ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಾನವೀಯತೆ, ದಯಾಪರತೆ, ಸಮಾನತೆ, ಆರ್ದ್ರ ಹೃದಯತೆ ವೈದ್ಯಕೀಯ ಕ್ಷೇತ್ರದ ಮೂಲ ತತ್ವಗಳು. ಈ ತತ್ವಗಳೇ ವೈದ್ಯರಾದ ನಮ್ಮ ಬದ್ಧತೆಗಳಾಗಬೇಕು ಎನ್ನುತ್ತಾರೆ ಅಬುದಾಭಿಯ ಕೊರೋನಾ ಆಸ್ಪತ್ರೆಯಲ್ಲಿ ಕಾರ್ಯನಿರತರಾಗಿರುವ ಡಾ. ಪೂರ್ಣಿಮಾ ಮಹೇಶ್ ಹೆಗ್ಡೆ.
ಪೂರ್ಣಿಮಾ ಹೆಗ್ಡೆಯವರು ಮೂಲತಃ ಉಡುಪಿ ಜಿಲ್ಲೆ, ಶಿರ್ವ ಗ್ರಾಮದವರು. ಶಿರ್ವ ಬಲ್ಲಾಡಿಗುತ್ತು ಮನೆತನದ ಶ್ರೀಮತಿ ಪ್ರೇಮಾ ಶೆಟ್ಟಿ ಹಾಗೂ ಏಣಗುಡ್ಡೆ ದಿವಂಗತ ಭುಜಂಗ ಶೆಟ್ಟಿ ದಂಪತಿಗಳ ಏಳು ಸುಪುತ್ರಿಯವರಲ್ಲಿ ಮೊದಲನೆಯವರು. ತಂದೆ ಭುಜಂಗ ಶೆಟ್ಟಿಯವರು ಹುಬ್ಬಳ್ಳಿ, ಸೋಲಾಪುರ ಮುಂತಾದಕಡೆ ಸಣ್ಣ ಮಟ್ಟದ ಹೋಟೆಲ್ ನಡೆಸುತ್ತಿದ್ದವರು. ತಾಯಿ ಸದ್ಗೃಹಿಣಿ. ಹೆತ್ತವರು ಹೆಚ್ಚು ವಿದ್ಯಾವಂತರಲ್ಲದಿದ್ದರೂ ಮಕ್ಕಳೆಲ್ಲರಿಗೂ ಉನ್ನತ ಮಟ್ಟದ ವಿದ್ಯೆಯನ್ನು ನೀಡಿ, ಸಂಸಾರ ನೌಕೆಯನ್ನು ದಡಸೇರಿಸಲು ತಂದೆ ಆಹೋರಾತ್ರಿ ಹೆಣಗಾಡುತ್ತಿದ್ದರು. ನಷ್ಟ ಕಷ್ಟಗಳೆಂಬ ಹೊಯ್ದೆರೆಗಳು ಬಂದಾಗ ನೌಕೆಯನ್ನು ದಡಸೇರಿಸಲು ದಂಪತಿಗಳು ಹರಸಾಹಸ ಪಟ್ಟವರು. ಪರಸಹಾಯವನ್ನು ಯಾಚಿಸದೆ ಅವುಡುಗಚ್ಚಿ ಅಂತರಂಗದ ಕಾರ್ಪಣ್ಯಗಳು ಬಹಿರಂಗಗೊಳ್ಳದಂತೆ ಎಚ್ಚರವಹಿಸಿದವರು. ಅದೃಷ್ಟವಶಾತ್ ನಾನು ಕಾನ್ವೆಂಟ್ ಸ್ಕೂಲಲ್ಲಿ ಕಲಿತವಳು. ಕಲಿಕೆಯಲ್ಲಿ ಮಧ್ಯಮ ಸ್ತರದ ವಿದ್ಯಾರ್ಥಿಯಾಗಿದ್ದೆ. ನಾಚಿಕೆ ಮತ್ತು ಅಂತರ್ಮುಖಿತನ ನನ್ನ ವ್ಯಕ್ತಿತ್ವವಾಗಿತ್ತು. ಉತ್ತಮ ಪುಸ್ತಕಗಳ ಓದು ನನ್ನ ಗತ ಬದುಕಿನ ಆಸಕ್ತಿಯ ಸಂಗಾತಿಯಾಗಿತ್ತು. ಆ ಪುಸ್ತಕಗಳು ಕಾಣಿಸುವ ಕಲ್ಪಿತ ಲೋಕದಲ್ಲಿ ವಿಹರಿಸುತ್ತ ತನ್ಮೂಲಕ ಕಷ್ಟದ ದಿನಗಳನ್ನು ಮರೆಯುತ್ತಿದ್ದವಳು ನಾನು ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಳ್ಳುತ್ತಾರೆ ಡಾ. ಪೂರ್ಣಿಮಾ.
