ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಬೆಣ್ಣೆ ನಗರಿ ದಾವಣಗೆರೆಯಲ್ಲಿ 41 ವರ್ಷದ ಮಹಿಳೆಗೆ ಮದ್ದು ನೀಡಿ ಸಾಮೂಹಿಕ ಅತ್ಯಾಚಾರ Gang-rape ಎಸಗಿದ ಆರೋಪದ ಮೇಲೆ 10 ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜೂನ್ 3ರಂದು ಸಂಜೆ ಬಸವಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ದಾರುಣ ಘಟನೆ ನಡೆದಿದ್ದು, ಜೂನ್ 8ರಂದು ಆರೋಪಿಗಳು ಕುಡಿದ ಅಮಲಿನಲ್ಲಿದ್ದ ಮಹಿಳೆಯ ವಿಡಿಯೋವನ್ನು ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಪೀಡಿತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ ಪೊಲೀಸರು, ಪ್ರಕರಣ ಸಂಬಂಧ ಎಲ್ಲಾ 10 ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
Also read: ಫಿಲಿಪೈನ್ಸ್‌ನಲ್ಲಿ ಭೂಕಂಪ ದುರಂತ: ತನ್ನ ಜೀವ ಒತ್ತೆಯಿಟ್ಟು ಮೊಮ್ಮಗನನ್ನು ರಕ್ಷಿಸಿದ ಅಜ್ಜಿಯ ಸಾಹಸ
ಪೊಲೀಸರ ಮಾಹಿತಿ ಪ್ರಕಾರ, ಪತಿಯೊಂದಿಗೆ ಜಗಳವಾದ ನಂತರ ಮಹಿಳೆ ತನ್ನ ತವರಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಇಬ್ಬರು ಪುರುಷರು ಸಹಾಯ ಮಾಡುವ ನೆಪದಲ್ಲಿ ಸಂಪರ್ಕಿಸಿದ್ದಾರೆ. ಅವರು ನೀಡಿದ ತಂಪು ಪಾನೀಯದಲ್ಲಿ ನಿದ್ರಾಜನಕ ಮದ್ದು ಮಿಶ್ರಣ Drug mixed in a soft drink ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ಅದನ್ನು ಸೇವಿಸಿದ ನಂತರ ಮಹಿಳೆ ಪ್ರಜ್ಞಾಹೀನಳಾಗಿದ್ದಾಳೆ.
ನಂತರ ಆಕೆಯನ್ನು ಗ್ರಾಮದ ಹೊರವಲಯದಲ್ಲಿರುವ ಒಂಟಿ ಕೃಷಿ ಜಮೀನಿಗೆ ಕರೆದೊಯ್ಯಲಾಗಿದ್ದು, ಅಲ್ಲಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ, ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿದ ನಂತರ ಮಹಿಳೆಯ ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ತೆಗೆದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋಗಳು ವೈರಲ್ ಆಗಿರುವ ಬಗ್ಗೆ ಗ್ರಾಮಸ್ಥರಿಂದ ತಿಳಿದುಕೊಂಡ ನಂತರ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಧಿಗಳು ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 70 (ಸಾಮೂಹಿಕ ಅತ್ಯಾಚಾರ) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್.ಟಿ ತಿಳಿಸಿದ್ದಾರೆ.
“ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ 10 ಆರೋಪಿಗಳನ್ನು ಬಂಧಿಸಲಾಗಿದೆ. ಮುಂದಿನ ತನಿಖೆ ಮುಂದುವರಿದಿದೆ,” ಎಂದು ಅವರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















