ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಪಾಂಡವರು ಹಾಗೂ ಕೌರವರ ನಡುವೆ ನಡೆಯುವ ಯುದ್ಧವನ್ನು ಧೃತರಾಷ್ಟ್ರ ಸಂಜಯನ ಮಾತಿನ ಮೂಲಕ ಮಾತ್ರ ತಿಳಿಯಲು ಸಾಧ್ಯ. ಹೀಗಾಗಿ ಯುದ್ಧದ ಪ್ರಾರಂಭದಲ್ಲಿ ಧೃತರಾಷ್ಟ್ರನು ಸಂಜಯನನ್ನು ಕೇಳುತ್ತಾನೆ.
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ|
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ||
ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧವನ್ನು ಮಾಡಲು ಇಚ್ಛೆಯುಳ್ಳವರಾದ ನನ್ನವರು(ಕೌರವರು) ಹಾಗೂ ಪಾಂಡವರು ಏನು ಮಾಡುತ್ತಿದ್ದಾರೆ? ಎಂಬುದಾಗಿ.
ಈ ಶ್ಲೋಕದಲ್ಲಿ ನಾವು ಒಂದು ಅಂಶವನ್ನು ಗಮನಿಸಬೇಕು. ಸಾಮಾನ್ಯವಾಗಿ ಯಾವುದೇ ಒಬ್ಬ ವ್ಯಕ್ತಿ ಭೋಜನಕ್ಕೋಸ್ಕರವಾಗಿ ಭೋಜನಶಾಲೆಗೆ ಹೋದಾಗ ಅವನು ಏನು ಮಾಡುತ್ತಿದ್ದಾನೆ ಎಂಬುದಾಗಿ ಪ್ರಶ್ನೆ ಕೇಳಬಾರದು? ಆ ಸಮಯದಲ್ಲಿ ನಮಗೆ ಬರುವ ಪ್ರಶ್ನೆ ಅವನು ಹೇಗೆ ಊಟ ಮಾಡಿದನು? ಎಂಬುದಾಗಿ. ಕಾರಣ, ಭೋಜನಶಾಲೆಗೆ ಹೋಗುವುದು ಭೋಜನಕ್ಕೆ ಮಾತ್ರ ಎಂಬುದಾಗಿ ಎಲ್ಲರಿಗೂ ತಿಳಿಯುದಿರುವ ವಿಷಯ. ಅದೇ ರೀತಿ ಯುದ್ಧದ ಇಚ್ಛೆ ಉಳ್ಳಂತಹ ಒಬ್ಬ ವ್ಯಕ್ತಿ ಯುದ್ಧಭೂಮಿಗೆ ಹೋಗುವುದು ಯುದ್ಧ ಮಾಡಲಿಕ್ಕೋಸ್ಕರವೇ. ಹೀಗಾಗಿ ಅವನು ಯುದ್ಧಭೂಮಿಗೆ ಹೋಗಿ ಏನು ಮಾಡಿದ ಅಂತ ಪ್ರಶ್ನೆ ಕೇಳಬಾರದು. ಮತ್ತೆ ಹೇಗೆ ಯುದ್ಧ ಮಾಡಿದ? ಯಾರು ಗೆದ್ದರು? ಈ ರೀತಿಯಾದ ಪ್ರಶ್ನೆಗಳನ್ನು ಮಾಡಬೇಕು.

ಇದರಿಂದ ನಮಗೆ ತಿಳಿಯುವ ವಿಷಯ ಎಂದರೆ ಯುದ್ಧದಲ್ಲಿ ಪಾಂಡವರ ಮೇಲೆ ದುರ್ಯೋಧನಾದಿಗಳಿಗೆ ಗೆಲ್ಲಲು ಸಾಧ್ಯವಿಲ್ಲ ಎಂಬ ವಿಷಯ ಧೃತರಾಷ್ಟ್ರನಿಗೆ ಮೊದಲೇ ಅರಿವಿತ್ತು. ಹೀಗಾಗಿ ಯುದ್ಧದಲ್ಲಿ ಅವನಿಗೆ ಸಮ್ಮತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
(ನಾಳಿನ ಲೇಖನ: ಮಹಾಭಾರತ ಯುದ್ಧದ ವಿಜಯದ ಮುಖ್ಯ ಫಲ ಯಾರಿಗೆ ?)










Discussion about this post