ಕನೌಜ್: ಲೋಕಸಭಾ ಚುನಾವಣೆಯ ಕಾವು ತಾರಕಕ್ಕೆ ಏರಿರುವಂತೆಯೇ ಜಾತಿ ಆಧಾರಿತ ರಾಜಕಾರಣದ ಮೇರೆ ಮೀರಿದೆ. ಈ ನಡುವೆಯೇ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನಿಮ್ಮನ್ನೆಲ್ಲಾ ನಾನು ಕೈ ಮುಗಿದು ಬೇಡಿಕೊಳ್ಳುತ್ತೇನೆ, ನನ್ನನ್ನು ಜಾತಿ ರಾಜಕಾರಣಕ್ಕೆ ಮಾತ್ರ ಎಳೆಯಬೇಡಿ ಎಂದು ವಿನಂತಿಸಿದ್ದಾರೆ.
ಇಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಾನು ನನ್ನ ಜೀವನದಲ್ಲಿ ಎಂದಿಗೂ ಜಾತಿಯ ಬಗ್ಗೆ ಮಾತನಾಡಿಲ್ಲ. ದೇಶದ ಜನತೆಗೆ ನನ್ನ ಜಾತಿ ಯಾವುದು ಎಂದು ಗೊತ್ತಿಲ್ಲ. ಈ ವಿಷಯದಲ್ಲಿ ನಾನು ಹಿಂದುಳಿದಿರುವುದರ ಕುರಿತು ಮಾತನಾಡುತ್ತಿರುವ ಮಾಯಾವತಿ, ಅಖಿಲೇಶ್ ಯಾದವ್, ಕಾಂಗ್ರೆಸ್ ನಾಯಕರು ಮತ್ತು ಇತರೆ ಮಹಾಮಿಲಾವಟಿ ಪಕ್ಷಗಳ ನಾಯಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.
ಭಾರತದ 130 ಕೋಟಿ ಜನರೇ ನನ್ನ ಪರಿವಾರ ಎಂದಿರುವ ಪ್ರಧಾನಿಯವರು, ನನ್ನ ಜಾತಿ ಎಷ್ಟು ಚಿಕ್ಕದಿದೆ ಎಂದರೆ, ಊರಿನಲ್ಲಿ ನಮ್ಮ ಜಾತಿಯವರ ಅರ್ಧ ಮನೆಗಳೂ ಇರುವುದಿಲ್ಲ. ನಾನು ಹಿಂದುಳಿದಿಲ್ಲ, ಅತ್ಯಂತ ಹೆಚ್ಚು ಹಿಂದುಳಿದ ಜಾತಿಯಲ್ಲಿ ಹುಟ್ಟಿದ್ದೇನೆ. ನೀವು ನನ್ನ ಬಾಯಿಂದ ಹೇಳಿಸುತ್ತಿದ್ದೀರಿ, ಅದಕ್ಕೆ ಹೇಳುತ್ತಿದ್ದೇನೆ. ನನ್ನ ದೇಶ ಹಿಂದುಳಿದಿರುವಾಗ ಮುಂದುವರೆದುದು ಎಂಬುದು ಯಾವುದು ಇದೆ. ನನಗೆ ನನ್ನ ದೇಶವನ್ನು ಅಭಿವೃದ್ಧಿ ಮಾಡಬೇಕಿದೆ ಎಂದಿದ್ದಾರೆ.

















