ಕ್ಷೀರಸಮುದ್ರದ ಮಥನದಲ್ಲಿ ಅಮೃತವನ್ನು ಪಿಡಿದು ಉದಯಿಸಿದವನೇ ಧನ್ವಂತರಿ ಧನ್ವಂತರಿ ಎಂಬ ಶಬ್ದಕ್ಕೆ ಪಾಪ ಪರಿಹಾರಕನೆಂದು ಅರ್ಥ. ಪೂರ್ವಜನ್ಮ ಕೃತಂ ಪಾಪಂ ವ್ಯಾಧಿರೂಪೇನ ಬಾಧತೆ ಎಂಬಂತೆ ಪಾಪಗಳು ರೋಗಗಳಿಗೆ ಕಾರಣ. ಪಾಪ ಪರಿಹಾರವಾದರೆ ರೋಗ ಪರಿಹಾರ. ಎಲ್ಲದಕ್ಕಿಂತ ದೊಡ್ಡ ರೋಗ ಭವರೋಗ. ಭವರೋಗ ಪರಿಹಾರ ಮಾಡುವನು ದೇವ ಧನ್ವಂತರಿಯೊಬ್ಬನೆ.
ವೈದ್ಯನಲ್ಲಿ ನಾರಾಯಣನನ್ನು ಚಿಂತನೆ ಮಾಡಬೇಕೆಂಬುದು ಆರ್ಷ ಸಂಸ್ಕೃತಿ. ವೈದ್ಯೋ ನಾರಾಯಣೋ ಹರಿಃ ಎಂಬ ಚಿಂತನೆ ಭೌತಿಕ ರೋಗಕ್ಕೂ ಭವರೋಗಕ್ಕೂ ದಿವ್ಯೌಧವೆಂಬುದು ನಮ್ಮ ಋಷಿಗಳ ಅನುಸಂಧಾನ.
ಧನ್ವ ಶಬ್ಧಕ್ಕೆ ಮರುಭೂಮಿ (desert) ಎಂಬ ಅರ್ಥವೂ ಇದೆ. ಮರುಭೂಮಿ ಬಹು ತಾಪ ಕೊಡುವುದು; ಸಾರ ಹೀನವಾದದ್ದು. ಸಂಸಾರವೆಂಬ ಭವವು ಸಾರಹೀನವಾಗಿ ತಾಪ ಕೊಡುವುದು. ಅದನ್ನು ತಣಿಸುವಂತೆ ಮಾಡುವನು-ದಾಟಿಸುವನು ಧನ್ವಂತರಿ.
ನೀವೇ ಜಪ ಮಾಡಬೇಕಾಗಿಲ್ಲ. ಒಬ್ಬ ಮಂತ್ರೋಪಾಸಕನು ಅಮೃತವನ್ನು ಸುರಿಸುತ್ತಿರುವ ಧನ್ವಂತರಿಯನ್ನು ಮನದಲ್ಲಿ ನೆನೆದು ರೋಗಿಯ ಮೇಲೆ ಕೈಯನ್ನಿಟ್ಟು ಧನ್ವಂತರಿಯ ಮಹಾಮಂತ್ರವನ್ನು ಉಚ್ಚಾರ ಮಾಡಿದರೆ ಸಾಕು. ಸಂಶಯವಿಲ್ಲದೆ ರೋಗವು ಪರಿಹಾರವಾಗುತ್ತದೆ. ರೋಗಕ್ಕೆ ಕಾರಣವಾಗಿರುವ ಪಾಪವೂ ದೂರ ಓಡುತ್ತದೆ. ಆ ಮಂತ್ರೋಪಾಸಕನಲ್ಲಿ ಹರಿಭಕ್ತಿ ಹಾಗೂ ಶ್ರದ್ಧೆಗಳು ಇರುವುದು ಬಹಳ ಮುಖ್ಯ.
