ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಂಸ್ಕೃತಿಕ ನಗರಿ ಮೈಸೂರು; ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ನಾಡು. ಶಿವೆಯು ಚಾಮುಂಡಿ ಅವತಾರ ತಾಳಿ ಮಹಿಷಾಸುರನನ್ನು ವಧಿಸಿ ನೆಲೆನಿಂತ ಪವಿತ್ರ ನೆಲೆವೀಡು. ಗಂಗ, ಚೋಳ, ಚಾಲುಕ್ಯ, ಹೊಯ್ಸಳ, ವಿಜಯನಗರ ಹಾಗೂ ಯದುವಂಶದ ಅರಸರು ಆಳಿದ ಬೀಡು. ದಿವ್ಯ ಮಂದಿರಗಳು, ಭವ್ಯ ಅರಮನೆಗಳು ಸೊಗಸಾದ ಉದ್ಯಾನವನಗಳು ವಿಶಾಲವಾದ ರಾಜಮಾರ್ಗಗಳು ಹಾಗೂ ಅನೇಕ ಮಹಾವಿದ್ಯಾಲಯಗಳಿಂದ ಕೂಡಿದ ಐತಿಹಾಸಿಕ ನಗರ.
ಮೈಸೂರು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಜಧಾನಿ. ಜಗತ್ಪ್ರಸಿದ್ಧವಾದ ದಸರಾ ಮೈಸೂರಿನ ಸಾಂಸ್ಕೃತಿಕ ಪ್ರತೀಕ. ಸರ್.ಎಂ. ವಿಶ್ವೇಶ್ವರಯ್ಯ ನಿರ್ಮಿತ ಕೃಷ್ಣರಾಜ ಸಾಗರ, ಜಗತ್ಪ್ರಸಿದ್ಧ ಅರಮನೆಗಳು ಮೈಸೂರಿನ ಮಹತ್ವವನ್ನು ಹೆಚ್ಚಿಸಿದರೆ; ಮೈಸೂರು ಮಸಾಲ ದೋಸೆ, ಮೈಸೂರು ಪಾಕ್, ಮೈಸೂರು ಗಂಧದ ಎಣ್ಣೆ, ಸಾಬೂನು, ಮೈಸೂರು ರೇಷ್ಮೆ ಇತ್ಯಾದಿಗಳು ಮೈಸೂರನ್ನು ಜನರು ನಿತ್ಯ ನೆನೆಯುವಂತೆ ಮಾಡುತ್ತವೆ. ಅರಸೊತ್ತಿಗೆಯ ಕಾಲದಿಂದಲೂ ವಿಶ್ವವಿಖ್ಯಾತರಾದ ಕಲಾವಿದರನ್ನು ನಾಡಿಗೆ ನೀಡಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ. ಜಾನಪದ, ಚಿತ್ರಕಲೆ, ಸಂಗೀತ, ನೃತ್ಯ, ನಾಟಕ, ಚಲನಚಿತ್ರ ಕಲಾವಿದರ ಹಾಗೂ ಕವಿಗಳ ತವರೂರು ಮೈಸೂರು. ಇಂಥ ಸಾಂಸ್ಕೃತಿಕ ನಗರದ ಪುಟ್ಟ ಬಾಲೆಯೊಬ್ಬಳು ನಟನಾ ಕ್ಷೇತ್ರದಲ್ಲಿ ಇಟ್ಟ ದಿಟ್ಟ ಹೆಜ್ಜೆಗಳಿಂದ ನಾಡಿಗೆ ನಾಡೇ ಸಂಭ್ರಮಿಸುತ್ತಿದೆ. ಅವಳೇ ಕಿನ್ನರಿ ಮಣಿ ಎಂದೇ ಖ್ಯಾತಳಾದ ದಿಶಾ ರಾಮ್. ಶ್ರೀಮತಿ ಶ್ವೇತಾ ಹಾಗೂ ಶ್ರೀರಾಮ್ ದಂಪತಿಗಳ ಹನ್ನೊಂದರ ಹರೆಯದ ಬಾಲೆ.
