ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರತಿವರ್ಷವೂ ಮೇ 28ರ ಇಂದು ವಾರ್ಷಿಕ ಮುಟ್ಟಿನ ನೈರ್ಮಲ್ಯತೆಯ ಪ್ರಾಮುಖ್ಯತೆ ಎತ್ತಿ ಹಿಡಿಯಲು(ಎಂಎಚ್‌ಡಿ) ಮುಟ್ಟಿನ ನೈರ್ಮಲ್ಯ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನು 2014ರಿಂದ ಜರ್ಮನ್ನಿನ ಸರ್ಕಾರೇತರ ಸಂಸ್ಥೆಯಿಂದ(WASH) ಅಂದರೆ (Water Sanitation and Hygiene) ಪ್ರತಿವರ್ಷವೂ ಆಚರಿಸಲು ಆರಂಭವಾಗಿದ್ದು, ಪ್ರತಿ ಋತುಚಕ್ರದ ಆವರ್ತವು 28 ದಿನಕ್ಕೊಮ್ಮೆ ಆಗುವುದರಿಂದ, 5 ದಿನ ಸರಾಸರಿ ರಕ್ತಸ್ರಾವವಾಗುವುದರಿಂದ ಇದನ್ನು ಮೇ 28ರಂದೇ ಆಚರಿಸಲಾಗುತ್ತದೆ.
ಈ ದಿನದ ಆಚರಣೆಯ ಮುಖ್ಯ ಉದ್ದೇಶವೆಂದರೆ ಮುಟ್ಟಿನ ಪ್ರಕ್ರಿಯೆ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಿ ಮುಟ್ಟಿನ ಸುತ್ತ ಆವರಿಸಿರುವ ಸಾಮಾಜಿಕ, ಧಾರ್ಮಿಕ ಕಟ್ಟುಪಾಡುಗಳ ಬಗೆಗೂ ತಿಳಿದು ಆ ಸಮಯದಲ್ಲಿ ನೈರ್ಮಲ್ಯತೆಯ ಪ್ರಾಮುಖ್ಯತೆಯನ್ನು ವಿಶ್ವದ ಎಲ್ಲಾ ಮಹಿಳೆಯರಲ್ಲೂ ಬಿತ್ತುವುದೇ ಅಗಿದೆ. ಜೀವಸೃಷ್ಠಿಯ ಹಾಗೂ ಹೆಣ್ತನದ ಆಗುಹೋಗುಗಳ ಮೂಲಕ್ರಿಯೆಯಾದ ಮುಟ್ಟಿಗೆ ಗರ್ಭಧಾರಣೆಯಾದಾಗ ದೊರಕುವ ಪ್ರಾಮುಖ್ಯತೆ ದೊರಕುವುದಿಲ್ಲ. ಬದಲಾಗಿ, ಹಲವು ರೀತಿಯ ಮೌಢ್ಯ, ಸಾಂಪ್ರದಾಯಿಕತೆ ಹಾಗೂ ಧಾರ್ಮಿಕ ನಂಬಿಕೆಗಳೊಡನೆ ತಳಕು ಹಾಕಿಕೊಂಡಿದೆ. ಖ್ಯಾತ ಸಮಾಜವಾದಿ ಎಮಿಲಿಹರ್ಕಿನ್ ಕೂಡಾ ಮನುಷ್ಯರಲ್ಲಿ ಧರ್ಮ ಹುಟ್ಟಿದ್ದೇ ಮುಟ್ಟಿನ ಕಾರಣದಿಂದಾಗಿ ಅವಳ ಹಕ್ಕುಗಳನ್ನೇ ಮೊಟಕುಗೊಳಿಸಿ ಅವಳನ್ನು ಅಧಿಕಾರ ವಂಚಿತಳನ್ನಾಗಿ ಮಾಡಲಾಗುತ್ತಿದೆ ಎಂಬುದು ಮಹಿಳಾಪರ ಚಿಂತಕರ ಅಭಿಪ್ರಾಯ. ಏನೇ ಇರಲಿ ವಿಶ್ವದಾದ್ಯಂತ ಇಂದು ಸುಮಾರು 300 ಮಿಲಿಯನ್ ಮಹಿಳೆಯರು ಮುಟ್ಟಾಗುತ್ತಿದ್ದಾರೆ. ಪ್ರತಿ ಮಹಿಳೆ ತನ್ನ ಸಂತಾನೋತ್ಪತ್ತಿ ವಯಸ್ಸಿನಲ್ಲಿ ಸುಮಾರು 2ರಿಂದ 3 ಸಾವಿರ ದಿನಗಳನ್ನು ಮುಟ್ಟಿನ ಅವಧಿಯಲ್ಲಿ ಕಳೆಯುತ್ತಾಳೆ. ಭಾರತದಲ್ಲಿ 2014ರಲ್ಲಿ ನಡೆಸಿದ ಸರ್ವೆ ಪ್ರಕಾರ ಶೆ.42ರಷ್ಟು ಮಹಿಳೆಯರಿಗೆ ಮುಟ್ಟಿನ ಸ್ರಾವ ಎಲ್ಲಿಂದ ಬರುತ್ತದೆ ಎಂಬುದೇ ತಿಳಿದಿಲ್ಲ. ವಿಶ್ವದಾದ್ಯಂತ 3ರಲ್ಲಿ ಒಬ್ಬಳೆ ಮಹಿಳೆಗೆ ಸೂಕ್ತ ಶೌಚಾಲಯ ವ್ಯವಸ್ಥೆ(ಶಾಲೆಯಲ್ಲಿ, ಕಾರ್ಯಸ್ಥಳದಲ್ಲಿ), ಹೆಚ್ಚಿನವರಿಗೆ ಸೂಕ್ತ ತ್ಯಾಜ್ಯ ವಿಲೇವಾರಿಯ ಬಗ್ಗೆಯೂ ತಿಳಿದಿಲ್ಲ.
ಹೀಗೆ ಮುಟ್ಟಿನ ದಿನಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳದಿದ್ದರೆ ಆಗುವ ತೊಂದರೆಗಳೇನು? ಸಹಜವಾಗಿಯೇ ಹಾರ್ಮೋನುಗಳ ಬದಲಾವಣೆಯಾದಾಗ ಹೆಚ್ಚಿನ ಮಹಿಳೆಯರಲ್ಲಿ ಕಿಬ್ಬೊಟ್ಟೆ ನೋವು, ಸೊಂಟ ನೋವು, ಕೈ ಕಾಲು ಸೆಳೆತ ಇತ್ಯಾದಿ ಸಣ್ಣಮಟ್ಟದ ಕಿರಿಕಿರಿಗಳು ಇದ್ದೇ ಇರುತ್ತದೆ. ಇನ್ನು, ನೈರ್ಮಲ್ಯತೆ ಕಾಪಾಡಿಕೊಳ್ಳದಿದ್ದರೆ ಜನನಾಂಗಗಳ ಸೋಂಕು, ಅದರಿಂದಾಗಿ ಹೊಟ್ಟೆ ನೋವು, ಬಿಳಿ ಮುಟ್ಟು ನಂತರ ಬಂಜೆತನ ಇತ್ಯಾದಿ ಅನುಭವಿಸುತ್ತಾರೆ.
