ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶರ ನೇಮಕಾತಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಉದ್ದೇಶಗಳನ್ನು ಪ್ರಶ್ನಿಸುವಂತಿಲ್ಲ ಹಾಗೂ ಪ್ರಶ್ನಿಸಬೇಡಿ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಸಿಜೆಐ ನೇಮಕಾತಿ ವಿಚಾರ ಕುರಿತು ಮಾತನಾಡಿರುವ ಅವರು, ಪ್ರಸ್ತುತ ಸಿಜೆಐ ದೀಪಕ್ ಮಿಶ್ರಾ ಅವರು ಶಿಫಾರಸ್ಸು ಮಾಡಿದ ನಂತರ ಕೇಂದ್ರ ಸರ್ಕಾರ ಈ ಕುರಿತು ಚಿಂತನೆ ನಡೆಸಲಿದೆ ಎಂದರು.
ಪ್ರಸ್ತುತ ಎರಡನೆಯ ಹಿರಿಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ರಂಜನ್ ಗಗೋಯ್ ಅವರನ್ನೇ ಮುಂದಿನ ಮುಖ್ಯನ್ಯಾಯಮೂರ್ತಿಯಾಗಿ ಆಯ್ಕೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ ಎಂದಿದ್ದಾರೆ.
ಪ್ರಸ್ತುತ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅವಧಿ ಅಕ್ಟೋಬರ್ 2ಕ್ಕೆ ಮುಕ್ತಾಯವಾಗಲಿದ್ದು, ಆ ದಿನಾಂಕಕ್ಕೂ ಎರಡು ತಿಂಗಳು ಮೊದಲು ಉತ್ತರಾಧಿಕಾರಿಯ ಶಿಫಾರಸ್ಸು ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸಲಿದ್ದಾರೆ.
