ಕೌಟಿಲ್ಯ ವಿದ್ಯಾಲಯದಲ್ಲಿ ಮೂರನೆ ತರಗತಿ ತನಕ ಓದಿರುವ ಇವಳು ಈಗ ಪ್ರಸ್ತುತ ಸೈಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ವಿಜಯನಗರ ಮೈಸೂರು ಇಲ್ಲಿನ ಐದನೆಯ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿ.
ಪಟಪಟನೆ ಅರಳು ಹುರಿದಂತೆ ಮಾತನಾಡುವ, ಮಿನುಗುವ ಕಂಗಳ, ವೀಕ್ಷಕರು ಮೂಗಿನ ಮೇಲೆ ಬೆರಳಿಡುವಂತಹ ಸಹಜ ನಟನೆ. ವಯೋಮಾನಕ್ಕೆ ಮೀರಿದ ಕ್ಷಮತೆ. ಮುದ್ದು ಮುಖ, ಸದಾ ಹಸನ್ಮುಖಿ. ಎಳೆತನಕ್ಕೆ ಬೇಕಾದ ತುಂಟತನ. ಕನ್ನಡ ಕಿರುತೆರೆಯ ಹೆಸರಾಂತ ನಟಿಯರ ಸಾಲಿನಲ್ಲಿ ಗುರುತಿಸಲ್ಪಡುವ ದಿಶಾ ರಾಮ್ ನಟನೆಗೆ ಕಾಲಿಟ್ಟದ್ದು ನಾಲ್ಕುವರೆ ವರ್ಷದ ಪುಟ್ಟಾಣಿಯಾಗಿದ್ದಾಗಲೇ.
ತಾಯಿ ಕಂಡ ಕನಸನ್ನು ನನಸು ಮಾಡುತ್ತಿರುವ ದಿಶಾ ಮೈಸೂರಿನಿಂದ ಬೆಂಗಳೂರಿಗೆ ಬಂದು ಕಿನ್ನರಿ ಪ್ರವೇಶ ಪ್ರಕ್ರಿಯೆಯಲ್ಲಿ ಆಯ್ಕೆಯಾದವರು. ಸುಮಾರು ಮುನ್ನೂರು ಮಕ್ಕಳು ಕಿನ್ನರಿ ಪಾತ್ರಕ್ಕಾಗಿ ಸ್ಪರ್ಧೆಯಲ್ಲಿದ್ದರು. ಇವರ ಬೆರಗುಗೊಳಿಸುವ ಚುರುಕು ಹಾಗೂ ಮುಗ್ದತೆ ನಿರ್ದೇಶಕರನ್ನು ಚಕಿತಗೊಳಿಸಿ ಆಯ್ಕೆಗೊಂಡವರು. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿಯ ಬಾಲ್ಯದ ಮಣಿ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿದ ಕೀರ್ತಿ ದಿಶಾ ಅವರದ್ದು. ಧಾರಾವಾಹಿ ವೀಕ್ಷಕರ ಮೆಚ್ಚಿನ ಪಾತ್ರವಾಗುವಂತೆ ಮಣಿ ಪಾತ್ರಕ್ಕೆ ಜೀವಕಳೆಯಿತ್ತು ಅಭಿನಯಿಸಿದ್ದು ದಿಶಾ ಅವರ ಹೆಚ್ಚುಗಾರಿಕೆಯೇ ಆಗಿತ್ತು. ಮುಂದೆ ದಿಶಾ ಅವರು ಹೋದಲ್ಲಿ ಬಂದಲ್ಲಿ ಮಣಿ ಎಂದೆ ಕರೆಯಲ್ಪಡುತ್ತಿದ್ದರು.
