ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ಭಾರತೀಯ ಸಂಸ್ಕೃತಿಯು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಜಗತ್ತಿನ ಏಕೈಕ ಸಂಸ್ಕೃತಿ. ಇಂಥಹ ಸಂಸ್ಕೃತಿ ಅನೇಕ ಆಚಾರ ವಿಚಾರಗಳಿಂದ ಸಮ್ಮಿಶ್ರಿತವಾದುದ್ದು. ಅದರಂತೆಯೇ ನಾನಾ ಹಬ್ಬಗಳು ನಮ್ಮ ಜೀವನಗತಿಯಲ್ಲಿ ಹಾಸುಹೊಕ್ಕಾಗಿದೆ. ಅಂತಹ ಹಬ್ಬಗಳ ಸಾಲಿನಲ್ಲಿ ಮೊದಲಾಗಿ ನಿಲ್ಲುವುದೇ ಈ ಸಂಕ್ರಾಂತಿ. ಮಕರ ಸಂಕ್ರಾಂತಿ, ಮಕರಸಂಕ್ರಮಣ, ಉತ್ತರಾಯಣ ಪುಣ್ಯಕಾಲ, ತಮಿಳುನಾಡಿನಲ್ಲಿ ಪೊಂಗಲ್, ಜನಸಾಮಾನ್ಯರ ಆಡುಭಾಷೆಯಲ್ಲಿ ಎಳ್ಳಿನ ಹಬ್ಬವೆಂದೂ ಕರೆಯುತ್ತಾರೆ. ಸೂರ್ಯ ಚಂದ್ರ ಚಲನೆಯ ಆಧಾರದಲ್ಲಿ ದಿನ, ರಾಶಿ, ತಿಥಿ, ನಕ್ಷತ್ರಗಳ ಗಣನೆ ನಮ್ಮಲ್ಲಿದೆ.
ಸೂರ್ಯನು 12 ರಾಶಿಗಳಲ್ಲಿ ಸಂಚರಿಸುವ ಸಮಯವೇ ಒಂದು ಸೌರವರ್ಷ. ಆ ಸಂಚಾರದಲ್ಲಿ ಯಾವ ರಾಶಿಯಲ್ಲಿ ಸೂರ್ಯನಿರುತ್ತಾನೋ ಅದು ಸೌರಮಾಸವೆಂದು ಕರೆಯಲ್ಪಡುತ್ತದೆ. ಪ್ರಸ್ತುತ 2020 ಜನವರಿ 14 ರಾತ್ರಿ ಮಕರ ಸಂಕ್ರಮಣವು, 15ರ ಸೂರ್ಯೋದಯ ಸಮಯ ಪುಣ್ಯಕಾಲವೆಂದು ನಿರ್ಣಿತವಾಗಿ, ಇಂದು ಹರ್ಷದಿಂದ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಬಂತದೋ ಬಂತು ಸಂಕ್ರಾಂತಿ ಹೊಮ್ಮಿ ಹೊಸ ಸುಗ್ಗಿಯ ಕಾಂತಿ ಹೊತ್ತು ಬರಲಿ ಸಂಕ್ರಾಂತಿ ಸಂಕ್ರಮಣದ ಸಂತಸದಲಿ ಬಾಳಪಟ ಹಾರುತಿರಲಿ ಬಾಳರಥ ಸಾಗುತ ಬಾಳಪಥದಿ ಬೆಳಕಿನೆಡೆಗೆ… ಸಂಕ್ರಾಂತಿಯ ಸಡಗರ. ಸುಗ್ಗಿ ಕೈಸೇರುವ ಕಾಲ. ಎಲ್ಲೆಲೂ ರಂಗೋಲಿ. ಬಾನಂಚಿಗೆ ಬಾಲಂಗೋಚಿಯ ಗಾಳಿಪಟ ತೇಲಿಬಿಟ್ಟು ಸೂತ್ರ ಹಿಡಿದು ಮೋಜಿನಿಂದ ಸ್ಪರ್ಧೆಗಿಳಿಯುತ್ತಾರೆ. ಊರು ಕೇರಿಗಳಲ್ಲಿ ಮನೆಮನೆಗೆ ತೆರಳಿ ಎಳ್ಳುಬೆಲ್ಲ ಹಂಚುತ್ತ ‘ಎಳ್ಳು ಬೆಲ್ಲತಿಂದು ಒಳ್ಳೊಳ್ಳೆ ಮಾತಾಡಿ ಎಂದು ಹಾರೈಸುತ್ತಾರೆ. ಇದು ಮಕರ ಸಂಕ್ರಾಂತಿ. ಸಂಕ್ರಮಣದ ಪಯಣದ ಸಂಧಿ.
ಸಂಕ್ರಾಂತಿ ಮಾಹಿತಿ…
ಸಂಕ್ರಮಣ ಅಥವಾ ಸಂಕ್ರಾಂತಿ ಎಂದರೆ ದಾಟುವುದು. ಸೂರ್ಯನು ಒಂದು ರಾಶಿಯನ್ನು ದಾಟಿ ಇನ್ನೊಂದು ರಾಶಿಯನ್ನು ಪ್ರವೇಶಿಸುವುದನ್ನೇ ನಾವು ಸಂಕ್ರಮಣವೆನ್ನುತ್ತೇವೆ. ಅವನು ಮೇಷವನ್ನು ಪ್ರವೇಶಿಸಿದರೆ ಅದು ಮೇಷ ಸಂಕ್ರಾಂತಿ. ಅಂತೆಯೇ ಅದನ್ನು ದಾಟಿ ವೃಷಭಕ್ಕೆ ಬರುವುದನ್ನು ವೃಷಭ ಸಂಕ್ರಾಂತಿಯೆನ್ನುತ್ತೇವೆ. ಹೀಗೆಯೇ ಒಂದೊಂದು ರಾಶಿಯಲ್ಲಿ ಒಂದೊಂದು ತಿಂಗಳು ಅವನ ವಾಸ. ನಂತರ ಮತ್ತೊಂದಕ್ಕೆ ಸಾಗುತ್ತಾನೆ. ಅದನ್ನೇ ಕ್ರಮವಾಗಿ ಮೇಷ. ವೃಷಭ, ಮಿಥುನ, ಕರ್ಕ ಮಾಸ ಇತ್ಯಾದಿಯಾಗಿ ಹೆಸರಿಸುತ್ತೇವೆ. ಒಟ್ಟು ಮೇಷದಿಂದ ಮೀನದ ವರೆಗೆ 12 ರಾಶಿಗಳಿರುವುದರಿಂದ ವರ್ಷಕ್ಕೆ 12 ಸಂಕ್ರಾಂತಿಗಳು. ಯಾವ ಸಮಯದಲ್ಲಿ ಸಂಕ್ರಮಣವಾಗುತ್ತದೆಯೋ ಅದರ ಹಿಂದೆ ಮತ್ತು ಮುಂದೆ ತಲಾ 16 ಗಳಿಗೆಗಳನ್ನು ಪುಣ್ಯಕಾಲವೆಂದು ಧರ್ಮಶಾಸ್ತ್ರಗಳು ಪರಿಗಣಿಸಿವೆ.
ಉತ್ತರಾಯಣ ಪರ್ವಕಾಲ
ಜ್ಯೋತಿಷಶಾಸ್ತ್ರದಂತೆ, ಸೂರ್ಯನು ಮಕರರಾಶಿಯನ್ನು ಪ್ರವೇಶಿಸಿದಾಗ, ಮಕರ ಸಂಕ್ರಾಂತಿಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜ. 14 ಅಥವಾ 15ಕ್ಕೆ ಸಂಭವಿಸುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು. ಈಗ ಉತ್ತರಾಯಣ ಡಿ.22ಕ್ಕೆ ಆದರೂ, ಹಿಂದಿನಂತೆಯೇ ಜ.14-15 ರಂದು ನಡೆಯುತ್ತದೆ. ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ. ಮಹಾಭಾರತದ ಕತೆಯಲ್ಲಿ ಇಚ್ಛಾಮರಣಿಯಾದ ಭೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲಕ್ಕಾಗಿ ಕಾದಿದ್ದರು ಎಂಬ ಉಲ್ಲೇಖವಿದೆ.
ಬೇಸಿಗೆಯ ಮುನ್ಸೂಚನೆ
ಬೇಸಿಗೆಯಲ್ಲಿ ಹಗಲು ಹೆಚ್ಚು. ಇರುಳು ಕಮ್ಮಿ. ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು. ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯೋದಯ ಪೂರ್ವದ ಬಲಕ್ಕೆ (ಅಂದರೆ ಉತ್ತರಕ್ಕೆ) ಅಥವಾ ಎಡಕ್ಕೆ (ಅಂದರೆದಕ್ಷಿಣಕ್ಕೆ) ಆಗುತ್ತದೆ. ಇರುಳಿನ ಪ್ರಮಾಣ ಹೆಚ್ಚಾದಂತೆ ಸೂರ್ಯದಕ್ಷಿಣ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಚಲನೆ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತ ಇದ್ದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗುತ್ತದೆ. ಇದು ಚಳಿಗಾಲ ಮುಗಿಯುತ್ತಿದ್ದು, ಬೇಸಿಗೆಯ ದಿನಗಳು ಹತ್ತಿರವಾಗುತ್ತಿವೆ ಎಂಬುದನ್ನು ಸೂಚಿಸುತ್ತದೆ.
ಎಳ್ಳು, ಮಕರ ಏಕೆ?
ಸಂಕ್ರಾಂತಿಯಲ್ಲಿ ಎಳ್ಳು ಬೀರುವುದು ಸಂಪ್ರದಾಯ. ಇದಕ್ಕೆ ಕಾರಣವೆನ್ನಲಾದ ಪುರಾಣಕಾಲದ ಕಥೆಯೊಂದು ಸಂಕ್ರಾಂತಿಯಜತೆ ತಳಕುಹಾಕಿಕೊಂಡಿದೆ. ಹಿಂದೆ ಶಿಲಾಸುರನೆಂಬ ರಕ್ಕಸನಿದ್ದನಂತೆ. ಆತ ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ. ವರದ ಬಲ ಆತನಿಗೆ ಅಹಂಕಾರವನ್ನು ಹೆಚ್ಚಿಸಿ ಮದದಿಂದ ಲೋಕಪೀಡಕನಾಗುತ್ತಾನೆ. ಆಗ ಮಕರ, ಕರ್ಕ ಎಂಬ ಮಹಿಳೆಯರ ಸಹಾಯ ಪಡೆದು ಸೂರ್ಯಆತನನ್ನು ಸಂಹರಿಸುತ್ತಾನೆ. ಮಕ ತಿಲಾಸುರನ ಹೊಟ್ಟೆ ಬಗೆದಾಗ ಭೂಮಿಗೆ ಎಳ್ಳಿನ ಪ್ರವೇಶವಾಗುತ್ತದೆ. ಮಕರನ ಸಾಹಸ ಮೆಚ್ಚಿ ಸೂರ್ಯ- ‘ನಿನ್ನನ್ನು ಹಾಗೂ ನಿನ್ನಿಂದ ಭೂಮಿಗೆ ಬಂದ ಎಳ್ಳನ್ನು ಪೂಜಿಸಿದವರಿಗೆ ಒಳಿತಾಗಲಿ ಎಂದು ಹರಸಿದನಂತೆ. ಈ ಕಾರಣದಿಂದಾಗಿ ಎಳ್ಳು ಬೀರುವ ಅಚರಣೆ ಬಂದದ್ದಾಗಿಯೂ, ‘ಮಕರ ಸಂಕ್ರಮಣ ಎಂಬ ಹೆಸರು ಜನರಲ್ಲಿ ಉಳಿದದ್ದಾಗಿಯೂ ಈ ಕಥೆ ಹೇಳುತ್ತದೆ.
ಎಳ್ಳಷ್ಟು ಎಳ್ಳಿನ ಮಹಾತ್ಮೆ
ಮಕರಸಂಕ್ರಾಂತಿ ಎಳ್ಳು-ಬೆಲ್ಲಗಳನ್ನು ಮೆಲ್ಲುವ ಮತ್ತು ಹಂಚುವ ದಿನ. ಎಳ್ಳು-ಬೆಲ್ಲತಿಂದು ಒಳ್ಳೊಳ್ಳೆಯ ಮಾತನಾಡಿ ಎಂದು ಆಶಿಸುವ ದಿನ. ಹೀಗಾಗಿ ಎಳ್ಳಿನ ಮಹಾತ್ಮೆಯನ್ನು ಎಳ್ಳಷ್ಟಾದರೂ ಹೇಳದಿದ್ದರೆ ಹೇಗೆ? ಪುರಾಣಗಳಲ್ಲೊಂದೆಡೆ ಎಳ್ಳನ್ನು ಶರೀರಕ್ಕೆ ಲೇಪಿಸಿಕೊಳ್ಳುವುದು, ಎಳ್ಳುಬೆರೆಸಿದ ನೀರಿನ ಸ್ನಾನ, ಎಳ್ಳುನೀರಿನಿಂದ ಪಿತೃತರ್ಪಣ, ಹೋಮದಲ್ಲಿ ದ್ರವ್ಯವಾಗಿ ಅರ್ಪಣೆ, ಎಳ್ಳಿನ ದಾನ, ಎಳ್ಳನ್ನು ತಿನ್ನುವುದು- ಹೀಗೆ ಅರುಬಗೆಯಲ್ಲಿ ಎಳ್ಳನ್ನು ಉಪಯೋಗಿಸುವವನು ಎಂದಿಗೂ ನಾಶ ಹೊಂದುವುದಿಲ್ಲ ಎಂದು ಎಳ್ಳಿನ ಶಕ್ತಿಯ ಬಗ್ಗೆ ವರ್ಣಿತವಾಗಿದೆ. ಚಳಿಗಾಲದಲ್ಲಿ ಎಳ್ಳಿನ ಸೇವನೆಯ ಲಾಭ, ಆಯುರ್ವೇದ ಗ್ರಂಥಗಳಲ್ಲಿ ಎಳ್ಳಿನ ಪ್ರಶಂಸೆ ಇದೆ. ಅಷ್ಟೇ ಏಕೆ? ಸಂತಾನ ಭಾಗ್ಯಕ್ಕಾಗಿ ವಧುವರರಿಗೆ ಎಳ್ಳಿನಿಂದ ತಯಾರಿಸಿದ ಖಾದ್ಯವನ್ನು ಕೊಡುವ ಸಂಪ್ರದಾಯ ಪ್ರಾಚೀನ ಗ್ರೀಕರಲ್ಲಿ ಇತ್ತಂತೆ.
ಬಗೆ ಬಗೆ ಆಚರಣೆ
ಸಂಕ್ರಾಂತಿಯ ಆಚರಣೆ ಕರ್ನಾಟಕದಾದ್ಯಂತ ಒಂದೇ ತೆರನಾಗಿಲ್ಲ. ಹಲವೆಡೆ ಪ್ರಾದೇಶಿಕ ವ್ಯತ್ಯಾಸಗಳನ್ನು ಈಗಲೂ ಉಳಿಸಿಕೊಂಡಿದೆ. ಕರ್ನಾಟಕದ ಕೆಲ ಭಾಗಗಳಲ್ಲಿ ಸಂಕ್ರಾಂತಿಯ ಹೆಸರನ್ನೂ ಕೇಳದ ಹಳ್ಳಿಗಳಿವೆ. ಅಲ್ಲೆಲ್ಲ ರೈತ, ಹೊಲ, ಸುಗ್ಗಿಯನ್ನು ನೆನಪಿಸುವ ಆಚರಣೆಗಳಿವೆ. ಜಾನುವಾರುಗಳನ್ನು ಗೌರವಿಸುವ ಬಸವ ಜಯಂತಿಯಂತಹ ಹಬ್ಬಗಳಿವೆ. ಸಂಕ್ರಾಂತಿಯಂದು ಹೋರಿಗಳನ್ನು ಕಿಚ್ಚು ಹಾಯಿಸುವ ಸಂಪ್ರದಾಯ ಕೆಲವೆಡೆ ಇದೆ. ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಲ್ಲಿ ಈ ಸಂಭ್ರಮ ಹೆಚ್ಚು. ಎತ್ತು, ಆಕಳುಗಳ ಸಿಂಗಾರ ಮೋಹಕವಾಗಿರುತ್ತದೆ. ಎತ್ತುಗಳೂ ಚಳಿಯಿಂದ ಬಿಡಿಸಿಕೊಂಡು ಕಾವೇರಲಿ, ಎತ್ತಿನ ದೇಹದಲ್ಲಿನ ಕ್ರಿಮಿಗಳು ನಾಶವಾಗಲಿ, ಒಳ್ಳೆಯ ರಾಸುಗಳಿಗೆ ರಾವು ಬಡಿಯದಿರಲಿ ಎನ್ನುವ ಹಿನ್ನೆಲೆಯೂ ಈ ಆಚರಣೆ ಇದ್ದಂತಿದೆ.
