ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಆರಂಭಿಸಿದ ಪ್ರತಿಭಟನೆ ಹಿಂಸಾರೂಪ ತಳೆದು ಈಗ ಅದಕ್ಕೆ ಬಲಿಯಾದವರ ಸಂಖ್ಯೆ 22ಕ್ಕೇರಿದ್ದು, ಹಿಂಸಾಚಾರ ತಡೆಯಲು ನವದೆಹಲಿಯ ಜಫ್ರಾಬಾದ್’ನಲ್ಲಿ ಕಂಡಲ್ಲಿ ಗುಂಡಿಗೆ ಆದೇಶ ನೀಡಲಾಗಿದೆ.
ಶನಿವಾರ ಸಣ್ಣ ಪ್ರಮಾಣದಲ್ಲಿ ಆರಂಭವಾದ ಗಲಭೆ ಸೋಮವಾರದಿಂದ ಭಾರೀ ಪ್ರಮಾಣದಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೂ ಬಲಿಯಾದವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ 50 ಪೊಲೀಸರು ಸೇರಿದಂತೆ 180 ಮಂದಿ ಗಾಯಗೊಂಡಿದ್ದು, ಅವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಹಿಂಸಾಚಾರ ಹತ್ತಿಕ್ಕಲು ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ. ಗಲಭೆಯ ಕೇಂದ್ರ ಬಿಂದು ಸೀಲಂಪುರ ಒಂದು ತಿಂಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿಷೇಧಾಜ್ಞೆ ಹೇರಲಾಗಿರುವ ಸೀಲಂಪುರದಲ್ಲಿ ಯಾರೂ ಕೂಡ ಗುಂಪು ಕೂಡುವಂತಿಲ್ಲ. ಪ್ರಸ್ತುತ ನಾವು ಶಾಂತಿಯುತವಾಗಿ ಈ ಮಾತನ್ನು ಹೇಳುತ್ತಿದ್ದು, ಪರಿಸ್ಥಿತಿ ಕೈಮೀರುವಂತಿದ್ದರೆ, ಯಾವುದೇ ರೀತಿಯ ಕಠಿಣ ಕ್ರಮಕ್ಕೂ ನಾವು ಸಿದ್ಧರಿದ್ದೇವೆ ಎಂದು ಪರೇಡ್ ನಡೆಸಿದ ಪೊಲೀಸ್ ಅಧಿಕಾರಿಗಳು ಸ್ಥಳೀಯ ನಿವಾಸಿಗಳಿಗೆ ಹೇಳಿದ್ದಾರೆ.
ದೆಹಲಿಯ ಗಲಭೆಪೀಡಿತ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಯಲು ಸಿಆರ್’ಪಿಎಫ್, ಸಶಸ್ತ್ರ ಸೀಮಾ ಬಲ, ಸಿಐಎಸ್’ಎಫ್, ಮತ್ತು ದೆಹಲಿ ಪೊಲೀಸರು ಗೋಕುಲ್ ಪುರಿ ಪ್ರದೇಶದಲ್ಲಿ ಫ್ಲಾಗ್ ಮಾರ್ಚ್ ನಡೆಸಿ, ಸಾರ್ವಜನಿಕರು ಶಾಂತಿ ಕಾಪಾಡಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಪ್ರತಿಭಟನೆಯಿಂದಾಗಿ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಸ್ಥಿತಿ ತಿಳಿಗೊಳಿಸಲು ಅಧಿಕಾರಿಗಳು ನಿರಂತರ ಯತ್ನಗಳನ್ನು ನಡೆಸುತ್ತಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post