ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಂತು ಚೀನಾದಿಂದ ಬಂದ ಕೊರೊನಾ ಸುದ್ದಿ ಚೀನಾ ಯುದ್ಧದಿಂದ ಸ್ವಲ್ಪ ಬದಿಗೆ ಸರಿಯಿತು ಅಂತ ಅಂದ್ಕೊಂಡ್ರೆ ಏನೋ ಅಭಿಯಾನ ಅಂತೆ.. ಆ ವಸ್ತು ತೊಗೊಬಾರದಂತೆ.. ಈ ಫೋನ್ ಆ್ಯಪ್ ಬಳಸಬಾರದಂತೆ.. ದೇಶದ ಆರ್ಥಿಕತೆಯಂತೆ… ಏನೋಪ್ಪಾ.. ಗೋಳೇ ಮುಗೀತಿಲ್ಲ..
ನಾವಾಯಿತು.. ನಮ್ಮ ಕೆಲಸ ಆಯಿತು.. ನೀವು ಹೇಳಿದ್ದನ್ನೆಲ್ಲ ಕೇಳಿಕೊಂಡು ಮಾಡುತ್ತಾ ಕೂತಿದ್ದರೆ ನಮ್ಮ ಹೊಟ್ಟೆ ಯಾರು ತುಂಬಿಸುತ್ತಾರೆ? ನಾವು ದುಡಿಯಲೇಬೇಕು. ನಮ್ಮ ಕೆಲಸವನ್ನು ಮಾಡಲೇಬೇಕು. ನಮ್ಮ ಅಗತ್ಯಕ್ಕೆ ಬೇಕಾದ ವಸ್ತುಗಳನ್ನು ನಾವು ಎಲ್ಲಿಂದಾದರೂ ಕಂಡುಕೊಳ್ಳುತ್ತೇವೆ. ಯಾವುದು ಕಡಿಮೆ ಬೆಲೆಗೆ ಸಿಗುತ್ತೆ? ನಮ್ಮ ದುಡಿಮೆ ಇರುವುದು ಎಷ್ಟು?
ಅಗ್ಗದ ಪದಾರ್ಥಗಳಂತೆ ಕೊಂಡು ಬದುಕಿದರೆ ನಾಳೆ ಸ್ವಲ್ಪ ಸೇವಿಂಗ್ ಮಾಡಬಹುದು. ಉಪಯೋಗಿಸುವುದಕ್ಕೆ ವಸ್ತುಗಳು ಎಲ್ಲಿಂದ ಬಂದರೇನು? ಯಾರು ಮಾಡಿದರೇನು ?
ದುಡ್ಡು ಕೊಟ್ಟದ್ದಕ್ಕೆ ಅಗತ್ಯ ವಸ್ತು ಸಿಗುತ್ತೆ ಅನ್ನೋದಷ್ಟೇ ಮುಖ್ಯ. ಇದೊಂದು ಬಗೆಯ ಚಿಂತನಾ ಲಹರಿ. ಇನ್ನು ಕೆಲವರು ಇನ್ನೊಂದು ರೀತಿ ಈ ವಿಷಯದ ಬಗ್ಗೆ ಮಾತಾಡ್ತಾರೆ. ಚೀನಾವನ್ನು ಎದುರಿಸಿಕೊಂಡು ಬದುಕುವುದು ಸಾಧ್ಯವೇ? ಎಷ್ಟು ದೊಡ್ಡ ದೇಶ. ದೇಶದ ನಡುವೆ ಮಾತು ಬರುತ್ತೆ ಹೋಗುತ್ತೆ. ಅವರ್ಯಾರೋ ಜಗಳವಾಡಿದರು ಅಂತ ನಮ್ಮ ವ್ಯವಹಾರವನ್ನು ನಾವು ಬಿಡಲಾದೀತೆ? ನಾವು ಅಂದುಕೊಂಡ ರೀತಿಯ ಸುಖದ ಬದುಕನ್ನು ಅವರ ವಸ್ತುಗಳಿಂದ ಪಡೆಯುವುದು ಸುಲಭ ಇದೆ ಅದಕ್ಕಾಗಿ ಬಳಸುತ್ತಿರುವೆವು. ಸಿಗುವ ವಸ್ತುಗಳನ್ನು ಬಿಟ್ಟು ನಾವ್ಯಾಕೆ ಕಷ್ಟ ಪಡಬೇಕು? ಹೊಸ ವಸ್ತುವನ್ನು ತಯಾರಿಸುವ ಕಷ್ಟಕ್ಕೆ ನಾವು ನಮ್ಮನ್ನು ಒಡ್ಡಿಕೊಳ್ಳಬೇಕು? ನಾವ್ಯಾಕೆ ಕೈ ಸುಟ್ಟುಕೊಳ್ಳಬೇಕು?
ಇನ್ನು ಕೆಲವು ದುಡುಕರ ಆರ್ಭಟಗಳು ಕಿವಿಗೆ ಅಪ್ಪಳಿಸುತ್ತಿದ್ದವು. ಗನ್ ಇರೋದು ಶತ್ರುಗಳ ಎದೆ ಸೀಳಲು. ಪೂಜೆ ಮಾಡಲಿಕ್ಕಲ್ಲ. ನುಗ್ಗಿ ಗುದ್ದೋಡಿ ಸೇಡು ತೀರಿಸುವುದೆ ಸರಿಯಾದ ದಾರಿ. ಏನು ಮಾಡುತ್ತಿದ್ದಾರೆ ಮಂತ್ರಿಗಳು ದಂಡಾಧಿಕಾರಿಗಳು. ಕತ್ತೆ ಕಾಯ್ತಾ ಇದ್ದಾರಾ? ನಾವು ನಮ್ಮ ಪುಂಡರ ಸಂಘದಿಂದ ತೀವ್ರ ಹೋರಾಟ ಮಾಡೋಣ. ನನ್ನ ಹತ್ರ ಇರೋ ತರಹದ ಬಾಯ್ಕಾಟ್ ಚೀನಾ ಬರಹದ ಟೀಶರ್ಟ್ ಹಾಕೊಂಡು ಹೋಗೋಣ. ಹೀಗೆ ಪುಂಖಾನುಪುಂಖವಾಗಿ ಮಾತುದುರಿಸುತ್ತಿದ್ದ ಧಡಿಯ ಸಿಆರ್’ಪಿ ಲೇಬಲ್’ನ ಆ ಟೀ ಶರ್ಟ್ ಹಾಕಿಕೊಂಡು ಆಫೀಸ್ ಕಡೆಗೆ ಸಾಗಿದ. (ಬಾಯ್ಕಾಟ್ ಚೀನಾ ಬರಹದ ಶರ್ಟ್ ಕೂಡ ಚೀನವೆ ಬಿಡುಗಡೆ ಮಾಡಿದೆ. ಅದೂ ಅವರಿಗೊಂದು ವ್ಯಾಪಾರ. ನಮ್ಮನ್ನು ಬಿಟ್ಟು ಬದುಕುವ ಶಕ್ತಿಯನ್ನು ಕಸಿದಿದ್ದೇವೆ. ನಾಚಿಕೆ ಇಲ್ಲದ ಸೋಂಬೇರಿಗಳು ಭಾರತೀಯರು ಹೀಗೆಂದು ಅಲ್ಲಿಯ ಪತ್ರಿಕೆಯೆ ಪ್ರಕಟಿಸಿತ್ತು.)
ಹೀಗೆ ನೂರಾರು ತರ್ಕಗಳ ನಡುವೆ ಚೀನಾದ ಕುಹಕ ನಮ್ಮ ಆಹ್ವಾನವನ್ನು ಮನ್ನಿಸಿ ನಮ್ಮನ್ನೆ ಗೆದ್ದು ಬಿಡುತ್ತದೆ. ಹಲವು ದೃಷ್ಟಿಕೋನದಿಂದ ಚೀನಾ ನಮ್ಮನ್ನು ಕಟ್ಟಿಹಾಕುವ ಪ್ರಯತ್ನವನ್ನು ಮಾಡುತ್ತಿದೆ.
ಜಾತಿ, ಭಾಷೆ, ಮತ, ಜನಾಂಗ, ಪಕ್ಷಗಳ ಒಡಕನ್ನು ಕೆಣಕುವ ವಿಚಾರವ್ಯಾಧಿಗಳನ್ನು ಸಾಕಿ ಸಲಹಿ ನಮ್ಮ ನಡುವೆ ಛೂಬಿಟ್ಟು ಗೆಲುವಿನ ಮುಸಿಮುಸಿ ನಗುವಿಗಾಗಿ ಹಾತೊರೆಯಿತ್ತಿದೆ.