ವಿಶಿಷ್ಟ ಆರಚಣೆ
ಕರ್ನಾಟಕದಲ್ಲಿಯೇ ಸಂಕ್ರಾಂತಿಯ ವಿಶಿಷ್ಟ ಆಚರಣೆಯೊಂದು ಮಂಡ್ಯಜಿಲ್ಲೆ ನಾಗಮಂಗಲ ತಾಲೂಕಿನ ಕದಂಬಲ್ಲಿಯಲ್ಲಿತ್ತು. ಊರಿನವರು ಬೇಟೆಗೆ ಹೋಗಿ ಜೀವಂತ ನರಿಗಳನ್ನು ಹಿಡಿದು ತಂದು, ಅವುಗಳಿಗೆ ಪಟಾಕಿ ಹಚ್ಚಿ ಕಾಡಿಗೆ ಓಡಿಸುತ್ತಿದ್ದರು. ನಾಲ್ಕೈದು ವರ್ಷಗಳಿಂದ ಪ್ರಾಣಿ ದಯಾ ಸಂಘದವರದೂರಿನ ಮೇರೆಗೆ, ಈ ಆಚರಣೆಯನ್ನು ಹೈಕೋರ್ಟ್ ನಿಷೇಧಿಸಿದೆ. ಸಂಕ್ರಮಣದಲ್ಲಿ ಅಲ್ಲೀಗ ಪೊಲೀಸರ ಕಾವಲು. ಚಿಕ್ಕಬಳ್ಳಾಪುರ ಭಾಗದಲ್ಲಿ ಮನೆಗಾಗಿ ದುಡಿದು ತೀರಿದ ಎತ್ತುಗಳ ಸಮಾಧಿಗೆ ಪೂಜೆ ಮಾಡುತ್ತಾರೆ. ಇಲ್ಲಿ ಎತ್ತುಗಳನ್ನು ದೇವರೆಂದು ಭಾವಿಸಿ ಹಬ್ಬದಡುಗೆಯನ್ನು ಎತ್ತಿಗೂತಿನ್ನಿಸುವ ಮೂಲಕ ರೈತಸ್ನೇಹಿ, ಮನುಜಸ್ನೇಹಿ ಜಾನುವಾರುಗಳಿಗೆ ಧನ್ಯವಾದ ಹೇಳುತ್ತಾರೆ. ಅಲ್ಲದೆ ಜಾನುವಾರುಗಳಿಗೆ ತೊಂದ ೆಕೊಡುವ ಪ್ರಾಣಿಗಳನ್ನು ಹಿಡಿದು ಬೆದರಿಸಿ ಓಡಿಸುವ ಆಚರಣೆಗಳೂ ಇವೆ.
ಪುಣ್ಯಕೋಟಿಯ ನೆನಪು
ಉತ್ತರ ಭಾರತದಿಂದ ಬಂದ ಆಚರಣೆಯೊಂದು, ಹುಲಿ ಪುಣ್ಯಕೋಟಿಯನ್ನು ತಿನ್ನಲು ನಿರಾಕರಿಸಿ, ಹಾರಿ ನೆಗೆದು ಮೃತಪಟ್ಟ ನೆನಪನ್ನು ತರುತ್ತದೆ. ಎಳ್ಳಿನ ದೀಪ ಹಚ್ಚಿದರೆ ಶನಿ ಕೆಡುಕು ಮಾಡುವುದಿಲ್ಲ ಎಂಬ ಭಾವನೆಯೂ ಇದೆ. ಆಂಧ್ರಕ್ಕೆ ಹೊಂದಿಕೊಂಡ ಹಳ್ಳಿಗಳಲ್ಲಿ ರಾಮನು ರಾವಣನನ್ನುಕೊಂದು ಸೀತೆಯನ್ನು ಪಡೆದ ದಿನವೇ ಸಂಕ್ರಾಂತಿ ಎಂದೂ ಆ ದಿನ ಗತಿಸಿದ ಹಿರಿಯರು ಮನೆಗೆ ಬರುತ್ತಾರೆಂದೂ ನಂಬಿಕೆಯಿದೆ. ಕೊಡಗಿನ ಮೇರರ ಸಮುದಾಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಕಾವೇರಿ ಸಂಕ್ರಮಣ ಆಚರಿಸುತ್ತಾರೆ. ಉತ್ತರಕರ್ನಾಟಕದಲ್ಲಿ ಇದು ಸಸ್ಯಾಹಾರಿ ಹಬ್ಬವಾದರೆ, ದಕ್ಷಿಣ ಕರ್ನಾಟಕದಲ್ಲಿ ಮಾಂಸಾಹಾರಿ ಹಬ್ಬ. ಚಾಮರಾಜನಗರದಲ್ಲಿ ಮಕ್ಕಳನ್ನು ಕೂರಿಸಿ ಹಸಿ ಉಪ್ಪುಕಡಲೆ, ಎಲಚಿ ಹಣ್ಣು, ನಾಣ್ಯಗಳನ್ನು ಬೆರೆಸಿ ತಲೆ ಮೇಲಿಂದ ಎಳ್ಳೆರೆಯುವ ಆಚರಣೆಯಿದೆ.
ಆಹಾರ ವೈವಿಧ್ಯ
ಸಂಕ್ರಮಣವು ಕರ್ನಾಟಕದ ಆಹಾರ ವೈವಿಧ್ಯಗಳನ್ನು ಅದರೆಲ್ಲ ರುಚಿಗಳೊಂದಿಗೆ ಅನಾವರಣಗೊಳಿಸುತ್ತದೆ. ಆ ವರ್ಷದ ಬೆಳೆದ ಬೆಳೆಗಳ ವೈವಿಧ್ಯಗಳನ್ನೆಲ್ಲಾ ಬಳಸಿಕೊಳ್ಳುವಷ್ಟು ವಿಭಿನ್ನವಾದ ಅಡುಗೆ ಮಾಡಲಾಗುತ್ತದೆ. ಅವರೆ ಕಾಳಿನ ಕಿಚಡಿ, ಗೆಣಸಿನ ಕಡುಬು, ಗೋಧಿ ಪಾಯಸ, ಉತ್ತರ ಕರ್ನಾಟಕದ ಭಾಗದಲ್ಲಿ ಎಳ್ಳಚ್ಚಿನ ಸಜ್ಜೆ, ಜೋಳದ ರೊಟ್ಟಿ, ಎಣ್ಣೆ ಬದನೆಕಾಯಿ, ಕಲಬೆರಕೆ ಸೊಪ್ಪು ಸಾರು, ಹಾಗಲಕಾಯಿ ಪಲ್ಯ, ಉಪ್ಪಿನಕಾಯಿಗಳು, ಮೊಸರು ಬಾನ, ಗುರೆಳ್ಳು ಚಟ್ನಿ, ಸೌತೆ, ಮೂಲಂಗಿ, ಗಜ್ಜರಿಯ ಪಚಡಿ, ಮೆಂತೆಸೊಪ್ಪು ಈರುಳ್ಳಿಯ ಕಲಬೆರಕೆ, ತರಕಾರಿಗಳನ್ನು ಹಾಕಿ ಮಾಡುವ ಬರ್ತ, ಕುಂಬಳಕಾಯಿ ಬರ್ತ, ಕೆಂಪು ಮೆಣಸಿನಕಾಯಿ ಚಟ್ನಿ-ಹೀಗೆ ಬಗೆ ಬಗೆಯ ಅಡುಗೆಗಳು… ಬುತ್ತಿಕಟ್ಟಿಕೊಂಡು ಹೊಳೆ ದಡಕ್ಕೋ, ನದಿ ತಟಕ್ಕೋ ಹೋಗಿ ಊಟ ಮಾಡುವುದೂ ಸಂಕ್ರಾಂತಿಯ ಸಂಭ್ರಮವನ್ನು ಹೆಚ್ಚಿಸುತ್ತದೆ.
ಸುಗ್ಗಿ ಸಮೃದ್ಧಿ-ಸಂಭ್ರಮ ಸಡಗರ
ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಎಲ್ಲ ಬೆಳೆಗಳು ರೈತಾಪಿ ಜನರ ಕೈಸೇರಿ ಸಂಭ್ರಮದ ಸುಗ್ಗಿ ಸಂತಸ ಮೊದಲಾಗುತ್ತದೆ.ಭಾರತೀಯ ಹಬ್ಬಗಳಲ್ಲಿ ಎರಡು ರೀತಿಯ ಗಣನೆ ಇದೆ. ಒಂದು ಚಾಂದ್ರಮಾನದ ಪಂಚಾಂಗದ ಪ್ರಕಾರವೇ ಬಹುತೇಕ ಎಲ್ಲ ಹಬ್ಬಗಳು ಆಚರಣೆ ನಡೆಯುತ್ತದೆ. ಇಲ್ಲಿಚೈತ್ರ ವೈಶಾಖಾದಿ ಮಾಸಗಳ ಆಧಾರದ ಮೇಲೆ ಕಾಲಗಣನೆ-ಆಚರಣೆ, ಇದಕ್ಕೆ ಆಧಾರ ಚಂದ್ರನ ಚಲನೆ. ಇನ್ನು ಕೆಲವು ಹಬ್ಬಗಳನ್ನು ಸೌರಮಾನ ಪಂಚಾಂಗದ ಪ್ರಕಾರ ಸೂರ್ಯನ ಚಲನೆಯನ್ನಾಧರಿಸಿ ನಿರ್ಧರಿಸುತ್ತಾರೆ. ಮೇಷಾದಿ ದ್ವಾದಶ ರಾಶಿಗಳ ಗಣನೆ ಇಲ್ಲಿ ಬರುತ್ತದೆ. ಈ ಸಂಕ್ರಾಂತಿ ಹಬ್ಬವು ಸೌರಮಾನ ಪದ್ಧತಿಯಡಿ ಆಚರಿಸಲ್ಪಡುತ್ತದೆ. ನಮಗೆ ತಿಳಿದಿರುವಂತೆ ಸೂರ್ಯ, ಭೂಮ್ಯಾದಿ ಗ್ರಹಗಳು ಪರಿಭ್ರಮಿಸುತ್ತವೆ. ಒಚಿದು ತಮ್ಮ ಸುತ್ತ ಮತ್ತು ಇನ್ನೊಂದು ಕಾಯದ ಸುತ್ತ. ಈ ಚಲನೆಗಳು ಅನೇಕ ರೀತಿಯ ಪರಿಣಾಮ ಉಂಟು ಮಾಡಿರುತ್ತದೆ. ದಿನ ರಾತ್ರಿಗಳು ಋತುಮಾನಗಳುಂಟಾಗುವುದು ಇದರಿಂದಲೇ. ಜೀವಸಂಕುಲದ ಉಗಮ, ಉಳಿವು, ಬೆಳವಣಿಗೆ, ವಿಕಾಸ ಅಳಿವಿಗೆಲ್ಲ ಇದೇ ಕಾರಣ.
ಸಂಕ್ರಾಂತಿಯ ಕ್ರಾಂತಿ
ಸಂಕ್ರಾಂತಿ ಎಂದರೆ ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿ ಪ್ರವೇಶಿಸುವ ಸಂಧಿಕಾಲ. ಇದನ್ನೇ ಸಂಕ್ರಮಣ ಎಂದೂ ಕರೆಯುವುದುಂಟು. ಈ ಸಮಯದಲ್ಲಿ ಭೂಮಿಯಲ್ಲಿ ಹಲವಾರು ಬದಲಾವಣೆಗಳುಂಟಾಗುವುದರಿಂದ ಅದಕ್ಕೆ ತಕ್ಕಂತೆ ನಾವೂ ಅರಿತು ನಡೆಯಬೇಕಿದೆ. ತಿಂಗಳಿಗೊಂದರಂತೆ ವರ್ಷಕ್ಕೆ ಹನ್ನೆರಡು ಸಂಕ್ರಮಣ. ಅವುಗಳಲ್ಲಿ ಮೇಷ, ತುಲಾ, ಕರ್ಕಾಟಕ, ಮಕರ ಸಂಕ್ರಮಣಗಳು ಪ್ರಮುಖವಾದವು. ಇವುಗಳಲ್ಲೆಲ್ಲಾ ಮಕರ ಸಂಕ್ರಮಣವೂ ಮತ್ತೂ ವಿಶೇಷವಾಗಿದ್ದು, ಇದು ಸೂರ್ಯದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸಂಚರಿಸುವ ಪರ್ವಕಾಲ. ಉತ್ತರಾಯಣದಿಂದ ಸ್ವರ್ಗದ ಬಾಗಿಲು ತೆರೆಯುತ್ತದೆಂದು ಪುರಾಣ ಪ್ರಚಲಿತವಾಗಿದೆ. ಮಹಾಭಾರತದಲ್ಲಿ ಇಚ್ಚಾಮರಣಿಯಾದ ಭೀಷ್ಮ, ಉತ್ತರಾಯಣ ಆರಂಭವಾಗುವವರೆಗೂ ಶರಶಯ್ಯೆಯಲ್ಲಿ ಮಲಗಿ ಆನಂತರ ದೇಹತ್ಯಾಗ ಮಾಡಿ ಸ್ವರ್ಗಸ್ಥನಾದನೆಂಬ ಉಲ್ಲೇಖವಿದೆ. ಅಲ್ಲದೇ ಉತ್ತರಾಯಣ ದೇವತೆಗಳ ಹಗಲು ಹಾಗೂ ದಕ್ಷಿಣಾಯನ ದೇವತೆಗಳ ರಾತ್ರಿ ಎಂದು ಹೇಳುತ್ತಾರೆ.
ಸೂರ್ಯಾರಾಧನೆ
ಸೂರ್ಯನ ಆರಾಧನೆ ಈ ಹಬ್ಬದ ಪ್ರಮುಖ ಆಚರಣೆ. ಸಂಕ್ರಾಂತಿಯ ನಂತರ ಹಗಲು ಹೆಚ್ಚು ಇರುಳು ಕಡಿಮೆ ಆಗುತ್ತದೆ. ಹಾಗಾಗಿ ಉತ್ತರಾಯಣ ಸೂರ್ಯ ಪ್ರಧಾನ ಕಾಲ. ಈ ಸಂಕ್ರಮಣದಿಂದ ಚಳಿಯ ಪ್ರಭಾವ ಕಡಿಮೆಯಾಗಿ ಬಿಸಿಲು ಹೆಚ್ಚಾಗುವುದು. ಈ ಇವನಿಂದಲೇ ಎಲ್ಲ ಜೀವರಾಶಿ, ಜಗತ್ತು, ದಿನ ರಾತ್ರಿಗಳು ಸೂರ್ಯನಿಂದಲೇ. ಸಸ್ಯಗಳು ಆಹಾರ ತಯಾರಿಸುವುದು ಸೂರ್ಯನ ಕಿರಣದಿಂದ, ನೀರು ಆವಿಯಾಗಿ ಮಳೆಯ ಆಕರವಾಗುವುದು ರವಿಯ ಶಾಖದಿಂದಲೇ. ನಾವು ಕಾಣುವುದೂ ಸಹ ಭಾಸ್ಕರನ ಬೆಳಕಿನಿಂದ. ಅದಕ್ಕೇ ಪುರುಷ ಸೂಕ್ತದಲ್ಲಿ ‘ಚಕ್ಷೋಸ್ಸೂರ್ಯೋ ಅಜಾಯತ ಎಂದಿದೆ. ಕಣ್ಣಿಗೂ ಸೂರ್ಯನಿಗೂ ನಮಗೆ ಕಾಣದಂತ ಮಿತ್ರತ್ವವಿದೆ. ಅವನಿಲ್ಲದೇ ಅವನಿಗೆಲ್ಲಾ ಅಂಧಕಾರ. ನಮಗೂ ಸಹ ಕತ್ತಲು. ಸೂರ್ಯನ ಉದಯದಿಂದ ದಿನ ಆರಂಭವಾಗುತ್ತದೆ. ಜ್ಯೋತಿಷ್ಯದ ಕೇಂದ್ರ ಸೂರ್ಯ. ಅವನ ಸ್ಥಾನವನ್ನಾಧರಿಸಿಯೇ ಜಾತಕ-ಗ್ರಹಸ್ಥಾನ-ಕುಂಡಲಿ-ಮುಹೂರ್ತಗಳು ನಿಶ್ಚಯ-ನಿರ್ಧಾರವಾಗುವುದು. ವಿಜ್ಞಾನ ಕೂಟಾ ಇದೇ ರೀತಿಯ ಸೌರಕೇಂದ್ರಿತ ವ್ಯವಸ್ಥೆಯನ್ನು ನೆಚ್ಚಿರುತ್ತದೆ. ಹಾಗಾಗಿ ಸೂರ್ಯನ ಪರಿಕ್ರಮಣ ನಮಗೆ ಬಹಳ ಮಹತ್ವದ್ದಾಗಿದೆ. ಈ ಪರಿಕ್ರಮಣ ಪರ್ವವೇ ಸಂಕ್ರಾಂತಿ. ಮಕರ ಸಂಕ್ರಾತಿಯಂದು ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ.
