ಸಹ್ಯಾದ್ರಿ ಪರ್ವತ ಶ್ರೇಣಿಯ ಸೆರಗಿನಲ್ಲಿ, ಪ್ರಾಕೃತಿಕ ಸೊಬಗನ್ನು ಹೊದ್ದು ಸದಾ ವೈಭವದಿಂದ ಕಂಗೊಳಿಸುವ ಶಿವಮೊಗ್ಗ ರಾಜಕೀಯ, ಧಾರ್ಮಿಕ, ಸಾಂಸ್ಕೃತಿ ಹಾಗೂ ಶೈಕ್ಷಣಿಕವಾಗಿಯೂ ಸಹ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಜಿಲ್ಲೆ.
ಇಂತಹ ಜಿಲ್ಲೆಗೆ ಕಳೆದ ಒಂದು ವರ್ಷದಿಂದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಹಿರಿಯ ಐಎಎಸ್ ಅಧಿಕಾರಿ ದಯಾನಂದ್ ಅವರು ವರ್ಗಾವಣೆಯಾಗಿ ನಿರ್ಗಮಿಸುತ್ತಿದ್ದಾರೆ. ತಾವು ಸೇವೆ ಸಲ್ಲಿಸಿದ 364 ದಿನಗಳಲ್ಲಿ ಜಿಲ್ಲೆಯ ಜನರೊಂದಿಗೆ ಆತ್ಮೀಯವಾದ ಒಡನಾಟ ಹೊಂದಿದ್ದ ದಯಾನಂದ್ ಅವರು ಜಿಲ್ಲೆಯಿಂದ ನಿರ್ಗಮಿಸುವ ಮುನ್ನ ಭಾವನಾತ್ಮಕ ಬಹಿರಂಗ ಪತ್ರವೊಂದನ್ನು ಜನತೆಗೆ ಬರೆದಿದ್ದು, ಆಡಳಿತಾತ್ಮಕ ದೃಷ್ಠಿಯಿಂದ ಮಾತ್ರವಲ್ಲದೇ, ಹೇಗೆ ಜನಪರವಿದ್ದರು, ಎಂತಹ ಸರಳ ಜೀವಿ ಎಂಬುದು ಇದರಲ್ಲಿ ವೇದ್ಯವಾಗುತ್ತದೆ.
ನಿರ್ಗಮಿತ ಜಿಲ್ಲಾಧಿಕಾರಿ ದಯಾನಂದ್ ಅವರು ಬರೆದ ಪತ್ರದ ಯಥಾವತ್ ಹೀಗಿದೆ:
ನಾನು ನಿಮ್ಮ ದಯಾನಂದ,
ಶಿವಮೊಗ್ಗ ಜಿಲ್ಲೆಯಲ್ಲಿ ನಾನು ಕಳೆದಂತಹ 364 ದಿನಗಳು ನನ್ನ ಬದುಕಿನ ಕೊನೆಯವರೆಗೂ ಸಹ ಚಿಲುಮೆ ರೂಪದಲ್ಲಿ ನೆನಪಿನಲ್ಲಿ ಉಳಿಯುವಂತಹ ಕ್ಷಣಗಳಾಗಿವೆ…
ಶಿವಮೊಗ್ಗ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರ, ಮಾದ್ಯಮ ಮಿತ್ರರ ಆತ್ಮೀಯತೆ, ಸಾರ್ವಜನಿಕರ ಅಭಿಮಾನ ಮತ್ತು ಪ್ರೀತಿ ನನ್ನ ಕೆಲಸಗಳಿಗೆ ಸ್ಪೂರ್ತಿಯಾಗಿತ್ತು..
