ಮಳೆ ನಿಸರ್ಗದತ್ತ, ನಮಗೆ ಅನಿವಾರ್ಯ. ಜೀವಜಲ ಸಮೃದ್ಧವಾಗಿ ದೊರಕುವುದೇ ಈ ಋತುವಿನಲ್ಲಿ. ಮಳೆ ಬಂದ್ರೆ ಕೇಡಲ್ಲ. ಮಗ ಉಂಡ್ರೆ ಕೇಡಲ್ಲ ಎಂಬ ಹಿರಿಯರ ಮಾತಿದೆ.
ಭಾರತದ ಬೆನ್ನುಲುಬು ರೈತ ಮತ್ತು ಬೇಸಾಯ. ಮುಂಚೆ ಕೃಷಿ ಮಳೆ ಆಧಾರಿತವಾಗಿತ್ತು. ನಂತರ ನೀರಾವರಿ ಯೋಜನೆಗಳ ಮೂಲಕ ಕೃಷಿಗೆ ನೀರಿನ ಪೂರೈಕೆ ಮಾಡುವ ವ್ಯವಸ್ಥೆ ಬಂತು. ಭಾರೀ ಅಣೆಕಟ್ಟು, ಜಲಾಶಯಗಳು ನಮ್ಮ ಕೃಷಿಗೆ ಸಮರ್ಥವಾಗಿ ನೆರವಾದವು. ಆದರೆ ದಶಕಗಳಗಟ್ಟಲೆ ದುರಸ್ತಿಯ ಫಲವಾಗಿ ಹೂಳು ತುಂಬಿಕೊಂಡು ಸಾಮರ್ಥ್ಯ ಸಂಗ್ರಹಣೆಯಲ್ಲಿ ಕೊರತೆ ಬಿದ್ದಿವೆ. ಹೀಗಾಗಿ ಮಳೆಗಾಲದಲ್ಲಿ ಜಲಪ್ರಳಯಕ್ಕೆ ನಮ್ಮ ಗ್ರಾಮಗಳು ತುತ್ತಾಗುತ್ತಿವೆ.
ಮಳೆಗಾಲದಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾದರೆ, ಪ್ರವಾಹ ಬಂದರೆ ಏನು ಮುಂಜಾಗ್ರತೆ ವಹಿಸಬೇಕು ಎನ್ನುವುದನ್ನು ಇಂದಿನ ಅತ್ಯಂತ ಐಟಿ ಪರಿಣಿತರ ಯುಗದಲ್ಲಿ ಯಾರೂ ಹೇಳಿ ಕೊಡಬೇಕಾಗಿಲ್ಲ.
ಬರ ಬಂದರೆ ಜಾಗೃತೆಯ ಮಾತಾಡುತ್ತೇವೆ. ಮುಂದಾಲೋಚನೆ ಬಗ್ಗೆ ಜಿಲ್ಲಾವಾರು ಸಭೆಗಳು ನಡೆಯುತ್ತವೆ. ಆದರೆ ಪ್ರವಾಹ ಬಂದಾಗ ಏನು ಮುಂಜಾಗ್ರತೆ ಇರಬೇಕು? ಎಂಬ ಮಾಹಿತಿ ಬಗ್ಗೆ ಸಿದ್ಧರಾಗುವುದಿಲ್ಲ ಯಾಕೆ?
ನೀರಿನ ರಭಸಕ್ಕೆ ಸಿಕ್ಕಾಗ ವಿಷಮ ಪರಿಸ್ಥಿತಿಯನ್ನು ನೋಡಿ ವಿಪತ್ತು ನಿರ್ವಹಣೆ ಪಡೆಗೆ ಕೋರಿಕೆ ಸಲ್ಲಿಸಲಾಗುತ್ತದೆ. ಇದನ್ನು ಜೊತೆಗೆ ಯಾಕೆ ಯೋಜಿಸಿರುವುದಿಲ್ಲ. ಹವಾಮಾನ ಇಲಾಖೆಯ ವರದಿಯಿರುತ್ತದೆ. ಹಿಂದೆ ಸುನಾಮಿಯನ್ನು ಎದುರಿಸಿ ಒಂದು ಸಾವೂ ಆಗದಂತೆ ನೋಡಿಕೊಂಡ ಉದಾಹರಣೆಯಿದೆ. ಆದರೆ ಈಗ ಪ್ರವಾಹವನ್ನು ಎದುರಿಸುವಲ್ಲಿ ಏನೋ ಕೊರತೆ ಕಾಣುತ್ತಿದೆ.