ಬಾಲಕಿ ಪೂರ್ಣಿಮಾ ಅವರು ಹತ್ತನೆ ತರಗತಿಯಲ್ಲಿರುವಾಗ ಅವರ ತಂದೆಯವರು ಮೆಡಿಕಲ್ ಕಾಲೇಜಿನ ಕ್ಯಾಂಟೀನ್ ಒಂದನ್ನು ನಡೆಸುತ್ತಿದ್ದರು. ಪೂರ್ಣಿಮಾ ಅವರು ಅಲ್ಲಿಗೆ ಹೋಗುತ್ತಿದ್ದಾಗ ಶ್ವೇತ ವಸ್ತ್ರದ ಕೋಟ್ ತೊಟ್ಟ ವೈದ್ಯಕೀಯ ವಿದ್ಯಾರ್ಥಿಗಳನ್ನು ಕಂಡು ತಾನೂ ಅವರಂತೆ ವೈದ್ಯಳಾಗಬೇಕು ಎಂಬ ಕನಸು ಕಾಣುತ್ತಾರೆ. ಪೂರ್ಣಿಮಾ ಅವರ ಕನಸು ಗಾಳಿಗೋಪುರವಾಗಿರದೇ ಡಾ. ಅಬ್ದುಲ್ ಕಲಾಂ ಅವರು ಹೇಳುವಂತಹ ಕನಸು. ನೀವು ನಿದ್ದೆ ಮಾಡುವಾಗ ಕಾಣುವ ಕನಸು ನಿಜವಾದ ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು. ಪೂರ್ಣಿಮಾ ಅವರು ಕಂಡ ಕನಸು ನಿದ್ದೆ ಮಾಡಲು ಬಿಡಲಿಲ್ಲ. ಎರಡು ವರ್ಷಗಳ ಪದವಿಪೂರ್ವ ತರಗತಿಗಳಲ್ಲಿ ಅವರು ಗುರಿಮುಟ್ಟುವ ತುಡಿತದಿಂದ ಓದಿನ ದುಡಿತವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡರು. ಇದನ್ನು ಗಮನಿಸಿದ ಅವರ ಅಧ್ಯಾಪಕರುಗಳು ಇನ್ನಷ್ಟು ಪ್ರೋತ್ಸಾಹಿಸಿದರು. ಕೇವಲ ಗಳಿಸಿದ ಅಂಕಗಳ ಆಧಾರದಮೇಲೆ ಸೋಲಾಪುರದ ಡಾ.ವಿ.ಎಮ್. ಮೆಡಿಕಲ್ ಕಾಲೇಜಲ್ಲಿ ನಿಶುಲ್ಕವಾಗಿ ಎಂಬಿಬಿಎಸ್ ಸ್ನಾತಕ ಪದವಿಗೆ ಪ್ರವೇಶ ಪಡೆದರು.
