ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವೈಕುಂಠದ ದ್ವಾರಪಾಲಕರಾದ ಜಯವಿಜಯರು ಸನಕಸನಂದ ಋಷಿಗಳ ಶಾಪದ ಫಲವಾಗಿ ಭೂಲೋಕದಲ್ಲಿ ಮೂರು ಜನ್ಮಗಳ ನರಕ ಯಾತನೆ ಅನುಭವಿಸಬೇಕಾಯ್ತು. ಹಿರಣ್ಯಾಕ್ಷ ಹಿರಣ್ಯ ಕಷಿಪುವಾಗಿ; ರಾವಣ ಕುಂಭ ಕರ್ಣರಾಗಿ: ಕೊನೆಯದ್ದಾದ ಶಿಶುಪಾಲ ದಂತವಕ್ತ್ರರಾಗಿ ಜನಿಸಿದರು.
ಶಿಶುಪಾಲನು ಅಪರಾಧವನ್ನೇ ಮಾಡುತ್ತ ಬಂದ. ಕೃಷ್ಣನ ಅತ್ತೆ ಕುಂತೀ ದೇವಿಯ ಅಳಿಯನಾದ ಶಿಶುಪಾಲನು ಅಣ್ಣ ದಂತವಕ್ತ್ರನ ಸಾವಿನಿಂದಾಗಿ ಕೃಷ್ಣನೊಡನೆ ದ್ವೇಷ ಕಾರಿದ. ಆಗ ಇವನನ್ನು ಕೃಷ್ಣನು ಅತ್ತೆ ಕುಂತಿಯ ವಾತ್ಸಲ್ಯದ ಅನುಗ್ರಹದಿಂದ ,’ಹೇ ಶಿಶುಪಾಲಾ, ಅತ್ತೆಗೋಸ್ಕರ ನಿನ್ನ ನೂರು ತಪ್ಪುಗಳನ್ನು ಮನ್ನಿಸುವೆ. ಆದರೆ ನೂರು ದಾಟಿದರೆ ನನ್ನ ಸುದರ್ಶನವು ಸಹಿಸದು’ ಎಂದು ಹೇಳಿದ್ದ. ಆದಷ್ಟು ಬೇಗ ವೈಕುಂಠ ಸೇರಬೇಕೆಂಬ ಹಂಬಲದಿಂದ ಶಿಶುಪಾಲನು ಕೃಷ್ಣನೊಡನೆ ಇನ್ನಷ್ಟು ದ್ವೇಷ ಸಾಧಿಸಿದ.
ಕೊನೆಗೆ ಧರ್ಮರಾಜನ ರಾಜಸೂಯಯಾಗದಲ್ಲಿ ಕೃಷ್ಣನಿಗೆ ಸಿಗುವ ಅಗ್ರಪೂಜೆಯನ್ನು ತಡೆಯಲು ಮುಂದಾದ. ಆಗಲೇ ತೊಂಭತ್ತು ತಪ್ಪುಗಳಾಗಿತ್ತು. ಕೃಷ್ಣನನ್ನು ಜರೆದ. ಆಗ ಇದನ್ನು ವಿರೋಧಿಸಿ ಭೀಷ್ಮಾಚಾರ್ಯರು, ಬಲರಾಮ, ಭೀಮ ಸೇನ, ಅರ್ಜುನರು ಆಯುಧ ಹಿಡಿದರು. ಕೊನೆಗೆ ಸ್ವಯಂ ಯುಧಿಷ್ಠಿರನೇ ಆಯುಧಕ್ಕೆ ಕೈ ಹಾಕಿದಾಗ, ಕೃಷ್ಣನು ಅವರನ್ನೆಲ್ಲ ತಡೆದು, ಹೇ ರಾಜನ್, ಇಂದು ಇದು ನಿಮ್ಮ ಶುಭ ಕಾರ್ಯ. ಶಿಶುಪಾಲನು ನಿಮಗೆ ಅತಿಥಿ. ಅವನ ಮೇಲೆ ಆಕ್ರಮಣ ಮಾಡುವುದು ಶೋಭೆಯಲ್ಲ. ಆದಾಗ್ಯೂ ಆತ ಜರೆದದ್ದು ನನ್ನನ್ನು, ನಿಮ್ಮನ್ನಲ್ಲ. ಅದರ ವಿಚಾರವನ್ನು ನಾನೇ ನೋಡಿಕೊಳ್ಳುವೆ’ ಎಂದು ಶಿಶುಪಾಲನೆಡೆಗೆ ತಿರುಗಿ, ’ಹೇ ಶಿಶುಪಾಲಾ, ನೆನಪಿದೆಯಾ ಅಂದು ಅತ್ತೆ ಕುಂತೀ ದೇವಿಗೆ ಬೇಕಾಗಿ ನಾನು ನಿನ್ನನ್ನು ಕ್ಷಮಿಸಿದ್ದೂ? ನೂರು ತಪ್ಪುಗಳನ್ನು ಕ್ಷಮಿಸುತ್ತೇನೆ. ನೂರೊಂದನೆಯ ತಪ್ಪನ್ನು ನನ್ನ ಸುದರ್ಶನ ಕ್ಷಮಿಸಲಾರದು ಎಂದು ಹೇಳಿದ್ದು?’ ಎಂದು ನಗುತ್ತಾ ಉತ್ತರಿಸಿದ ಆ ಭಗವಂತ.