ಪ್ರಕೃತಿ ಪರಿಣಾಮ
ಉತ್ತರಾಯಣ ಸಮಯದಲ್ಲಿ ಸೂರ್ಯನ ಬಿಸಿಲು ಭೂಮಿಯ ಉತ್ತರಾರ್ಧ ಗೋಳದ ಮೇಲೆ ಬೀಳುವುದು. ಹಗಲಿನ ವೇಳೆ ಹೆಚ್ಚಾಗುತ್ತದೆ. ಇದರಿಂದ ಶರೀರವು ಕೂಡಾ ತಂಪಾಗಿರಬೇಕು. ಹಾಗಾಗಲು ಜಿಡ್ಡು ಶಕ್ತಿ ಉಳ್ಳ ಪದಾರ್ಥ ಸೇವೆನೆ ಅತ್ಯವಶ್ಯ. ಈ ಹಬ್ಬದ ಹಿನ್ನೆಲೆಯಲಿ ಬಳಸುವ ಎಳ್ಳು ಬೆಲ್ಲ ದೇಹಕ್ಕೆ ಹಿತ. ಜಿಹ್ವೆಗೆ ರುಚಿ. ಎಳ್ಳು ಎಣ್ಣೆಯ ಅಂಶ ಹೊಂದಿದ್ದು ದೇಹದಲ್ಲಿ ಪುಷ್ಟಿ, ತಂಪು, ಕಾಂತಿಯನ್ನುಂಟು ಮಾಡುತ್ತದೆ. ಆದರೆ ಬರೀ ಎಳ್ಳಿನ ಸೇವೆನೆ ಯೋಗ್ಯವಲ್ಲ. ಪಿತ್ತಕಾರಕವಾಗಿ ಬಿಡುತ್ತದೆ. ಹಾಗಾಗಿ ಅದರೊಡನೆ ಬೆಲ್ಲದ ಉಪಯೋಗ. ಬೆಲ್ಲ ಪಿತ್ತಶಾಮಕ, ರಕ್ತಕ್ಕೆ ಸಹಕಾರಿ, ಶಕ್ತಿಗೆ ಆಕರ. ಇವೆರಡರ ಮಿಶ್ರಣದ ಸೇವನೆ ದೇಹವನ್ನು ಒಣಗಿಸುವ ಈ ಋತುಮಾನದಲ್ಲಿ ನಮ್ಮನ್ನು ಕಾಪಾಡಲು ತುಂಬ ಸಹಕಾರಿ. ಹಾಗಾಗಿ ಎಳ್ಳಿನ ನಂಟು, ಬೆಲ್ಲದ ಅಂಟು ಇವುಗಳ ಮಹತ್ವದ ಸಂಬಂಧ ಈ ಸಂಕ್ರಾಂತಿಗುಂಟು. ಹೇಮಂತ ಋತುವಿನ ಶೀತ ವಾತ ಜನ್ಯ ಸಮಸ್ಯೆಗಳಿಗೆಲ್ಲ ಇಂದಿನಿಂದ ಪರಿಹಾರ. ತೈಲ ಲೇಪನೆ ಬೆಲ್ಲದ ಸೇವನೆ ಇದರಿಂದ ಆರೋಗ್ಯವುಂಟಾಗುತ್ತದೆ.
ಮಕರದಲ್ಲಿ ಸೂರ್ಯ ಪ್ರವೇಶದ ವೈಶಿಷ್ಟ್ಯ
ಸಂಕ್ರಮಣದ ಸಂಧಿ ಕಾಲ ಮಕರ ಸಂಕ್ರಮಣ ಪುಷ್ಯ ಮಾಸದಲ್ಲಿ ಬರುತ್ತದೆ. ಈ ತಿಂಗಳಿಂದ ಹೇಮಂತ ಕಳೆದು ಮಾಘಮಾಸದಿಂದ ಶಿಶಿರ ಋತು. ಆರಂಭವಾಗುತ್ತದೆ. ಪುಷ್ಯಮಾಸವು ಶನಿಯ ಮಾಸ. ಈ ಮಾಸದಲ್ಲಿ ಶನಿಯ ಪ್ರಭಾವವಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಶರೀರದ ಜೀವನಾಡಿಗೆ ಕಾರಣ, ಈ ಜೀವನಾಡಿಯ ಒಂದು ಶಾಖೆಯು ಹೃದಯ ಬಡಿತ ಮತ್ತು ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ. ಪುಷ್ಯ ನಕ್ಷತ್ರ ಶನಿಯ ನಕ್ಷತ್ರ, ಈ ನಕ್ಷತ್ರಕ್ಕೆ ಬೃಹಸ್ಪತಿ ಅಧಿದೇವತೆ, ಶನಿಗೆ ಯಮ ಅಧಿದೇವತೆ. ಯಮ ಎಂದರೆ ಸಂಯಮ. ಶರೀರವನ್ನು ಹತೋಟಿಯಲ್ಲಿಡುವುದು ಈ ಜೀವನಾಡಿಯಿಂದ ಮಾತ್ರ ಸಾಧ್ಯ. ಜೀವನಾಡಿಯ ಈ ಕಾರ್ಯಕ್ಕೆಕೊಬ್ಬಿನ ಅಂಶಗಳು ಕಡಿಮೆಯಾದರೆ ನಿಶ್ಯಕ್ತಿ, ಅನಾರೋಗ್ಯ ಇತ್ಯಾದಿಗಳುಂಟಾಗುವುದು. ಇದರ ನಿವಾರಣೆಯೇ ಎಳ್ಳು ಬೆಲ್ಲದ ಸೇವನಯೇ ಉದ್ದೇಶ. ನವಧಾನ್ಯಗಳಲ್ಲೆಲ್ಲ ಎಳ್ಳು ಮಾತ್ರ ತೈಲಧ್ಯಾನ, ಉಳಿದ ಎಂಟು ಧಾನ್ಯಗಳಲ್ಲಿ ಯಾವುದೂ ತೈಲಧಾನ್ಯಗಳಿಲ್ಲ. ಪುಷ್ಯ ನಕ್ಷತ್ರದ ಅಧಿಪತಿ, ಮಕರ ರಾಶಿಯ ದೇವತೆ ಶನಿ.
ಮಕರ ಸಂಕ್ರಾಂತಿ ಪರ್ವಕ್ರಾಂತಿ
ಆ ಸಂದರ್ಭದಲ್ಲಿ ತಮಗೆ ಕೃಷಿ ಕಾರ್ಯದಲ್ಲಿ ನೆರವಾದ ಎತ್ತುಗಳನ್ನು ಸುಂದರವಾಗಿ ಸಿಂಗರಿಸುತ್ತಾರೆ. ಆರೈಕೆ ಮಾಡಿ ‘ಕಿಚ್ಚು ಹಾಯಿಸುತ್ತಾರೆ. ಇದರಿಂದ ರೋಗರುಜಿನಗಳು ದೂರವಾಗುತ್ತವೆಂದು ನಂಬಿಕೆ. ಅಂದು ಎತ್ತುಗಳಿಗೆ ದುಡಿಮೆಯಿಂದ ವಿಶ್ರಾಂತಿಯ ದಿನ.ಸಂಕ್ರಾಂತಿ ಸುಗ್ಗಿಯ ಹಬ್ಬವಷ್ಟೇ ಅಲ್ಲ. ಮರ್ತ್ಯ ಅಮರ್ತ್ಯರಿಗೆ ಸಂಬಂದ ಕಲ್ಪಿಸುವ, ಪ್ರೀತಿ ವಿಶ್ವಾಸಗಳನ್ನು ವೃದ್ಧಿಸಲು, ವಿಚಾರ ವಿನೋದಗಳಿಗೆಡೆ ಮಾಡಿಕೊಡುವ ವಿಶಿಷ್ಟ ಪರ್ವ. ಸಂಕ್ರಾಂತಿಯಂದು ಜನರು ನಸುಕಿನಲ್ಲೆದ್ದು ಅಭ್ಯಂಗ ಸ್ನಾನ ಮಾಡುತ್ತಾರೆ.
ಶನಿಗೆ ಪ್ರಿಯವಾದ ಎಳ್ಳು ಬೆಲ್ಲಗಳೆರಡಸೂ ಪೀಡಾ ಪರಿಹಾರಕಗಳೆಂದು ನಂಬಿಕೆ, ಹಾಗೂ ಆಪ್ತರಿಗೆ ಇದರ ವಿತರಣೆ, ಬಾಂಧವ್ಯ ವೃದ್ಧಿಸುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಮೊದಲ ಸಂಕ್ರಾಂತಿಯಿಂದ ಆರಂಭಿಸಿ ಮುಂದಿನ ಐದ ಸಂಕ್ರಾಂತಿಯವರೆಗೆ ಪ್ರತೀ ವರ್ಷ ಎಳ್ಳು, ಬಾಳೆಹಣ್ಣು ಕೊಬ್ಬರಿ ಬಟ್ಟಲು, ಕಬ್ಬು ಮಣ್ಣಿನ ಕುಡಿಕೆ, ಧಾನ್ಯಗಳು ಇವುಗಳಿರುವ ಬಾಗಿನವನ್ನು ಮುತ್ತೈದೆಯರಿಗೆ ಕೊಡುತ್ತಾರೆ. ಹಾಗೂ ಚೊಚ್ಚಲು ಹೆರಿಗೆಯಾದ ಹೆಣ್ಣುಮಕ್ಕಳಿಗೆ ಗಂಡುಮಗುವಾದರೆ ಕೃಷ್ಣನ ಪುಟ್ಟ ವಿಗ್ರಹವನ್ನು, ಹೆಣ್ಣುಮಗುವಾದರೆ ಬೆಳ್ಳಿಯ ದೀಪವನ್ನು ಹತಿರದವರಿಗೆ ಎಳ್ಳಿನ ಜೊತೆ ನೀಡುತ್ತಾರೆ.
ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶಬರಿಮಲೆಗೆ ದೇಶದೆಲ್ಲೆಡೆಯಿಂದ ಲಕ್ಷಾಂತರ ಭಕ್ತರು ಶ್ರದ್ಧಾಪೂರ್ವಕವಾಗಿ ಸೇವೆ ಸಲ್ಲಿಸುತ್ತಾರೆ.ಮಕರ ಸಂಕ್ರಮಣದ ದಿನ ಮಕರ ಜ್ಯೋತಿಯ ದರ್ಶನ ಪಡೆದು ಪುಳಕಿತರಾಗಿ ಪುನೀತರಾಗುತ್ತಾರೆ.
ಹನ್ನೆರಡು ವರ್ಷಕ್ಕೊಮ್ಮೆ ಸಂಕ್ರಾಂತಿಯಂದು ಗಂಗಾ ಯಮುನಾ ಸಂಗಮದ ಪುಣ್ಯ ಪ್ರದೇಶವಾದ ‘ಪ್ರಯಾಗದಲ್ಲಿ ಜಗತ್ಪ್ರಸಿದ್ಧ ಕುಂಭಮೇಳ ನಡೆಯುತ್ತದೆ. ದೇಶದ ಮೂಲೆ ಮೂಲೆಯಿಂದ ಬಂದ ಸಾಧು ಸಂತರು ಭಕ್ತರು ನದೀಸ್ನಾನಗೈದು ಸೂರ್ಯದೇವನನ್ನು ಪ್ರಾರ್ಥಿಸುತ್ತಾರೆ. ಇದು ಪ್ರಪಂಚದ ಬಹುದೊಡ್ಡ ಜಾತ್ರೆಗಳಲ್ಲೊಂದಾಗಿದ್ದು ಸುಮಾರು 40 ರಿಂದ 100 ದಶಲಕ್ಷ ಜನ ಇದರಲ್ಲಿ ಭಾವಹಿಸುವರೆಂದು ಅಂದಾಜಿಸಲಾಗುತ್ತದೆ. ದೇಶದ ನಾನಾ ಭಾಗಗಳಲ್ಲಿ ಸಂಕ್ರಾಂತಿಯನ್ನು ವೈವಿಧ್ಯಮಯವಾಗಿ ಆಚರಿಸುತ್ತಾರೆ. ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಕರ್ನಾಟಕದಲ್ಲಿ ಇದನ್ನು ಸುಗ್ಗಿಹಬ್ಬ, ಸಂಕ್ರಮಣ, ಮಕರ ಸಂಕ್ರಾಂತಿ ಎಂದು, ತಮಿಳುನಾಡಿನಲ್ಲಿ ‘ಪೊಂಗಲ್, ಆಂಧ್ರದಲ್ಲಿ ಪೆದ್ದ/ಪೆಂದುಗ ಎಂದು, ಅಸ್ಸಾಂನಲ್ಲಿ ಮಾಘ -ಬಿಹು ಎಂದು, ಬಂಗಾಳದಲ್ಲಿ ಪೌಷ್ ಸಂಕ್ರಾಂತಿ, ಉತ್ತರ ಭಾರತದಲ್ಲಿ ‘ಮಾಘಿ ಎಂದು ಕರೆಯುತ್ತಾರೆ. ಅಲ್ಲದೇ ನೇಪಾಳ, ಬಾಂಗ್ಲಾ, ಪಾಕಿಸ್ತಾನಗಳಲ್ಲೂ ಇದರ ಆಚರಣೆ ಇದೆ.
ಈ ಸಮಯದ ಸುಂದರವಾದ ಆಕರ್ಷಕ ರಂಗೋಲಿ ಬಿಡಿಸುವ ಹೆಂಗಳೆಯರು ಬಣ್ಣದ ಸೌಂದರ್ಯ ಲೋಕವನ್ನು ತೆರೆದಿಡುತ್ತಾರೆ. ಮಕ್ಕಳು ಯುವಕರು ಬಣ್ಣ ಬಣ್ಣದ ಗಾಳಿಪಟ ಹಿಡಿದು ಪರಸ್ಪರ ಪೈಪೋಟಿಗಿಳಿದು ಸಂತಸ ಪಡುತ್ತಾರೆ. ಈ ಸಮಯದಲ್ಲಿ ಹಲವು ಕಡೆ ಪ್ರತಿಷ್ಠಿತ ಗಾಳಿಪಟ ಸ್ಪರ್ಧೆಗಳನ್ನು ನಡೆಸುತ್ತಾರೆ. ವಿಜೇತರಿಗೆ ಭಾರಿ ಬಹುಮಾನ ಮರ್ಯಾದೆ ದೊರೆಯುತ್ತದೆ. ಹೀಗೆ ವಿಶಿಷ್ಟವಾಗಿರುವ ಸಂಕ್ರಾಂತಿಯ ವಿಷಯ-ವೈವಿಧ್ಯ ವಿಸ್ತಾರವಾಗಿ ಇದೆ. ಬರುವ ಮಕರ ಸಂಕ್ರಮಣ ಎಲ್ಲರಲ್ಲೂ ಮಧುರಭಾವ-ಸಿಹಿಮಾತಿಗೆ ಮೂಲವಾಗಲಿ. ಎಲ್ಲೆಲ್ಲೂ ಆರೋಗ್ಯ ಸಂಮೃದ್ಧಿಯ ಸಂತಸ ಬರಲಿ. ಭೂಮಿಗೆ ನವಕ್ರಾಂತಿ ಕಾಂತಿಯನು ತರಲಿ.