ಸರಕಾರದಿಂದ ಅಲ್ಪ ಮೊತ್ತದ ವಿದ್ಯಾರ್ಥಿ ವೇತನವನ್ನೂ ಪಡೆಯುತ್ತಿದ್ದರು. ಮುಂದೇ ಅದೇ ಕಾಲೇಜಿನಿಂದ ಅರವಳಿಕೆ ಶಾಸ್ತೃ (Anesthesiology)ದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಹಿರಿಯಕ್ಕನ ಗುಣ ಮನೆಮಂದಿಗೆಲ್ಲ ಎನ್ನುವಂತೆ ಪೂರ್ಣಿಮಾ ಅವರ ಒರ್ವ ಸೋದರಿ ಮುಂಬಯಿಯ ಸರಕಾರಿ ಆಸ್ಪತ್ರೆಯಲ್ಲಿ ರೋಗ ಲಕ್ಷಣಶಾಸ್ತ್ರಜ್ಞೆ (Pathologist) ಮತ್ತೊಬ್ಬರು ಸೂಕ್ಷ್ಮಜೀವ ಶಾಸ್ತ್ರಜ್ಞೆ (Microbiologist) ಆಗಿದ್ದಾರೆ. ಪ್ರಸ್ತುತ ಅವರಿಬ್ಬರೂ ಮುಂಬಯಿಯಲ್ಲಿ ಕೋವಿಡ್ ರೋಗಿಗಳ ಶ್ರುಶೂಷೆಯಲ್ಲಿ ನಿರತರಾಗಿದ್ದಾರೆ. ಮೂರು ಮಂದಿ ಸೋದರಿಯರು ಬೇರೆ ಬೇರೆ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಆರೈಕೆ ಮಾಡುತ್ತಿರುವುದು ಅಪರೂಪದ ಸಂಗತಿಯೂ ಹೌದು. ಉಳಿದ ನಾಲ್ವರು ಸೋದರಿಯರು ಸ್ನಾತಕೋತ್ತರ ಪದವಿ ಪಡೆದು ಅನವಲಂಬನದ ಜೀವನ ಮಾಡುತ್ತಿದ್ದಾರೆ.
ಬಂಟರ ಸಮುದಾಯದಲ್ಲಿ ಹೆಣ್ಮಕ್ಕಳು ಎಷ್ಟು ವಿದ್ಯಾವಂತರಾದರೂ ವರದಕ್ಷಿಣೆ ತೆರಬೇಕಾಗಿತ್ತು. ಆದರೆ ಇವರ ಹೆತ್ತವರ ದೃಢ ನಿರ್ಧಾರಗಳಿಂದಾಗಿ ಏಳು ಸೋದರಿಯರ ಮದುವೆಯೂ ವರದಕ್ಷಿಣೆ ರಹಿತವಾಗಿ ಆಗಿದೆ. ವೈದ್ಯಕೀಯದಲ್ಲಿ ಸ್ನಾತಕೋತ್ತರ ಪಡೆದ ಮೇಲೆ ಡಾ. ಪೂರ್ಣಿಮಾ ಅವರು ನಾಲ್ಕು ವರ್ಷ ಬ್ರಿಟನ್ನಿನಲ್ಲಿದ್ದು ಅರವಳಿಕೆಯ ಫೆಲೋಶಿಪ್ ಪದವಿಗಳಿಸಿದ್ದಾರೆ. ಸೌದಿ ಅರೇಬಿಯಾದ ರಾಜಧಾನಿ ರಿಯಾಧಿನಲ್ಲಿ ಹನ್ನೆರಡು ವರ್ಷ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಹನ್ನೊಂದು ವರ್ಷಗಳಿಂದ ಅಬುದಾಭಿಯ ಶೇಕ್ ಖಲೀಫಾ ಸಿಟಿ ಆಸ್ಪತ್ರೆಯಲ್ಲಿ ದುಡಿಯುತ್ತಿದ್ಜಾರೆ.
ಪ್ರಪಂಚವನ್ನೇ ಗಡಗುಟ್ಟಿ ನಡುಗಿಸುವಂತೆ ಮಾಡಿದ ಕೊರೋನ ಮಹಾಮಾರಿಯ ಕುರಿತಾದ ತಮ್ಮ ಅನಿಸಿಕೆಗಳನ್ನು ಈ ರೀತಿ ವಿವರಿಸುತ್ತಾರೆ.