ತಂತ್ರಸಾರಸಂಗ್ರಹದಲ್ಲಿ ಶ್ರೀಮದಾಚಾರ್ಯರು ಧನ್ವಂತರಿ ಮಂತ್ರದ ಬಗ್ಗೆ ಎಲ್ಲಿಲ್ಲದ ಮಹಿಮೆಯನ್ನು ಹೇಳಿದ್ದಾರೆ. ಸಕಲ ಮಂತ್ರಗಳ ಶೀರೋಮಣಿ ಎಂದು ಕೊಂಡಾಡಿದ್ದಾರೆ. ಧನ್ವಂತರೋಮಹಾಮಂತ್ರಃ ವ್ಯಾಧಿನಾಶನಃ ಎನ್ನುವ ಮೂಲಕ ಧನ್ವಂತರಿ ಮಂತ್ರವು ಕ್ಷಣಿಕ ರೋಗಗಳನ್ನಷ್ಟೇ ಅಲ್ಲದೆ ಸಂಸಾರ ರೋಗವನ್ನೇ ಪರಿಹಾರ ಮಾಡುವ ಸಾಮರ್ಥ್ಯವುಳ್ಳದ್ದೆಂದು ಮುಕ್ತಕಂಠದಿಂದ ಪ್ರಶಂಸೆ ಮಾಡಿದ್ದಾರೆ.
ನಮ್ಮ ಹೃದಯದಲ್ಲಿ ಅಗ್ನಿಮಂಡಲ ಚಂದ್ರಮಂಡಲ ಸೂರ್ಯಮಂಡಲಗಳಿವೆ. ಹೃದಯದಲ್ಲಿರುವ ಸೂರ್ಯಮಂಡಲದಲ್ಲಿ ಸೂರ್ಯನಾರಾಯಣನನ್ನು ಚಿಂತಿಸಿ ಗಾಯಿತ್ರಿ ಜಪವನ್ನು ಮಾಡುವಂತೆ ಹೃದಯದಲ್ಲಿರುವ ಚಂದ್ರಮಂಡಲದಲ್ಲಿ ಧನ್ವಂತರಿಯನ್ನು ಚಿಂತನೆ ಮಾಡಿ ಜಪವನ್ನು ಆಚರಿಸಬೇಕು. ಹೃದಯದ ಚಂದ್ರಮಂಡಲದಲ್ಲಿ ನೆಲೆಸಿರುವ ಧನ್ವಂತರಿಯು 72 ಸಾವಿರ ನಾಡಿಗಳಲ್ಲಿ ತನ್ನ ಬೆಳಕನ್ನು ಸೂಸುತ್ತಾ ನಮ್ಮ ಸಮಸ್ತ ದೇಹವನ್ನು ಅಮೃತಮಯವನ್ನಾಗಿ ಮಾಡುವನು. ಅಷ್ಟೇ ಅಲ್ಲದೆ ಕೇವಲ ಹೃದಯದಲ್ಲಿ ಮಾತ್ರವಲ್ಲದೆ ಶಿರಸ್ಸಿನಲ್ಲಿ ಹುಬ್ಬುಗಳ ನಡುವೆ ಕಿರುನಾಲಗೆಯಲ್ಲಿ ಹೊಕ್ಕಳಿನಲ್ಲಿ ಮತ್ತು ಕೆಳಭಾಗದಲ್ಲಿ ಇರುವ ಷಟ್ ಚಕ್ರಗಳಲ್ಲಿಯೂ ಇದೇ ಧನ್ವಂತರಿಯು ನೆಲೆಸಿ ಅಮೃತಧಾರೆಯನ್ನು ಸುರಿಸುತ್ತಿರುವನು.