ಮಕರದಲ್ಲಿ ಸೂರ್ಯ ಪ್ರವೇಶ ವೈಶಿಷ್ಟ್ಯ
ಶನಿ ಧರ್ಮದರ್ಶಿ, ನಿಶ್ಪಕ್ಷಪಾತಿ, ನ್ಯಾಯ ಸತ್ಯ ಧರ್ಮಗಳ ಪರ.ಸಕಲ ಜೀವಿಗಳ ಪಾಪ ಪ್ರಾಯಶ್ಚಿತಗೊಳಿಸಿ ಪವಿತ್ರವಾಗಿಸಿ ಉದ್ಧರಿಸುವವನು. ಈ ರೀತಿ ಜೀವ ವಿಕಾಸಗೊಂಡಾಗ ಬೃಹಸ್ಪತಿಯಂತೆ ಆಗುತ್ತಾನೆ. ಈ ದೃಷ್ಟಿಯಿಂದ ಪುಷ್ಯ ನಕ್ಷತ್ರಕ್ಕೆ ಬೃಹಸ್ಪತಿ ಅಧಿದೇವತೆ ಎನ್ನಲಾಗಿದೆ. ಅಲ್ಲದೇ ಗರುಡ ಪುರಾಣದಲ್ಲಿ ನಾಭಿ ಸ್ಥಾನ ಎಂದು ಹೇಳಲ್ಪಟ್ಟಿದೆ. ನಾಭಿ ಕಮಲದಿಂದ ಸೃಷ್ಟಿಕರ್ತ ಬ್ರಹ್ಮ ಜನಿಸಿದ. ಈ ಪ್ರದೇಶವನ್ನು ಶನಿಪ್ರದೇಶವೆಂದಾಗ ಈ ಪ್ರದೇಶಕ್ಕೆ ಕೊಟ್ಟಿರುವ ಮಹತ್ವಕ್ಕೆಲ್ಲದಕ್ಕು ಶನಿಕಾರವೆಂದಾಯಿತು.
ದೈಹಿಕವಾಗಿಯೂ ಮಾನಸಿಕವಾಗಿಯೂ ಬಳಲಬಹುದಾದ ಈ ಸಂಧಿಕಾಲದಲ್ಲಿ ಮನುಷ್ಯ ಶುಭಕಾರ್ಯ ಮಡುವುದಕ್ಕೆ ಸೂಕ್ತವಾದುದಲ್ಲವೆಂದು ಈ ಮಾಸವನ್ನು ಶೂನ್ಯಮಾಸವೆಂದರು, ಸಂಯಮಶೀಲವಾಗಿರಬೇಕೆಂದರು.
ಶತ್ರುವಿನ ಸಮಾಗಮ: ಮಕರ ರಾಶಿ ಶನಿಯ ಕ್ಷೇತ್ರ. ಮಕರ ರಾಶಿ ರವಿಗೆ ಶತೃ ಕ್ಷೇತ್ರ. ಇಲ್ಲಿ ಸೂರ್ಯನ ಮೇಲುಗೈ ಹೇಗೆ? ಶನಿಯು ಸೂರ್ಯದೇವನ ಮಗನಾದರೂ ಸ್ವಭಾವತಃ ಪರಸ್ಪರ ವೈರತ್ವ. ಇಲ್ಲಿ ಗಮನಿಸಬೇಕಾದ ಸಂಗತಿಗಳಿವೆ. ಮಕರ ರಾಶಿ ಕುಜನಿಗೆ ಉಚ್ಚಕ್ಷೇತ್ರವಾಗಿ ಗುರುವಿಗೆ ನೀಚಕ್ಷೇತ್ರವಾಗಿರುತ್ತದೆ. ಪ್ರಕಾಶಮಾನನಾದ ರವಿಯು ಈ ಮಕರ ರಾಶಿಯ ಮೂರು ನಕ್ಷತ್ರಗಳ 9 ಪಾದಗಳಲ್ಲಿ ಸಂಚರಿಸುತ್ತಾನೆ. ಮೊದಲು ತನ್ನ ನಕ್ಷತ್ರವಾದ ಉತ್ತರಾಷಾಢ ನಕ್ಷತ್ರದಲ್ಲೂ, ನಂತರ ಚಂದ್ರನ ನಕ್ಷತ್ರವಾದ ಶ್ರವಣ ನಕ್ಷತ್ರದಲ್ಲೂ ಮತ್ತು ಕುಜನ ನಕ್ಷತ್ರವಾದ ಧನಿಷ್ಠಾ ನಕ್ಷತ್ರದ ಎರಡು ಪಾದಗಳಲ್ಲೂ ಸಂಚರಿಸುತ್ತಾನೆ. ಉತ್ತರಾಷಾಢಾ ನಕ್ಷತ್ರಕ್ಕೆ ಬ್ರಹ್ಮ ಅಧಿದೇವತೆ. ಶ್ರವಣ ನಕ್ಷತ್ರಕ್ಕೆ ವಿಷ್ಣು ಅಧಿದೇವತೆ. ಧನಿಷ್ಠ ನಕ್ಷತ್ರಕ್ಕೆ ಅಗ್ನಿ ದೇವತೆ. ಈ ಮೂರು ನಕ್ಷತ್ರಗಳಗಳಲ್ಲಿ ರವಿಯು ಸಂಚರಿಸುವಾಗ ಮತ್ತು ರವಿಯು ತನು (ಸ್ವರೂಪ) ಕಾರಕನಾಗಿರುವುದರಿಂದ ಈ ಮೂರು ನಕ್ಷತ್ರ ಅಧಿದೇವತೆಗಳ ಮತ್ತು ನಕ್ಷತ್ರಾಧಿಪತಿಗಳ ಗುಣವನ್ನು ಹೊಂದಿರುತ್ತಾನೆ. ಬ್ರಹ್ಮನು ಸೃಷ್ಟಿಗೂ, ವಿಷ್ಣುವು ಸ್ಥಿತಿಗೂ ಕಾರಕರಾಗಿರುವುದರಿಂದ ಮತ್ತು ಈ ಸ್ಥಿತಿಗೆ ಬೇಕಾದ ಅಗ್ನಿಯು ಸಮಧಾತುವಾಗಿರಬೇಕಾದರೆ ಅದಕ್ಕೆ ಸಂಬಂಧಪಟ್ಟ ಮತ್ತು ಅವಶ್ಯವಾದ ಆಚಾರ ಆಹಾರದ ಅರಿವಿರಬೇಕು.
ತನುಕಾರಕನಾದ ರವಿ ಪ್ರವೇಶವಾದಾಗ ಶರೀರದ ಆರೋಗ್ಯ ಸಂರಕ್ಷಣೆಗಾಗಿ ಶರೀರಾಗ್ನಿಯನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಕುಜ ಅಗ್ನಿಕಾರಕ, ಗುರು ವಿದ್ಯಾಬುದ್ದಿ ಪಾರಮಾರ್ಥಕ್ಕೆ ಕಾರಕ ಆದ್ದರಿಂದ ಈ ಮಾಸದಲ್ಲಿ ವೇದಾಧ್ಯಯನ, ಉಪನಯನಾದಿ ಮಂಗಳ ಕಾರ್ಯಕ್ಕೆ ನಿಷೇಧಾತ್ಮಕ ಶೂನ್ಯಮಾಸವೆಂದು.
ಮಕರ ಸಂಕ್ರಮಣ ಕಾಲದ ಸೌರಮಂಡಲದಲ್ಲಿನ ಸಂವಿಧಾನ ಹವಾಮಾನ ಬದಲಾವಣೆಯ ಮುನ್ಸೂಚನೆಯಾಗಿದೆ. ಇದು ದೈಹಿಕ ಮತ್ತು ಮಾನಸಿಕ ಪರಿಣಾಮಗಳನ್ನುಂಟು ಮಾಡುವುದು. ಜೀವನಾಡಿಯು ಚುರುಕುಗೊಳ್ಳುವುದು. ಇದನ್ನು ಹತೋಟಿಯಲ್ಲಿಡಲು ಹಲವು ಆಚರಣೆ ಮತ್ತು ಆಹಾರ ಕ್ರಮಗಳು ನಮ್ಮ ಸಂಪ್ರದಾಯದಲ್ಲಿ ಪರಂಪರಾಗತವಾಗಿ ಬಂದಿದೆ. ಈ ರೀತಿ ನಮ್ಮ ಪೂರ್ವಿಕರ ಪ್ರಕೃತಿ ಜನ್ಯ ವನಸ್ಪತಿಯ ಆಹಾರ ಆಚಾರ-ವಿಚಾರಗಳು ಎಲ್ಲ ಬಗೆಯ ಸಂಕಟ-ಸಂಕಷ್ಟಗಳಿಗೆ ಎಳ್ಳು ಬೆಲ್ಲದಂತಹ ಕ್ರಾಂತಿಕಾರಕ ಪರಿಹಾರ ನೀಡಿದೆ.
ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಚಲಿಸುವ ಕಾಲವೇ ಸಂಕ್ರಮಣ ಕಾಲವೆಂದೂ ಕರೆಯಲ್ಪಡುತ್ತದೆ. ಈ ಸಂಕ್ರಮಣದ ಸಮಯದಲ್ಲಿ ಮಾಡುವ ಸ್ನಾನ, ಜಪ, ಧ್ಯಾನ, ಹೋಮ, ತರ್ಪಣ ಮತ್ತು ಶ್ರಾದ್ಧ ಮುಂತಾದ ಕರ್ಮಗಳು ಅತ್ಯಂತ ಫಲಪ್ರದವಾಗುತ್ತವೆ ಎನ್ನುವುದು ಇದರ ತಾತ್ಪರ್ಯ.
ಧನುರ್ ರಾಶಿಯಿಂದ ಮಕರರಾಶಿಗೆ ಸೂರ್ಯನು ಪ್ರವೇಶಿಸುವುದೇ ಈ ಮಕರ ಸಂಕ್ರಾಂತಿ. ಮಕರರಾಶಿಯಿಂದ ಮಿಥುನರಾಶಿಯವರೆಗಿನ 6 ತಿಂಗಳ ಸೂರ್ಯನ ಚಲನಾ ಕಾಲ ಉತ್ತರಾಯಣವೆಂದು ಕರೆಯಲ್ಪಡುವುದರಿಂದ ಉತ್ತರಾಯಣ ಪುಣ್ಯಕಾಲವೆಂದೂ ಇದನ್ನು ಕರೆಯಲಾಗುತ್ತದೆ. 13 ಸಂಕ್ರಾಂತಿಗಳಲ್ಲಿ ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಗಳು ಅಯನಸಂಕ್ರಾಂತಿಗಳಾದ್ದರಿಂದಲೂ, ಇವೆರಡರಲ್ಲಿ ಉತ್ತರಾಯಣವೇ ಶ್ರೇಷ್ಠವಾದ್ದರಿಂದ ಈ ಮಕರ ಸಂಕ್ರಾಂತಿಯು ಪ್ರಸಿದ್ಧಿಯಾಗಿದೆ.
ಧಾರ್ಮಿಕವಾಗಿ ಸಂಕ್ರಾಂತಿಯನ್ನು ಈ ರೀತಿ ಚಿಂತಿಸಿದರೆ ಸಾಮಾಜಿಕವಾಗಿ ಇದನ್ನು ರೈತಾಪಿ ಜನರ ಹಬ್ಬವೆಂದೇ ಕರೆಯಬಹುದು. ವರ್ಷದ ಕೆಲಸಗಳ ಫಲ ಕೈಯಲ್ಲಿ ಭತ್ತವೇ ಮೊದಲಾದ ಧಾನ್ಯರಾಶಿಯ ರೂಪದಲ್ಲಿ, ಮನೆಯಲ್ಲಿ ಭಾಗ್ಯಲಕ್ಷ್ಮಿಯ ರೂಪದಲ್ಲಿ ತುಂಬಿರುವ ಮನಸ್ಸು ಸಂತಸದಿಂದ ಹಿಗ್ಗಿ ಸುಗ್ಗಿಯಾಗುತ್ತದೆ. ಕೃಷಿಯ ಕೆಲಸಕ್ಕೆ ಬೆನ್ನೆಲುಬಾದ ಗೋವುಗಳಿಗೆ ಸ್ನಾನ ಮಾಡಿಸಿ ಕೊಂಬುಗಳಿಗೆ ಸಣ್ಣ ಹಚ್ಚಿ ಅವುಗಳಿಗೆ ಪ್ರಿಯವಾದ ಹುಲ್ಲುಕಡ್ಡಿಗಳನ್ನು ನೀಡಿ ಅವುಗಳನ್ನು ಉರಿಯುವ ಬೆಂಕಿಯನ್ನು ದಾಟಿಹೋಗುವಂತೆ ಮಾಡುವ ಕಿಚ್ಚು ಹಾಯಿಸುವುದು ಎಂಬ ಸಂಪ್ರದಾಯಗಳೂ ಇದೆ. ಇದು ಅವುಗಳ ಶ್ರಮದ ನಿವಾರಣೆಗೆ ಮತ್ತು ದೇಹದಲ್ಲಿ ಸೇರಿರಬಹುದಾದ ರೋಗಾಣುಗಳ ನಾಶಕ್ಕೆ ಸಹಾಯವಾಗಿದೆ.
ತಮಿಳುನಾಡಿನಲ್ಲಿ ಉಕ್ಕುವುದು ಎಂಬರ್ಥದ ಪೊಂಗಲ್ ಎಂಬ ಪದದಿಂದ ಈ ಹಬ್ಬವನ್ನು ಕರೆಯಲಾಗುತ್ತದೆ. ಭೋಗೀ, ಸಂಕ್ರಾಂತಿ, ಕನೂ ಹಬ್ಬವೆಂದು ಸಂಕ್ರಾಂತಿಯ ದಿನ ಮತ್ತು ಅದರ ಹಿಂದಿನ ಮುಂದಿನ ದಿನಗಳನ್ನು ಸೇರಿಸಿ ಮೂರು ದಿನಗಳ ಹಬ್ಬದ ಆಚರಣೆಯನ್ನು ಅಲ್ಲಿ ನೋಡಬಹುದು.
ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಲಾನಿ ಭವಂತು ಎಂದೂ, ಆತ್ಮವತ್ ಸರ್ವಭೂತೇಷು ಯಃ ಪಶ್ಯತಿ ಸ ಪಂಡಿತಃ ಎಂಬುದಾಗಿಯೂ ಸಾರುವ ನಮ್ಮ ಸನಾತನ ಧರ್ಮವು ಸರ್ವರಿಗೂ ಸಮಾನತೆಯನ್ನು ಸಾಧಿಸಲು ಉಪದೇಶಿಸುತ್ತದೆ. ಅದರ ಆಚರಣೆಗಳೂ ಹಾಗೆಯೇ ಪ್ರತಿಯೊಂದರಲ್ಲೂ ಸಮತ್ವವನ್ನೇ ಸಾಧಿಸುತ್ತದೆ. ಮಕರ ಸಂಕ್ರಾಂತಿಯೂ ಹಾಗೆ ಎಲ್ಲ ವರ್ಗಗಳ ಹಬ್ಬ.ಇದರ ತಾತ್ಪರ್ಯದಂತೆ ಈ ಮನುಜನಲಿ ಎಳ್ಳು ಬೆಲ್ಲ, ಸಿಹಿ ಕಹಿಯ ಹಾಗೆ ಪಾಪ – ಪುಣ್ಯಗಳೆಂಬ ಮಿಶ್ರಣವಿದೆ. ಪಾಪದಿಂದ ನಾಶ, ಪುಣ್ಯದಿಂದ ವೃದ್ಧಿ. ಸಂಸ್ಕೃತಿಯಿಂದ ದೂರವಾದ ನಾವು ಸ್ವಾರ್ಥಗಳಿಂದ ಪಾಪದಲ್ಲಿ ಮುಳುಗುತ್ತಿದ್ದೇವೆ. ಇದು ನಮ್ಮನ್ನು ಅಭಿವೃದ್ಧಿಯಿಂದ ದೂರಮಾಡುವಂಥದ್ದು. ಭಾರತದ ಬದಲಾವಣೆ ಭಾರತೀಯರಾದ ನಮ್ಮ ಬದಲಾವಣೆಯ ಪ್ರತಿಬಿಂಬ. ಮೊದಲು ನಾವು ಬದಲಾಗೋಣ. ಸಂಕ್ರಾಂತಿಯ ಈ ದಿನ ಸರ್ವರಲ್ಲೂ ಸಮಭಾವ ಸುಖಶಾಂತಿ ನೆಲೆಸಲೆಂದು ಪ್ರಾರ್ಥಿಸೋಣ. ಉತ್ತರಾಯಣದ ಈ ಕಾಲದಲ್ಲಿ ಬೆಳವಣಿಗೆಯ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ಹುಡುಕೋಣ. ಎಳ್ಳು ಬೆಲ್ಲದಂತ ಜೀವನದಲ್ಲಿ ಎಲ್ಲ ಕಡೆಯಲ್ಲಿಯೂ ಸಿಹಿಯನ್ನು ಹಂಚೋಣ.