ಶಿವಮೊಗ್ಗದ ಜನಮಾನಸದಲ್ಲಿ ನಾನು ನೀಡಿದಂತಹ ಒಂದು ಸಣ್ಣ ಕೊಡುಗೆಯನ್ನು ತಮ್ಮೆಲ್ಲರಿಗೂ ಸಹ ನೆನಪಿಸಬೇಕೆಂಬ ಆಶಯ ನನ್ನದಾಗಿದೆ…
ಗ್ರಾಮವಾಸ್ತವ್ಯ- ಸಾರ್ವಜನಿಕರ ಅಹವಾಲು ಸ್ವೀಕಾರದೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭವಾದಂತಹ ನನ್ನ ಕರ್ತವ್ಯ, ಶಿವಮೊಗ್ಗ ಜಿಲ್ಲೆಯಲ್ಲಿ ಜರುಗಿದ ಮೂರು ಚುನಾವಣೆಗಳಾದ ಮಹಾನಗರ ಪಾಲಿಕೆ, ಲೋಕಸಭಾ ಉಪ ಚುನಾವಣೆ, ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಜಾಗೃತಿಯು 75 ವರ್ಷಗಳ ಇತಿಹಾಸವನ್ನು ಮರುಕಳಿಸಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಲು ಶಿವಮೊಗ್ಗದ ಜನತೆಯ ಸಹಕಾರ ಅತ್ಯದ್ಭುತವಾಗಿತ್ತು,.
ದಸರಾ ರಜೆಯ ಮೋಜನ್ನು ಕಳೆಯಲು ಬಡತನ ರೇಖೆಗಿಂತ ಕೆಳಗಿನ ಮಕ್ಕಳಿಗೆ ಸಾದ್ಯವಾಗಲಿ ಎಂಬ ಉದ್ದೇಶದಿಂದ ಮಕ್ಕಳ ಹಬ್ಬವನ್ನು ಆರಂಭಿಸಿ ಸಹಕಾರ ಸಮನ್ವಯದ ಶಿಖರ ನೆನಪಿಸಿ, 10 ವರ್ಷಗಳ ನಂತರ ಆರಂಭಿಸಿದಂತಹ ಅತ್ಯದ್ಭುತ ಕಾರ್ಯಕ್ರಮ ಸಹ್ಯಾದ್ರಿ ಉತ್ಸವ ನಿಮ್ಮೆಲ್ಲರ ಮನದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂಬುದು ನನ್ನ ಆಶಯ.. ಇದರ ಜನ ಮಾನಸದ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಕಂಡುಬಂದಂತಹ ಕೆ ಎಫ್ ಡಿ ಕಾಯಿಲೆಯು ಸಮರೋಪಾದಿಯ ಕಾರ್ಯದಲ್ಲಿ ಹತೋಟಿಗೆ ತರಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಇದರ ಜೊತೆ ರಾಜ್ಯದ ಗಮನ ಸೆಳೆದ ಮಾದ್ಯಮದವರ ಸಹಕಾರವೂ ಸಹ ಅಸ್ಟೇ ಶ್ಲಾಘನೀಯ, ಜನರಲ್ಲಿ ಕೆ ಎಫ್ ಡಿ ಕಾಯಿಲೆಯ ಬಗ್ಗೆ ಜನರಿಗೆ ಆತ್ಮ ವಿಶ್ವಾಸ ಮೂಡಿಸಲು ಗ್ರಾಮ ವಾಸ್ತವ್ಯ ಮಾಡಿದ್ದು ನೆನೆಪುಳಿಯುವಂತದ್ದು..
ವಿದ್ಯಾರ್ಥಿಗಳಿಗೆ UPSC – KPSC ಪರೀಕ್ಷಾ ತರಭೇತಿಯ ಬಗ್ಗೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡಿದ ತರಭೇತಿ ನನಗೆ ತೃಪ್ತಿದಾಯಕವಾಗಿದೆ.