ದೇವತೆಗಳು ಮತ್ತು ಅಸುರರು ಸೇರಿ ಕ್ಷೀರಸಮುದ್ರ ಮಥನ ಮಾಡಿದಾಗ ಅಮೃತವನ್ನು ಧರಿಸಿ ಬಂದವನೇ ಧನ್ವಂತರಿ. ಸಪ್ತಸಾಗರಗಳಲ್ಲಿ ಕೊನೆಯದ್ದು ಲವಣಸಮುದ್ರ ಅದರ ಮಧ್ಯದಲ್ಲಿರುವ ಜಂಬೂದ್ವೀಪದಲ್ಲಿ ನಾವು ನೆಲೆಸಿದ್ದೇವೆ. ಈ ಲವಣಸಮುದ್ರ ಆಚೆಗೆ ಕ್ಷೀರಸಮುದ್ರವಿದೆ. ಅಲ್ಲಿ ಧನ್ವಂತರಿಯೂ ಉದಯಿಸಿ ಬಂದಿದ್ದಾನೆ. ಅವನು ಅವತರಿಸಿದ ದಿವಸ ಅಶ್ವೀಜಮಾಸದ ತ್ರಯೋದಶಿಯಂದು ಧನ್ವಂತರಿ ಜಯಂತಿಯನ್ನು ಧನ್ವಂತರಿಯ ಆರಾಧಕರು ವಿಶೇಷವಾಗಿ ಆಚರಣೆ ಮಾಡುತ್ತಾರೆ.
ಧನ್ವ = ರೋಗ-ರುಜಿನ ಕಷ್ಟ-ಕಾರ್ಪಣ್ಯಗಳನ್ನು ತರಿ = ನಾಶ ಮಾಡುವವನು ಎಂದರ್ಥ. ಅಜ್ಞಾನರೋಗ ಎಂಬ ಶ್ಲೋಕದಲ್ಲಿ ಹೇಳಿದ ಎಲ್ಲಾ ಆಪತ್ತುಗಳನ್ನು ನಾಶಮಾಡುವವನು. ಶ್ರೀಮದಾಚಾರ್ಯರು ಧ್ಯಾನಶ್ಲೋಕದಲ್ಲಿ ಧನ್ವಂತರಿ ಎಂಬ ಹೆಸರಿನ ವ್ಯಾಖ್ಯಾನವನ್ನೇ ಮಾಡಿರುತ್ತಾರೆ.
ಸಾಧನ ಶರೀರವಿದು ನೀ ದಯದಿ ಕೊಟ್ಟಿದ್ದು – ಸಾಧಾರಣವಲ್ಲ; ಪ್ರಾಣಿ ದೇಹ ಸುಲಭ. ಮಹಾ ಪಾಪ ಮಾಡಬೇಕಿಲ್ಲ. ಸ್ವಕರ್ತವ್ಯ ಭ್ರಷ್ಟನಾದರೂ ತಿರ್ಯಕ್ ಯೋನಿಯಲ್ಲಿ ಹುಟ್ಟಬಹುದು. ಇದಕ್ಕೆ ವಿಪರೀತವೆಂದರೆ ಮಾನವ ಜನ್ಮ ಪ್ರಾಪ್ತಿ. ತತ್ರಾಪಿ ದುರ್ಲಭತರಂ ಖಲು ಭೋ ದ್ವಿಜವ್ರತ ಎಂದು ವಾಙ್ಮಯ ಸಾರುತ್ತಿದೆ.
ಆರೋಗ್ಯವಿದ್ದರೆ ಸಾಧನೆ, ವ್ರತ ನಿಯಮಾದಿಗಳ ಅನುಷ್ಠಾನ. ಅದೇ ಇಲ್ಲದಿದ್ದರೆ ಎಲ್ಲಿಯ ಸಾಧನೆ. ನಾನಾ ವಿಕರ್ಮಗಳಿಂದ ಅನೇಕ ವ್ಯಾಧಿ ಆಧಿಗಳ ಪೀಡೆಗೆ ಒಳಗಾದವನು ಧನ್ವಂತರಿಯ ಕೃಪೆಯನ್ನು ಪಡೆದದ್ದೇ ಆದರೆ ಆರೋಗ್ಯವನ್ನು ಹೊಂದಿ ಸಾಧನೆ ಮಾಡಬಲ್ಲ. ಮುಂದೆ ಭವರೋಗದಿಂದಲೇ ಮುಕ್ತನಾಗಬಲ್ಲ. ಹೀಗೆ ಭಗವಂತನನ್ನು ಕೊಂಡಾಡಿಯೇ ದುರುತವನ್ನು ಕಳೆದುಕೊಳ್ಳಬೇಕು. ಪಾಮರರು ಹೇಗೆ ಸ್ತೋತ್ರ ಮಾಡಿಯಾರು?ವಾಕ್ಸಿದ್ಧಿಯಾದರೂ ಏನು? ಅಪರೋಕ್ಷ ಜ್ಞಾನಿಗಳು ದಿವ್ಯ ಸ್ತೋತ್ರ ಮಾಡಿದ್ದಾರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಈ ಸ್ತೋತ್ರ ಪಾರಾಯಣ ಮಾಡಿ ರೋಗಮುಕ್ತರಾಗಿದ್ದಾರೆ.
