ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಎದುರಾಗಿರುವ ಬರ (Drought) ಪರಿಸ್ಥಿತಿಯನ್ನು ಕೇವಲ ಮಳೆ ಕೊರತೆಯ ಸಮಸ್ಯೆಯಾಗಿ ಪರಿಗಣಿಸದೆ, ಅಂತರ್ಜಲ ಸಂರಕ್ಷಣೆ, ನೀರಾವರಿ ವ್ಯವಸ್ಥೆ, ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್, ಬೆಳೆ ರಕ್ಷಣೆ ಹಾಗೂ ರೈತರ ಆದಾಯವನ್ನು ಒಳಗೊಂಡಂತೆ ಸಮಗ್ರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ರೂಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ (Dr.Dhananjaya Sarji) ಸರ್ಕಾರವನ್ನು ಒತ್ತಾಯಿಸಿದರು.
ವಿಧಾನ ಪರಿಷತ್ತಿನ ವಿಶೇಷ ಅಧಿವೇಶನದಲ್ಲಿ ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ರಾಜ್ಯದ 177 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ 852 ಮಿ.ಮೀ. ಮಳೆಯಾಗಬೇಕಿದ್ದರೂ ಕೇವಲ 642 ಮಿ.ಮೀ. ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.46 ಹಾಗೂ ಉತ್ತರ ಒಳನಾಡಿನಲ್ಲಿ ಶೇ.44ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ಅವರು ಗಮನ ಸೆಳೆದರು.
ಅಂತರ್ಜಲದ ಮೇಲೆ ಹೆಚ್ಚುತ್ತಿರುವ ಒತ್ತಡ
ಕೇಂದ್ರ ಅಂತರ್ಜಲ ಮಂಡಳಿಯ 2024ರ ವರದಿಯನ್ನು ಉಲ್ಲೇಖಿಸಿದ ಡಾ. ಸರ್ಜಿ, ಕರ್ನಾಟಕದಲ್ಲಿ ವಾರ್ಷಿಕ ಅಂತರ್ಜಲ ಮರುಪೂರಣ 18.74 ಬಿಲಿಯನ್ ಘನ ಮೀಟರ್ಗಳಷ್ಟಿದ್ದು, ಬಳಸಬಹುದಾದ ಅಂತರ್ಜಲ 16.88 ಬಿಲಿಯನ್ ಘನ ಮೀಟರ್ ಹಾಗೂ ವಾರ್ಷಿಕ ಅಂತರ್ಜಲ ಬಳಕೆ 11.55 ಬಿಲಿಯನ್ ಘನ ಮೀಟರ್ಗಳಷ್ಟಿದೆ ಎಂದರು.
ರಾಜ್ಯದಲ್ಲಿ ಅಂತರ್ಜಲ ಬಳಕೆಯ ಪ್ರಮಾಣ ಶೇ.68.44ಕ್ಕೆ ತಲುಪಿದೆ. ಒಟ್ಟು 237 ಮೌಲ್ಯಮಾಪನ ಘಟಕಗಳ ಪೈಕಿ 45 ಅತಿದೋಹಿತ, 15 ಗಂಭೀರ ಹಾಗೂ 33 ಅರೆ-ಗಂಭೀರ ಸ್ಥಿತಿಯಲ್ಲಿವೆ. ಹೀಗಾಗಿ ಭವಿಷ್ಯದಲ್ಲಿ ನೀರಿನ ಲಭ್ಯತೆ ದೊಡ್ಡ ಸವಾಲಾಗುವ ಸಾಧ್ಯತೆ ಇರುವುದರಿಂದ ಈಗಿನಿಂದಲೇ ವೈಜ್ಞಾನಿಕ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
“ಪ್ರತಿ ಬಾರಿ ಹೊಸ ಕೊಳವೆಬಾವಿ ಕೊರೆದು ಅಂತರ್ಜಲವನ್ನು ಹೊರತೆಗೆಯುವುದೇ ಬರಕ್ಕೆ ಪರಿಹಾರವಲ್ಲ. ಮಳೆನೀರು ಸಂಗ್ರಹ, ಅಂತರ್ಜಲ ಮರುಪೂರಣ, ಹನಿ ಮತ್ತು ತುಂತುರು ನೀರಾವರಿ ಹಾಗೂ ಗ್ರಾಮಮಟ್ಟದಲ್ಲಿ ಜಲ ಆಯವ್ಯಯಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಂದು ಬರಪೀಡಿತ ತಾಲೂಕಿಗೂ ವಾರ್ಷಿಕ ಜಲಧಾರಾ ಸಮತೋಲನ ಪತ್ರ ಸಿದ್ಧಪಡಿಸುವ ಅಗತ್ಯವಿದೆ” ಎಂದು ಅವರು ಸಲಹೆ ನೀಡಿದರು.