ಪದೇ ಪದೇ ಮೂತ್ರ ಸೋಂಕು ಉಂಟಾಗುವುದು, ಜೊತೆಗೆ ಎಚ್‌ಪಿಸಿ ಸೋಂಕಿನಿಂದ(ಹ್ಯೂಮನ್ ಪ್ಯಾಪಿಲೋಮ ವೈರಸ್) ಗರ್ಭ ಕೊರಳಿನ ಕ್ಯಾನ್ಸರ್ ಕೂಡಾ ಉಂಟಾಗಬಹುದು. ಇನ್ನು ಅಸುರಕ್ಷಿತ ಪ್ಯಾಡ್ ಬಳಕೆಯಿಂದ ಉಂಟಾಗುವ ಅಲರ್ಜಿ, ಅಂಡಾಶಯದ ಕ್ಯಾನ್ಸರ್ ಈ ಎಲ್ಲ ತೊಂದರೆಗಳ ಬಗ್ಗೆ ಹೆಚ್ಚಿನ ಮಹಿಳೆಯರಲ್ಲಿ ಅರಿವಿಲ್ಲ. ಅಷ್ಟೇ ಅಲ್ಲ ಕೇವಲ ಸ್ವಚ್ಛತೆಯ ನಿಯಮಗಳನ್ನು ಪಾಲಿಸಿದರೆ ಶೇ.97ರಷ್ಟು ಸೋಂಕನ್ನು ತಡೆಗಟ್ಟಬಹುದು ಎಂಬ ಪರಿಜ್ಞಾನವೂ ಇಲ್ಲ. ಸುರಕ್ಷಿತ ಮುಟ್ಟಿನ ನೈರ್ಮಲ್ಯತೆ ಕಾಪಾಡಲು ಸಾಧನಗಳು ಬಡರಾಷ್ಟ್ರಗಳಲ್ಲಿ ಶೆ.70ರಷ್ಟು ಜನರಿಗೆ ಸಿಗುತ್ತಿಲ್ಲ. ಭಾರತದಲ್ಲೂ ಇನ್ನೂ ಶೇ.70ರಷ್ಟು ಹೆಣ್ಣುಮಕ್ಕಳು ಸ್ವಚ್ಚವಲ್ಲದ ಹಳೆ ಬಟ್ಟೆ, ಇನ್ನಿತರ ವಸ್ತುಗಳನ್ನು ಮುಟ್ಟಿನ ಸಮಯದಲ್ಲಿ ಉಪಯೋಗಿಸುತ್ತಾರೆ.
ಭಾರತದಲ್ಲೇ ಸುಮಾರು 23 ಮಿಲಿಯನ್ ಹೆಣ್ಣುಮಕ್ಕಳು ಶಾಲೆಯಿಂದ ಡ್ರಾಪ್ ಔಟ್ ಆಗುತ್ತಾರೆ. ಏಕೆಂದರೆ ಅವರಿಗೆ ಸುರಕ್ಷಿತ ನೀರಿನ, ಶೌಚಾಲಯ ಕೊರತೆ ಇದೆ. ಹೆಚ್ಚಿನವರು ಸ್ಯಾನಿಟರಿ ಪ್ಯಾಡ್ ವಿಲೇವಾರಿ ಸರಿಯಾಗಿ ಮಾಡದೇ ಟನ್’ಗಟ್ಟಲೇ ಮಣ್ಣಲ್ಲಿ ಮಣ್ಣಾಗದೇ ಸುಟ್ಟರೂ ಡಯಾಕ್ಸಿನ್ ಎಂಬ ಜೀವ ಪರಿಸರಕ್ಕೆ ಅತ್ಯಂತ ಅಪಾಯಕಾರಿಯಾದ ವಿಷವನ್ನು ಹೊರಹಾಕುತ್ತದೆ. ಈ ತ್ಯಾಜ್ಯ ಕಾಡು ಗುಡ್ಡ, ಸಮುದ್ರವನ್ನೂ ವ್ಯಾಪಿಸಿ ದನ, ಕರು, ಜಲಚರ ಜೀವಗಳಿಗೂ ಅಪಾಯ ತಂದೊಡ್ಡುತ್ತಿದೆ.