ಏಳುವಾಗಲಿ, ಮತ್ತೆ ತಿರುಗಿ ತಿರುಗುತಲಿ
ಬೀಳುವಾಗಲಿ, ನಿಂತು ಕುಳ್ಳಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ, ಪೋಗಿ ಸತ್ಕರ್ಮ ಮಾಡುವಾಗಲಿ,
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ
ಮ್ಮೇಳವಾಗಲಿ ಮೇಲು ಪುತ್ರಾದಿ ಒಡನೊಡನೆ
ಖೇಳವಾಗಿ ಮನುಜ ಮರೆಯದೆ ಒಮ್ಮೆ ತನ್ನ
ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು
ಕಾಲ ಅಕಾಲದಲ್ಲಿ ಸ್ಮರಿಸಿದರೆ ಅವಗೆ
ವೇಳ್ಯೆ ವೇಳ್ಯೆಗೆ ಬಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯವಿಠ್ಠಲರೇಯ
ವಾಲಗ ಕೊಡುವನು ಮುಕ್ತರ ಸಂಗದಲಿ
ಧನ್ವಂತರಿ ನಾಮ ಸ್ಮರಣೆ ಒಮ್ಮ ಮಾಡಿದರೆ ಕಾಲಕಾಲಕ್ಕೆ ಬರುವ ರೋಗ ಪರಿಹಾರ ಎಂದಿದ್ದಾರೆ ದಾಸವರ್ಯರು. ಹಾಗಾದರೆ ಒಮ್ಮೆ ಸ್ಮರಣೆ ಮಾಡಲು ಆಪತ್ತು ಪರಿಹಾರವಾಗುವುದೆ?
ಇದರ ಭಾವ ಎಲ್ಲ ಸಂದರ್ಭಗಳಲ್ಲಿ ಅಂದರೆ ದೈನಂದಿನ ಜೀವನದ ಕ್ರಿಯೆಗಳಲ್ಲೆಲ್ಲಾ ಧನ್ವಂತರಿ ನಾಮಸ್ಮರಣೆ ಅತ್ಯವಶ್ಯಕ ಎಂದು. ಸಂತತಂ ಚಿಂತಯೇನಂತಂ ಅಂತಕಾಲೇ ವಿಶೇಷತಃ ಎಂದು ಆಚಾರ್ಯರು ಅಪ್ಪಣೆ ಮಾಡಿದ್ದಾರೆ. ಎಲ್ಲಾ ಕಾಲದಲ್ಲೂ ಅನೇಕ ಸ್ಮರಣೆಯ ಗುಂಗು ಇದ್ದರೆ ಮಾತ್ರ ಉತ್ಕ್ರಮಣ ಕಾಲದಲ್ಲಿ ಅವನ ಸ್ಮರಣೆ ಬರಬಹುದು.
ವ್ಯಾಸಸಾಹಿತ್ಯದ ಪರಂಪರೆಯಲ್ಲಿ ಬಂದ ತಪಸ್ವಿಗಳ ಸ್ತೋತ್ರ ಸಾಹಿತ್ಯಕ್ಕೆ ನಮ್ಮ ಆ ಭವ್ಯ ಆಸ್ತಿಕ ಪರಂಪರೆ ಅದೆಷ್ಟು ಭಾವುಕವಾಗಿದೆಯೋ ಅಷ್ಟೇ ವ್ಯಾಸರ ನೆರಳಿನಲ್ಲಿ ಬೆಳೆದ ದಾಸಸಾಹಿತ್ಯದ ಪರಂಪರೆಯಲ್ಲಿ ಬಂದ ದಾಸ ಶ್ರೇಷ್ಠರುಗಳ ಸುಳಾದಿಗಳಿಗೂ ತನ್ನ ಗೌರವವನ್ನು ಸಲ್ಲಿಸಿದೆ.
