ರಾಜ್ಯ ಸಂಪುಟ ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಹಲವರು ಕ್ಯಾತೆ ತೆಗೆದಿದ್ದು, ಇದರಲ್ಲಿ ಪ್ರವಾಸೋದ್ಯಮ ಇಲಾಖೆ ಪಡೆದಿರುವ ಸಿ.ಟಿ. ರವಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದು ರಾಜೀನಾಮೆ ವಿಚಾರವನ್ನೂ ಸಹ ಪ್ರಸ್ತಾಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ವಿಚಾರಗಳನ್ನು ಹೇಳಲು ಬಯಸುತ್ತೇನೆ…
ನೋಡಿ ಸಿ.ಟಿ. ರವಿ ಅವರೇ,
ನೀವು ಪ್ರವಾಸೋದ್ಯಮ ಸಚಿವರಾಗಿ ಏನೆಲ್ಲಾ ಮಾಡಬಹುದು ಗೊತ್ತಾ?
ರಾಜ್ಯದ ಮೂಲೆ ಮೂಲೆಯಲ್ಲಿರುವ ಜನರಿಗೆ ಗೊತ್ತಿರದ ಅದೆಷ್ಟು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡೆಸಬಹುದು?! ನಿಮ್ಮದೇ ತವರಾದ ಇಡೀ ಚಿಕ್ಕಮಗಳೂರು ಜಿಲ್ಲೆಯನ್ನು ಇದೊಂದು ಖಾತೆಯ ಮೂಲಕ ಅಭಿವೃದ್ಧಿಯ ರಾಜಪಥದಲ್ಲಿ ಕೊಂಡೊಯ್ಯಬಹುದು! ಗೋವದಂತಹ ರಾಜ್ಯ, ಸಿಂಗಪುರದಂತಹ ದೇಶ ಬರೀ ಪ್ರವಾಸೋದ್ಯಮದ ವಹಿವಾಟಿನಲ್ಲಿ ನಿಂತಿದೆ ಅಂದ್ರೆ ಇದೇನು ಸಾಮಾನ್ಯ ಇಲಾಖೆನಾ?!
ಇನ್ನು ಕನ್ನಡ-ಸಂಸ್ಕೃತಿ ಇಲಾಖೆ. ಅದೆಷ್ಟು ಕೆಲ್ಸ ಮಾಡಬಹುದು. ಕನ್ನಡಿಗರ ಆಶೋತ್ತರಗಳನ್ನು ಸಾಕಾರಗೊಳಿಸಬಹುದಾದ ಸುವರ್ಣಾವಕಾಶ. ಈ ಎರಡೂ ಇಲಾಖೆಗಳೂ ಒಂದಕ್ಕೊಂದು ಪೂರಕ. ರಾಜ್ಯದ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಪರಂಪರೆಯ ಹಿರಿಮೆಯನ್ನು ಬಿಂಬಿಸುವ ಕನ್ನಡ ಸಂಸ್ಕೃತಿ ಉತ್ಸವಗಳನ್ನು ನಡೆಸಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಬಹುದು.
ನನಗೆ ಈ ಖಾತೆ ಬೇಡ ಅಂತ ಮೊಸರಲ್ಲಿ ಕಲ್ಲು ಹುಡುಕುವವರಿಗೆ ಏನು ಹೇಳುವುದು? ಮತ್ತೊಮ್ಮೆ ನೆನಪು ಮಾಡಿಕೊಳ್ಳಿ ನೀವ್ಯಾರು ನಿಮ್ಮ ವರ್ಚಸ್ಸಿನಿಂದ ಗೆದ್ದಿಲ್ಲ. ಈಗ ನೀವು ಗೆದ್ದು ಸಚಿವರಾಗಿರುವುದೂ ದೇಶ ಕಾಯುತ್ತಿರುವ ಆ ಪ್ರಧಾನ ಸೇವಕನ ನಾಮ ಬಲದಿಂದ ಮಾತ್ರ.
ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳಿಲ್ಲದೆ ರಾಜ್ಯದ ಅನೇಕ ಪ್ರವಾಸಿತಾಣಗಳು ಸೊರಗುತ್ತಿವೆ. ಪ್ರಾಕೃತಿಕವಾಗಿ, ಐತಿಹಾಸಿಕವಾಗಿ ಶ್ರೀಮಂತವಾಗಿರುವ ಕರ್ನಾಟಕವನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಎತ್ತರೆತ್ತರಕ್ಕೆ ಕೊಂಡೊಯ್ಯಬಹುದು.
ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಸೇವೆ ಮಾಡುವ ಬದಲು, ಅಸಹನೆ-ಅಸಮಾಧಾನ ತೋರಿದರೆ ಮೆಚ್ಚನಾ ಪರಮಾತ್ಮನು.
ಲೇಖನ: ವಿನಯ್ ಶಿವಮೊಗ್ಗ
Discussion about this post