ದಿಶಾ ರಾಮ್ ಅವರು ಕಿನ್ನರಿ, ನಾ ನಿನ್ನ ಬಿಡಲಾರೆ, ಮನ್ ಮೆ ಹೈ ವಿಶ್ವಾಸ್ (ಹಿಂದಿ) ಸೋನಿ ವಾಹಿನಿಯ ಕ್ರೈಮ್ ಪೆಟ್ರೋಲ್ (ಹಿಂದಿ) ಧಾರಾವಾಹಿಗಳ ಬಹುಮುಖ್ಯವಾದ ಭೂಮಿಕೆಗಳಲ್ಲಿ ತನ್ನ ನಟನಾ ಕೌಶಲ್ಯದಿಂದ ಮಿಂಚಿದವರು. ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಒಂದು ದಿನದ ಅತಿಥಿಯಾಗಿ ಭಾಗವಹಿಸಿದ್ದಾರೆ. ಮಜಾ ಟಾಕೀಸ್, ಸೂಪರ್ ಟಾಕ್ ಟೈಮ್, ಜಬರ್ದಸ್ತ್ ಕಾಮಿಡಿ, ತಕಧಿಮಿತ ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.

ಎಸ್. ಕೃಷ್ಣ ಪರಮಾತ್ಮನ ಮೇಲೆ ಅಪಾರ ಭಕ್ತಿ ಹೊಂದಿರುವ ದಿಶಾ ಅವರಿಗೆ ಕೃಷ್ಣ ವೇಷ, ಕೃಷ್ಣ ಭಜನೆ, ಹಾಡು ಎಂದರೆ ಬಹಳ ಇಷ್ಟ. ದಿಶಾ ಅವರ ಸಾಧನೆಯನ್ನು ಹಲವಾರು ಪತ್ರಿಕೆಗಳು, ದೂರದರ್ಶನ ಮಾಧ್ಯಮಗಳು ಗುರುತಿಸಿವೆ. ಹಲವು ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಉದ್ಘಾಟನೆಗಳಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.
ಎಳೆಯ ಪ್ರಾಯದಲ್ಲಿಯೇ ಏರಿರುವ ಎತ್ತರದ ಹಿಂದೆ ಅವರ ಅಚಲವಾದ ಪ್ರಯತ್ನ ಹಾಗೂ ಕಠಿಣವಾದ ಸಾಧನೆ ಇತರರಿಗೊಂದು ಆದರ್ಶ. ಅವರ ಸಾಧನೆಯ ಹಿನ್ನೆಲೆಯಲ್ಲಿ ತಾಯಿಯ ಪಾತ್ರ ಅಪಾರ. ತಾಯಂದಿರು ಮಕ್ಕಳನ್ನು ಎಳವೆಯಲ್ಲೇ ಪಳಗಿಸಿ ಪ್ರೋತ್ಸಾಹಿಸಿದರೆ ಮಕ್ಕಳು ಸನ್ನಡತೆಯೊಂದಿಗೆ ಗುರಿಮುಟ್ಟುವುದು ಶತಸಿದ್ದ ಎಂದು ಶ್ರೀಮತಿ ಶ್ವೇತಾ ಶ್ರೀರಾಮ್ ಅವರು ಸಾಬೀತು ಪಡಿಸಿದ್ದಾರೆ. ಮುಂದೆ ದಿಶಾ ಚೆನ್ನಾಗಿ ಓದಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕೆಂದು ಬಯಸಿದ್ದಾರೆ. ಓದಿನೊಂದಿಗೆ ಕನ್ನಡದ ಧಾರಾವಾಹಿ ಹಾಗೂ ಚಲನಚಿತ್ರ ರಸಿಕರ ಮನಸ್ಸನ್ನು ತಣಿಸುತ್ತಿರಲಿ. ಭವಿಷ್ಯದಲ್ಲಿ ಮತ್ತಷ್ಟು ಅವಕಾಶಗಳು ದೊರೆಯಲಿ ಎಂಬ ಆಶಯ ನಮ್ಮದು.
ಕಿನ್ನರಿ ದಿಶಾ ಅವಳನ್ನು ಸೋಷಿಯಲ್ ಮೀಡಿಯಾದಲ್ಲಿ ಪಾಲೋ ಮಾಡಲು ಇಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ
http://www.instagram.com/kinnari_dishaofficial
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news











Discussion about this post