ಇಂದು ಅನೇಕ ದಾಸರುಗಳ ಅನೇಕ ಕೀರ್ತನೆಗಳು ಆಸ್ತಿಕರ ಮನೆಮನೆಯಲ್ಲಿ (ನಿತ್ಯ ಸುಮಂಗಲೆಯರಾದಿಯಾಗಿ) ಸಕಲ ಜನ ಪಠಿಸುವ ನಿತ್ಯಮಂತ್ರವಾಗಿದೆ. ಮನೆಯ ಸುಖಶಾಂತಿಯ ಹಣತೆಗಳಾಗಿವೆ, ಸಕಲ ಪಾಮರ ವರ್ಗದ ಲೌಕಿಕ ಕಾಮನೆಗಳನ್ನು ಈಡೇರಿಸುವ ಕಾಮಧೇನುವಾಗಿದೆ. ಈ ಹಿನ್ನೆಲೆಯಲ್ಲಿ ಎರಡನೆಯ ಸಾಲಿನ ಹರಿದಾಸ ಸಾಹಿತ್ಯದ ನೆಲೆಯ ಹೆಬ್ಬೀಡಾದ ಶ್ರೀ ವಿಜಯದಾಸರ ಸುಳಾದಿಗಳು ಭಾವುಕ ಜನರ ಭಕ್ತಿಯ ಸೆಲೆಯ ಸೆಳೆವಿನಲ್ಲಿ ಸಿಕ್ಕ ಮುತ್ತುರತ್ನಗಳಾಗಿವೆ. ಜನರ ಕಷ್ಟಗಳಿಗೆ ಕಡಿವಾಣ ಹಾಕಿದೆ. ಸಾರ್ಥಕತೆಯ ದಾರಿದೀಪವಾಗಿದೆ.
ಈ ಮಾನವ ಜನ್ಮದ ಸಾರ್ಥಕತೆಯ ಮೂಲವೇ ಧರ್ಮಸಾಧನೆ. ಈ ಧರ್ಮಸಾಧನೆಯನ್ನು ಸಾಧ್ಯವಾಗಿಸಲೋ ಎಂಬಂತೆ ಧರೆಗಿಳಿದ ರೂಪ ಧನ್ವಂತರಿಯ ರೂಪ. ಇಂತಹ ಧನ್ವಂತರಿಯ ಮಹಿಮೆಯನ್ನು ಜನಸಾಮಾನ್ಯರ ಮನಸ್ಸಿನಲ್ಲಿ ಬೆಸೆದು ಧನ್ವಂತರಿ ಸುಳಾದಿಯ ಮೂಲಕ ಆರೋಗ್ಯ ಹಣತೆಯ ದೀಪ ಹಚ್ಚಿದವರು ದಾಸರು.
ಅನೇಕ ಜನರ ಅಪಮೃತ್ಯುಗಳನ್ನು ಪರಿಹರಿಸುವರು ಅವರು. ಅಷ್ಟೇ ಏಕೆ ತಾವೇ ತಮ್ಮ ಆಯುಷ್ಯವನ್ನು ಪರರ ಧರ್ಮಸಾಧನೆಗಾಗಿ ಧಾರೆ ಎರೆದವರು. ಅವರು ರಚಿಸಿದ ಧನ್ವಂತರಿ ಸುಳಾದಿ ರೋಗಹರಣದ ಸುಳಿವನ್ನು ನೀಡುವ ಮೂಲಕ ಧನ್ವಂತರಿ ನಾಮಸ್ಮರಣೆಯ ಮಹತ್ವವನ್ನು ತಿಳಿಸಿಕೊಡುತ್ತದೆ.