ಈ ಎಲ್ಲಾ ವಿಷಯಗಳ ಬಗ್ಗೆ ಅರಿವು ಮೂಡಿಸಲೆಂದೇ ಮೇ 28ರಂದು 2914ರಿಂದ ಪ್ರತಿವರ್ಷವೂ ಮುಟ್ಟಿನ ನೈರ್ಮಲ್ಯತಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಕೋವಿಡ್19ರ ಈ ಸಾಂಕ್ರಾಮಿಕ ಕಾಲದಲ್ಲಿಯೂ ಶಾಲಾ ಕಾಲೇಜುಗಳಲ್ಲಿ ಮುಟ್ಟಿನ ವೈಜ್ಞಾನಿಕ ಪ್ರಕ್ರಿಯೆಯ ಬಗ್ಗೆ ದೊರಕುವ ಮಾಹಿತಿಯೂ ಕಡಿಮೆಯಾಗಿದೆ. ಅವಕಾಶ ಹಾಗೂ ಸಲಹೆ ಸ್ವೀಕರಿಸಲು ಸಕಾಲವಾದ ಹದಿ ವಯಸ್ಸಿನಲ್ಲೇ ಈ ಪ್ರಕ್ರಿಯೆ ಬಗ್ಗೆ ವೈಜ್ಞಾನಿಕ ಮಾಹಿತಿ ದೊರಕಬೇಕು. ಪ್ರಾಪ್ತ ವಯಸ್ಸಿನಲ್ಲಿ ಹೆಣ್ಣಿನ ದೇಹದಲ್ಲಿ ತಿಂಗಳಿಗೊಮ್ಮೆ ಅಂಡಾಣು ಬಿಡುಗಡೆಯಾಗಿ ಗರ್ಭನಾಳದಿಂದ ಸೆಳೆಯಲ್ಪಟ್ಟು ವೀರ್ಯಾಣುವಾಗಿ ಕಾಯುತ್ತಿರುತ್ತದೆ. ಈ ಮಧ್ಯೆ ಗರ್ಭಕೋಶದ ಒಳಪದರವೂ ಬೆಳೆದು ದಪ್ಪನೆಯ ಸ್ಪಂಜಿನ ಹಾಗಾಗಿ ಭ್ರೂಣಕ್ಕೆ ಇದು ಪೋಷಣೆ ನೀಡುತ್ತದೆ. ಒಂದು ವೇಳೆಗೆ ಫಲಿತವಾಗದಿದ್ದರೆ ಈ ಬೆಳೆದ ಗರ್ಭಕೋಶದ ಒಳಪದರವೇ ಛಿದ್ರ ಛಿದ್ರವಾಗಿ ಒಳಗೆ ಸಂಗ್ರಹವಾಗಿರುವ ರಕ್ತದೊಂದಿಗೆ ಗರ್ಭ ದ್ವಾರದಿಂದ ಹೊರಬಂದು ಯೋನಿಯ ಮುಖಾಂತರ ಹೊರ ಬರುತ್ತದೆ. ಇದೇ ಮಾಸಿಕ ಮುಟ್ಟು ಎನಿಸಿಕೊಳ್ಳುತ್ತದೆ. ಇಂತಹ ಶುದ್ದಾಂಗ ಜೈವಿಕ ಪ್ರಕ್ರಿಯೆಯನ್ನು ಹೆಚ್ಚಿನ ಮಹಿಳೆಯರು ಇದೊಂದು ಶಾಪ, ಬೇನೆ, ಕೆಟ್ಟರಕ್ತವೇ ಹೊರಬರುವುದು