ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಾವು ಸತ್ತ ಮೇಲೆ ನಮ್ಮ ತಿಥಿ ಮಾಡಿ, ಆನಂದ ಪಡಿ, ಸಂತೋಷ ಪಡಿ….
ಇದು ತಮ್ಮ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿರುವವರ ಕುರಿತು ಹಿರಿಯ ನಟ ನವರಸ ನಾಯಕ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿರುವ ಪರಿ…
ಹೌದು… ದರ್ಶನ್ ಅಭಿಮಾನಿಗಳು ನಿನ್ನೆ ಮೈಸೂರಿನಲ್ಲಿ ಚಿತ್ರೀಕರಣದಲ್ಲಿದ್ದ ಜಗ್ಗೇಶ್ ಅವರನ್ನು ಭೇಟಿಯಾದ ವೇಳೆ ನಡೆದ ವಾಗ್ವದದ ಘಟನೆಯನ್ನು ಅಪಪ್ರಚಾರ ಮಾಡುತ್ತಿರುವವರಿಗೆ ವೀಡಿಯೋ ಮೂಲಕ ಉತ್ತರ ಕೊಟ್ಟು, ಮನದಾಳದ ನೋವನ್ನು ಹೊರ ಹಾಕಿದ್ದಾರೆ.
ನಾನೊಬ್ಬ ಆರ್’ಎಸ್’ಎಸ್ ಕಾರ್ಯಕರ್ತ, ನಮ್ಮ ಸಂಘಟನೆ, ಸಿದ್ದಾಂತಗಳ ಪರವಾಗಿ ಮಾತನಾಡುವುದು ನನ್ನ ಕರ್ತವ್ಯ. ಹೊಸ ದಿಗಂತ, ವಿಕ್ರಮ ನಮ್ಮ ಸಂಘದ ಪತ್ರಿಕೆ. ಅದರ ಬಗ್ಗೆ ನಾನು ಮಾತನಾಡಿದಾಗ ಬೇರೆಯವರಿಗೆ ನೋವಾಗುವುದು ಸಾಮಾನ್ಯ. ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ನಾನು 40 ವರ್ಷಗಳ ಕಾಲ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಬಹಳಷ್ಟು ಮಾಧ್ಯಮದವರಿಗೆ ನಾನು ಏನು ಎನ್ನುವುದು ಗೊತ್ತಿದೆ. ಹೀಗಿದ್ದರೂ, ಜಗ್ಗೇಶ್ ದರ್ಶನ್ ಫ್ಯಾನ್ಸ್’ಗೆ ಕಾಗೆ ಹಾರಿಸಿದ, ಬಟಾ ಬಯಲಾದ ಎಂದು ಕೆಲವು ಮಾಧ್ಯಮದಲ್ಲಿ ಹೇಳಿದ್ದಾರೆ. ನಾನೇನು ಕಳ್ಳತನ, ರಾಬರಿ ಮಾಡಿದ್ದೀನಾ? ಬಚ್ಚಿಟ್ಟುಕೊಂಡಿದ್ದೇನಾ? ನಿನ್ನೆ ಬಂದ ಹುಡುಗರು ನಿನ್ನೆ ರಾತ್ರಿಯೂ ಸಹ ನನ್ನೊಂದಿಗೆ ಮಾತನಾಡಿದ್ದಾರೆ. ನಾನೆಲ್ಲೂ ಓಡಿ ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಯಾವುದೋ ಒಂದು ಸಣ್ಣ ವಿಷಯ ಇಟ್ಟುಕೊಂಡು ಜಗ್ಗೇಶ್’ಗೆ ಅವಮಾನ ಮಾಡಿದ್ದೇವೆ ಎಂದುಕೊಂಡರೆ ಅದರಿಂದ ನನಗೇನೂ ನಷ್ಟವಿಲ್ಲ ಹಾಗೂ ನಾನೇನೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವವನೂ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನೇನು ಆಸ್ತಿ ಹೊಡೆಯುವ, ನೋಯಿಸುವ, ಕೊಲೆ ಮಾಡುವ, ಕನ್ನಡದ ನೆಲಕ್ಕೆ ಅವಮಾನ ಮಾಡುವ ಕುರಿತಾಗಿ ಅಲ್ಲಿ ಮಾತನಾಡಿಲ್ಲ. ಬದಲಾಗಿ, ನನ್ನ ಆರ್‌ಎಸ್‌ಎಸ್ ಹಾಗೂ ಹೊಸದಿಗಂತ ಪತ್ರಿಕೆಗೆ ಪ್ರಚಾರ ನೀಡು ಎಂದು ಖಾಸಗಿಯಾಗಿ ಮಾತನಾಡಿದ್ದೇನೆ. ಆದರೆ ಈ ವಿಚಾರವನ್ನು ಸಾರ್ವಜನಿಕ ಚರ್ಚೆಯ ವಿವಾದ ಮಾಡಿದ್ದು ಹೀನ ಕೃತ್ಯ ಎಂದು ಕಿಡಿ ಕಾರಿದ್ದಾರೆ.
