ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನೀವು ‘‘ಇರುವೆ’’ ನೋಡಿದ್ದೀರಾ ? ಈ ಪ್ರಶ್ನೆ ನೋಡಿ ನನಗೆ ತಲೆ ಕೆಟ್ಟಿದೆ ಎಂದೇ ನೀವೆಂದುಕೊಳ್ಳೋದು ಖಂಡಿತಾ. ಏಕೆಂದರೆ, ಪ್ರತಿನಿತ್ಯ ನಾವೆಲ್ಲಾ ಅನಿವಾರ್ಯವಾಗಿ ಎದುರಿಸಬೇಕಾಗಿರುವ ಮತ್ತು ನಮ್ಮ ನಡುವೆಯೇ ಇದ್ದು ನಮಗಿಂತ ಚೆನ್ನಾಗಿಯೇ ಸಂಘಜೀವನ ನಡೆಸುತ್ತಿರುವ ಅತಿಸಣ್ಣ ಕೀಟ ‘‘ಇರುವೆ’’. ಇವುಗಳಲ್ಲಿ ಸಾವಿರಾರು ಪ್ರಬೇಧಗಳಿದ್ದು ಎಷ್ಟೋ ಪ್ರಬೇಧಗಳು ನಮ್ಮ ನಡುವೆಯೇ ಇವೆ. ಆದರೆ, ತನ್ನ ದುರಾಸೆಯಿಂದಾಗಿ ಈ ಪ್ರಕೃತಿಯಲ್ಲಿರುವ ಸಾವಿರಾರು ಪ್ರಾಣಿ – ಪಕ್ಷಿ ಕೀಟ – ಸಸ್ಯಗಳನ್ನೇ ನಾಶಮಾಡಿರುವ ಮಾನವನನ್ನೇ ಹೆದರಿಸುವ ಇರುವೆಯನ್ನು ಎಲ್ಲಾದರೂ ನೋಡಿರುವಿರಾ?
ಇಂದು ನಾನು ನಿಮಗೆ ತಿಳಿಸಲು ಹೊರಟಿರುವುದು ನಿಮ್ಮ ಮನೆಯಲ್ಲಿ ನಿಮ್ಮನ್ನು ಕಚ್ಚುವ ‘‘ಕೆಂಪಿರುವೆ’’ಯ ಬಗ್ಗೆ ಖಂಡಿತ ಅಲ್ಲ. ಬದಲಾಗಿ ಇಡೀ ಆಫ್ರಿಕಾ ಖಂಡದಲ್ಲಿ ಮತ್ತು ಅಕ್ಕಪಕ್ಕದ ಏಷ್ಯಾ ಖಂಡದ ಕೆಲ ಭಾಗಗಳಲ್ಲಿ ಮಾತ್ರ ಕಂಡುಬರುವ ‘‘ಡಾರಿಲಸ್’’ ಎಂಬ ‘‘ಭಯಂಕರ ಇರುವೆ’’ಯ ಬಗ್ಗೆ. ಈ ಇರುವೆ ‘‘ಡ್ರೈವರ್ ಇರುವೆ’’ ಅಥವಾ ‘‘ಸಫಾರಿ ಇರುವೆ’’ ಎಂದೇ ಜಗತ್ಪ್ರಸಿದ್ಧ.
ನಮ್ಮ ಮನೆಯಿರುವೆ ಹೆಚ್ಚೆಂದರೆ ನಮ್ಮ ಆಹಾರ ಪದಾರ್ಥವನ್ನು ತನ್ನ ಬಿಲಕ್ಕೆ ಸಾಗಿಸಬಹುದು ಮತ್ತು ತನ್ನ ದಾರಿಗೆ ಅಡ್ಡ ಬಂದವರನ್ನು ಕಚ್ಚಿ ನೋಯಿಸಬಹುದು, ಅಷ್ಟೇ. ಆದರೆ, ಈ ‘‘ಡಾರಿಲಸ್’’ ಎಂಬ ಆಫ್ರಿಕನ್ ಇರುವೆ ಎಷ್ಟು ಭಯಂಕರ ಎಂದರೆ ಈ ಇರುವೆಗಳು ದಾಳಿ ಇಡುತ್ತಿರುವ ಸುಳಿವು ಸಿಕ್ಕೊಡನೆಯೇ ಆ ಪ್ರದೇಶದಲ್ಲಿರುವ ಆಫ್ರಿಕನ್ ಬುಡಕಟ್ಟುಗಳ ಜನರೆಲ್ಲರೂ ತಮ್ಮ ಮಕ್ಕಳು-ಮರಿಗಳೊಡನೆ ಮನೆಗಳನ್ನೇ ತೊರೆದು ಓಡಿಹೋಗುತ್ತಾರೆ. ಏಕೆಂದರೆ, ಈ ‘‘ಡ್ರೈವರ್ ಇರುವೆ’’ಗಳು ತಮ್ಮ ಹಾದಿಯಲ್ಲಿ ದೊರೆಯುವ ಯಾವ ಪದಾರ್ಥವನ್ನೂ ಬಿಡದೇ ಕಬಳಿಸಿ ಮುಂದೆ ಸಾಗುತ್ತವೆ. ಕೊನೆಗೆ ಕೈಗೆ ಸಿಕ್ಕ ಪ್ರಾಣಿಗಳನ್ನೂ ಹಾಗೂ ಮನುಷ್ಯನನ್ನೂ ತಿಂದು ಕಬಳಿಸಿ ಹಾಕುವಂತಹ ಭಯಾನಕ ಇರುವೆಗಳು ಸದಾ ಲಕ್ಷಾಂತರ ಅಥವಾ ಕೋಟ್ಯಂತರ ಸಂಖ್ಯೆಯಲ್ಲಿ ಗುಂಪುಗೂಡಿಕೊಂಡೇ ಚಲಿಸುತ್ತವೆ.