ವಿಜ್ಞಾನದ ಪ್ರಕಾರ ಸಂಕ್ರಾಂತಿ
ಪೂರ್ವದಲ್ಲಿ ಸೂರ್ಯನ ಉದಯ ಮತ್ತು ಪಶ್ಚಿಮದಲ್ಲಿ ಅಸ್ತವಾಗುವ ಸೂರ್ಯ ಸರಿಯಾಗಿ ಹುಟ್ಟಿ ಮುಳುಗುವುದು ವರ್ಷದಲ್ಲಿ ಕೇವಲ ಎರಡು ದಿನ ಮಾತ್ರ. ಉಳಿದ ದಿನಗಳಲ್ಲಿ ಹೀಗೆ ಇರುವುದಿಲ್ಲ. ಇದಲ್ಲೆ ವಿಜ್ಞಾನದಲ್ಲಿ ಈಕ್ವಿನಾಕ್ಸ್ ಎನ್ನುತ್ತಾರೆ. ಅಂದು ಹಗಲಿರುಳನ್ನು ಸಮಾನವಾಗಿ ಅಂದರೆ 12 ಗಂಟೆ ಹಗಲು ಹಾಗೂ 12 ಗಂಟೆ ಇರಳನ್ನು ಸರಿ ಪ್ರಮಾಣದಲ್ಲಿ ಹಂಚಿಕೊಳ್ಳುತ್ತವೆ.
ಚಳಿಗಾಲದಲ್ಲಿ ಹಗಲು ಕಡಿಮೆ ಇದ್ದು ಇರುಳು ಜಾಸ್ತಿ ಇರುತ್ತದೆ. ಈ ಕಾಲದಲ್ಲಿ ಸೂರ್ಯ ದಕ್ಷಿಣದಲ್ಲಿ ಹುಟ್ಟುತ್ತಾನೆ. ಒಂದು ದಿನ ದಕ್ಷಿಣ ತುತ್ತತುದಿ ತಲುಪಿ ಮರುದಿನ ಬೆಳಗ್ಗೆ ಉತ್ತರದಲ್ಲಿ ಗೋಚರಿಸುತ್ತಾನೆ. ಅಂದರೆ ದಕ್ಷಿಣದ ಕಡೆ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿ ಉತ್ತರದಲ್ಲಿ ಕಾಣಿಸಿಕೊಳ್ಳುವ ಕಾಲವೇ ಉತ್ತರಾಯಣದ ದಿನ ಎನ್ನುತ್ತಾರೆ. ಇದು ಚಳಿಗಾಲ ಮುಗಿಯುವ ಕಾಲ ಎನ್ನಲಾಗುತ್ತದೆ.
ಸೂರ್ಯ ತನ್ನ ಪಥವನ್ನು ಬದಲಾಯಿಸಿ ಅಂದರೆ ಉತ್ತರಕ್ಕೆ ತಿರುಗಿದ ನಂತರ ಅಲ್ಲಿಂದ ಆರು ತಿಂಗಳು ಉತ್ತರದಲ್ಲೇ ಗೋಚರಿಸುತ್ತಾನೆ. ಆಗ ಹಗಲಿನ ಪ್ರಮಾಣ ಹೆಚ್ಚಾಗಿ, ಇರುಳು ಕಡಿಮೆಯಾಗಿರುತ್ತದೆ. ಹೀಗೆ ಸೂರ್ಯ ಪಥ ಬದಲಾಯಿಸಿದಾಗ ಬೇಸಿಗೆ ಆರಂಭವಾಯಿತೆಂದು ಅರ್ಥ. ಹೀಗೆ ಮುಂದೆ ಉತ್ತರದ ಕೊನೆಯ ಹಂತ ತಲುಪಿ ತನ್ನ ವಿರುದ್ಧ ದಿಕ್ಕು ಅಂದರೆ ದಕ್ಷಿಣಕ್ಕೆ ಪ್ರವೇಶಿಸಿ ಗೋಚರಿಸುತ್ತಾನೆ. ಆಗ ಬೇಸಿಗೆ ಮುಗಿದು ಮತ್ತೆ ಚಳಿಗಾಲ ಆರಂಭವಾಯಿತೆಂದು ಅರ್ಥ. ಇದನ್ನು ಕರ್ಕಾಟಕ ಸಂಕ್ರಾಂತಿ ಎಂದು ಕರೆಯುತ್ತಾರೆ.
ಹೀಗೆ ಸೂರ್ಯ ತನ್ನ ಚಲನೆಯಿಂದ ಭೂಮಿಯ ಕಕ್ಷೆ ಸುಮಾರು 22 1/2 ಡಿಗ್ರಿಬಾಗಿರುವುದರಿಂದ ಯಾವುದಾದರೊಂದು ಸ್ಥಾನದಲ್ಲಿ ದಿನವೂ ಉದಯಿಸುತ್ತಾನೆ. ಇದು 8ರ ಆಕೃತಿಯಂತೆ ಕಾಣುತ್ತದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ‘ಅನಲೆಮ್ಮ ಎನ್ನುತ್ತಾರೆ. ಈ ಆಕೃತಿಯ ಒಂದು ನೆತ್ತಿಯ ಬಿಂದುವನ್ನು ‘ಸಮ್ಮರ್ ಸಾಲಿಸ್ಟಿಸ್, ಅದರ ಅಡಿಯ ಬಿಂದುವನ್ನು ‘ವಿಂಟರ್ ಸಾಲಿಸ್ಟಿಸ್ ಅಂದರೆ ಮಕರ ಸಂಕ್ರಾಂತಿಯ ದಿನವೆಂದು ಕರೆಯುತ್ತಾರೆ. ಅಂದರೆ 8ರ ಆಕೃತಿಯ ಮಧ್ಯದಲ್ಲಿ ಹಾದು ಹೋಗಿರುವ ರೇಖೆಗಳು ಪರಸ್ಪರ ಹಾದು ಹೋಗಿರುವ ಆ ಬಿಂದು ಈಕ್ವಿನೋಕ್ಸ್ ದಿನಗಳು ಎನ್ನಲಾಗುತ್ತದೆ. ಅದರ ಮುಂದೆ ಸಂಚರಿಸಿ ಅಡಿಯ ಬಿಂದುವನ್ನು ತಲುಪುವ ಕೇಂದ್ರವನ್ನು ದಕ್ಷಿಣಾಯನ ದಿನಗಳು ಎಂದು ಕರೆಯುತ್ತಾರೆ.
ಏಕೆ ಬೆಲ್ಲ ಯಾಕೆ?
ಸಂಕ್ರಾಂತಿ ಎಂದಾಕ್ಷಣ ನೆನಪಾಗುವುದೇ ಎಳ್ಳು ಬೆಲ್ಲ ಮಿಶ್ರಣ. ನಗರ ಪ್ರೇಶಗಳಲ್ಲಿ ಹೊಸ ಬಟ್ಟೆ ತೊಟ್ಟು ಮನೆಮನೆಗೆ ಹೋಗಿ ಎಳ್ಳು ಬೆಲ್ಲದ ಮಿಶ್ರಣ ಹಂಚುವುದು ರೂಢಿಯಲ್ಲಿದೆ. ಇದರೊಂದಿಗೆ ಕಬ್ಬು, ಬಾಳೆಹಣ್ಣು ಇಟ್ಟುಕೊಡುವುದೂ ಇದೆ. ಎಳ್ಳು ಸಂಕ್ರಾಂತಿ ಹಬ್ಬದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಅಂದು ಎಳ್ಳು ನೀರಿನ ಸ್ನಾನ ಮಾಡಲಾಗುತ್ತದೆ. ಎಳ್ಳು, ಬೆಲ್ಲ, ಕಡಲೆ, ಶೇಂಗಾ, ಕೊಬ್ಬರಿಯನ್ನೆಲ್ಲಾ ಸೇರಿಸಿ ಮಿಶ್ರಣ ತಯಾರಿಸುತ್ತಾರೆ. ಇದನ್ನು ಎಲ್ಲರ ಮನೆಗೂ ಹಂಚಿ ಪರಸ್ಪರ ನೆಮ್ಮದಿ, ಸುಖ ದುಃಖಗಳನ್ನೂ ಒಬ್ಬರಿಗೊಬ್ಬರು ಹಂಚಿಕೊಳ್ಳುವುದೇ ಆಗಿದೆ. ಇದು ನಮ್ಮಪೂರ್ವಜರ ಕಾಲದಿಂದಲೂ ನಡೆದುಬಂದ ಆಚರಣೆ. ವೈಜ್ಞಾನಿಕವಾಗಿ ಎಳ್ಳು ಬೆಲ್ಲ ತಯಾರಿಸುವುದು, ತಿನ್ನುವುದಕ್ಕೂ ಕಾರಣ ಇದೆ. ಎಳ್ಳು ಬೆಲ್ಲ ತಯಾರಿಸುವುದು ಸಂಕ್ರಾಂತಿ ಸಂದರ್ಭದಲ್ಲಿ ಸಂಕ್ರಾಂತಿ ಬರುವುದೇ ಚಳಿಗಾಲದಲ್ಲಿ. ಚಳಿಗಾಲದಲ್ಲಿ ಸಾಮಾನ್ಯವಾಗಿ ಮನುಷ್ಯನ ಮೈಕೈಯಲ್ಲಿ ಬಿರುಕು ಮೂಡುತ್ತದೆ ಹಾಗೂ ಚರ್ಮ ಒಣಗುತ್ತದೆ. ಅಲ್ಲದೆ ಸಂಕ್ರಾಂತಿಯಲ್ಲಿ. ತಯಾರಿಸುವ ಎಳ್ಳು ಬೆಲ್ಲದ ಮಿಶ್ರಣವನ್ನು ಒಮ್ಮೆ ಗಮನಿಸಿ. ಅದರಲ್ಲಿ ಕೊಬ್ಬರಿ, ಎಳ್ಳು, ಶೇಂಗಾ ಇವೆಲ್ಲದರಲ್ಲೂ ಎಣ್ಣೆ ಅಂಶಗಳಿರುತ್ತದೆ. ಈ ಮಿಶ್ರಣ ಸೇವಿಸುವುದರಿಂದ ದೇಹದಲ್ಲಿ ಎಣ್ಣೆ ಅಂಶ ಕಡಿಮೆ ಆಗದೆ ಕಾಯ್ದುಕೊಳ್ಳುತ್ತದೆ. ಅಲ್ಲದೆ ಚರ್ಮದ ಕಾಂತಿ ಹಾಗೂ ತೇವಾಂಶ ಕಡಿಮೆಯಾಗಲು ಬಿಡುವುದಿಲ್ಲ ಎನ್ನಲಾಗುತ್ತದೆ.ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಸಂಕ್ರಾಂತಿ ಕತೆಗಳು
1. ಸೂರ್ಯನು ಈ ದಿನದಂದು ಶನಿಯ ದರ್ಶನಕ್ಕಾಗಿ ಅವನ ಮನೆಗೆ ಹೋಗುವ ನಂಬಿಕೆ ಇದೆ. ಅಂದು ಶನಿಯ ಪ್ರೀತ್ಯರ್ಥ ಎಳ್ಳು ದಾನ ಮಾಡುವ ಸಂಪ್ರದಾಯ. ಇದೆ. ಸೂರ್ಯ ಶನಿಯರ ಸಮಾಗಮದ ದಿನವನ್ನು ಮುರಿದ ಸಂಬಂಧಗಳನ್ನು ಬೆಸೆಯುವ ಶುಭ ಸಮಯವೇ ಸಂಕ್ರಾಂತಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆಂದೇ ಇಂದಿಗೂ ಮಹಾರಾಷ್ಟ್ರ, ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ ಸ್ನೇಹಿತರಿಗೆ, ಬಂಧುಗಳಿಗೆ ಸಕ್ಕರೆ ಅಚ್ಚು, ಎಳ್ಳು ಕಬ್ಬು ಹಣ್ಣುಗಳನ್ನು ನೀಡಿ ಶುಭ ಹಾರೈಸುತ್ತಾರೆ. ಎಳ್ಳು ತಿಂದು ಒಳ್ಳೆಯ ಮಾತನಾಡಿ ಎಂಬ ನಾಣ್ಣುಡಿ ಪ್ರಚಲಿತವಾಗಿದೆ.
2. ಮಹಾವಿಷ್ಣು ರಾಕ್ಷಸರ ಸಂಹಾರ ಮಾಡಿ ಅವರ ಶಿರಗಳನ್ನು ಮಂದಾರ ಪರ್ವತದಲ್ಲಿ ಹೂಳಿದನೆಂದೂ ಆ ದೈತ್ಯನ ನಿರ್ನಾಮದ ಅಂತಿಮದಿನವೇ ಮಕರ ಸಂಕ್ರಾಂತಿ ಎಂದೂ ಕೆಲವು ಪುರಾಣಗಳ ಕಥೆಗಳಿವೆ. ದುಷ್ಟಶಕ್ತಿಗಳ ದಮನದ ಸಂಕೇತವಾಗಿಯೂ ಹಬ್ಬವನ್ನು ಪರಿಗಣಿಸುತ್ತಾರೆ. ಮನುಷ್ಯನಲ್ಲಿರುವ ಅರಿಷಡ್ವರ್ಗಗಳ ನಿರ್ಮೂಲನ ಸಂಕಲ್ಪಕ್ಕೆ ಈ ದಿನ ಸೂಕ್ತವೆಂದು ನಂಬಲಾಗಿದೆ. ಪೌರಾಣಿಕವಾಗಿ, ‘ಸಂಕ್ರಾಂತಿ ಎಂಬ ದೇವತೆಯು ‘ಶಂಕಾರಾಸುರ ಎಂಬ ರಾಕ್ಷಸನನ್ನು ಈ ದಿನ ಸಂಹಾರ ಮಾಡಿದಳೆಂತಲೂ ಅದಕ್ಕೆಂದೆ ಈ ಹಬ್ಬಕ್ಕೆ ಸಂಕ್ರಾಂತಿ ಎಂಬ ಹೆಸರು ಬಂದಿದೆಯೆಂದೂ ಹೇಳುತ್ತಾರೆ.
3. ಭಗವದ್ಗೀತೆಯ ವಿಭೂತಿ ಯೋಗ ಎಂಬ ಅಧ್ಯಾಯದಲ್ಲಿ ಶ್ರೀಕೃಷ್ಣನು ತಾನು ಆಯನಗಳಲ್ಲಿ ಉತ್ತರಾಯಣ ಎಂದು ಹೇಳಿಕೊಂಡಿದ್ದಾನೆ. ಸಂಕ್ರಾಂತಿಯೊಂದಿಗೆ ದೇವತೆಗಳಿಗೆ ಪಾಲಿನ ಹಗಲೂ ರಾಕ್ಷಸರ ಪಾಲಿನ ರಾತ್ರಿಯೂ ಆರಂಭವಾಗುತ್ತದೆ ಎನ್ನುವುದು ಪೌರಾಣಿಕ ಐತಿಹ್ಯ. ಈ ಅವಧಿಯಲ್ಲಿ ದಿನದ ಅವಧಿ ಹೆಚ್ಚಾಗಿ ರಾತ್ರಿಯ ಅವಧಿ ಕಡಿಮೆಯಾಗುತ್ತ ಹೋಗುತ್ತದೆ. ಸೂರ್ಯನು ಮೇಲೇರಿ ಪ್ರಕಾಶ ಬೀರುವಂತೆ ನಮ್ಮ ಬಾಳಲ್ಲೂ ಕತ್ತಲು ಹೋಗಿ ಹೊಸ ಬೆಳಕು ಬರುವುದು ಎಂಬ ನಂಬಿಕೆಯಿಂದ ಈ ಹಬ್ಬವನ್ನು ಆಚರಿಸುತ್ತೇವೆ.
