ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಿಂದೆ ಗುರು ಮುಂದೆ ಗುರಿಯಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬ ಮಾತಿಗೆ ಶ್ರೇಷ್ಠ ಉದಾಹರಣೆಯಾಗಿರುವ ಹಾಗೂ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಧನೆಯ ಮೂಲಕ ಮಿಂಚಿರುವ ಬಹುಮುಖ ಪ್ರತಿಭೆ ಕು.ಅನುಷಾ ಜೈನ್ ಅವರೇ ಇಂದಿನ ನಮ್ಮ ಲೇಖನದ ಕೇಂದ್ರ ಬಿಂದು.
ಮೂಲತಃ ಬೆಳುವಾಯಿಯವರಾದ ಸುದರ್ಶನ್ ಜೈನ್ ಹಾಗೂ ನಾಗರತ್ನ ಜೈನ್ ದಂಪತಿಗಳ ಪುತ್ರಿಯಾದ ಅನುಷಾ, ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೆಳುವಾಯಿಯ ಸರಕಾರಿ ಶಾಲೆಯಲ್ಲಿ ಮುಗಿಸಿ, ನಂತರ ಪದವಿ ಪೂರ್ವ ಶಿಕ್ಷಣವನ್ನು ಮೂಡಬಿದ್ರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ಪಡೆದಿದ್ದಾರೆ. ಇದರೊಂದಿಗೆ ಪದವಿ ಶಿಕ್ಷಣವನ್ನು ಸಾಂಸ್ಕೃತಿಕ ಕಲೆಗಳ ಆಲಯ ಎಂದೇ ಹೆಸರು ಪಡೆದಿರುವ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿರುವುದು ವಿಶೇಷ. ಬಾಲ್ಯದಿಂದಲೇ ಕಲೆಯ ಕಡೆಗೆ ಹೆಚ್ಚಿನ ಒಲವು ಹೊಂದಿರುವ ಇವರು ಭಾಷಣ, ನಾಟಕ, ನೃತ್ಯ, ಸಂಗೀತ, ಚಿತ್ರಕಲೆ, ಯೋಗ, ಆಟ-ಪಾಠ ಮುಂತಾದವುಗಳಲ್ಲಿ ಮುಂಚುಣಿಯಲ್ಲಿದ್ದು, ಬಹುಮುಖ ಪ್ರತಿಭೆಯೆಂದೇ ಗುರುತಿಸಿಕೊಂಡಿದ್ದಾರೆ.
ಪ್ರತಿಭಾ ಕಾರಂಜಿಯಿಂದ ಹಿಡಿದು ನಾನಾ ಬಗೆಯ ಸ್ಪರ್ಧೆಗಳಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿಕೊಂಡಿದ್ದಾರೆ. ಭರತನಾಟ್ಯ, ಯಕ್ಷಗಾನ, ಮೋಹಿನಿ ಅಟ್ಟಂ, ನಾಟಕ ಮುಂತಾದ ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣಿತರಾಗಿದ್ದು, ಭರತನಾಟ್ಯವನ್ನು ವಿದುಷಿ ಸುಖದಾ ಬರ್ವೆ ಇವರಲ್ಲಿ ಸತತ 12 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕ ಪರೀಕ್ಷಾ ಮಂಡಳಿ ಆಯೋಜಿಸುವ ಜೂನಿಯರ್, ಸೀನಿಯರ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದು ಈಗ ಪೂರ್ವ ವಿದ್ವತ್ ತಯಾರಿಯಲಿದ್ದಾರೆ.
ಯಕ್ಷಗಾನವನ್ನು ಶ್ರೀ ದೇವಾನಂದ ಭಟ್ ಅವರಲ್ಲಿ 5 ವರ್ಷ ಅಭ್ಯಾಸ ಮಾಡಿದ್ದು ಮೋಹಿನಿ ಅಟ್ಟಂ ಹಾಗೂ ಕಥಕ್ ನೃತ್ಯ ಪದ್ಧತಿಯನ್ನು ಆಳ್ವಾಸ್ ಕಾಲೇಜಿನ ನೃತ್ಯ ಗುರುಗಳ ಬಳಿ ಅಭ್ಯಾಸ ಮಾಡುತ್ತಿದ್ದಾರೆ.
ಕೇವಲ ಕಲೆಯಲ್ಲಿ ಮಾತ್ರವಲ್ಲ ಶೈಕ್ಷಣಿಕ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿದ್ದು ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ಶೇ.93ರಷ್ಟು ಅಂಕ ಪಡೆದು ಪಿಯುಸಿಯಲ್ಲಿಯೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ರಾಷ್ಟ್ರಮಟ್ಟದ ವಿಜ್ಞಾನ ಮಾದರಿಯಲ್ಲಿ ಭಾಗವಹಿಸಿ ಎಲ್ಲರ ಪ್ರಶಂಸೆಗೂ ಪಾತ್ರರಾಗಿದ್ದಾರೆ.
ಮಕ್ಕಿಮನೆ ಕಲಾವೃಂದದ ಮೂಲಕ ಕರ್ನಾಟಕ ರಾಜ್ಯದಾದ್ಯಂತ ಏಕವ್ಯಕ್ತಿ ಪ್ರದರ್ಶನ ಹಾಗೂ ಗುಂಪು ನೃತ್ಯಗಳ ಮೂಲಕ ತಮ್ಮ ನೃತ್ಯದ ಛಾಪು ಮೂಡಿಸಿ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಇವರು ಕಲಾಶ್ರೀ ಪುರಸ್ಕಾರ, ಚಿಗುರು ಪುರಸ್ಕಾರ ಹಾಗೂ ಎನ್’ಸಿಸಿಯಲ್ಲಿ ಚಿನ್ನದ ಪದಕ ಗೆದ್ದು ಉತ್ತಮ ಕೆಡೆಟ್ ಎಂದು ಗುರುತಿಸಿಕೊಂಡು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್’ಗೆ ಆಯ್ಕೆಯಾಗಿದ್ದರು.
ಹೀಗೆ ತಮ್ಮ ಪ್ರತಿಭೆಯ ಮೂಲಕ ವಿಶ್ವ ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್, ಧರ್ಮಸ್ಥಳ ಲಕ್ಷದೀಪೋತ್ಸವ ಹಾಗೂ ಮಹಾಮಸ್ತಕಾಭಿಷೇಕ ಉತ್ಸವಗಳಲ್ಲಿ ನೃತ್ಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಹೀಗೆಯೇ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಇವರು ತಮ್ಮ ಸಾಧನೆ ಮಾಡಲಿ ಎಂದು ಆ ಭಗವಂತನಲ್ಲಿ ಬೇಡುತ್ತ ಇವರ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸೋಣ.
ಲೇಖನ ಸಹಕಾರ: ರೋಹನ್ ಪಿಂಟೋ ಗೇರುಸೊಪ್ಪ
Get in Touch With Us info@kalpa.news Whatsapp: 9481252093
Discussion about this post