ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಒಂದು ಶಪಥವಿದ್ದಂತೆ. ಅದನ್ನು ಪಾಲಿಸಿ, ಕೆಲಸ ಮಾಡುವಾಗ ಅಧೀನ ಅಧಿಕಾರಿ, ಸಿಬ್ಬಂದಿಗಳಿಂದ ಆಗುವ ಸಣ್ಣಪುಟ್ಟ ತಪ್ಪುಗಳನ್ನು ಮನ್ನಿಸಿ, ಮುನ್ನಡೆಸುವ ಗುಣ ಹಿರಿಯ ಅಧಿಕಾರಿಗಳಲ್ಲಿ ಇರಬೇಕು ಎಂದು ನಿವೃತ್ತ ಮಹಿಳಾ ಪೊಲೀಸ ಅಧಿಕಾರಿ ಎಲ್. ಎಸ್. ಮುಗಳಗೇರಿ ಹೇಳಿದರು.
ಧಾರವಾಡ ಪೊಲೀಸ್ ಇಲಾಖೆಯು ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ನಿವೃತ್ತರ ಸೇವಾ ಸುಸ್ಮರಣೆ ಮತ್ತು ಗೌರವ ಸಮರ್ಪಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಬಲವಾದ ಸ್ನಾಯು ಇದ್ದವರು ಸಮುದ್ರವನ್ನೇ ಈಜ ಬಲ್ಲರು ಎನ್ನುವಂತೆ ಅಡೆತಡೆಗಳು ಬಂದಾಗ ಕುಗ್ಗದೇ ಪ್ರಾಮಾಣಿಕತೆಯಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಕಾರ್ಯಮಾಡಬೇಕಿದೆ ಎಂದು ಹೆಳಿದರು.
ಇಲಾಖೆಯಲ್ಲಿ ಎಲ್ಲರೂ ಒಂದು ಕುಟುಂಬ ಸದಸ್ಯರಂತೆ ಬದುಕುತ್ತಿದ್ದೇವೆ. ಇಲಾಖೆ ಸಾಕಷ್ಟು ಸಹಾಯ ಮಾಡಿದೆ. ನಾವು ನಿಷ್ಠೆಯಿಂದ ಇದ್ದರೆ ಸಾರ್ವಜನಿಕರು ನಮ್ಮನ್ನು ಗೌರವದಿಂದ ಕಾಣುತ್ತಾರೆ ಹಾಗೂ ಹಿರಿಯ ಅಧಿಕಾರಿಗಳು ಪ್ರೀತಿಯಿಂದ ಕಾಣುತ್ತಾರೆ ಎಂದು ಅವರು ಹೇಳಿದರು.
ಪಾಲಿಗೆ ಬಂದ್ದದ್ದು ಪಂಚಾಮೃತವೆಂದು ಸ್ವೀಕರಿಸಿದರೆ ಬದುಕು ಅಮೃತವಾಗುತ್ತದೆ. ಇಲಾಖೆಯಲ್ಲಿ ತಂತ್ರಜ್ಞಾನ ಹಾಗೂ ಹಲವು ಆಧುನಿಕ ಆವಿಷ್ಕಾರದ ಆಯಾಮಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಮಹಿಳಾ ಪೊಲೀಸ್ ಸಿಬ್ಬಂದಿಗಳು ಕುಟುಂಬದ ಒತ್ತಡದಲ್ಲಿಯೂ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಕ್ಕೆ ಇಲಾಖೆಯ ಸಹಕಾರವೇ ಕಾರಣ. ಅಧೀನದಲ್ಲಿರುವ ಸಿಬ್ಬಂದಿಗಳನ್ನು ಉದಾರವಾಗಿ ಕಾಣಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರು ಪೊಲೀಸ್ ಕಲ್ಯಾಣ ಚಟುವಟಿಕೆಗಳ ವರದಿ ವಾಚನ ಮಾಡಿದರು.
ಧಾರವಾಡ ಗ್ರಾಮೀಣ ಡಿವೈಎಸ್ ಪಿ ಎಸ್.ಎಂ.ನಾಗರಾಜ ಹಾಗೂ ಡಿ.ಸಿ.ಆರ್.ಬಿ ಯ ಡಿಎಸ್ಪಿ ಎಸ್.ಎಸ್.ಹಿರೇಮಠ ಅವರು ಸ್ವಾಗತಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿಎಸ್ಪಿ ಭರತ ತಳವಾರ ವಂದಿಸಿದರು. ಆಕಾಶವಾಣಿ ಹಿರಿಯ ಉದ್ಘೋಷಕಿ ಮಾಯಾ ರಾಮನ್ ಕಾರ್ಯಕ್ರಮ ನಿರೂಪಿಸಿದರು.