ಕೋವಿಡ್ 19 ಸಾಂಕ್ರಾಮಿಕ ರೋಗಿಗಳ ಶುಶ್ರೂಷೆ ಮಾಡುವ ಜವಾಬ್ದಾರಿಯನ್ನು ನೀಡಲಾದ ಮೇಲೆ ನನ್ನ ವೈದ್ಯಕೀಯ ಜೀವನದ ಅತ್ಯಂತ ಸಂಕಷ್ಟ ಹಾಗೂ ಸಂಘರ್ಷಮಯ ದಿನಗಳನ್ನು ಉತ್ತರಿಸಬೇಕಾಗಿ ಬಂತು. ರೋಗಿಗಳ ಸಂಖ್ಯೆ ಹೆಚ್ಚಾದಂತೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಜೀವರಕ್ಷಕ ಸಲಕರಣೆಗಳಾದ ವೆಂಟಿಲೇಟರ್, ಹಾಸಿಗೆ ಮುಂತಾದುವುಗಳ ಕೊರತೆಯುಂಟಾಯಿತು. ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎನ್ನುವಂತೆ ಭಾಸವಾಗತೊಡಗಿತು. ರೋಗಿಗಳ ಚಿಕಿತ್ಸೆಯೊಂದಿಗೆ ಸ್ವಯಂ ರಕ್ಷಣೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಗಂಭೀರವಾದ ಸಮಸ್ಯೆಯಾಯಿತು. ಆದರೆ ಆಡಳಿತ ಮಂಡಳಿ ಹಾಗೂ ಸರಕಾರದ ದೃಢ ನಿರ್ಧಾರಗಳಿಂದ ನಮ್ಮ ಮನೋಸ್ಥೈರ್ಯ ಸ್ಥಿರವಾಗತೊಡಗಿತು.
ರೋಗಿಯೊಬ್ಬರ ಚಿಕಿತ್ಸೆಗೆ ತೆರಳುವ ಮುನ್ನ ಅವರಿಗೆ ಯಾವ ರೀತಿಯ ಚಿಕಿತ್ಸೆಯ ಅಗತ್ಯವಿದೆ ಎಂದು ಮನಗಾಣಬೇಕಾಗಿತ್ತು. ಸುಮಾರು ಅರುವತ್ತು ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಸ್ಥಿತಿಯನ್ನು ಕಂಡಾಗ ಅವರು ಮರಳಿ ಮನೆಗೆ ಮರಳುವುದಿಲ್ಲ ಎನ್ನುವಂತಿತ್ತು. ಅವರ ಮಡದಿ ಮಕ್ಕಳನ್ನು ನೋಡುವಾಗ ಹೃದಯ ಹಿಚುಕಿದಂತಾಗುತ್ತಿತ್ತು. ಕೆಲವು ರೋಗಿಗಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಸಾವುಗಳು ನಮ್ಮ ಮಾನಸಿಕ ಸ್ಥಿರತೆಯ ಬುಡವನ್ನು ಅಲ್ಲಾಡಿಸುವಂತಿದ್ದವು. ನನ್ನ ಅನುಭವ ಮತ್ತು ಹೆತ್ತವರಿಂದ ಬಳುವಳಿಯಿಯಾಗಿ ಬಂದ ಸ್ಥಿತಪ್ರಜ್ಞತೆಯಿಂದಾಗಿ ನನ್ನನ್ನು ನಾನು ಸರಿತೂಗಿಸಿಕೊಂಡೆನು. ನನ್ನ ಬಾಳ ಸಂಗಾತಿ ಮಹೇಶ್ ಹೆಗ್ಡೆ ಹಾಗೂ ಮಕ್ಕಳಾದ ನಿಮಿತ್ ಮತ್ತು ಕ್ರಿಸ್ಮಿತಾ ಅವರುಗಳ ಭಾವಾನ್ಮಾತಕ ಬೆಂಬಲವೂ ನನ್ನ ನಿಲುವನ್ನು ಗಟ್ಟಿಗೊಳಿಸಿತು. ಸಂಯುಕ್ತ ಅರಬ್ ಸಂಸ್ಥಾನ ಯಾವುದೇ ರಾಷ್ಟ್ರೀಯತೆ, ಜಾತಿ, ಮತ, ಲಿಂಗ ಭೇದವಿಲ್ಲದೆ ಕೊರೋನದ ವಿರುದ್ಧ ಸಮರ ಸಾರಿದರ ಪರಿಣಾವಾಗಿ ನಮ್ಮ ಆಸ್ಪತ್ರೆ ಕೊರೋನ ಮುಕ್ತ ಆಸ್ಪತ್ರೆಯಾಗಿದೆ. ನಾವಿರುವ ಆಸ್ಪತ್ರೆಗೆ ನಮ್ಮ ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಲ್ಲಿಂದಲೂ ನಮ್ಮೂರ ಜನರಿಗೆ ಚಿಕಿತ್ಸೆ ನೀಡುವ ಕೈಂಕರ್ಯ ಪ್ರಾಪ್ತವಾದುದಕ್ಕೆ ನಾನು ನಮ್ಮ ದೇಶಕ್ಕೂ, ದೇವರಿಗೂ, ವೈದ್ಯ ವೃತ್ತಿಗೂ ಋಣಿಯಾಗಿದ್ದೇನೆ ಎಂದು ವಿನಮ್ರವಾಗಿ ಹೇಳುತ್ತಾರೆ ಡಾ. ಪೂರ್ಣಿಮಾ ಮಹೇಶ್ ಹೆಗ್ಡೆಯವರು.
ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಉಲ್ಬಣಗೊಂಡ ರೋಗವನ್ನು ವೈದ್ಯರುಗಳಿಂದ ಗುಣಪಡಿಸಲಾರದೆ ರೋಗಿಯು ಮೃತಪಟ್ಟರೆ ವೈದ್ಯರನ್ನು ನಿಂದಿಸಲಾಗುತ್ತದೆ. ಥಳಿಸಲಾಗುತ್ತದೆ. ಆಸ್ಪತ್ರೆಯನ್ನು ಪುಡಿಗೈಯಲಾಗುತ್ತದೆ. ಅದನ್ನು ಸಮರ್ಥಿಸಲು ಸಂಸ್ಕೃತದ ಸುಭಾಷಿತವೊಂದರ ಅರ್ಧ ಭಾಗವನ್ನು ತಪ್ಪಾಗಿ ವೈದ್ಯೋ ನಾರಾಯಣೋ ಹರಿ ಎಂದು ವ್ಯಾಖ್ಯಾನಿಸಲಾಗುತ್ತದೆ. ನಿಜವಾಗಿಯೂ ಆ ಸುಭಾಷಿತ ಹೀಗಿದೆ.
ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೇ
ಔಷಧಿ ಜಾಹ್ನವಿ ತೋಯಂ, ವೈದ್ಯೋ ನಾರಾಯಣೋ ಹರಿ
ಅರ್ಥಾತ್: ರೋಗವು ಉಲ್ಬಣಿಸಿ ಶರೀರವು ವ್ಯಾಧಿಗ್ರಸ್ತವೂ ಜರ್ಜರಿತವೂ ಆಗಿ ಶವದಂತಾದಾಗ ಗಂಗಾ ಜಲವೇ ಔಷಧಿ, ಹರಿಯೇ ವೈದ್ಯ ಎಂದು.
ಈ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ವೈದ್ಯರ ಮತ್ತು ವೈದ್ಯಕೀಯದ ಇತಿಮಿತಿಯನ್ನು ಸೂಚಿಸಲಾಗಿದೆ. ವೈದ್ಯರು ತಮ್ಮ ಕೈಲಾದ ಪ್ರಯತ್ನ ಮಾಡಿದರೂ ರೋಗಿ ಕೈಲಾಸ ಸೇರುವಾಗ ಗಂಗಾಜಲವೇ ಮದ್ದು. ಭವರೋಗ ತಜ್ಞ ನಾರಾಯಣನೇ ವೈದ್ಯ ಎಂದು ಅರ್ಥವಾಗುತ್ತದೆ. ವೈದ್ಯರು ನಮ್ಮ ನಿಮ್ಮಂತಿರುವ ಮನುಷ್ಯರು. ಅವರಿಗೂ ಮಾನಸಿಕ ಸಂವೇದನೆಗಳು, ಕಷ್ಟ ಸುಖಗಳು, ಕೌಟುಂಬಿಕ ಬದುಕು ಇರುತ್ತವೆ ಎಂಬುದನ್ನು ನಾವು ಮರೆಯಬಾರದು. ಆರ್ಥಿಕ ಬಲದ ಅರ್ಹತೆಯಿಂದ/ಹೆತ್ತವರ ಘನಸ್ತಿಕೆಗಾಗಿ ವೈದ್ಯರಾದ ಕೆಲವೊಂದು ಧನದಾಹಿ ವೈದ್ಯರಿಂದ ನಡೆಯುವ ಕಹಿ ಪ್ರಸಂಗಗಳನ್ನು ನಾವು ಅಪವಾದ ಎಂದು ಭಾವಿಸಬೇಕೇ ಹೊರತು ವೈದ್ಯ ಲೋಕವನ್ನೇ ನಿಂದಿಸುವುದು ಅಪರಾಧವಾಗುತ್ತದೆ.
