ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ತಂದೆ ಎಂದರೆ ಎಲ್ಲಿಲ್ಲದ ಮಮತೆ ಜತೆಗೆ ವಿಶೇಷ ಗೌರವ. ಬಾಲ್ಯದಿಂದ ಮೊದಲ್ಗೊಂಡು ದಡ ಸೇರಿಸುವವರೆಗೂ ತನ್ನ ಬೆನ್ನೆಲುಬಾಗಿ ನಿಂತು ತನ್ನದೇ ಆದ ಕೊಡುಗೆ ನೀಡುವ ತಂದೆಯೆಂಬ ಮಹಾನ್ ವ್ಯಕ್ತಿತ್ವವನ್ನು ಬಹುಷಃ ಹೆಣ್ಣುಮಕ್ಕಳು ಜೀವಿತಾವಧಿಯವರೆಗೂ ಮರೆಯಲಾರರು. ಅಂತಹುದೇ ತಂದೆಯ ಹಠ, ಮಗಳ ಸಾಧನೆಯ ಬಗ್ಗೆ ತಿಳಿಸಲು ಹೊರಟಿದೆ ಈ ಸ್ಟೋರಿ.
ಹೌದು, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ತಂದೆ, ತನ್ನ ಮಗಳನ್ನು ಮಗನಂತೆ ಬೆಳೆಸಿ, ತನ್ನಷ್ಟೇ ತೃಪ್ತಿಪಟ್ಟುಕೊಳ್ಳದೆ ಉನ್ನತ ಕೆಲಸ ಪಡೆದು, ಸಮಾಜಕ್ಕೆ ಕೊಡುಗೆ ನೀಡುವ ಶಕ್ತಿಯಾಗಲಿ ಎಂದು ಹಠತೊಟ್ಟಿದ್ದು, ಆ ಹಠವನ್ನು ಸವಾಲಾಗಿ ತೆಗೆದುಕೊಂಡು ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗುವ ಜತೆಗೆ ಸಾಮಾಜಿಕ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡ ಮಗಳ ವೃತ್ತಾಂತಕ್ಕೆ ಸಾಕ್ಷಿಯಾಗಿದೆ ಈ ಕಥಾನಕ.
ಈ ಕಥೆ ಬೇರೆ ಯಾರದೂ ಅಲ್ಲ, ನಮ್ಮಲ್ಲೇ ಓಡಾಡಿಕೊಂಡು ಬೆಳೆದು ಇದೀಗ ಸಾಫ್ಟ್ ವೇರ್ ಪ್ರಪಂಚದಲ್ಲಿ ನೆಲೆಕಂಡುಕೊಂಡಿರುವ ಆರ್. ನವ್ಯಶ್ರೀ ಹಾಗೂ ಅವರ ತಂದೆ ರಾಮಚಂದ್ರರಾವ್ ಅವರದ್ದು. ಎಚ್ ಸಿಎಲ್ ನಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿರುವ ನವ್ಯಶ್ರೀ ಸಮಾಜ ಸೇವೆಗಳಲ್ಲಿಯೂ ಸಹ ತೊಡಗಿಸಿಕೊಂಡಿದ್ದಾರೆ. ರಾಜಕಾರಣದ ಮೂಲಕ ತನ್ನ ಆಕಾಂಕ್ಷೆಗಳನ್ನು ಈಡೇರಿಸುವ ಮಹತ್ವಾಕಾಂಕ್ಷೆಯೊಂದಿಗೆ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿಯೂ ಸಹ ಅವರು ಸ್ಪರ್ಧೆ ಮಾಡಿ ಅಧಿಕೃತವಾಗಿ ರಾಜಕಾರಣ ಪ್ರವೇಶ ಮಾಡಿದ್ದರು. ತಾಲೂಕಿನಾದ್ಯಂತ ಚಿರಪರಿಚಿತವಾಗಿರುವ ಅವರ ಸಾಧನೆಯ ಹೆಜ್ಜೆಗಳ ಬಗ್ಗೆ ಕಲ್ಪ ನ್ಯೂಸ್ ಸಂದರ್ಶಿಸಿದ ಭಾಗ ಇಲ್ಲಿದೆ.