4. ನಮ್ಮ ಒಂದು ವರುಷ ದೇವತೆಗಳ ಲೆಕ್ಕದಲ್ಲಿ ಒಂದು ದಿನ. ಉತ್ತರಾಯಣ ಅವರಿಗೆ ಹಗಲಾದರೆ ದಕ್ಷಿಣಾಯನ ರಾತ್ರಿಯ ಕಾಲ. ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಸಂಚಲನ ಮಾಡುವ ಸಮಯವೇ ಈ ಮಕರ ಸಂಕ್ರಮಣ. ದಕ್ಷಿಣಾಯನ ತಮಸ್ಸಿನ ಕಾಲ, ಉತ್ತರಾಯಣ ಬೆಳಕಿನ ಕಾಲ, ಕತ್ತಲಿನಿಂದ ಬೆಳಕಿಗೆ, ರಾತ್ರಿಯಿಂದ ಹಗಲಿಗೆ, ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವ ಸಮಯ. ದಕ್ಷಿಣಾಯನದಲ್ಲಿ ಹಗಲು ಕಡಿಮೆಯ ಅವಧಿ. ಉತ್ತರಾಯಣದಲ್ಲಿ ಹಗಲು ದಿನದಿಂದ ದಿನಕ್ಕೆ ಅಧಿಕವಾಗುವ ಸಮಯ. ಹಾಗಾಗಿಯೇ ಮಕರ ಸಂಕ್ರಾಂತಿದಿಂದ ಸಿಂಹ ಸಂಕ್ರಮಣದವರೆಗೆ ಹೆಚ್ಚು ಸೆಖೆಯೇ ಇರುತ್ತದೆ ಎನ್ನಬಹುದು.
ಸುಗ್ಗಿಕಾಲದ ತೆನೆ ಹಬ್ಬ
ಸಂಕ್ರಾಂತಿ ಪೈರಿನ ತೆನೆ ಹಬ್ಬವೂ ಹೌದು. ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ತಮಿಳುನಾಡು, ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಕಬ್ಬು ಕಟಾವಿಗೆ ಬರುವ ಹೊತ್ತಿದು. ಸುಗ್ಗಿ ಕಾಲದ ಈ ಹಬ್ಬದಲ್ಲಿ ಅಕ್ಕಿ, ಬೆಲ್ಲಗಳ ಖಾದ್ಯದ ತಯಾರಿ ನಡೆಯುತ್ತದೆ. ಧಾನ್ಯ ಸಂಪತ್ತು ಮನೆ ಒಳಗಡೆ ತರುವ ಹೊತ್ತಲ್ಲಿ ಕೃಷಿಗೆ ಸಹಕರಿಸಿದ ದನಕರುಗಳಿಗೂ ಅಲಂಕರಿಸಿ, ಪೂಜಿಸಿ ಧನ್ಯವಾದ ಹೇಳುವ ಅಲ್ಲದೆ ಮನುಷ್ಯನಂತೆ ದನಕರುಗಳಿಗೂ ದೃಷ್ಟಿಯಾಗದಂತೆ ಅಥವಾ ರೋಗನಿವೃತ್ತಿಯಾಗಲು ಬೆಂಕಿ ಹಾಯಿಸುವುದನ್ನೂ ನೋಡಬಹುದು. ವರ್ಷಪೂರ್ತಿ ದುಡಿದ ದನಕರುಗಳಿಗೆ ಪ್ರಾಯಶಃ ಈ ದಿನಗಳಲ್ಲಿ ಒಂದಷ್ಟು ವಿರಾಮವೂ ದೊರೆಯುತ್ತದೆ. ಎಳ್ಳು ಬೆಲ್ಲದ ಸೇವನೆ, ಹಂಚಿಕೆ, ದಾನ, ಧರ್ಮ ಈ ಸಂಕ್ರಾಂತಿಯ ವಿಶೇಷ. ವಿವಿಧ ಆಕಾರದ ಸಕ್ಕರೆ ಅಚ್ಚುಗಳೊಂದಿಗೆ ಎಳ್ಳು ಬೆಲ್ಲ ಹಂಚುವ ಸಂಭ್ರಮ ಸಂಕ್ರಾಂತಿಯ ನಂತರದ ತಿಂಗಳವರೆಗೂ ಕಾಣಸಿಗುತ್ತದೆ. ಪುಟ್ಟ ಪುಟ್ಟ ಹೆಣ್ಣುಮಕ್ಕಳು ಮನೆಮನೆಗೆ ಹೋಗಿ ಎಳ್ಳು ಬೀರುವ ದೃಶ್ಯ ದಶಕದ ಹಿಂದೆ ಕಂಡು ಬಂದಷ್ಟು ಈಗ ಕಾಣದಿದ್ದರೂ ಎಳ್ಳು ಬೀರುವ ನೋಟವಂತೂ ಅಲ್ಲಲ್ಲಿ ಕಾಣಸಿಗುತ್ತದೆ. ಭೋಗಿ ಹಬ್ಬ ಪೊಂಗಲ್ ಹೀಗೆ ಅನೇಕ ಹೆಸರುಗಳಿಂದ ಸಂಕ್ರಾಂತಿ ಭಾರತದ ವಿವಿಧ ಭಾಗಗಳಲ್ಲಿ ಆಚರಣೆಯಲ್ಲಿದೆ.
ನೇಸರನ ರಥ ಬದಲಾವಣೆಯ ಪರ್ವಕಾಲ
ಹೆಣ್ಣು ಮಕ್ಕಳು ಎಳ್ಳು-ಬೆಲ್ಲದ ಸಿಹಿಯನ್ನು ಮನೆಮನೆಗಳಿಗೆ ಮುಟ್ಟಿಸುವ ಸಮಯ ಸಂಕ್ರಾಂತಿ. ಮಹಿಳೆಯರು ಅಕ್ಕಪಕ್ಕದವರೊಂದಿಗೆ ಬೆರೆಯುವ ಮೂಲಕ, ಸಾಮಾಜಿಕವಾಗಿ ಒಂದಿಷ್ಟು ಮುನ್ನೆಲೆಗೆ ಬರುವ ಹೊತ್ತು. ಸಂಕ್ರಾಂತಿಯ ಈ ಸಂಭ್ರಮ ಸದಾ ಇರಬೇಕಿದೆ.ಭಾರತೀಯ ಸಂಸ್ಕೃತಿಯಲ್ಲಿ ಸೃಷ್ಟಿಯ ಲೀಲೆಗನುಗುಣವಾಗಿ, ಪ್ರಕೃತಿಯೊಂದಿಗಿನ ಕೊಡುಕೊಳ್ಳುವಿಕೆಯ ಆವರ್ತಕ್ಕೆ ಸರಿಯಾಗಿ ಬದುಕು ನಡೆಸುವ, ಹಬ್ಬ ಆಚರಿಸುವ ಆ ಮೂಲಕ ಬದುಕನ್ನು ಒಂದು ದರ್ಶನಕ್ಕಾಗಿ ನೋಡುವ ಸತ್ಸಂಪ್ರದಾಯವಿದೆ. ಭೂಮಿ ಮೇಲಿನ ನಮ್ಮ ದಿನನಿತ್ಯದ ಬದುಕು ಸಂಪೂರ್ಣ ಸೂರ್ಯಕೇಂದ್ರಿತವಾದುದು. ಬೆಳ್ಳಿರಥವೇರಿ ಬರುವ ನೇಸರನ ಉದಯದೊಂದಿಗೆ ನಾವೂ ದಿನವನ್ನು ಆರಂಭಿಸಿ, ಅವನು ಕಿತ್ತಳೆಯಂದದಲಿ ಕಿರಿದಾಗಿ ಮರೆಯಾಗುವ ಅಸ್ತದೊಂದಿಗೆ ನಮ್ಮೆಲ್ಲ ಕಾಯಕ ಮುಗಿಸುವ ಸಂಪ್ರದಾಯ ನಡೆಯುತ್ತಲೇ ಇದೆ. ಸಂಕ್ರಾಂತಿ, ಸೂರ್ಯ ತನ್ನ ಪಥ ಬದಲಿಸುವ, ಶುಭಕಾರ್ಯಗಳಿಗೆ ವಿಶೇಷವಾದ ಉತ್ತರಾಯಣ ಆರಂಭವಾಗುವ ಮಹತ್ವದ ಹೊತ್ತು.
ಬಹಳ ಹಿಂದಿನಿಂದಲೂ ಸೂರ್ಯನನ್ನು ಆರಾಧಿಸುವ ಪದ್ಧತಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲೂ ಕಾಣಬಹುದು. ನಮ್ಮ ಸಂಸ್ಕೃತಿಯಲ್ಲಂತೂ, ರಾಜರನ್ನು ಸೂರ್ಯವಂಶ, ಚಂದ್ರವಂಶದವರೆಂದು ಕರೆಯುವುದೂ ಇತ್ತು. ಅಲ್ಲದೆ, ಸೂರ್ಯನಾರಾಯಣನಿಗೆ ದೇವಾಲಯಗಳನ್ನು ಕಟ್ಟಿ ಪೂಜಿಸುವ ಸಂಪ್ರದಾಯವೂ ಇದೆ. ವಿಶ್ವವಿಖ್ಯಾತ ಕೋನಾರ್ಕ್ ಸೂರ್ಯ ದೇವಾಲಯ, ಕಾಶ್ಮೀರದ ಮಾರ್ತಾಂಡ ಸೂರ್ಯ ದೇವಾಲಯ ಇಂತಹ ಪ್ರಾಚೀನ ದೇಗುಲಗಳಲ್ಲದೆ ನಂತರದ ಶತಮಾನಗಳಲ್ಲಿ ಕಟ್ಟಿದ್ದ ಸೂರ್ಯ ದೇವಾಲಯಗಳು ಸೂರ್ಯನ ಆರಾಧನೆಗೆ ಸಾಕ್ಷಿಯಾಗಿವೆ. ಶಾಸ್ತ್ರಬದ್ಧವಾಗಿ ದೇವಾಲಯಗಳನ್ನು ನಿರ್ಮಿಸುವಾಗ ಗರ್ಭಗುಡಿಯಲ್ಲಿರುವ ಮೂಲ ಪ್ರತಿಮೆಗೆ ನಿರ್ದಿಷ್ಟ ದಿನಗಳಲ್ಲಿ ಸೂರ್ಯರಶ್ಮಿ ಮುಟ್ಟಬೇಕೆಂದು ನಿಯಮ ಇದೆ ಎನ್ನುವುದಕ್ಕೆ ಅನೇಕ ದೇವಾಲಯಗಳಲ್ಲಿ ವಿಶೇಷ ದಿನಗಳಂದು ಸೂರ್ಯರಶ್ಮಿ ಸ್ಪರ್ಶಿಸುವ ವೈಶಿಷ್ಟ್ಯಪೂರ್ಣ ಸನ್ನಿವೇಶಗಳನ್ನು ನೋಡುತ್ತೇವೆ.
ಬೆಂಗಳೂರಿನ ಗವಿಗಂಗಾಧರೇಶ್ವರನ ಸನ್ನಿಧಿಗೆ ಸಂಕ್ರಾಂತಿಯಂದು ಸೂರ್ಯನ ಕಿರಣಗಳು ಸ್ಪರ್ಶಿಸುವ ಮನಮೋಹಕ ಕ್ಷಣಗಳು ಈ ಶಿಲ್ಪಶಾಸ್ತ್ರಕ್ಕೊಂದು ಅಪೂರ್ವ ಉದಾಹರಣೆಯಾಗಿದೆ. ಅಲ್ಲದೆ ಸೂರ್ಯನ ಅಸ್ತಿತ್ವಕ್ಕೂ ನಮ್ಮ ಹಿರಿಯರು ನೀಡಿದ ಗೌರವಕ್ಕೂ ಸಾಕ್ಷಿಯಾಗಿದೆ.
ಸೂರ್ಯ, ಪ್ರತಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಮಣವಾಗುವುದುಂಟು. ಆದರೆ ಕಟಕ ರಾಶಿಯನ್ನು ಪ್ರವೇಶಿಸುವ ದಕ್ಷಿಣಾಯನದ ಆರಂಭ ಮತ್ತು ಮಕರ ರಾಶಿಯನ್ನು ಪ್ರವೇಶಿಸುವ ಮಕರ ಸಂಕ್ರಮಣಗಳು ಮತ್ತು ಉತ್ತರಾಯಣದ ಪುಣ್ಯಕಾಲ ಆರಂಭವಾಗುವ ವಿಶೇಷವಾಗಿದೆ. ಪ್ರಾಯಶಃ ಹಗಲು ದೊಡ್ಡದಾಗುವ ಉತ್ತರಾಯಣದ ಕಾಲ ಹೆಚ್ಚಿನ ಶುಭಕಾರ್ಯಗಳಿಗೆ ಸಮಂಜಸವೇನೋ! ನಮ್ಮಲ್ಲಿ ಹಬ್ಬಗಳೂ ಎರಡು ಮುಖ್ಯವಾದ ಬಯಕೆಗಳನ್ನು ಹೊಂದಿರುತ್ತವೆ. ಒಂದು, ಬಹಿರಂಗದಲ್ಲಿ ಕಾಣುವ ಲೌಕಿಕ, ಕಣ್ಣಿಗೆ ಕಾಣುವ ಬದುಕನ್ನು ಸಮೃದ್ಧವಾಗಿ ಬದುಕುವುದು ಹಾಗೂ ಎರಡನೆಯದು ಅಲೌಕಿಕದ ಅಪೇಕ್ಷೆ. ಕಾಣದ ಅನುಭೂತಿಗೆ ಹಾತೊರೆಯುವುದು.
ಧರ್ಮಾತೀತವಾಗಿ, ಭೂಮಿ ಮೇಲಿನ ಎಲ್ಲ ಮನುಷ್ಯರ ಅಂತರಂಗದ ಅನಿಸಿಕೆ ಇದೇ ಆಗಿದೆ. ಹಬ್ಬಗಳು, ಆ ಹೊತ್ತಿನ ಪ್ರಾರ್ಥನೆಗಳು, ಆಚರಣೆಗಳು ಹೀಗೆ ಲೌಕಿಕ ಮತ್ತು ಅಲೌಕಿಕದ ನಡುವಿನ ಸೇತುವೆಯಾಗಿವೆ. ಮನುಷ್ಯ, ಅಗತ್ಯಕ್ಕೆ ಬೇಕಾದುದನ್ನು ಬೆಳೆಯುವ, ಬೆಳೆದ ಬೆಳೆಯನ್ನು ಪೂಜಿಸಿ ಕೃತಜ್ಞತೆ ಸಲ್ಲಿಸುವ, ಹಂಚಿ ತಿನ್ನುವ ಕೊಡುಕೊಳ್ಳುವಿಕೆಯ ಪರಿಪಾಠ ಹಬ್ಬಗಳಿಂದಲೇ ಅಥವಾ ಹಬ್ಬಗಳ ಮೂಲಕವೇ ಪೂರ್ಣವಾಗುವುದು. ಮಾನವನ ದೀರ್ಘವಾದ ಚರಿತ್ರೆಯಲ್ಲಿ ಸಂಸ್ಕೃತಿಯ ಅನೇಕ ಸ್ವರೂಪಗಳು ಕಂಡು ಬಂದಿವೆ. ಕೆಲವು ಕಾಲಕಾಲಕ್ಕೆ ತಕ್ಕುದಾದ ಹೊಸರೂಪಗಳನ್ನು ತನ್ನದಾಗಿಸಿಕೊಂಡಿವೆ.
