ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ವತಿಯಿಂದ ಸಂತ ಸೇವಾಲಾಲ್ ಮಹಾರಾಜರ 284 ನೇ ಜಯಂತ್ಯುತ್ಸವವನ್ನು ಫೆ.13 ರಿಂದ 15 ರವರೆಗೆ ನ್ಯಾಮತಿ ತಾಲೂಕು ಸುರಗುಂಡನಕೊಪ್ಪದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯ ಗಿರೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಫೆ.13 ರಂದು ಬೆಳಗ್ಗೆ 8 ಗಂಟೆಗೆ ಸೇವಾಲಾಲ್ ಮಹಾರಾಜರ ಕಾಟಿ ಆರೋಹಣವನ್ನು ರುದ್ರಪ್ಪ ಎಂ. ಲಮಾಣಿ ಮಾಡಲಿದ್ದು, ಮಾತಾ ಮರಿಯಮ್ಮ ದೇವಿಯ ಕಾಟಿ ಆರೋಹಣವನ್ನು ಶಾಸಕ ಪಿ. ರಾಜೀವ್ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾವಳಿ, ಬಂಜಾರ ಮಹಿಳಾಗೋಷ್ಠಿ, ಬಂಜಾರ ಕವಿಗೋಷ್ಠಿಗಳು ನಡೆಯಲಿವೆ ಎಂದರು.
ಫೆ.14 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜಯಂತ್ಯುತ್ಸವ ಉದ್ಘಾಟಿಸಲಿದ್ದಾರೆ. ಸಂಜೆ 5 ರಿಂದ ಧಾರ್ಮಿಕ ಸಭೆ ನಡೆಯಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮಗಳಲ್ಲಿ ರಾಜ್ಯ ಮಾತ್ರವಲ್ಲದೆ ಹೊರರಾಜ್ಯದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿದ್ದ ನಿವೃತ್ತ ಡಿಎಫ್’ಓ ಐ.ಎಂ. ನಾಗರಾಜ್ ಮಾತನಾಡಿ, ಬಂಜಾರ ಸಮುದಾಯದವರ ಪವಿತ್ರ ಸ್ಥಳದಲ್ಲಿ ಪ್ರತಿ ವರ್ಷವೂ ಜಯಂತಿ ಹಾಗೂ ವಿವಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಬಾರಿಯೂ ಕೂಡ ಅದ್ಧೂರಿಯಾಗಿ ನಡೆಸಲಾಗುತ್ತದೆ ಎಂದರು.
ಸಂದರ್ಶನ ನಡೆದಿದೆ
ಸರ್ಕಾರ ಸೇವೆಯಿಂದ ನಿವೃತ್ತನಾದ ಬಳಿಕ ಸಮಾಜ ಸೇವೆಯಲ್ಲಿ ಗುರುತಿಸಿಕೊಳ್ಳುವ ಹಂಬಲದಿಂದ ಸಮಾಜದ ಸಂಘಟನೆಯಲ್ಲಿ, ಹಾಗೂ ಆಮ್ ಆದ್ಮಿ ಪಕ್ಷದಲ್ಲಿ ತೊಡಗಿಸಿಕೊಂಡಿರುವುದಾಗಿ ಐ.ಎಂ. ನಾಗರಾಜ್ ತಿಳಿಸಿದರು.
ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಕೇಳಲಾಗಿದೆ. ಅದಕ್ಕಾಗಿ ಪಕ್ಷದ ವರಿಷ್ಠರು ದೆಹಲಿಯಲ್ಲಿ ಸಂದರ್ಶನ ಕೂಡ ನಡೆಸಿದ್ದಾರೆ. ಅವಕಾಶ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಮಾ ಮಹೇಶ್ವರ ನಾಯ್ಕ, ಜಗದೀಶ್ ನಾಯ್ಕ, ಮಂಜಾನಾಯ್ಕ, ಜಯಾನಾಯ್ಕ, ಪೀರ್ಯಾನಾಯ್ಕ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post