ಎಂದೆಲ್ಲಾ ತಿಳಿದು ಈ ತಪ್ಪು ಕಲ್ಪನೆ ಇಂದಿಗೂ ಹಲವು ಇಲ್ಲಸಲ್ಲದ ಕಲ್ಪನೆ, ಮೌಢ್ಯಾಚರಣೆಗೆ ಕಾರಣವಾಗಿದೆ. ಹಬ್ಬ, ಹರಿದಿನ, ಮದುವೆ, ಮುಂಜಿ, ಆಟೋಟ, ತೀರ್ಥಯಾತ್ರೆ ಎಂದೆಲ್ಲಾ ನೆಪದಿಂದ ಮುಟ್ಟನ್ನು ಹಿಂದೆ ಮುಂದೆ ಮಾಡಲು ವೈದ್ಯರ ಹತ್ತಿರ ದುಂಬಾಲು ಬೀಳುವುದು ಇನ್ನೂ ಕಡಿಮೆಯಗಿಲ್ಲ. ಕೆಲವರು ಸ್ನಾನವನ್ನೇ ಮಾಡದಿರುವುದು, ಹೂ ಮುಡಿಯದಿರುವುದು, ಅಡಿಗೆ ಮನೆ, ದೇವರ ಮನೆಗೆ ಹೋಗದಿರುವುದು, ಚಾಪೆ-ಚೊಂಬು ಕೊಟ್ಟು ಮೂಲೆಯಲ್ಲಿ ಕೂರಿಸುವುದರಿಂದ ಹಿಡಿದು ಊರ ಹೊರಗಿನ ಮುಟ್ಟಿನ ಹಟ್ಟಿಯಲ್ಲಿಡುವ ಏನೇನೋ ಕಟ್ಟಳೆಗಳಿವೆ. ಹಾಗಾಗಿ, ಮೊದಲು ಅರಿವು ಮೂಡಿಸಬೇಕು.
ಎರಡನೆಯದಾಗಿ ಮುಟ್ಟಿನ ನೈರ್ಮಲ್ಯತೆ ಕಾಪಾಡುವ ಸಾಧನಗಳ ಬಗ್ಗೆ ಸೂಕ್ತ ಮಾಹಿತಿ ಮತ್ತು ಅವುಗಳನ್ನು ಹೇಗೆ ಉಪಯೋಗಿಸುವುದು ಎನ್ನುವುದರ ಬಗ್ಗೆ ಮಾಹಿತಿ ದೊರಕಬೇಕು. ಶುದ್ಧ ನೀರು, ಶೌಚಾಲಯ, ಸೌಲಭ್ಯ ಬಹಳ ಮುಖ್ಯ. ಜೊತೆಗೆ ಬಳಸಿದ ಸಾಧನಗಳ ಸೂಕ್ತ ವಿಲೇವಾರಿಯನ್ನು ಅತಿ ಮುಖ್ಯ. ಸಾರ್ವಜನಿಕ ಶೌಚಾಲಯಗಳಲ್ಲಿ ಮತ್ತು ಎಲ್ಲೆಲ್ಲೂ ಬಳಸಿದ ನ್ಯಾಪ್’ಕಿನ್ ಬಿಸಾಡುವುದು, ಪರಿಸರಕ್ಕೆ ಹಾನಿಯುಂಟು ಮಾಡುವ ಸಾಧನ ಬಳಸುವುದು ನಿಲ್ಲಬೇಕು. ಮುಟ್ಟಿನ ನೈರ್ಮಲ್ಯ ಬಳಸುವ ಬಗೆಗೂ ನಿಖರವಾದ ಮಾಹಿತಿ ದೊರಕಬೇಕು.