Also read: ಹಿರಿಯರ ಪುಣ್ಯದ ಫಲ ಉಣ್ಣುವಾಗ ಆ ತಲೆಮಾರನ್ನು ನೆನೆಯಬೇಕು: ಹಿರಿಯ ಪತ್ರಕರ್ತ ಭಾಸ್ಕರ್ ರಾವ್
ಆಕರ್ಷಕ ಪಥಸಂಚಲನ: ಪರೇಡ್ ಕಮಾಂಡರ್ ವಿಠ್ಠಲ ಕೋಕಟನೂರ ನೇತೃತ್ವದಲ್ಲಿ ಪರೇಡ್ ನಡೆಯಿತು. ಆರ್.ಎಸ್.ಐ ಕೆ.ಎಫ್. ಹದ್ದಣ್ಣವರ ನೇತೃತ್ವದ ಡಿಎಆರ್ ತಂಡ, ಪಿಎಸ್.ಐ ವಿ.ಎಸ್.ಮಂಕಣಿ ನೇತೃತ್ವದ ಬರಳು ಮುದ್ರೆ ತಂಡ, ಪ್ರೋಬೇಷನರಿ ಆರ್.ಎಸ್.ಐ ಮಲ್ಲನಗೌಡ ಎಸ್.ಜಿ ನೇತೃತ್ವದ ಡಿಎಆರ್ ತಂಡ, ಪಿ.ಎಸ್.ಐ ನಿರ್ಮಲಾ ಎಸ್.ಕೆ.ನೇತೃತ್ವದ ನಿಸ್ತಂತು ಜಿಲ್ಕಾ ನಿಯಂತ್ರಣ ತಂಡ, ಪ್ರೋಬೇಷನರಿ ಆರ್.ಎಸ್.ಐ ಆನಂದಕುಮಾರ,ವಾಸು ರಕ್ಷೇದ ಬಿ., ಅವರ ನೇತೃತ್ವದ ತಂಡಗಳು ಆಕರ್ಷಕವಾಗಿ ತೀವ್ರಗತಿಯ ಮತ್ತು ನಿಧಾನಗತಿಯ ಪಥ ಸಂಚಲನ ನಡೆಸಿದವು.
ಆರ್.ಎಸ್.ಐ ಆಗಿರುವ ಆರ್.ಎಸ್.ಗುಡನಟ್ಟಿ ಅವರ ಬೆಂಗಾವಲಿನಲ್ಲಿ ಪೊಲೀಸ್ ಧ್ವಜ ಮತ್ತು ರಾಷ್ಟ್ರ ಧ್ವಜ ವಂದನೆ ನಡೆಯಿತು. ಪೊಲೀಸ್ ಸಿಬ್ಬಂದಿಗಳಾದ ವೆಂಕಟೇಶ ಕುರುಗೋವಿನಕೊಪ್ಪ, ಎಸ್.ಐ.ಗಣಾಚಾರಿ,ಪಿ.ಎನ್.ಹನುಮಂತಗೌಡ್ರ, ಆರ್ ಟಿ.ನಾಯ್ಕರ್, ಕೆ.ಡಿ.ಆಲೂರ ಮತ್ತು ರಾಮು ಕಾತ್ರಾಟ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿಗಳಾದ ಗುರು ಮತ್ತೂರ, ಕೆ.ಡಿ.ಮಲ್ಲನಗೌಡ, ಎಂ.ಎನ್.ಜೋಗಳೆಕರ, ಎಚ್.ಎ.ದೇವರಹೊರು ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಎ.ಸಿ.ಕುಲಕರ್ಣಿ, ಬಿ.ಡಿ.ಪಾಟೀಲ, ಬಿ.ಕೆ.ಹಂಚಿನಾಳ,ಕೋಳೆಕರ ಸೇರಿದಂತೆ ವಿವಿಧ ಹಂತದ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ಇತರರು ಭಾಗವಹಿಸಿದ್ದರು.
ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಗೌರವ ಸನ್ಮಾನ: ಎ.ಆರ್.ಎಸ್.ಐ ಎಸ್.ಎ.ಮಾಣಿಕ, ಎ.ಎಸ್.ಐ ಎಂ.ಸಿ.ಸಾಲಿಮಠ, ಪೋಲಿಸ್ ಸಿಬ್ಬಂದಿ ಗಳಾದ ಜೆ.ಸಿ.ಗಾಣಿಗೇರ, ಕೆಎಸ್.ಬೀರಣ್ಣವರ, ಆರ್.ಬಿ.ಮೊಗಲಾಯಿ, ಎಲ್.ಎಸ್. ಮುಗಳಗೇರಿ, ಎ.ಎಸ್.ಹ ಳ್ಳಿಯವರ, ಎಸ್.ಪಿ. ಪರ್ವತಿ, ಎಚ್.ಜೆ. ಮೆಂಡ್ರೊ, ಎಂ.ಟಿ. ಜಕ್ಕಲಿ, ಐ.ಪಿ. ಡಿಸೋಜಾ, ಕೇಶವ ಎನ್. ಗುತ್ತಿ, ಪಿ.ಎ. ಮುಧೋಳೆ ಅವರ ಸೇವೆಯನ್ನು ಸ್ಮರಿಸಿ, ಆತ್ಮೀಯವಾಗಿ ಗೌರವಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post