ಸತ್ವಭರಿತ ಹಾಗೂ ವಿಕಾಸಕ್ಕೆ ಪೂರಕವಾದ ತತ್ತ್ವಭರಿತ ಆಚರಣೆಗಳು ಇಂದಿಗೂ ನಿರಂತರವಾಗಿ ಪರಂಪರೆಯಾಗಿ ನಮ್ಮೊಂದಿಗಿವೆ. ಅಷ್ಟಕ್ಕೂ ಮನುಷ್ಯನ ಆನಂದ ಹಾಗೂ ನೆಮ್ಮದಿಗೆ ಮಿಗಿಲಾದ ಸಂಸ್ಕೃತಿಯೇ ಇಲ್ಲ. ಹಬ್ಬಗಳೂ ಮನುಷ್ಯನ ಆನಂದ ಮತ್ತು ನೆಮ್ಮದಿಯ ಬದುಕಿಗೆ ತೋರಣದಂತೆ ಶೋಭಾಯಮಾನವಾಗಿ ಇರಲಿ, ಆ ಮೂಲಕ ಸಂಸ್ಕೃತಿಯ ಬಂಡಿ ಹಲವು ಹೊಸಚಕ್ರಗಳೊಂದಿಗೆ ಮಾನವನ ಮಾನಸಿಕ ವಿಕಾಸದ ಜತೆಗೆ ಮುಂದುವರಿಯಲಿ ಎನ್ನುವ ಹಾರೈಕೆಯನ್ನು ಸಂಕ್ರಾಂತಿಯ ಹೊಸ್ತಿಲಲ್ಲಿ ಮಾಡೋಣ.
ಭಾರತೀಯರ ಮಹಾಪರ್ವತಗಳಲ್ಲಿ ಅತ್ಯಂತ ಮುಖ್ಯವಾದ ಒಂದು ಪರ್ವ ಸಂಕ್ರಾಂತಿ. ಮಕರ ಸಂಕ್ರಾಂತಿ, ಮಕರ ಸಂಕ್ರಮಣ, ಉತ್ತರಾಯಣ ಪುಣ್ಯಕಾಲ ಎಂದೂ ಶಾಸ್ತ್ರಗಳು ಇದನ್ನು ಕರೆಯುತ್ತವೆ. ತಮಿಳುನಾಡಿನಲ್ಲಿ ಪೊಂಗಲ್ ಎಂಬ ಹೆಸರಿನಿಂದ ಕರೆಯುತ್ತಾರೆ. ಜನಸಾಮಾನ್ಯರು ‘ಎಳ್ಳಿನ ಹಬ್ಬ ಎನ್ನುವುದೂ ಉಂಟು. ಜ್ಯೋತಿಷ್ಯಶಾಸ್ತ್ರ ಸೂರ್ಯನ ಚಲನೆಯ ಆಧಾರವಾಗಿ ದಕ್ಷಿಣಾಯನ, ಉತ್ತರಾಯಣ ಎಂದು ಗುರುತಿಸುತ್ತದೆ. ಉತ್ತರಾಯಣ ಪುಣ್ಯಕಾಲದಿಂದ ಕತ್ತಲ ಅವಧಿ ಹರಿದು ಬೆಳಕಿನ ಅವಧಿ ಹೆಚ್ಚುತ್ತಾ ಹೋಗುತ್ತದೆ. ಚಳಿಯ ಕೊರೆತ ಕಡಿಮೆಯಾಗಿ ವಾತಾವರಣದಲ್ಲಿ ತಾಪ ಹೆಚ್ಚತ್ತಾ ಹೋಗುತ್ತದೆ. ಸಸ್ಯಾಭಿವೃದ್ಧಿಗೂ ಪೂರಕವಾಗುತ್ತದೆ. ಅಂದರೆ ಸೂಚ್ಯವಾಗಿ ಉತ್ತರಾಯಣ ಅಭಿವೃದ್ಧಿಯ ಪರ್ವಕಾಲ.
ದೇವತೆಗಳಿಗೆ ಪರ್ವ ಎನ್ನುವುದು ಒಂದು ದಿನವಾದರೆ ಉತ್ತರಾಯಣ ಹಗಲಿನ ಕಾಲ. ಹಾಗಾಗಿ ಹಗಲಿನ ಹೊತ್ತಿನಲ್ಲಿ ದೇವತೆಗಳಿಗೆ ಚಿಂತನೆಯಲ್ಲಿ ನಾವು ಮಾಡುವ ಸಾತ್ವಿಕ ಕರ್ಮಗಳು ಹೆಚ್ಚು ಫಲಪ್ರದ ಎನ್ನುವ ಮಾತಿದೆ. ಇದನ್ನೇ ಋಷಿಮುನಿಗಳು ಉತ್ತರಾಯಣವೇ ದೇವತೆಗಳಿಗೆ ಪ್ರಿಯವಾಗಿದ್ದು ದೇವಕಾರ್ಯ ಶುಭಕಾರ್ಯಗಳಿಗೆ ಪ್ರಶಸ್ತವಾಗಿದೆ. ಚೌಲ, ಉಪನಯನ, ಬ್ರಹ್ಮಚರ್ಯದ ಕೊನೆಯಲ್ಲಿ ಮಾಡುವ ವ್ರತಚತುಷ್ಟಯ, ಗೋದಾನ, ವಿವಾಹ ಮುಂತಾದ ಮಂಗಳ ಕಾರ್ಯಗಳನ್ನು ದೇವತೆಗಳಿಗೆ ಪ್ರಿಯವಾಗಿರುವ ಈ ಸಮಯದಲ್ಲೇ ಮಾಡುವುದು ಉತ್ತಮ. ಮಕರ ಸಂಕ್ರಮಣದ ಹೊತ್ತಿಗೆ ಬೆಳಗ್ಗೆ ಸ್ನಾನ ಮಾಡದಿರುವವನು ಬಹಳ ಕಾಲ ರೋಗದಿಂದ ನರಳುತ್ತಾನೆ ಎನ್ನುವ ಮಾತಿದೆ. ಸಂಕ್ರಾಂತಿಯಂದು ಅಗತ್ಯವಿರುವವರಿಗೆ ದಾನ ಮಾಡಿದರೆ ಮುಂದಿನ ಬದುಕಿನಲ್ಲಿ ಒಳ್ಳೆಯದನ್ನೇ ಪಡೆಯುತ್ತಾನೆ. ಅದರಲ್ಲಿ ತಿಲ ಹೆಚ್ಚು ಬಳಕೆಗೆ ಬರುವ ವಸ್ತು. ‘ರವೇಃ ಸಂಕ್ರಮಣೌ ರಾಶೌ ಎನ್ನುವ ಮಂತ್ರೋಕ್ತಿಯಂತೆ ಸಂಕ್ರಮಣ ಕಾಲದಲ್ಲಿ ರವಿಯ ಗತಿ ಹೆಚ್ಚು ಪರ್ಫೆಕ್ಟ್ ಆಗಿರುತ್ತದೆ.
ಸಂಕ್ರಾಂತಿ ಹಬ್ಬದ ಮತ್ತೊಂದು ಭಾಗವೆಂದರೆ ನದಿಸ್ನಾನ, ಯಾವ ಸಂದರ್ಭದಲ್ಲಿ ನದಿ ಸ್ನಾನ ಮಾಡಬೇಕು ಎಂಬುದನ್ನು ಶಾಸ್ತ್ರ ವಿವರಿಸುತ್ತದೆ: ಪುಣ್ಯಕಾಲದ 20 ಘಳಿಗೆ ಮೊದಲು ಮತ್ತು ನಂತರ, ಈ ಸಂದರ್ಭದಲ್ಲಿ ನದಿ ಸ್ನಾನಕ್ಕೆ ವಿಶೇಷ ಆದ್ಯತೆ. ಮೊದಲಿಗೆ ನದಿ ಸ್ನಾನ ರೂಢಿಯಲ್ಲಿತ್ತು. ಅದಕ್ಕೆ ಅವಗಾಹನ ಸ್ನಾನ ಎಂತಲೂ ಕರೆಯುತ್ತಾರೆ. ಸೂರ್ಯನ ಗತಿ ಬದಲಾವಣೆ ಆಗುವಾಗ ನದಿ ಸ್ನಾನ ಮಾಡುವುದರಿಂದ ಆಗುವ ಅನುಭವವೇ ಬೇರೆ. ಸಂಕ್ರಾಂತಿಯಂದು ನದಿಯಲ್ಲಿ ಶಕ್ತಿ ಸಂಕ್ರಮಣವಾಗುತ್ತದೆ. ಹಾಗಾಗಿ ಅಂದು ನದಿಯಲ್ಲಿ ಸ್ನಾನ ಮಾಡುವುದರಿಂದ ನಮ್ಮೊಳಗೆ ಎನರ್ಜಿ ಸಂಚಲಿತವಾಗುತ್ತದೆ. ಕೆಲಸ ಕಾರ್ಯಗಳಲ್ಲಿ ನವೋಲ್ಲಾಸ ಬರುತ್ತದೆ. ಕೆಲವೊಮ್ಮೆ ರಾತ್ರೆ ಸಂಕ್ರಮಣ ಕಾಲ ಬರುತ್ತದೆ. ಅಂತಹ ಸಂದರ್ಭದಲ್ಲಿ ಬೆಳಗ್ಗೆ 20 ಘಳಿಗೆಯ ಕಾಲದಲ್ಲಿ ನದಿ ಸ್ನಾನ ಮಾಡಬಹುದು. ಇದು ಶರೀರದ ಕೊಳೆಯನ್ನು ತೊಳೆಯುವ ಮಲಾಪಕರ್ಷಣ ಸ್ನಾನವಲ್ಲ; ಮಾನಸಿಕ ದೋಷಗಳನ್ನು ತೊಳೆಯುವ ಪುಣ್ಯಸ್ನಾನವಾಗಿದೆ. ಅದಕ್ಕಾಗಿ ಅಂದು ಬಿಸಿನೀರಿನಿಂದ ಅಭ್ಯಂಗಸ್ನಾನವನ್ನು ಮಾಡುವುದಕ್ಕಿಂತ ತಣ್ಣೀರಿನಲ್ಲಿ ಸ್ನಾನ ಮಾಡುವುದು ಶ್ರೇಯಸ್ಕರ.
ಎಳ್ಳಿನ ಹಬ್ಬ ಎಂದೇ ಪ್ರಸಿದ್ಧವಾಗಿರುವ ಈ ಪರ್ವದಿನದಲ್ಲಿ ಎಳ್ಳನ್ನು ನಾನಾರೂಪಗಳಲ್ಲಿ ಬಳಸುತ್ತಾರೆ. ದೇವರಿಗೆ ಪೊಂಗಲ್ ನೈವೇದ್ಯ ಮಾಡುತ್ತಾರೆ. ಗೋವುಗಳಿಗೆ ವಿಶೇಷವಾಗಿ ಪೂಜೆ ನಡೆಯುತ್ತದೆ. ಕೆಲವೆಡೆ ಗೋವನ್ನು ಕಿಚ್ಚು ಹಾಯಿಸುವ ಪದ್ಧತಿಯಿದೆ. ಸಂಕ್ರಮಣ ಕಾಲದಲ್ಲಿ ಮಾಡಬೇಕಾದ ಇತರ ಕಾರ್ಯಗಳೆಂದರೆ ಪಿತೃಗಳ ಸ್ಮರಣೆ, ಆಶಕ್ತರಿಗೆ ದಾನ, ದೈವಿಕವಾದ ಸತ್ಸಂಗದಲ್ಲಿ ತೊಡಗಿಕೊಳ್ಳುವುದರಿಂದ ನಮ್ಮ ಮಾನಸಿಕ ಒತ್ತಡಗಳು ಪರಿಹಾರವಾಗುತ್ತವೆ. ಇದರ ಬಗ್ಗೆ ಯೋಗಿವರೇಣ್ಯರು ನಾಡಿ ಶೋಧನಾ ಗ್ರಂಥದಲ್ಲಿ ಸಂಕ್ರಮಣ ಕಾಲದಲ್ಲಿ ಇಡಾ, ಪಿಂಗಳ ನಾಡಿಗಳು ಸಂಕ್ರಮಣಗೊಳ್ಳುತ್ತವೆ ಎನ್ನುತ್ತಾರೆ. ಉತ್ತರಾಯಣ ಕಾಲದಲ್ಲಿ ಪುಣ್ಯಕಾಲದಲ್ಲಿ ಮೃತಪಟ್ಟವರಿಗೆ ಮೋಕ್ಷ ಸಾಧನೆಯಾಗುತ್ತದೆ ಎಂದು ಹೇಳುವುದು, ನಾಡಿ ವಿಜ್ಞಾನದ ಪ್ರಕಾರ ಉತ್ತರಾಯಣದ ದೇವತೆ ಯಾವಾಗ ದೇಹದಲ್ಲಿ ಜಾಗೃತನಾಗಿರುತ್ತಾನೋ ಆ ಹೊತ್ತಿನಲ್ಲಿ ಪ್ರಾಣಬಿಟ್ಟರೆ ಮೋಕ್ಷ ಎಂಬರ್ಥದಲ್ಲಿ. ಪ್ರಾಣಶಕ್ತಿ ಇಡಾ (ಎಡ), ಪಿಂಗಳ (ಬಲ) ಅದರ ಆಧಾರದ ಮಲೆ ಈ ಕಾಲನಿರ್ಣಯ ಮಾಡುತ್ತಾರೆ.
ಎಳ್ಳು ಬೆಲ್ಲವ ಹಂಚಿ ಒಳ್ಳೊಳ್ಳೆ ಮಾತಾಡುವ ಬನ್ನಿ
ಸಾಮಾನ್ಯವಾಗಿ ಆಶೀರ್ವಚನ ನೀಡುವಾಗ ನೀಡುವಾಗ ‘ಉತ್ತರೋತ್ತರ ಅಭಿವೃದ್ಧಿ ಸಿದ್ಧಿರಸ್ತು ಎನ್ನುತ್ತೇವೆ. ಉತ್ತರೋತ್ತರ ಎಂದರೆ ಪುರೋಭಿವೃದ್ಧಿ, ಶ್ರೇಯಸ್ಸು ಎಂದರ್ಥ. ಬದಲಾವಣೆಯ ಪರ್ವದಲ್ಲಿ ಒಳಿತಾಗಲಿ ಎಂಬುದೇ ಹಾರೈಕೆಯ ಹಿಂದಿನ ಸದಾಶಯ. ‘ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾ ಎನ್ನುವ ಆಶಯದಲ್ಲಿ ಎಲ್ಲರಿಗೂ ಒಳಿತನ್ನು ಬಯಸುವುದೇ ಭಾರತೀಯ ಧರ್ಮ.
ಜ್ಯೋತಿಷಶಾಸ್ತ್ರದ ರೀತ್ಯ ದ್ವಾದಶ ರಾಶಿಗಳಿವೆ. ಒಂದೊಂದು ರಾಶಿ ಹಾಗೂ ಸೂರ್ಯನ ಚಲನೆಗೆ ಸಂಬಂಧಿಸಿ ಒಂದು ವರ್ಷದಲ್ಲಿ ಹನ್ನೆರಡು ಸಂಕ್ರಮಣಗಳು ಬರುತ್ತವೆ. ಅದರಲ್ಲಿ ಮಕರ ಸಂಕ್ರಾಂತಿ ಮತ್ತು ಕರ್ಕಸಂಕ್ರಾಂತಿ ಮುಖ್ಯವೆಂದು ಗುರುತಿಸಲಾಗಿದೆ. ಧನು ರಾಶಿಯಿಂದ ಮಕರ ರಾಶಿಗೆ ಸೂರ್ಯ ಪ್ರವೇಶಿಸುವ ಕಾಲವೇ ಮಕರ ಸಂಕ್ರಾಂತಿ. ಮಕರ ಸಂಕ್ರಾಂತಿಯ ಶುಭಾರಂಭವೇ ಉತ್ತರಾಯಣ. ಉತ್ತರಾಯಣವನ್ನು ಎತ್ತರಾಯಣ, ಆಧಾನ ಕಾಲವೆಂತಲೂ ಕರೆಯುತ್ತಾರೆ. ತುಲಾ ರಾಶಿಯಿಂದ ಮೇಷ ರಾಶಿಯನ್ನು ಪ್ರವೇಶಿಸುವ ಹೊತ್ತಿಗೆ ಸೂರ್ಯನ ಪ್ರಖರತೆಯೂ ಹೆಚ್ಚುತ್ತಾ ಹೋಗುತ್ತದೆ. ಶೀತ ಕಳೆದು ತಾಪ ಹೆಚ್ಚಾಗುವ ಪರ್ವಕಾಲವಿದು. ಈ ಪರ್ವಕಾಲವೇ ಮಕರ ಸಂಕ್ರಮಣ ಪ್ರತಿ ತಿಂಗಳು ಸಂಕ್ರಮಣವಿರುವಾಗ ಮಕರ ಸಂಕ್ರಮಣಕ್ಕೆ ಯಾಕಿಷ್ಟು ಮಹತ್ತು ಎಂಬ ಜಿಜ್ಞಾಸೆ ಸಹಜ. ಅದನ್ನು ತಿಳಿದುಕೊಳ್ಳುವ ಮುನ್ನ ಸಂಕ್ರಮಣವನ್ನು ಗಮನಿಸೋಣ.