ಈಗಂತೂ ಸರ್ಕಾರದಲ್ಲಿ ಸಚಿವರೇ ಇಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳೇ ನಿರ್ವಹಿಸಬೇಕು. ಜನಪ್ರತಿನಿಧಿಗಳೇ ಮುಂದಾಗದಿದ್ದರೆ ಅಧಿಕಾರಿಗಳನ್ನು ಎಷ್ಟು ಆಕ್ಷೇಪಿಸುವುದು?
ಇದಲ್ಲದೇ, ರಾಜ್ಯದ ಬಹುತೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವ ವೇಳೆಯಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳು ವರ್ಗಾವಣೆ ಎಗ್ಗಿಲ್ಲದೇ ನಡೆಯುತ್ತಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿರುವ ಈ ವೇಳೆಯಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆಯಾದರೆ ಅದು ಪರಿಹಾರ ಹಾಗೂ ರಕ್ಷಣಾ ಕಾರ್ಯಗಳ ಮೇಲೆ ಪರಿಣಾಮ ಬೀರುವುದು ನಿಶ್ಚಿತ.
ಹೊಸದಾಗಿ ಜಿಲ್ಲೆಗಳಿಗೆ ಆಗಮಿಸುವ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಅಲ್ಲಿನ ಪ್ರಾಕೃತಿಕ ಹಾಗೂ ಭೌಗೋಳಿಕತೆ ಮಾಹಿತಿ ಇರುವುದಿಲ್ಲ. ಹೀಗಿರುವಾಗ, ಅವರು ಆಡಳಿತಾತ್ಮಕವಾಗಿ ಇಂತಹ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಕಷ್ಟವಾಗುತ್ತದೆ. ಹಳೆಯ ಅಧಿಕಾರಿಗಳೇ ಆದರೆ, ಅವರಿಗೆ ಜಿಲ್ಲೆಯ ಸಮಗ್ರ ಮಾಹಿತಿಯಿರುತ್ತದೆ. ಹೀಗಾಗಿ, ಇಂತಹ ಸಂದರ್ಭದ ವರ್ಗಾವಣೆಗಳು ಮೂರ್ಖತನದ ನಿರ್ಧಾರವಾಗುತ್ತದೆಯಾದ್ದರಿಂದ ಈ ಬಗ್ಗೆ ರಾಜ್ಯ ಸರ್ಕಾರ ಚಿತ್ತ ಹರಿಸಬೇಕಿದೆ.
ಮುಖ್ಯಮಂತ್ರಿಗಳು ಈ ಬಗ್ಗೆ ತೀವ್ರ ಗಮನ ಹರಿಸಬೇಕು. ಎಷ್ಟು ಹಣವಾದರೂ ನೀಡಲಾಗುತ್ತದೆ ಎಂಬ ಅಭಯ ನೀಡಿದ್ದರೂ ಈ ಬಗ್ಗೆ ಒತ್ತಾಸೆಯಾಗಿ ಜಿಲ್ಲಾ ಸಚಿವರು ನಿಲ್ಲಬೇಕಾಗುತ್ತದೆ.
ಹೀಗಾಗಿ ತಕ್ಷಣ ಸಚಿವರ ನೇಮಕವಾಗಬೇಕು. ಅಧಿಕಾರಿಗಳಿಗೆ ಬೆಂಬಲ ನೀಡಿ ಈಗಿನ ಪ್ರವಾಹ ಪ್ರಕ್ಷುಬ್ಧತೆಯನ್ನು ನಿಯಂತ್ರಿಸಬೇಕು. ಈ ಬಗ್ಗೆ ಸಂಬಂಧಿಸಿದವರು ಗಮನ ಹರಿಸಬೇಕಿದೆ.
ಸಂಪಾದಕೀಯ: ಡಾ.ಸುಧೀಂದ್ರ
ಹಿರಿಯ ಸಲಹಾ ಸಂಪಾದಕರು
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
Discussion about this post