ಆಫ್ರಿಕಾದ ಬರಡು ನೆಲದಲ್ಲಿ ಹುತ್ತಗಳಂತಿರುವ ತಮ್ಮ ಕಾಲೋನಿಗಳಲ್ಲಿ ವಾಸಿಸುವ ಈ ‘‘ಡ್ರೈವರ್ ಇರುವೆ’’ಗಳು ತಮ್ಮ ವಾಸಸ್ಥಾನದ ಅಕ್ಕಪಕ್ಕದಲ್ಲಿ ದೊರಕುವ ತಮ್ಮ ಆಹಾರ ಪದಾರ್ಥಗಳು ಬರಿದಾಗುತ್ತಿದ್ದಂತೆಯೇ ಸುಮಾರು 5 ಕೋಟಿಗಳಷ್ಟು ಸಂಖ್ಯೆಯಲ್ಲಿ ತಮ್ಮ ಗೂಡುಗಳನ್ನು ತೊರೆದು ಬೇರೆಡೆಗೆ ಆಹಾರವನ್ನರಿಸಿ ಹೋಗುವುದುಂಟು. ಹೀಗೆ ಹೊರಟಾಗ ಅವುಗಳ ಗುಂಪಿನ ಚಲನೆಯ ಗತಿ ಗಂಟೆಗೆ ಸುಮಾರು 20 ಮೀಟರ್ (ಸುಮಾರು 66 ಅಡಿ) ಗಳಷ್ಟಿದ್ದರೂ ಈ ಇರುವೆಗಳ ಗುಂಪು ಚಲಿಸುವ ಹಾದಿಯಲ್ಲಿ ತಮಗೆ ಎದುರಾಗುವ ಎಲ್ಲವನ್ನೂ ಕೆಲವೇ ನಿಮಿಷಗಳಲ್ಲಿ ಕಬಳಿಸಿಬಿಡುವ ಜಾಯಮಾನ ಇವುಗಳದ್ದು. ನೀವು ‘‘ಇಂಡಿಯಾನಾ ಜೋನ್ಸ್ ಸರಣಿಯ ಹಾಲಿವುಡ್ ಚಲನಚಿತ್ರವೊಂದರಲ್ಲಿ ಹೀರೋ ವಿಲನ್‌ನ ಏಜೆಂಟನನ್ನು ಬಾಯಿಬಿಡಿಸಲು ಎತ್ತಿ ‘‘ಇರುವೆ ಹುತ್ತದ ಹತ್ತಿರಕ್ಕೆ ಒಯ್ಯುವುದನ್ನು’’ ನೋಡಿರಬಹುದು. ಇದೇ ‘‘ಡ್ರೈವರ್ ಇರುವೆಯ ವಾಸಸ್ಥಾನ’’.
ತಮ್ಮ ದಾರಿಯಲ್ಲಿ ದೊರಕುವ ಪೈರುಗಳನ್ನು ಕಾಡುವ ಮಿಡತೆಗಳಿಂದ ಆರಂಭಿಸಿ ಇಲಿ-ಹೆಗ್ಗಣಗಳವರೆಗಿನ ಪ್ರಾಣಿಗಳನ್ನು ಹಠಾತ್ತಾಗಿ ಕಬಳಿಸಿಬಿಡುವ ಈ ಇರುವೆಗಳಿಂದಾಗಿ ಮಾನವನಿಗೆ ತಾನು ಬೆಳೆದ ಪೈರುಗಳನ್ನು ಕಬಳಿಸುವ ಕ್ರಿಮಿಗಳಿಂದ ರಕ್ಷಣೆ ಸಿಗುವುದೂ ಹೌದು.
Get in Touch With Us info@kalpa.news Whatsapp: 9481252093
Discussion about this post