ಇದೇ ವೇಳೆ ಕೆಲವು ಮಾಧ್ಯಮಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಅವರು, ನಾನು ಚಿತ್ರರಂಗಕ್ಕೆ ಬಂದಾಗ ಇವರೆಲ್ಲಾ ಹುಟ್ಟೇ ಇರಲಿಲ್ಲ. 80ರ ದಶಕದಲ್ಲಿ ಚಿತ್ರರಂಗಕ್ಕೆ ಬಂದವನು. ಹಿರಿಯ ನಟರ ನೋವು ನಲಿವುಗಳೊಂದಿಗೆ ನಾನು ಹಂಚಿಕೊಂಡಿದ್ದೇನೆ. ಕನ್ನಡಿಗರಿಂದ ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆಯೇ ಹೊರತು ಯಾರೊಬ್ಬರಿಂದ ಅಲ್ಲ. ಕನ್ನಡಕ್ಕಾಗಿಯೇ ನನ್ನ ಇಡಿಯ ಜೀವನ ಎಂದಿದ್ದಾರೆ.
ನಾನು ಕಾಗೆ ಹಾರಿಸುವಂತಿದ್ದರೆ 20 ಬಾರಿ ಶಾಸಕನಾಗುತ್ತಿದ್ದೆ, 20 ಬಾರಿ ಸಚಿವನಾಗುತ್ತಿದ್ದೆ. ನನ್ನ ಸಾರ್ವಜನಿಕ ಜೀವನದಲ್ಲಿ ಎಂದಿಗೂ ಹಲ್ಕಾ ಕೆಲಸ ಮಾಡಿಲ್ಲ. ಮಾಧ್ಯಮಗಳು ತಂದೆ-ತಾಯಿಗಳಂತೆ ಇರಬೇಕು, ಅವರಂತೆಯೇ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದರು.
ಇಂದು ಅನ್ಯ ಭಾಷಿಗರು ಕನ್ನಡ ಹಾಗೂ ಕನ್ನಡ ಚಿತ್ರರಂಗವನ್ನು ತುಳಿಯುತ್ತಿದ್ದಾರೆ. ಡಾ.ರಾಜ್’ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಅಂಬರೀಷ್ ಸತ್ತ ತತಕ್ಷಣ ಕನ್ನಡ ಚಿತ್ರರಂಗವೂ ಸಹ ಸಾಯುತ್ತಿದೆ. ಈಗ ಉಳಿದಿರುವವರ ನಾನು, ಶಿವರಾಜ್ ಕುಮಾರ್, ರವಿಚಂದ್ರನ್ ಹಾಗೂ ರಮೇಶ್ ಮಾತ್ರ. ನಾವುಗಳು ಸತ್ತ ಮೇಲೆ ನಮ್ಮ ತಿಥಿ ಮಾಡಿ, ಆನಂದ ಪಡಿ, ಸಂತೋಷ ಪಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಬೇಕಿತ್ತ ನಿಮಗೆ..
https://t.co/aED9S8Abn0— ನವರಸನಾಯಕ ಜಗ್ಗೇಶ್ (@Jaggesh2) February 23, 2021
ನಾನು ಎಂದಿಗೂ ನನ್ನ ಪಾಡಿಗೆ ನಾನು ಇರುವವನು. ಮಾತನಾಡುವವರು ನನ್ನ ಜಾತಿ ಹಿಡಿದೂ ಸಹ ಮಾತನಾಡಿದರು. ಆದರೆ, ನಾನು ಇದನ್ನು ದೊಡ್ಡದು ಮಾಡಿಲ್ಲ. ಇವರುಗಳೆಲ್ಲ ಅಲ್ಲ ನನಗೆ ಬುದ್ದಿ ಕಲಿಸಬೇಕಾದವರು. ನನಗೆ ಬುದ್ದಿ ಕಲಿಸಬೇಕಾದವರ ರಾಘವೇಂದ್ರ ಸ್ವಾಮಿಗಳು, ಪ್ರೀತಿಯ ಕನ್ನಡಿಗರು ಎಂದಿದ್ದಾರೆ.
ಚಿತ್ರರಂಗದಲ್ಲಿ ನಾನೊಬ್ಬನೇ ಬೆಳೆಯಬೇಕು ಎಂಬ ಪ್ರವೃತ್ತಿ ಇತ್ತೀಚೆಗೆ ಬೆಳೆದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ದಯಮಾಡಿ ಹಿರಿಯರಿಗೆ ಅವಮಾನ ಮಾಡುವ ವಿಚಾರ ಮಾಡಬೇಡಿ. ನನ್ನ 40 ವರ್ಷಗಳ ಸಾಧನೆಯನ್ನು ಜರಿಯುತ್ತಿದ್ದೀರಿ. ನಿಮ್ಮ ತಂದೆ ತಾಯಿಗೂ ನನ್ನಷ್ಟೇ ವಯಸ್ಸಾಗಿದೆ. ಅವರಿಗೂ ಹೀಗೇ ಅವಮಾನ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ನನ್ನ ಜೀವಮಾನದಲ್ಲಿ ಎಂದಿಗೂ ನಾನು ಕೆಟ್ಟ ಕೆಲಸ ಮಾಡಿಲ್ಲ. ರಾಯರು ಮೆಚ್ಚುವಂತೆ ಬದುಕಿದ್ದೇನೆ. ಆದರೂ ಇಂತಹ ಬೆಳವಣಿಗೆಗಳಿಂದ ನಾನು ಬಹಳಷ್ಟು ನೊಂದಿದ್ದೇನೆ. ದಯವಿಟ್ಟು ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post