ಶಿವಮೊಗ್ಗ: ಮಲೆನಾಡಿನ ಸೊಬಗನ್ನು ರಾಜ್ಯಕ್ಕೆ ಸಾರುತ್ತಿರುವ ಸಹ್ಯಾದ್ರಿ ಉತ್ಸವ ಸಾಹಿತ್ಯಕ್ಕೂ ಸಹ ವೇದಿಕೆಯನ್ನು ಸೃಷ್ಠಿಸಿದ್ದು, ಇದರಲ್ಲಿ ನಡೆದ ಕವಿಗೋಷ್ಠಿಯಲ್ಲಿ ಭದ್ರಾವತಿ ಆಕಾಶವಾಣಿ ವಿಶ್ರಾಂತ ನಿಲಯ ನಿರ್ದೇಶಕ, ಕಲ್ಪ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕರಾದ ಡಾ. ಸುಧೀಂದ್ರ ಕವಿತೆಯನ್ನು ಪ್ರಸ್ತುತಿ ಪಡಿಸಿದರು.
ಕುವೆಂಪು ರಂಗಮಂದಿರದಲ್ಲಿ ಸಹ್ಯಾದ್ರಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಅವರು ತಮ್ಮ ಕವಿತೆಯನ್ನು ಪ್ರಸ್ತುತಿಪಡಿಸಿದ್ದು, ಕವಿತೆ ಹೀಗಿದೆ:
ಸ್ವಯಂಭು…
ಸಾಧಿಸುವುದೇನೂ ಉಳಿದಿಲ್ಲ ತಂದೆ.
ನಿನ್ನ ದಯೆಯಿಂದ
ಬದುಕು ನಡೆದಿದೆ.
ಅರಿವೆ ತೊಡುವುದ ಕಲಿತೆ
ತನ್ನರಿವು ಮರೆತೆ.
ಬೇಯಿಸುವುದ ಕಲಿತೆ
ಬೆಂಕಿ ತಣ್ಣಗಾಗಿಸಿದೆ.
ನುಡಿಯುವುದ ಕಲಿತೆ
ನಾಲಗೆಯ ಅಡವಿಟ್ಟೆ.
ಭಾಷೆಯ ಕಲಿತೆ
ಬಾಡಿಗೆ ದರವಿಟ್ಟೆ.
ಬರೆವುದ ಕಲಿತೆ.
ಪೆನ್ನು ಕಡಪಡೆದೆ.
ಹಾಡುವುದ ಕಲಿತೆ.
ನೆರೆಯ ನಿದ್ದೆಗೆಡಿಸಿದೆ.
ಬಣ್ಣಗಾರಿಕೆ ಕಲಿತೆ
ನಿರ್ವಿಣ್ಣನಾದೆ.
ಈಜಾಡುವುದ ಕಲಿತೆ.
ಏಳುಕೆರೆ ನೀರು ಕುಡಿದೆ.
ಮರ ಹತ್ತುವುದ ಕಲಿತೆ.
ಬುಡ ಸಮೇತ ಕಡಿದೆ.
ಬೆಳೆಯುವುದ ಕಲಿತೆ
ಮಣ್ಣಕಣಕಣ ಮಾರಿ ಬಿಟ್ಟೆ.
ಸಂತಾನ ಶಕ್ತಿಯ ಕೊಟ್ಟೆ
ಪಿತಪಿತ ಮರಿಮಾಡಿ ಬಿಟ್ಟೆ.
ಬುದ್ಧಿ ಬೆಳೆಯಲು ಬಿಟ್ಟೆ
ಸಿದ್ಧಿಕಹಳೆ ಊದಿಬಿಟ್ಟೆ.
ರೋಗಗಳನೆಲ್ಲ ಅಟ್ಟಿಬಿಟ್ಟೆ
ಹೊಸದಕ್ಕೆಡೆಮಾಡಿ ಕೊಟ್ಟೆ.
ಸ್ನೇಹ ಸಮತೆ ಮರೆತೆ
ಅಣುಯುದ್ಧಕೆ ಅಣಿಯಾಗಿ ಬಿಟ್ಟೆ.
ಪ್ರಾಣವಾಯುಗೆ ವಿಷ ಬೆರೆಸಿಬಿಟ್ಟೆ.
ಭಾರೀ ಕೈಗಾರಿಕೆಗಳ ತಂದುಬಿಟ್ಟೆ
ಕರಕೌಶಲಕ್ಕೆ ಎಳ್ಳುನೀರು ಬಿಟ್ಟೆ.
ಆಳುವುದ ಹೇಳಿಕೊಟ್ಟೆ.
ತುಳಿದಾಳುವುದ ಕಲಿತುಬಿಟ್ಟೆ.
ತುಂಬಲು ಹೊಟ್ಟೆ ಕೊಟ್ಟೆ.
ಹಸಿವಾದವರ ಮರತು ಬಿಟ್ಟೆ.
ಒಂದಾಗಿ ಬಾಳಿರೆಂದು ಹರಸಿಬಿಟ್ಟೆ
ಎರಡುಮಾಡುವುದ ಕಲಿತುಬಿಟ್ಟೆ.
ತಂದೆ! ಇಷ್ಟುಬೆಳೆಸಿದ ನಿನಗೆ ಪರಾಕು !
ಬಾ…ಎದುರು ನಿಲ್ಲು ,ಬೇಡ ಅಳುಕು !
-ಚನ್ನಗಿರಿ ಸುಧೀಂದ್ರ
Discussion about this post