ಕೌಶಲ್ಯ ಶಾಲೆಯೊಂದಿಗೆ ಸದ್ದಿಲ್ಲದೆ ಬಡ ಮಕ್ಕಳಿಗೆ ಜೀವನ ಕೌಶಲ್ಯವನ್ನು ತಿಳಿಸುವ ಕಾರ್ಯವಂತು ಸಮನ್ವಯದ ಸಮಿತಿಯಿಂದ ಅತ್ಯದ್ಭುತವಾಗಿ ಮೂಡಿ ಬರುತ್ತಿದೆ..ರಾಜ್ಯದಲ್ಲಿನ ವಿದ್ಯಾರ್ಥಿಗಳಿಗೆ ವಾಯಸೇನಾ ನೇಮಕಾತಿಯಡಿ 556 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಲು ಸಹಕಾರ ನೀಡಿದ ವಾಯುಸೇನೆಗೆ ನನ್ನ ಶುಭಾಶಯಗಳು.ಅರಣ್ಯ ನಾಶವಾಗುತ್ತಿದೆ, ಮರಗಿಡಗಳನ್ನು ಉಳಿಸಿ ಎಂಬ ಪ್ರತಿದಿನದ ಕರೆಗೆ ನನ್ನ ಉತ್ತರವೆಂಬಂತೆ ಕಲ್ಲುಗಂಗೂರು ಅರಣ್ಯ ಪ್ರದೇಶದಲ್ಲಿ ಸ್ವಯಂ ಸೇವಕ ವಿದ್ಯಾರ್ಥಿಗಳ ಸಹಕಾರದಿಂದ 10 ಲಕ್ಷಕ್ಕೂ ಅಧಿಕ ಬೀಜಗಳನ್ನು 1500 ವಿದ್ಯಾರ್ಥಿಗಳಿಂದ ಬೀಜಗಳನ್ನು ಒಂದೇ ದಿನದಲ್ಲಿ ನೆಡಿಸಲು ಸಹಕಾರ ನೀಡಿದ ಅರಣ್ಯ ಇಲಾಖೆಗೆ ಅಭಿನಂದನೆಗಳು…
ಎಲ್ಲೆಡೆ ಪ್ಲಾಸ್ಟಿಕ್ ಹಾವಳಿ ಇದೆ ಎಂಬ ಕೂಗನ್ನು ದಮನಿಸಲು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗವನ್ನಾಗಿಸಲು ಮಾಡಿದ ಅಭಿಯಾನವಂತು ತುಂಬಾ ಖುಷಿ ತಂದಿದ್ದು, ಇದಕ್ಕೆ ಪ್ರತಿಕಾರವೆಂಬಂತೆ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಎರಡು ಪ್ಲಾಸ್ಟಿಕ್ ಕಾರ್ಖಾನೆಗಳನ್ನು ಮುಚ್ಚಿಸಿ, ಶಿವಮೊಗ್ಗದ ಜನತೆಗೆ ಬಟ್ಟೆಯಬ್ಯಾಗ್ ಗಳನ್ನು ಬಳಸುವಂತೆ ಸಲಹೆ ನೀಡಿ, ವಿವಿಧ ಸಮಾರಂಭಗಳಲ್ಲಿ ಹಾಗೂ ಕಛೇರಿಗೆ ಭೇಟಿಗಾಗಿ ಬರುವಂತಹವರಿಗೂ ಸಹ ಪ್ಲಾಸ್ಟಿಕ್ ರಹಿತ ಬೊಕ್ಕೆಗಳನ್ನು ಬಳಸುವಂತೆ ತಿಳಿಸಲು ಪ್ರೇರಣೆಯಾಯಿತು…
ಶಿವಮೊಗ್ಗ ಜಿಲ್ಲೆಯ ಯವ ಮನಸ್ಸುಗಳಿಗೆ ಸೈನಿಕರ ಬಗೆಗಿನ ಗೌರವ ದ ಪ್ರತೀಕಕ್ಕಾಗಿ ಕೇವಲ 15 ದಿನಗಳಲ್ಲಿ ಸೈನಿಕ ಪಾರ್ಕ್ ನಲ್ಲಿ ಸೈನಿಕರ ಶಿಲ್ಪ ಕಲಾಕೃತಿಗಳನ್ನು ತಯಾರಿಸಿ ನಿಮ್ಮಲ್ಲರ ಪ್ರೀತಿಗೆ ಪಾತ್ರನಾಗಿರುವೆ ಎಂದು ನಂಬಿರುತ್ತೇನೆ..
ಶಿವಮೊಗ್ಗ ನಗರದಲ್ಲಿ ಪರಿಸರದ ಕಾಳಜಿಯ ಬಗ್ಗೆ ಯೋಚಿಸುವಂತೆ ಮಾಡುವ ಸದುದ್ದೇಶದಿಂದ ಆರಂಭಿಸಿದ ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿ ವಿತರಣೆಯ 16 ನೇ ದಿನಕ್ಕೆ ಕೊನೆಯದಾಗಿ ನೀಡಿ ನನ್ನ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಗೆ ತೃಪ್ತಿದಾಯಕವಾಗಿ ಅಧಿಕಾರವನ್ನು ಹಸ್ತಾಂತರಿಸಿರುವೆ…
ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು
Discussion about this post