ಧಂ ಧನ್ವಂತರಿ ಎಂದು ಪ್ರಣವಪೂರ್ವಕದಿಂದ ವಂದಿಸಿ ನೆನೆಯಲು ವಿಜಯವಿಠ್ಠಲ ಒಲಿವಾ॥ ದಾಸರ ಈ ಸುಳಾದಿಯನ್ನು ಗಮನಿಸುವಾಗ ಮನದಲ್ಲಿ ಅನೇಕ ಸಂಶಯಗಳು ಸುಳಿದಾಡುವುದು ಸಹಜ. ಹುಟ್ಟಿನ ಜೊತೆಗೆ ಸಾವಿನ ನಿರ್ಧಿಷ್ಠತೆಯನ್ನು ನಿಖರವಾಗಿ ಕಟ್ಟಿಕೊಂಡು ಬರುವ ಮಾನವನ ಆಯುಸ್ಸು ವೃದ್ಧಿಯಾಗುವುದಾದರೂ ಹೇಗೆ? ಈ ಪ್ರಶ್ನೆಗೆ ಉತ್ತರವನ್ನು ಹೀಗೆ ನೀಡಬಹುದು. ವೃದ್ಧಿಎಂದರೆ ಇಲ್ಲ ಆಯುಸ್ಸಿನ ಪ್ರಾಪ್ತಿ ಎಂದಲ್ಲವಲ್ಲ. ಹೊರತಾಗಿ ಇರುವ ಆಯುವು ಭಗವಂತನ ನಾಮಸ್ಮರಣೆಯ ಮಹಿಮೆಯಿಂದ ಅಪಮೃತ್ಯುಗಳನ್ನು ಪರಿಹರಿಸಿಕೊಂಡು ಧರ್ಮಸಾಧನೆಯ ಮೂಲಕ ಹೊಸದಾದ ಹೊಳಹನ್ನು ಪಡೆಯುತ್ತದೆ. ಹೇಗೆ ವೈದ್ಯರು ನೀಡಿದ ಔಷಧಿಯು ಆಯುರ್ದಾನ ಮಾಡಿತೆಂದು ವ್ಯವಹಾರವೋ ಅಂತೆಯೇ ಧನ್ವಂತರಿಯ ನಾಮ ಸ್ಮರಣೆಯೂ ಭವರೋಗಕ್ಕೆ ಔಷಧವಾಗಿದೆ.
ಈ ವಿಧದ ನಾಮಸ್ಮರಣೆ ಕೇವಲ ಕಂಟಕಗಳ ಪರಿಹರಿಸುವುದಷ್ಟೇ ತನ್ನ ಕಾಯಕ ಮಾಡಿಕೊಂಡಿಲ್ಲ ಹೊರತಾಗಿ ಭಗವಂತನ ಅನುಗ್ರಹದಿಂದ ಬಂದ ಆಯುರೂಪವಾದ ಸಂಪತ್ತು ಧರ್ಮಸಾಧನೆಗೆ ನೆರವಾಗುವ ಮೂಲಕ ಪರಲೋಕದ ತುತ್ತಿಗೆ ಕಾರಣವಾಗುತ್ತದೆ. ದೇಹವನ್ನು ನಿರ್ಮಲಗೊಳಿಸುವ ಮೂಲಕ ಧರ್ಮಕಾರ್ಯಕ್ಕೆ ನೆರವಾಗಿದೆ. ರಾಗದ್ವೇಷಾದಿಗಳಿಂದ ಆತ್ಮವನ್ನು ಮುಕ್ತನನ್ನಾಗಿ ಮಾಡುತ್ತದೆ. ಸತ್ಸಂಗವನ್ನು ದಯಪಾಲಿಸುವ ಮೂಲಕ ಜ್ಞಾನ ಸಂಪಾದನೆಗೆ ಹೆದ್ದಾರಿಯಾಗಿದೆ. ಅಜ್ಞಾನದ ಬುಡವಾದ ನಾನಾರೋಗ ರುಜಿನಗ ಮೂಲ ಸೆಲೆಯಾದ ಸಕಲ ಸಂಚಿತ ಪಾಪಗಳ ಬಹುಬೇಗ ಕಳೆವುದಾಗಿದೆ.