ಪರಿಸರ ಸ್ನೇಹಿ ನ್ಯಾಪ್’ಕಿನ್’ಗಳು ಅಂದರೆ ಹತ್ತಿ ಬಟ್ಟೆ ಸೇರಿದಂತೆ ಇತ್ಯಾದಿಗಳಿಂದ ಪ್ಯಾಡ್’ಗಳನ್ನು ತಯಾರಿಸಲು, ಬಳಸಲು ಉತ್ತೇಜನ ನೀಡಬೇಕು. ಕೋವಿಡ್19ರ ಈ ಸಾಂಕ್ರಾಮಿಕ ಕಾಲದಲ್ಲಂತೂ ಮಾಹಿತಿಯ ಕೊರತೆಯ ಜೊತೆಗೆ ಆರೋಗ್ಯ ಸೇವಾ ಸೌಲಭ್ಯವೂ ಕಡಿಮೆಯಾಗಿ ಸಾಧ್ಯವಾದಷ್ಟು ಮಾಧ್ಯಮಗಳ ಮೂಲಕ ಮಾಹಿತಿ ಪಡೆಯುವುದಕ್ಕೆ ಅವಕಾಶ ಕಲ್ಪಿಸಬೇಕು. ಮನೆಯಲ್ಲಿಯೇ ಇರುವವರು ಸ್ವಚ್ಛವಾದ ಒಣಗಿದ, ಮೆತ್ತಗಿನ ಸ್ರಾವ ಹೀರಬಲ್ಲಂತಹ ಬಟ್ಟೆಯನ್ನು ಉಪಯೋಗಿಸಿ ತಣ್ಣೀರಿನಲ್ಲಿ ಸೋಪು ಹಾಕಿ ತೊಳೆದು ಬಿಸಿಲಿನಲ್ಲಿ ಒಣಗಿಸಿ, ಇಸ್ತ್ರಿ ಮಾಡಿ, ನಿರ್ಧಿಷ್ಟ ಜಾಗದಲ್ಲಿಟ್ಟು ಪ್ರತಿಬಾರಿಯೂ ಮುಟ್ಟಾದಾಗ ಉಪಯೋಗಿಸಿ ಬಟ್ಟೆ ಹಾಳಾದಾಗ ವಿಲೇವಾರಿ ಮಾಡಬಹುದು. ಸ್ವಲ್ಪವಾದರೂ ಸಹನೆ, ತಾಳ್ಮೆ ಅಗತ್ಯ.
ಮುಟ್ಟಿನ ಶುಚಿತ್ವದ ಸಾಧನಗಳನ್ನು ಬಳಸುವ ಮೊದಲು ಹಾಗೂ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು.
ಕನಿಷ್ಠ 4ರಿಂದ 5 ತಾಸಿಗೊಮ್ಮೆ ಬಟ್ಟೆ ಅಥವಾ ನ್ಯಾಪಕಿನ್ ಬದಲಾಯಿಸಬೇಕು.
ನೆನಪಿಡಬೇಕಾದ ಸಂಗತಿ ಎಂದರೆ ಜನನಾಂಗ ಜಾಗದ ಸ್ವಚ್ಛತೆ ಕಾಪಾಡಲು ಕೇವಲ ಸ್ವಚ್ಛ ತಣ್ಣೀರಿನಲ್ಲಿ ತೊಳೆದರೆ ಸಾಕು. ಬಿಸಿ ನೀರು, ಸೋಪು, ಸ್ಯಾನಿಟೈಸರ್, ಸುಗಂಧ ದ್ರವ್ಯ ಇವೆಲ್ಲದರ ಬಳಕೆ ಒಳ್ಳೆಯದಲ್ಲ. ಬದಲು ಆ ಭಾಗದಲ್ಲಿರುವ ಆಮ್ಲೀಯ ವಾತಾವರಣವನ್ನು ಬದಲಾಯಿಸಿ ಬೇಗನೇ ಸೋಂಕಾಗುವಂತೆ ಮಾಡುತ್ತದೆ.
ಮುಟ್ಟಿನ ಶುಚಿತ್ವ ಕಾಪಾಡುವ ಸಾಧನಗಳು ಅತ್ಯಾವಶ್ಯಕ ಪಟ್ಟಿಯಲ್ಲಿ ಸೇರಿ ಉತ್ಪಾದನೆ ಹಾಗೂ ಸರಬರಾಜು ತೊಂದರೆಯಾದಂತೆ ನೋಡಿಕೊಳ್ಳುವುದು ಅಗತ್ಯ.
