ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಸಾಂಕ್ರಾಮಿಕ ಸೋಂಕಿನ ಕುರಿತು ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ ಬದಲಾಗಿ ಎಚ್ಚರಿಕೆಯಿಂದಿರಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಹೇಳಿದರು.
ಅವರು ಇತ್ತೀಚೆಗೆ ತಮ್ಮ ಕಚೇರಿಯಲ್ಲಿ ಕೊರೋನಾ ಜನ ಜಾಗೃತಿಗಾಗಿ ಜಿಲ್ಲಾಡಳಿತ, ನೆಹರೂ ಯುವ ಕೇಂದ್ರ ಹಾಗೂ ಸ್ಪಂದನ ಟ್ರಸ್ಟ್ ತೀರ್ಥಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಡಿಜಿಟಲ್ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುವಕರೊಂದಿಗೆ ಸಮಾಲೋಚನೆ ನಡೆಸಿದರು.
ಇತ್ತೀಚೆಗೆ ಸರ್ಕಾರವು ಪ್ರಕಟಿಸಿದ 4ನೇ ಮಾರ್ಗಸೂಚಿಯಂತೆ ಎಲ್ಲರೂ ತಮ್ಮ ಹಾಗೂ ಇತರರ ಸುರಕ್ಷತೆಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಕಾಯ್ದುಕೊಂಡು ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಕೆಮ್ಮು, ನೆಗಡಿ, ಜ್ವರ ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳು ಸಮೀಪದ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಕ್ಷೇಮ ಎಂದ ಅವರು, ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರವು ಹೊರಡಿಸಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಕೈಗಳನ್ನು ನಿಯಮಿತವಾಗಿ ತೊಳೆಯುವುದನ್ನು ರೂಢಿಸಿಕೊಳ್ಳಬೇಕು. ಈಗಾಗಲೇ ಸೋಂಕಿಗೆ ಒಳಗಾಗಿ ಗುಣಮುಖರಾಗಿ ಹೊರಬಂದವರಿಗೆ ಸಾಮಾಜಿಕವಾಗಿ ದೊರೆಯಬಹುದಾದ ಎಲ್ಲಾ ರೀತಿಯ ಸ್ಥಾನಮಾನ ಗೌರವಗಳನ್ನು ನೀಡಿ, ಅವರ ನೆಮ್ಮದಿ ಬದುಕಿಗಾಗಿ ಸಹಕರಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನೆಹರೂ ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ಟಿ.ಕೆ. ಉಲ್ಲಾಸ್ ಅವರು ಮಾತನಾಡಿ, ಸಾರ್ವಜನಿಕರು ವಿಶೇಷವಾಗಿ ಮಕ್ಕಳು ಮತ್ತು ವಯೋವೃದ್ಧರು ಅನಗತ್ಯವಾಗಿ ಮನೆಯಿಂದ ಹೊರಹೋಗುವುದನ್ನು ನಿಯಂತ್ರಿಸಬೇಕು. ಸರ್ಕಾರವು ಹೊರಡಿಸಿರುವ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದ ಅವರು, ಈ ಸೋಂಕಿನೊಂದಿಗೆ ಬದುಕಲೇಬೇಕಾದ ಅನಿವಾರ್ಯತೆ ಇರುವುದರಿಂದ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಲೆಬೇಕು ಎಂದರು.
ಸೋಂಕಿನ ನಿಯಂತ್ರಣಕ್ಕಾಗಿ ಸೈನಿಕರಂತೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ನರ್ಸ್‌ಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ಸಹಕಾರ ನೀಡಬೇಕಲ್ಲದೇ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಹೊರರಾಜ್ಯಗಳಿಂದ ಬಂದವರ ಕುರಿತು ವೈದ್ಯಕೀಯ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು ಎಂದರು.
ಈ ಸಂವಾದದಲ್ಲಿ ಅಸಂಖ್ಯಾತ ಯುವಕರು, ಸ್ಪಂದನಾ ಸಂಸ್ಥೆಯ ಸ್ವಯಂಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.
Get In Touch With Us info@kalpa.news Whatsapp: 9481252093
Discussion about this post