ಹಿರಿಯ ವೈದ್ಯರೊಬ್ಬರು ಹೇಳುತ್ತಾರೆ; ಕೊರೋನಾ ರೋಗಿಗಳ ಆರೈಕೆ ಮಾಡುವ ವೈದ್ಯರು ತೊಡುವ ಸುರಕ್ಷಾ ಕವಚಗಳು ಅತ್ಯಂತ ದುಬಾರಿಯಾಗಿರುತ್ತವೆ. ಒಮ್ಮೆ ತೊಟ್ಟ ತೊಡುಗೆಗಳನ್ನು ಮತ್ತೊಮ್ಮೆ ತೊಡುವಂತಿಲ್ಲ. ಆದ್ದರಿಂದ ಒಮ್ಮೆ ತೊಟ್ಟುಕೊಂಡರೆ ಹತ್ತರಿಂದ ಹನ್ನೆರಡು ಘಂಟೆಗಳ ಕಾಲ ತೆಗೆಯುವಂತಿಲ್ಲ. ಇಲ್ಲದಿದ್ದರೆ ಅದನ್ನೊದಗಿಸುವ ಸರಕಾರಕ್ಕೆ ಅನಗತ್ಯ ವೆಚ್ಚವಾಗುತ್ತದೆ. ಮಾತ್ರವಲ್ಲ ಆ ಸುರಕ್ಷಾ ಕವಚಗಳ ಉತ್ಪಾದನೆ ಮತ್ತು ಪೂರೈಕೆಗಳೂ ವಿಪುಲವಾಗಿ ಆಗಬೇಕು ತಾನೇ? ಹತ್ತರಿಂದ ಹನ್ನೆರಡು ಘಂಟೆ ತೊಟ್ಟುಕೊಂಡು ಶೌಚಾದಿ ಪ್ರಕೃತಿ ಕರೆಗಳನ್ನು ನಿಯಂತ್ರಿಸಿಕೊಂಡು ಕೊರೋನಾ ರೋಗಿಗಳ ಆರೈಕೆ ಮಾಡಬೇಕು. ಈ ವೈದ್ಯರುಗಳ ದೈಹಿಕ, ಮಾನಸಿಕ, ಸಾಂಸಾರಿಕ ವೇದನೆಗಳು ಹೇಗಿರಬಹುದು? ಅದನ್ನು ಚಿಂತಿಸಬೇಕಾದ ಸಮಾಜ ಸದಾ ನಿಂದಿಸುವ ಕಾರ್ಯಮಾಡುತ್ತದೆ. ನಮ್ಮ ದೇಶದ ಸಾವಿರಾರು ವೈದ್ಯರು ಪ್ರಪಂಚದಾದ್ಯಂತ ಡಾ. ಪೂರ್ಣಿಮಾ ಹೆಗ್ಡೆಯವರಂತೆ ಈ ಸಂದಿಗ್ಧ ಕಾಲಘಟ್ಟದಲ್ಲಿಯೂ ಮನುಕುಲದ ಸ್ವಾಸ್ಥ್ಯಕ್ಕಾಗಿ ಕಟಿಬದ್ಧರಾಗಿ ಆತ್ಮಾರ್ಪಣಾ ಭಾವದಿಂದ ದುಡಿಯುತ್ತಿದ್ದಾರೆ. ಇದು ನಮ್ಮ ದೇಶ ಹೆಮ್ಮೆ ಪಡುವ ಸಂಗತಿಯೂ ಹೌದು. ಮಾನವೀಯತೆಯೇ ಮಹೋನ್ನತ ಶ್ರೀಮಂತಿಕೆಯೆಂದು ಪರಿಭಾವಿಸುವ ಇಂಥ ವೈದ್ಯರ ಸಂತತಿ ಸಾವಿರ ಸಾವಿರವಾಗಲಿ ಎಂದು ಆಶಿಸೋಣ.
Get In Touch With Us info@kalpa.news Whatsapp: 9481252093
Discussion about this post