ಕೋವಿಡ್’ನ ನಂತರದ ದಿನಗಳಲ್ಲೂ ಮಹಿಳೆಯಲ್ಲಿ ಮುಟ್ಟಿನ ಶುಚಿತ್ವ ಕಾಪಾಡಿಕೊಳ್ಳುವುದು, ನೈರ್ಮಲ್ಯತೆಗೂ ಮೀರಿದ ವಿಶಾಲ ಅರ್ಥ ಹೊಂದಿದೆ. ಇದು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯವೂ ಸೇರಿದಂತೆ ಸಮಗ್ರ ಆರೋಗ್ಯ, ಶಿಕ್ಷಣ, ಆರ್ಥಿಕ ಅಭಿವೃದ್ಧಿ, ಲಿಂಗ ಸಮಾನತೆ, ಸಬಲೀಕರಣ, ಮಾನವ ಹಕ್ಕು ಎಲ್ಲವನ್ನೂ ಒಳಗೊಂಡಿದೆ. ಆದ್ದರಿಂದ ಎಲ್ಲರಿಗೂ ಸಕಾಲದಲ್ಲಿ ನಿಖರವಾದ ಮಾಹಿತಿ, ಸೂಕ್ತ ಶುಚಿತ್ವದ ಸಾಧನಗಳು ದೊರಕಿ ಅದು ಸೇರಿ ಯೋಗ, ನೀರು, ಶೌಚಾಲಯ ಸೂಕ್ತ ತ್ಯಾಜ್ಯ ವಿಲೇವಾರಿ ಹಾಗೂ ಈ ಎಲ್ಲದರ ಜೊತೆಯ ಸಾಮಾಜಿಕವಾಗಿಯೂ ಧನಾತ್ಮಕ ವಾತಾವರಣ ಇದ್ದರೆ ಅಂದರೆ ಈ ವಿಷಯದಲ್ಲಿ ಪುರುಷರ ಹಾಗೂ ಕುಟುಂಬ ಸದಸ್ಯರ ಸಹಕಾರ ಸಿಕ್ಕಾಗ ಮಾತ್ರ ಪರಿಣಾಮಕಾರಿಯಾಗಿ ಆ ದಿನಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಂಡು ಮಹಿಳೆಯರ ಸಮಗ್ರ ಆರೋಗ್ಯವನ್ನು ಕಾಪಾಡಬಹುದು.
2030ರ ಒಳಗಾಗಿ ಈ ಜಗತ್ತಿನಲ್ಲಿ ಯಾರೊಬ್ಬರೂ ಮುಟ್ಟಿನ ಕಾರಣಕ್ಕಾಗಿ ತಡೆ ಹಿಡಿಯಲ್ಪಡಬಾರದು. ಇದಕ್ಕಾಗಿ ಕೋವಿಡ್ ನಂತರವೂ ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಕಾರ್ಪೊರೇಟ್ ವಲಯಗಳು ಹಾಗೂ ಎಲ್ಲಾ ಮಾನವ ಪ್ರೇಮಿಗಳು ಸಹಕರಿಸಬೇಕು ಮತ್ತು ಈ ನಿಟ್ಟಿನಲ್ಲಿ ಬಂಡವಾಳ ಹೂಡಬೇಕು.
(ಪರಿಸರ ಸ್ನೇಹಿಯಾಗಿ ಮುಟ್ಟಿನ ನಿರ್ವಹಣೆ ಹೇಗೆ ಮಾಡವುದು? ಮುಟ್ಟಿನ ಬಟ್ಟಲಿನ ಬಗ್ಗೆ ಸಂಪೂರ್ಣವಿವರ ಮುಂದಿನ ದಿನಗಳಲ್ಲಿ ಕಾದು ನೋಡಿ ಸದ್ಯದಲ್ಲೇ)
Get in Touch With Us info@kalpa.news Whatsapp: 9481252093
Discussion about this post