ಅದೆಷ್ಟೋ ಕಾಲದಿಂದ ಸಂಚಿತವಾದ ಪಾಪಕರ್ಮಗಳ ಫಲವಾಗಿ ಹಲವು ನೀಚಯೋನಿಗಳಲ್ಲಿ ಬಿದ್ದುಬಳಲಿ ಬೆಂಡಾಗಿ ತಣ್ಣನೆಯ ನೆಲೆಯ ಇರವನ್ನು ಕಾಣದವನಾದ ಈ ಜೀವ ಒಮ್ಮೆ ಭಕ್ತಿಭಾವದಿಂದಲಿ ಧನ್ವಂತರಿಯ ನೆನೆದರುಂಟೇ ಈ ನೀಚ ಜನ್ಮಗಳ ಸೆಳವು!
ನಾಮಸ್ಮರಣೆಯ ಮಾತ್ರದಿಂದಲಿ ಅಜಾಮಿಳಗೆ ಮೋಕ್ಷದ ಹಾದಿ ತೋರಿದ ಆ ದೇವ ಧನ್ವಂತರಿಯ ನೆನೆದಲ್ಲಿ ಕೈ ಬಿಡುವನೇ? ಖಂಡಿತವಾಗಿಯೂ ಇಲ್ಲ. ಹೊರತಾಗಿ ಭವರೋಗವ ತರಿದು ಹಾಕುವನು. ಕಂದನ ಅಳುವನ್ನು ಕೇಳಿದ ತಾಯಿಯ ಮಮತೆಯ ಮಡಿಲು ಓ ಗೋಡದೆ ಸುಮ್ಮನಿರುವುದುಂಟೆ? ಸಕಲ ದೇವಾದಿದೇವತೆಗಳ ಶ್ರೇಯಸ್ಸಿನ ಗುಟ್ಟಾದ ಸಕಲ ಜೀವಜಾತದ ಚೈತನ್ಯದ ಸೂತ್ರಕಾರನಾದ ವಾಯುದೇವನ ಯಶಸ್ಸಿಗೆ ಧಣಿಯಾದ ಆ ವಿಜಯವಿಠ್ಠಲರಾಯ ನಮ್ಮ ಭವ ದುಃಖವ ಕಳೆದವನಾಗಿ ಈ ಜೀವನ ಅಚ್ಚುಮೆಚ್ಚಿನ ಸಖನಾಗುವನು. ಇದು ದಿಟ.
ಸಾಮಾನ್ಯವಾಗಿ ತುಂಬ ಪರಿಚಿತವಾದ ಭಗವಂತನ ರೂಪ. ರೋಗವನ್ನು ಪರಿಹಾರ ಮಾಡುವ ರೂಪ. ಯಾವ ರೋಗ? ಎಂದರೇ ಮುಖ್ಯವಾಗಿ ಮಾನಸಿಕರೋಗ. ಆನಂತರ ದೈಹಿಕ ರೋಗ. ಭಗವಂತ ಈ ರೂಪವನ್ನು ತಾಳಿ ಮಾಡಿದ ಮೊದಲಕಾರ್ಯ ಅಮೃತವನ್ನು ತರುವುದು. ನಾಶಯಿಲ್ಲದ ಫಲವನ್ನು ಕೊಡುವ ಒಂದು ‘‘Tonic’’. ಅದಕ್ಕೂ ನಾಶ ಇಲ್ಲ. ಅದನ್ನು ಸೇವಿಸಿದವರಿಗೂ ನಾಶ ಇಲ್ಲ. ಅದಕ್ಕಿಂತ ಮೊದಲು ದೇವತೆಗಳ ಮನಸ್ಸಿಗೆ ಬಂದ ಅಜ್ಞಾನ ವಿಪರೀತಜ್ಞಾನ ಸಂಶಯಾದಿಗಳೆಂಬ ತೊಂದರೆಗಳನ್ನು ನಾಶಮಾಡಿದ. ಅಂದರೇ ನಾವು ಯಾವುದೇ ಕೆಲಸ ಮಾಡಬೇಕಾದರೂ ಮೊದಲು ನಮ್ಮ ಮನಸ್ಸು ಸರಿ ಇರಬೇಕು. ಅದಕ್ಕೆ ನಮ್ಮ ಋಷಿಗಳು ‘‘ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ’’ ಎಂದು ತಿಳಿಸಿದ್ದಾರೆ. ಮನಸ್ಸಿಲ್ಲ ಎಂದರೇ ಯಾರೂ ಏನೂ ಮಾಡಲಾಗದು. ಮನಸ್ಸು ಇತ್ತು ಎಂದರೇ ಸಾಮಾನ್ಯವಾಗಿ ಅಸಾಧ್ಯವಾದ ಕಾರ್ಯಗಳನ್ನು ಸಾಧಿಸಬಹುದು. ಅದಕ್ಕೆ ಮೊದಲು ನಮ್ಮ ಮನಸ್ಸು ಆರೋಗ್ಯವಾಗಿ ಇರಬೇಕು. ಮನಸ್ಸು ಸರಿ ಇತ್ತು. ಎಂದರೇ ಮನಸ್ಸಿಗೆ ನಾವು Tune ಮಾಡಿದರೇ ಸಾಕು ಯಾವ ಮಾತ್ರೆಗಳು ಅಗತ್ಯವಿಲ್ಲ. ಮನಸ್ಸಿಗೆ ಆ ಸಾಮರ್ಥ್ಯವನ್ನು ಕೊಟ್ಟವನು ಆ ರೀತಿ ಮನಸ್ಸನ್ನು ಸರಿ ಮಾಡಬಹುದೆಂದು ಮೊದಲು ಜಗತ್ತಿಗೆ ತೋರಿಸಿಕೊಟ್ಟವನು ಧನ್ವಂತರಿ. ಸಮುದ್ರಮಥನದ ಸಂದರ್ಭದಲ್ಲಿ ತನ್ನನ್ನು ನಂಬಿದ ದೇವತೆಗಳಿಗೆ ಅಮೃತ ಕೊಟ್ಟು ತೋರಿಸಿದ. ಯಾವ ಮಾತ್ರೆಯಿಂದಲೂ ಗುಣವಾಗದ ಕೆಲವು ಖಾಯಿಲೆಗಳು ಧನ್ವಂತರಿ ಮಂತ್ರದ ಆವೃತ್ತಿಯಿಂದ ಗುಣವಾಗದ ಅದೆಷ್ಟೋ ನಿದರ್ಶನಗಳು ನಮ್ಮಲ್ಲಿವೆ.
ಸನತ್ಕುಮಾರ, ವರಾಹ, ಮಹಿದಾಸ, ನರ-ನಾರಾಯಣ, ಕಪಿಲ, ದತ್ತ, ಯಜ್ಞ, ಋಷಭ, ಮತ್ಸ್ಯ, ಕೂರ್ಮ, ಧನ್ವಂತರಿ, ಮೋಹಿನೀ, ನರಸಿಂಹ, ವಾಮನ, ಪರಶುರಾಮ, ವ್ಯಾಸ, ರಾಮ, ಬಲ, ಕೃಷ್ಣ, ಬುದ್ಧ, ಕಲ್ಕಿ ಇವು ಇಪ್ಪತ್ತೆರಡು ಅವತಾರಗಳು ಆ ಅಧ್ಯಾಯದಲ್ಲಿ ಸಂಗ್ರಹಿಸಲ್ಪಟ್ಟವುಗಳು. ಅದರಲ್ಲಿ ಧನ್ವಂತರಿ ಹನ್ನೆರಡನೆಯ ಅವತಾರವಾಗಿ ಪರಿಗಣಿಸಲ್ಪಟ್ಟಿದ್ದಾನೆ.
ಶ್ರೀ ಧನ್ವಂತರಿ ಮಂತ್ರ
ಓಂ ನಮೋ ಭಗವತೇ ಧನ್ವಂತರಯೇ ಅಮೃತಕಲಶಹಸ್ತಾಯ
ಸರ್ವಾಮಯವಿನಾಶಯ ತ್ರಿಲೋಕನಾಥಾಯ ವಿಷ್ಣುವೇ ಸ್ವಾಹಾ॥
Get In Touch With Us info@kalpa.news Whatsapp: 9481252093, 94487 22200
Discussion about this post