ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಇಡೀ ಜಗತ್ತಿಗೆ, ಸೃಷ್ಟಿಕರ್ತನಾದ, ನಿಯಾಮಕನಾದ ಶ್ರೀಕೃಷ್ಣನಿಗೆ ಈ ಪ್ರಾಕೃತಿಕವಾದ, ಪರರ ಮನೆಯ ಬೆಣ್ಣೆಯ ಮೇಲೆ ಆಸೆ ಇತ್ತೇ? ಎಂಬುದಾಗಿ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಾಮಾನ್ಯ. ಆದರೆ ನಾವು ಸರಿಯಾದ ವಿವೇಕದ ಜೊತೆಗೆ ವಿಚಾರ ಮಾಡಬೇಕು. ಅಂದರೆ, ಇಡೀ ಜಗತ್ತನ್ನು ಸೃಷ್ಟಿ ಮಾಡಿದ ಪರಮಾತ್ಮನಿಗೆ ಈ ಭೌತಿಕವಾದ ಬೆಣ್ಣೆಯನ್ನು ಸೃಷ್ಟಿ ಮಾಡಿಕೊಳ್ಳಲಾಗುವುದಿಲ್ಲವೇ? ಹಾಗಾದರೆ ಕೃಷ್ಣನು ಬೇರೆಯವರ ಮನೆಗೆ ಕಳ್ಳನಂತೆ ನುಗ್ಗಿ ಬೆಣ್ಣೆಯನ್ನು ಕದಿಯುತ್ತಿದ್ದುದರ ಅರ್ಥವೇನು?
ವಸ್ತುತಸ್ತು ಕೃಷ್ಣನಿಗೆ ಪ್ರಾಕೃತವಾದ ಬೆಣ್ಣೆಯಿಂದ ಏನೂ ಆಗಬೇಕಾಗಿಲ್ಲ. ಹೀಗಾಗಿಯೇ ಕೃಷ್ಣನು ತಾನು ಮಣ್ಣನ್ನು ತಿಂದು, ತನಗೆ ಮಣ್ಣು ಒಂದೇ, ಬೆಣ್ಣೆಯೂ ಒಂದೇವೆಂಬುದನ್ನು ತೋರಿಸಿದ್ದು. ಕೃಷ್ಣನು ಪರರ ಮನೆಗಳಿಗೆ ಹೋಗಿ, ಬೆಣ್ಣೆಯನ್ನು ಕದಿಯುವಾಗ ಸಂತೋಷ ಪಟ್ಟು, ಚೌರ್ಯದ ಕೌಶಲವನ್ನು ಮೆಚ್ಚಿಕೊಂಡಂತಹ ಗೋಪಿಯರ ಪಾಪವನ್ನೆಲ್ಲವನ್ನು ಅಪಹರಿಸಿದ. ಅಂದರೆ ಪಾಪವನ್ನು ನಾಶ ಮಾಡಿದ. ಅದೇ ರೀತಿ ಇವನ ಚೌರ್ಯದಿಂದ ಕುಪಿತರಾದ ಗೋಪಿಕಾಸ್ತ್ರೀಯರ ಪುಣ್ಯವೆಲ್ಲವನ್ನು ಕಳೆದುಬಿಟ್ಟ. ಹೀಗಾಗಿ ಗೋಪಿಕಾಸ್ತ್ರೀಯರ ಯೋಗ್ಯತಾನುಸಾರವಾಗಿ, ಪುಣ್ಯ ಅಥವಾ ಪಾಪವನ್ನು ಕಳೆಯುವ ಉದ್ದೇಶದಿಂದಲೇ ಕೃಷ್ಣನು ಬೆಣ್ಣೆಯನ್ನು ಕದಿಯುವ ನಾಟಕ ಮಾಡಿದನು.
ಇನ್ನು ಸಮಸ್ತ ಜಗತ್ತೇ ಕೃಷ್ಣನ ವಶದಲ್ಲಿರುವುದರಿಂದ ಗೋಪಿಕಾಸ್ತ್ರೀಯರ ಮನೆಯಲ್ಲಿದ್ದ ಬೆಣ್ಣೆಯು ಕೂಡ ಪರಮಾತ್ಮನದ್ದೇ. ಹಾಗಾದ ಮೇಲೆ ಕೃಷ್ಣನು ಬೆಣ್ಣೆಯನ್ನು ತಿಂದರೆ ಅವನು ಚೋರನಾಗುವುದಾದರೂ ಹೇಗೆ? ಇದನ್ನೇ ಕೃಷ್ಣನು ಕಾಲಾನಂತರದಲ್ಲಿ ವಿಶ್ವರೂಪದ ಮೂಲಕ ಸೂಚಿಸಿದ್ದು.
(ಮುಂದಿನ ಲೇಖನ: ಕರ್ಮಾನುಷ್ಠಾನ ಮೋಕ್ಷಸಾಧನ ಅಲ್ಲ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post