ್ಯ ಮಹಾಸಭಾದ ಅಧ್ಯಕ್ಷ ಶ್ರೀ ವೆಂಕಟನಾರಾಯಣ, ಕಾರ್ಯದರ್ಶಿ ದಿನೇಶ್ ಅಬಸೆ, ನಾಡೋಜ ಡಾ.ಮಹೇಶ್ ಜೋಷಿ, ದಾವಣಗೆರೆ ಜಿಲ್ಲಾ ಮಹಾಸಭಾದಾಧ್ಯಕ್ಷ ಡಾ.ಆರ್.ಎಸ್. ಹೆಗ್ಗಡೆ, ವಿಪ್ರ ಸಮುದಾಯದ ಮುಖಂಡ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿರುವ ವೈ.ಎಸ್.ವಿ. ದತ್ತ ಹಾಗೂ ಮಹಾಸಭಾದ ವಕ್ತಾರ ಮ.ಸ. ನಂಜುಂಡಸ್ವಾಮಿ ಆಗಮಿಸಿ ಸಮಾರಂಭಕ್ಕೆ ಶೋಭೆ ನೀಡಲಿದ್ದಾರೆ.
ನಂತರ ಚಿಂತನಗೋಷ್ಠಿಗಳಲ್ಲಿ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್, ಡಾ.ಮಾನಕರಿ ಶ್ರೀನಿವಾಸಾಚಾರ್ ಮತ್ತು ಎಲ್. ವಾಸುದೇವ ಭಟ್ ಹಂದಲಸು ವಿದ್ವತ್ಪೂರ್ಣ ಉಪನ್ಯಾಸ ನೀಡಲಿದ್ದಾರೆ.
ಸಂಜೆ ಸಮಾರೋಪ ದಲ್ಲಿ ಟೀವಿ ಧಾರಾವಾಹಿ ನಿರ್ದೇಶಕ, ಚಿತ್ರನಟ ಸುನೀಲ್ ಪುರಾಣಿಕ್ ಭಾಗವಹಿಸಲಿದ್ದಾರೆ. ತಾಲೂಕಿನ ಆಯ್ದ ಪ್ರತಿಭಾ ಸಂಪನ್ನರಿಗೆ ಸನ್ಮಾನವನ್ನೂ ಏರ್ಪಡಿಸಲಾಗಿದೆ.
ಎಲ್ಲರಿಗೂ ಆದರದ ಸ್ವಾಗತವನ್ನು ಮಹಾಸಭಾದ ಆಡಳಿತ ಮಂಡಳಿ ಪರವಾಗಿ ಅಧ್ಯಕ್ಷ ಪಿ. ರಂಗನಾಥರಾವ್ ಕೋರಿದ್ದಾರೆ.
Discussion about this post