ಸೂಕ್ಷ್ಮ ನೀರಾವರಿಗೆ ಹೆಚ್ಚಿನ ಆದ್ಯತೆ ಅಗತ್ಯ
ಅಟಲ್ ಭೂಜಲ ಯೋಜನೆಯಡಿ ರಾಜ್ಯದಲ್ಲಿ ಈಗಾಗಲೇ 970 ಡಿಜಿಟಲ್ ಜಲಮಟ್ಟ ದಾಖಲಕಗಳನ್ನು ಅಳವಡಿಸಲಾಗಿದೆ. 1.86 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶವನ್ನು ದಕ್ಷ ಜಲಬಳಕೆಯ ವ್ಯಾಪ್ತಿಗೆ ತರಲಾಗಿದೆ ಎಂದು ಡಾ. ಸರ್ಜಿ ತಿಳಿಸಿದರು.
ರಾಜ್ಯದಲ್ಲಿ 2016-17ರವರೆಗೆ 9.17 ಲಕ್ಷ ಹೆಕ್ಟೇರ್ ಪ್ರದೇಶ ಸೂಕ್ಷ್ಮ ನೀರಾವರಿ ವ್ಯಾಪ್ತಿಗೆ ಬಂದಿದ್ದು, ಇದರಲ್ಲಿ 3.97 ಲಕ್ಷ ಹೆಕ್ಟೇರ್ ಹನಿ ನೀರಾವರಿ ಹಾಗೂ 5.19 ಲಕ್ಷ ಹೆಕ್ಟೇರ್ ತುಂತುರು ನೀರಾವರಿ ವ್ಯಾಪ್ತಿಯಲ್ಲಿತ್ತು. ನೀರಿನ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದರು.
Drought : ಕೃಷಿ ವಿದ್ಯುತ್ ವ್ಯವಸ್ಥೆ ದಕ್ಷವಾಗಬೇಕು
2026-27ನೇ ಸಾಲಿನ ಬಜೆಟ್ನಲ್ಲಿ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ಗಾಗಿ ₹19,290 ಕೋಟಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣಕ್ಕೆ ₹22,430 ಕೋಟಿ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ₹23,970 ಕೋಟಿ ಹಾಗೂ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಗೆ ₹1,700 ಕೋಟಿ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ಈ ನೆರವು ಹಾಗೂ ಅನುದಾನಗಳನ್ನು ಕಡಿತಗೊಳಿಸುವ ಬದಲು ದಕ್ಷ ವಿದ್ಯುತ್ ಪಂಪ್ಗಳು, ಸೌರಶಕ್ತಿ, ಹನಿ ನೀರಾವರಿ ಹಾಗೂ ಅಂತರ್ಜಲ ಮೇಲ್ವಿಚಾರಣೆಯಂತಹ ಕ್ರಮಗಳೊಂದಿಗೆ ಸಮನ್ವಯಗೊಳಿಸಬೇಕು. ಇದರಿಂದ ನೀರು ಮತ್ತು ವಿದ್ಯುತ್ ಎರಡರ ಬಳಕೆಯಲ್ಲೂ ದಕ್ಷತೆ ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.
ಬರ ಪರಿಹಾರಕ್ಕಿಂತ ಮುನ್ನೆಚ್ಚರಿಕೆ ಮುಖ್ಯ
ಕೇಂದ್ರದ ಬರ ಪರಿಹಾರದ ಕುರಿತು ನಡೆಯುತ್ತಿರುವ ಚರ್ಚೆಯನ್ನು ಉಲ್ಲೇಖಿಸಿದ ಡಾ. ಸರ್ಜಿ, 2024-25ನೇ ಸಾಲಿನಲ್ಲಿ ಕರ್ನಾಟಕಕ್ಕೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF)ಯಿಂದ ₹3,454.22 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಆದರೆ ಬರ ಬಂದ ನಂತರ ಪರಿಹಾರ ನೀಡುವುದಕ್ಕಿಂತ, ಬರ ಪರಿಸ್ಥಿತಿ ಎದುರಾಗುವ ಮುನ್ನವೇ ರೈತರನ್ನು ರಕ್ಷಿಸುವ ವ್ಯವಸ್ಥೆಯನ್ನು ಬಲಪಡಿಸುವುದು ಅಗತ್ಯ. ಜಲ ಸಂರಕ್ಷಣೆ, ಬೆಳೆ ವೈವಿಧ್ಯೀಕರಣ, ಸೂಕ್ಷ್ಮ ನೀರಾವರಿ ಹಾಗೂ ಹವಾಮಾನ ಆಧಾರಿತ ಕೃಷಿ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
Also read>> Mysuru Dasara: ಅಕ್ಟೋಬರ್ 11ರಿಂದ ಫಲಪುಷ್ಪ ಪ್ರದರ್ಶನ | ಈ ಬಾರಿಯ ವಿಶೇಷತೆಯೇನು?