ನಮ್ಮ ಅಗತ್ಯವಸ್ತುಗಳನ್ನೆಲ್ಲ ದೀರ್ಘ ಬಾಳದ, ಬಳಸಿದ ಬಳಿಕ ವಿಲೇವಾರಿಗೆ ತೊಡಕಾಗುವ, ಆದರೆ ವಿರೋಧಿಸಲಾಗದ ಸುಲಭ ಬೆಲೆಗೆ ಕೊಟ್ಟು ನಮ್ಮ ಆರ್ಥಿಕತೆಯ ಮೇಲೆ ಪ್ರಭುತ್ವ ಸಾಧಿಸುವ ಹಂಬಲ ಮೂಗಿನವರೆಗಿದೆ. ಚೀನಾ ಗಡಿಕ್ಯಾತೆಯನ್ನು ಮುಂದಿಟ್ಟುಕೊಂಡು ತನ್ನೊಳಗಿನ ಸರ್ವಾಧಿಕಾರದ ಬಿಕ್ಕಟ್ಟನ್ನು ಶಮನಗೊಳಿಸುವ ಇಕ್ಕಟ್ಟಿನಲ್ಲಿದೆ. ಜಪಾನ್ ತೈವಾನ್’ಗಳೂ ತಿರುಗಿಬಿದ್ದಿವೆ.
ಚೀನಾ ಅಸ್ತ್ರವಿಲ್ಲದೆ ಜಗತ್ತಿನ ಮೇಲೆ ಸಾರಿದ ಸಮರ ಬಹ್ವಂಶ ಫಲಿಸಿದೆ. ಭಾರತವೊಂದನ್ನು ಬಿಟ್ಟು. ಹೀಗೆ ಭಾರತ ಸಶಕ್ತಗೊಳ್ಳುವುದನ್ನು ಸಹಿಸಲಾಗದೆ ನೇಪಾಳ ಬಂಗಾಳ ಪಾಕಿಗಳನ್ನು ಪ್ರಚೋದಿಸುತ್ತಿದೆ.
ಇದು ಸರಿಯಾದ ಸಮಯ ನಮ್ಮತನವನು ಹೊರಗೆಡಹಲು. ಭಾರತ ಎಂದಿಗೂ ತಾನು ಸಹಾಯ ಕೊಡಬಲ್ಲ ರಾಷ್ಟ್ರ ಹೊರತು ಕೈನೀಡಿ ಪಡೆಯುವ ದುಸ್ಥಿತಿಯಲ್ಲಿಲ್ಲ. ಇದನ್ನು ಚೀನಾಕ್ಕೆ ಅರಿವಾಗಿಸಲು ಕಾಲ ಬಂದಿದೆ. ಐಷಾರಾಮದ ಬದುಕಿಗೆ ಬೇಕಿರುವ ಚೀನಾವಸ್ತುಗಳನ್ನು ಮೊದಲು ದೂರಮಾಡೋಣ. ತಂದಿಟ್ಟುಕೊಂಡಿರುವಂತದ್ದಾದರೆ ಹಾಳಾಗುವ ತನಕ ಬಳಸೋಣ. ಸದ್ಯ ತೀರಾ ಅಗತ್ಯದ ವಸ್ತುಗಳು ಬೇರೆ ಆಯ್ಕೆ ಇಲ್ಲದಾಗ ಸ್ವೀಕರಿಸುತ್ತಲೇ ಬದಲಿ ವ್ಯವಸ್ಥೆ ಅರಸುವಿಕೆ ನಡೆಸುತ್ತಿರೋಣ. ಆ ಬದಲಿ ವಸ್ತು ಭಾರತದ್ದಾಗಿರಲಿ. ಅಷ್ಟಾಗದಿದ್ದರೆ ಚೀನಾದ್ದಂತು ಆಗದಿರಲಿ.
ದೇಶದ ಪ್ರತಿಯೊಬ್ಬ ಪ್ರಜೆಯು ಈಗ ಸಾವಿನೊಡನೆ ಹೋರಾಡಬೇಕಿದೆ. ದುಡಿಯದ ಕೈಗೆ ಮೊಸರೆಂತು ಅಂಟೀತು. ಆರ್ಥಿಕತೆಯ ಬೆನ್ನೆಲುಬೆ ದುಡಿಮೆ. ನಮಗಾಗಿ, ನಮ್ಮವರಿಗಾಗಿ, ನಾಳೆಯ ತಲೆಯೆತ್ತಿ ನಿಲ್ಲಬೇಕಾದ ಭಾರತಕ್ಕಾಗಿ ದುಡಿಯುವ ಪ್ರತಿಯೊಬ್ಬ ಸೇವಕನೂ ಸೈನಿಕನೆ. ನಮ್ಮ ಪಾಲಿನ ಕರ್ಮ ನಡೆಸುವುದೇ ಜಯದ ಮರ್ಮ.
ಜೈಹಿಂದ್
Get In Touch With Us info@kalpa.news Whatsapp: 9481252093
Discussion about this post