ಸಂಕ್ರಮಣ ಎಂದರೇನು?
ಮಕರ ಸಂಕ್ರಾಂತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡೋಣ. ಕ್ರಮಣ ಎಂದರೆ ಕ್ರಮಿಸುವುದು, ಪ್ರಯಾಣ ಎಂದರ್ಥ. ಧನು ರಾಶಿಯಿಂದ ಮಕರ ರಾಶಿಯತ್ತ ಸೂರ್ಯನ ಪ್ರವೇಶ ಆರಂಭವಾಗುವುದೇ ಟಿ ಕ್ರಮಣ. ಸೂರ್ಯನ ಪ್ರವೇಶದೊಂದಿಗೆ ವಾತಾವರಣದಲ್ಲಿ ಬದಲಾವಣೆ ಕಂಡು ಬರುತ್ತದೆ. ಅಂದರೆ ಧನುರ್ಮಾಸದ ಕೊರೆವ ಚಳಿ ಕಳೆದು ವಾತಾವರಣದಲ್ಲಿ ಸ್ವಲ್ಪ ತಾಪ ಶುರುವಾಗುತ್ತದೆ. ಅದುವೇ ಕ್ರಮಣ. ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ ಸೂರ್ಯ ತನ್ನ ಮಗ (ಶನಿ)ಯ ಮನೆಗೆ ಪ್ರವೇಶಿಸುತ್ತಾನೆ. ಸೂರ್ಯನ ಮಡದಿ ಛಾಯಾದೇವಿಯ ಪುತ್ರನೇ ಶನಿ. ಆದರೆ ಶನಿ ಮತ್ತು ಸೂರ್ಯರ ನಡುವೆ ವೈರತ್ವ ಒಂದರ್ಥದಲ್ಲಿ ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಶತ್ರುವಿನ ಮನೆಯನ್ನು ಪ್ರವೇಶಿಸಿದರೂ ತನ್ನ ಪ್ರಭಾವದ ಕಾರಣ ಶತ್ರುವಿನಲ್ಲೂ ಮಿತ್ರತ್ವ ಭಾವ ಉಂಟು ಮಾಡುತ್ತಾನೆ. ಹಾಗಾಗಿ ಇದು ಪರ್ವ ಕಾಲ. ಕಟ್ಟದ್ದನ್ನು ಅಳಿಸಿ ಒಳಿತನ್ನು ಬಯಸುವ ಸಂದರ್ಭವಿದು. ಅದುವೇ ಟಿ ಕ್ರಮಣ. ಒಟ್ಟಾರೆಯಾಗಿ ಸೂರ್ಯನ ಚಲನೆಗೆ ಆಧಾರವಾಗಿ ಕಾಣಸಿಗುವ ಬದಲಾವಣೆಯೇ ಕ್ರಮಣ.
ಮಕರ ಸಂಕ್ರಾಂತಿಯ ಕಾಲದಲ್ಲಿ ಸೂರ್ಯನ ಚಲನೆ ಮಕರ ರಾಶಿಯಲ್ಲಿ ಆಗುವುದರೊಂದಿಗೆ ಮೂರು ನಕ್ಷತ್ರಗಳಲ್ಲಿ ಆತನ ಪ್ರಭಾವ ಉಂಟಾಗುತ್ತದೆ. ಅವೆಂದರೆ ಉತ್ತರಾಷಾಢ, ಶ್ರವಣ ಮತ್ತು ಧನಿಷ್ಠ, ಜ್ಯೋತಿಷಶಾಸ್ತ್ರ ಪ್ರಕಾರ ಉತ್ತರಾಷಾಢ ನಕ್ಷತ್ರ ರವಿ ಅಧಿಪತಿ. ಬ್ರಹ್ಮ ಅಧಿದೇವತೆ. ಶ್ರವಣ ನಕ್ಷತ್ರಕ್ಕೆ ಚಂದ್ರ ಅಧಿಪತಿ. ವಿಷ್ಣು ಅಧಿದೇವತೆ. ಮತ್ತು ಧನಿಷ್ಠಕ್ಕೆ ಕುಜ ಅಧಿಪತಿ. ಅಷ್ಟವಸುಗಳು ಅಧಿದೇವ.ೆ ಅಂದರೆ ಮಕರ ರಾಶಿಗೆ ಸೂರ್ಯನ ಪ್ರವೇಶ ಆಗುವ ಮೂಲಕ ಸೃಷ್ಟಿ ಸ್ಥಿತಿಯ ಪಾಲನೆಯಾಗುತ್ತದೆ ಎಂಬುದೊಂದು ಭಾವ. ಗರುಡ ಪುರಾಣದಲ್ಲಿ ನಾಭಿಯನ್ನು ಶನಿಯ ಸ್ಥಾನವೆಂದು ಗುರುತಿಸಲಾಗಿದೆ. ಭಗವಾನ್ ವಿಷ್ಣುವಿನ ನಾಭಿಯಲ್ಲಿ ಪ್ರಜಾಪತಿ ಬ್ರಹ್ಮ ಕಮಲೋದ್ಭವನಾಗುತ್ತಾನೆ. ಶನಿಯ ಅಧಿದೇವತೆ ಯಮ. ಯಮ ನ್ಯಾಯಪಾಲಕ, ಶನಿ ಕರ್ಮಸೂಚಕ. ಸರಳವಾಗಿ ಹೇಳಬೇಕೆಂದರೆ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಈ ಶರೀರವು ಕರ್ಮಪ್ರೇರಿತವಾಗಿದೆ, ಯಮನಿಂದ ಸೂಚಿಸಲ್ಪಟ್ಟಿದೆ. ಅರ್ಥಾತ್ ಮನುಷ್ಯನಾದವನು ನೀತಿ, ನಿಯಮಗಳನ್ನು ಮೀರಬಾರದು. ಅದಕ್ಕೆ ಅನುಗುಣವಾಗಿ ನಡೆಯಬೇಕು ಎನ್ನುವುದೇ ಮಕರ ಸಂಕ್ರಾಂತಿಯ ಸೂಚ್ಯ ಸಂದೇಶ.
ಆಚರಣೆ ಎಂದರೇನು?
ಮಕರ ಮೊದಲಾದ ಆರು ರಾಶಿಗಳಲ್ಲಿ ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಸಂಚರಿಸುತ್ತಾನೆ. ಅಂದರೆ ಉತ್ತರಾಯಣ ಪುಷ್ಯಮಾಸದಲ್ಲಿ ಆರಂಭವಾಗಿ ಆಷಾಢಮಾಸದಲ್ಲಿ ಅಂತ್ಯವಾಗುತ್ತದೆ. ಈ ಸಂದರ್ಭದಲ್ಲಿ ಶಿಶಿರ, ವಸಂತ, ಗ್ರೀಷ್ಮ ಋತುಗಳು ಬರುತ್ತವೆ. ಇವು ನಿರಯನ ಉತ್ತರಾಯಣದ ಪ್ರಾರಂಭ ಮತ್ತು ಮುಗಿಯುವ ಕಾಲಗಳಾಗಿವೆ. ಅಯನಾಂಶದ ಕಾರಣದಿಂದ ಇದು ಕಾಲಕಾಲಕ್ಕೆ ಬದಲಾಗುತ್ತದೆ. ಆದರೂ ಸಾಯನ ಉತ್ತರಾಯಣಕಾಲ ಕರ್ಮಾಚರಣೆಗೆ ಯೋಗ್ಯವಲ್ಲ ಎನ್ನುವ ನಂಬುಗೆಯಿದೆ.
ಉತ್ತರಾಯಣದ ಆರು ತಿಂಗಳ ಅವಧಿಯನ್ನು ದೇವತೆಗಳ ಒಂದು ಹಗಲಿನ ಸಮಾನವೆಂದೂ ಜ್ಯೋತಿಷಶಾಸ್ತ್ರವು ಉಲ್ಲೇಖಿಸುತ್ತದೆ. ಉತ್ತರಾಯಣ ಪುಣ್ಯಕಾಲದಲ್ಲಿ ಮದುವೆ, ಮುಂಜಿ ಮತ್ತಿತರ ಶುಭಕಾರ್ಯಗಳನ್ನು ಮಾಡುವುದು ಶ್ರೇಷ್ಠವಾಗಿದೆ. ಮಹಾಭಾರತದಲ್ಲಿ ಭೀಷ್ಮ ಪಿತಾಮಹ ಉತ್ತರಾಯಣ ಪುಣ್ಯಕಾಲಕ್ಕೆ ಕಾಯುತ್ತಿರುತ್ತಾನೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಈ ಕಾಲವನ್ನು ಅಗ್ನಿ, ಜ್ಯೋತಿಸ್ಸು, ಅಹಸ್ಸು, ಶುಕ್ಲ ಎಂದೂ ಕರೆಯುತ್ತಾರೆ. ಈ ಕಾಲದಲ್ಲಿ ಮೃತರಾದವರಿಗೆ ‘ಪುನರ್ಜನ್ಮನ ವಿದ್ಯತೇ ಎಂದರೆ ಪುನರ್ಜನ್ಮ ಪ್ರಾಪ್ತಿಯಾಗುವುದಿಲ್ಲ. ಅವರು ಮೋಕ್ಷವನ್ನು ಹೊಂದುತ್ತಾರೆ ಎನ್ನುವ ನಂಬುಗೆಯಿದೆ. ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ ಉತ್ತರಾಯಣ ಪುಣ್ಯಕಾಲದಲ್ಲಿ ಸೂರ್ಯನು ಉತ್ತರ ಧ್ರುವರೇಖೆಯಲ್ಲಿ ಕಾಣುತ್ತಾನೆ. ಉತ್ತರಾಯಣ ಪುಣ್ಯಕಾಲದಲ್ಲಿ ಭೂಮಿಯ ಉತ್ತರ ಗೋಲಾರ್ಧದ ಅತಿ ಉದ್ದದ ದಿನ ಹಾಗೂ ದಕ್ಷಿಣ ಗೋಲಾರ್ಧದ ಅತಿ ಚಿಕ್ಕ ದಿನವಾಗಿದೆ. ಹಾಗಾಗಿ ಮಕರ ರಾಶಿಯಂದು ಭೂಮಿಯ ಮೇಲೆ ಸೂರ್ಯನು ನೇರವಾಗಿ ಪ್ರಕಾಶಿಸಲು ಆರಂಭಿಸುತ್ತಾನೆ.
ಎಳ್ಳು ಬೆಲ್ಲದಾನದ ಮಹತ್ವ
ಉತ್ತರಾಯಣ ಪುಣ್ಯಕಾಲದಲ್ಲೇಕೆ ಎಳ್ಳು ಬೆಲ್ಲವನ್ನು ದಾನ ಮಾಡಬೇಕು ಎಂಬ ಪ್ರಶ್ನೆ ಸಹಜ. ವೈಜ್ಞಾನಿಕ ಹಾಗೂ ಜ್ಯೋತಿಷ್ಯ ದೃಷ್ಟಿಕೋನದಲ್ಲಿ ನೋಡುವುದಾದರೆ, ಎಳ್ಳು ಶನಿಯನ್ನು ಬೆಲ್ಲ ಸೂರ್ಯನನ್ನು ಸಂಕೇತಿಸುತ್ತದೆ. ಎಳ್ಳು ಸೃಷ್ಟಿಯಾದರೆ, ಬೆಲ್ಲ ಮಧುರತೆಯ ಸಂಕೇತ. ಅಂದರೆ ಉತ್ತರಾಯಣ ಪುಣ್ಯಕಾಲ ಸೃಷ್ಟಿಯ ಮಧುರತೆಯನ್ನು ಸೂಚಿಸುತ್ತದೆ. ಜ್ಯೋತಿಷದ ರೀತ್ಯ ಶತ್ರುವಿಗೆ ಪ್ರಿಯವಾದ ವಸ್ತುವನ್ನು (ಶನಿಗೆ ಎಳ್ಳು) ನೀಡುವ ಮೂಲಕ ಆತನ ಮನಪರಿವರ್ತನೆ ಮಾಡಿ ಮಿತ್ರನಾಗಿಸಿಕೊಳ್ಳಬಹುದು (ರವಿಗೆ ಬೆಲ್ಲ) ಎನ್ನುವುದೇ ಎಳ್ಳುಬೆಲ್ಲ ಬೀರುವ ತಾತ್ವಿಕ ಅಂತರಾರ್ಥ. ಚಳಿಗಾಲದಲ್ಲಿ ತೇವಾಂಶ ಹೆಚ್ಚಿರುವುದರಿಂದ ಚರ್ಮ ಒಡೆಯುತ್ತದೆ. ದೇಹದ ಸೌಂದರ್ಯ ಹಾಳಾಗುತ್ತದೆ. ಚಳಿಗಾಲಕಳೆದು ಉತ್ತರಾಯಣ ಪುಣ್ಯಕಾಲ ಶುರುವಾಗುವ ಸಂದರ್ಭದಲ್ಲಿ ತೈಲಾಂಶ ಹೆಚ್ಚಿರುವ ಎಳ್ಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೌಷ್ಠಿಕಾಂಶವನ್ನು ಪೂರೈಸುತ್ತದೆ.
ಸಂಕ್ರಮಣ ಕಾಲದಲ್ಲಿ ಎಳ್ಳಿನ ದಾನವು ಅಕ್ಷಯಫಲವನ್ನೇ ಕೊಡುತ್ತದೆ ಎನ್ನುವುದು ಶಾಸ್ತ್ರಗಳ ಉಲ್ಲೇಖ. ಎಳ್ಳನ್ನು ಆರು ಬಗೆಯಾಗಿ ಬಳಸಬೇಕೆಂದು ಹೇಳಲಾಗಿದೆ: ಅಂದರೆ ಎಳ್ಳಿನಿಂದ ಮೈಗೆ ಉಜ್ಜಿಕೊಳ್ಳುವುದು, ಎಳ್ಳನ್ನು ಹಚ್ಚಿಕೊಂಡು ಸ್ನಾನ ಮಾಡುವುದು, ಎಳ್ಳಿನಿಂದ ಹೋಮ ಮಾಡುವುದು, ಎಳ್ಳನ್ನು ದಾನ ಮಾಡುವುದು, ತಿನ್ನುವುದು ಮತ್ತು ಎಳ್ಳನ್ನು ಬಿತ್ತುವುದು ಹೀಗೆ ಆರು ವಿಧದಿಂದ ಮಕರ ಸಂಕ್ರಮಣ ದಿನ ಎಳ್ಳನದನು ಬಳಸಬೇಕು. ಆದರೆ ಬರಿಯ ಎಳ್ಳಿನ ದಾನ ಗ್ರಾಹ್ಯವಲ್ಲ. ಹಾಗಾಗಿ ಉತ್ತರಾಯಣ ಪುಣ್ಯಕಾಲದ ಸಂಕ್ರಮಣದ ದಿನದಂದು ಎಳ್ಳಿನೊಂದಿಗೆ ಬೆಲ್ಲವನ್ನು ಬೆರೆಸಿ ‘ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡು ಎಂದು ಹರಸುತ್ತಾ ದಾನವಾಗಿ ಕೊಡುವ ವಾಡಿಕೆಯಿದೆ.
Get in Touch With Us info@kalpa.news Whatsapp: 9481252093
Discussion about this post