ಶಿವಮೊಗ್ಗ ಭಾಗದ ಸಮಸ್ಯೆಗಳಿಗೂ ಆದ್ಯತೆ ನೀಡಿ
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ವಿಧಾನ ಪರಿಷತ್ತಿನಲ್ಲಿ ಪ್ರಸ್ತಾಪಿಸಿದ ಅವರು, ತುಂಗಾ–ಭದ್ರಾ ನೀರಾವರಿ ಯೋಜನೆಗೆ ಸಂಬಂಧಿಸಿದ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಉಬ್ರಾಣಿ ಏತ ನೀರಾವರಿ ಯೋಜನೆಯ ಪಂಪ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು. ಹಾಲು ಉತ್ಪಾದಕರಿಗೆ ನೀಡಲಾಗುವ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು. ಭದ್ರಾವತಿ ಭಾಗದ ಮೀನುಮರಿ ಉತ್ಪಾದಕರಿಗೆ ಸರ್ಕಾರದ ವತಿಯಿಂದ ಖರೀದಿ ನೆರವು ಒದಗಿಸುವ ಮೂಲಕ ಅವರ ಆರ್ಥಿಕ ಸ್ಥಿತಿ ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ವಿಳಂಬ ತಪ್ಪಿಸಿ
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆದ ನಂತರ ವಿದ್ಯುತ್ ಸಂಪರ್ಕಕ್ಕಾಗಿ ರೈತರು ಮೂರು–ನಾಲ್ಕು ವರ್ಷಗಳವರೆಗೆ ಕಾಯುವ ಪರಿಸ್ಥಿತಿ ಇದೆ. ಈ ವಿಳಂಬವನ್ನು ತಪ್ಪಿಸಲು ವಿದ್ಯುತ್ ಸಂಪರ್ಕ ಕಲ್ಪಿಸಲು ನಿಗದಿತ ಕಾಲಮಿತಿ ರೂಪಿಸಬೇಕು ಎಂದು ಡಾ. ಸರ್ಜಿ ಒತ್ತಾಯಿಸಿದರು.
ಇದರ ಜೊತೆಗೆ ಜೂನ್ಗೂ ಮುನ್ನ ಸಂಭವಿಸುವ ಸುಂಟರಗಾಳಿ, ಅಕಾಲಿಕ ಮಳೆ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ಹಾನಿಗೂ ವಿಮಾ ರಕ್ಷಣೆ ದೊರೆಯುವಂತೆ ಬೆಳೆ ವಿಮಾ ನಿಯಮಗಳನ್ನು ಪರಿಷ್ಕರಿಸಬೇಕು ಎಂದು ಅವರು ಮನವಿ ಮಾಡಿದರು.
ಪರಿಹಾರದ ಪ್ರಮಾಣಕ್ಕಿಂತ ಫಲಿತಾಂಶ ಮುಖ್ಯ
“ಬರ ಪರಿಹಾರಕ್ಕೆ ಎಷ್ಟು ಕೋಟಿ ರೂಪಾಯಿ ಖರ್ಚಾಯಿತು ಎಂಬುದಷ್ಟೇ ಸಾಧನೆಯ ಮಾನದಂಡವಾಗಬಾರದು. ಎಷ್ಟು ರೈತರಿಗೆ ನೆರವು ತಲುಪಿತು, ಎಷ್ಟು ಅಂತರ್ಜಲ ಮರುಪೂರಣವಾಯಿತು, ನೀರಿನ ಬಳಕೆ ಎಷ್ಟು ಕಡಿಮೆಯಾಯಿತು, ಬೆಳೆ ಉತ್ಪಾದಕತೆ ಹಾಗೂ ರೈತರ ಆದಾಯ ಎಷ್ಟು ಹೆಚ್ಚಾಯಿತು ಎಂಬುದೇ ನಿಜವಾದ ಫಲಿತಾಂಶವಾಗಬೇಕು” ಎಂದು ಡಾ. ಧನಂಜಯ ಸರ್ಜಿ ಹೇಳಿದರು.
ಬರ ಬಂದ ನಂತರ ಪರಿಹಾರ ನೀಡುವ ವ್ಯವಸ್ಥೆಯಿಂದ ಹೊರಬಂದು, ಬರ ಬರುವ ಮೊದಲೇ ರೈತರನ್ನು ರಕ್ಷಿಸುವ ಮುನ್ನೆಚ್ಚರಿಕಾ ವ್ಯವಸ್ಥೆಯತ್ತ ಕರ್ನಾಟಕ ಸಾಗಬೇಕು. ಇದಕ್ಕಾಗಿ ಜಲ ಸಂರಕ್ಷಣೆ, ವೈಜ್ಞಾನಿಕ ನೀರಿನ ನಿರ್ವಹಣೆ, ದಕ್ಷ ನೀರಾವರಿ, ಕೃಷಿ ವಿದ್ಯುತ್ ಸುಧಾರಣೆ ಹಾಗೂ ಪರಿಣಾಮಕಾರಿ ಬೆಳೆ ವಿಮೆಯನ್ನು ಸಮಗ್ರವಾಗಿ ಜಾರಿಗೊಳಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