ಹಠ ಬಿಡದ ಶಿಶುಪಾಲ ನೂರು ತಪ್ಪುಗಳ ಗಡಿದಾಟಿದ. ನೂರೊಂದನೆಯ ತಪ್ಪನ್ನು ಸುದರ್ಶನಧಾರಿಯು ಸಹಿಸಲಿಲ್ಲ. ಶಿಶುಪಾಲನ ಶಿರಛೇಧನವೂ ಆಯ್ತು.
ಅಂದರೆ ನೂರು ಮರಣಗಳನ್ನು ಜೈಸಬಹುದು. ನೂರೊಂದನೆಯದ್ದೇ ಪ್ರಕೃತಿ. ಬ್ರಹ್ಮ ಲಿಖಿತ. ನೂರೊಂದನೆಯ ಮರಣವನ್ನು ಕೃಷ್ಣನೂ, ರಾಮನೂ ಅಥವಾ ಯಾವ ಮಹಿಮಾನ್ವಿತರೂ ಜೈಸಲು ಹೋಗಲಿಲ್ಲ. ಪ್ರಕೃತಿ ನಿಯಮಕ್ಕೆ ಗೌರವ ನೀಡಿದ್ದಾರೆ. ಇಂದೂ ಕೂಡಾ ಇದೇ ನಿಯಮ. ಅಂದೂ ಕೂಡಾ ಅದೇ ನಿಯಮ.
ಈಗ ನಡೆಯುತ್ತಿರುವ ರಾಜ ಧರ್ಮ ವಿರೋಧಿ ಚಟುವಟಿಕೆಯ ಸ್ವರೂಪವನ್ನೇ ಇಲ್ಲಿ ಉದಾಹರಣೆಯೊಂದಿಗೆ ತಿಳಿಸಿದೆ. ಪ್ರಜೆಗಳಿಗೂ ರಾಜ ಧರ್ಮ ವಿರೋಧಿಸುವ ಹಕ್ಕು ಇದೆ. ಆದರೆ ಅದಕ್ಕೆ ತಕ್ಕಂತಹ ಮಾರ್ಗಗಳಿವೆ. ಮಹಾತ್ಮ ಗಾಂಧಿಯವರ ಅಹಿಂಸಾ ಚಳುವಳಿಯು ಪ್ರೇರಣೆಯಾಗಬೇಕು. ಕಲ್ಲು ತೂರಾಟ, ದೊಂಬಿ ಗಲಭೆಗಳ ಮೂಲಕ ಹಿಂಸಾತ್ಮಕ ವಿರೋಧಗಳ ಮೂಲಕ ಪ್ರತಿಭಟನೆ ನಡೆದಾಗ ಕೊನೆಗೆ ಗೋಲಿಬಾರಿನ ಮೂಲಕವೇ ಉತ್ತರ ಸಿಗುತ್ತದೆ. ಈಗಾಗಲೇ ಕೆಲವು ರಾಜ್ಯಗಳು ಸಿಎಎ ವಿರೋಧಿ ನಿರ್ಣಯವನ್ನು ಅವರವರ ಕ್ಯಾಬಿನೆಟ್’ನಲ್ಲಿ ಅಂಗೀಕರಿಸಿ ಆಗಿದೆ. ಇದರ ಪರಿಣಾಮ ಸತ್ಪರಿಣಾಮವಾಗದು. ದುಷ್ಪರಿಣಾಮವನ್ನು ಎದುರುಸಿ ಮುಗ್ದ ಪ್ರಜೆಗಳನ್ನು ಬಲಿಕೊಡಬೇಕಾದೀತು. ಯಾವುದೋ ಕಳ್ಳ ನಾಯಕರುಗಳ ಲಾಭಕ್ಕಾಗಿ ಇಂತಹ ನಿರ್ಣಯವೇ ಹೊರತು, ಪ್ರಜಾ ಹಿತಕ್ಕಾಗಿಯಂತೂ ಖಂಡಿತಾ ಅಲ್ಲ.
ಪುರಾಣ ಘಟನೆ ಪುನಾರಾವರ್ತನೆಯಾಗುತ್ತಿದ್ದು, ಇದು ರಾಜಧರ್ಮ ವಿರೋಧದ (ಸಿಎಎ ಇತ್ಯಾದಿ) ಚಟುವಟಿಕೆ ಎಂಬುದರಲ್ಲಿ ಎರಡು ಮಾತಿಲ್ಲ.
Get in Touch With Us info@kalpa.news Whatsapp: 9481252093
Discussion about this post