ಕಲ್ಪ: ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನೀವು, ಸವಾಲುಗಳ ನಡುವೆಯೂ ಈ ಹಂತಕ್ಕೆ ಬರುತ್ತೀರೆಂಬ ನಂಬಿಕೆ ಇತ್ತೆ?
ನವ್ಯ: ಖಂಡಿತ ಇತ್ತು. ನನ್ನ ಈ ಬೆಳವಣಿಗೆಗೆ ಪ್ರಮುಖ ಕಾರಣ ತಂದೆ ರಾಮಚಂದ್ರರಾವ್. ಚಿಕ್ಕಂದಿನಿಂದಲೂ ಅಪಾರ ಪ್ರೀತಿ, ಮಗನಂತೆ ಬೆಳೆಸಿ ನನ್ನ ದಡ ಮುಟ್ಟಿಸಲು ಅಹರ್ನಿಷಿ ದುಡಿದಿದ್ದಾರೆ. ಪ್ರತಿ ಹಂತದಲ್ಲಿಯೂ ಹೆಗಲುಕೊಟ್ಟಿದ್ದಾರೆ, ಹುರಿದುಂಬಿಸುತ್ತಿದ್ದಾರೆ. ಅವರ ಆಸೆಯನ್ನು ನನಸು ಮಾಡುವ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ, ಅಂತಿಮವಾಗಿ ಸಾಫ್ಟ್ ವೇರ್ ಇಂಜಿನಿಯರ್ ಕನಸನ್ನು ನನಸು ಮಾಡುವ ಜತೆಗೆ ತಾಲೂಕಿನಲ್ಲಿ ಸಾಮಾಜಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ಪರಿಚಿತಳಾಗಿದ್ದೇನೆ.
ಕಲ್ಪ: ಎಲ್ಲ ಸಾಧನೆಗಳ ಹಿಂದೆ ತಂದೆ ಶ್ರಮವಿದೆ ಎನ್ನುತ್ತೀರಿ, ಅವರ ಸಹಕಾರ ಹೇಗಿತ್ತು?
ನವ್ಯ: ಬಾಲ್ಯದಿಂದಲೂ ಅವರ ಸಹಕಾರ ಅದ್ಭುತವಾಗಿತ್ತು. ಶಾಲೆಗೆ ತಮ್ಮ ಸೈಕಲ್ ನಲ್ಲಿ ಕರೆತಂದು ಬಿಟ್ಟು ಹೋದರೆ ಮಧ್ಯಾಹ್ನದ ವೇಳೆಗೆ ಬಾಕ್ಸ್ ಜೊತೆಯಲ್ಲಿ ಹಾಜರಾಗುತ್ತಿದ್ದರು, ಸಂಜೆ ವಾಪಸ್ ಕರೆದೊಯ್ಯುವ ಸಂದರ್ಭದಲ್ಲಿ ಕೇಳಿದ್ದನ್ನು ಕೊಡಿಸಿ, ಮನೆ ತಲುಪಿಸಿ ಅವರ ಕರ್ತವ್ಯಕ್ಕೆ ತೆರಳುತ್ತಿದ್ದರು, ಒತ್ತಡದ ನಡುವೆಯೂ ನನ್ನ ಶಾಲಾ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟರು. ಮಗ, ಮಗಳು ಇಬ್ಬರೂ ನೀನೇ, ನನಗಿಂತ ಉನ್ನತ ಸ್ಥಾನದಲ್ಲಿ ನೀನು ಕೂರಬೇಕೆಂದು ಹೇಳುತ್ತಲೇ ಇದ್ದರು, ಅದು ಆಗುವವರೆಗೂ ಜತೆಯಲ್ಲಿಯೇ ನಿಂತರು.
ಕಲ್ಪ: ಇಂಜಿನಿಯರ್ ಮಾಡಬೇಕೆಂಬ ಹಠ ಅವರಲ್ಲಿ ಏಕಿತ್ತು?
ನವ್ಯ: ಸರ್ಕಾರಿ ಕೆಲಸದಲ್ಲಿ ಮೇಲು, ಕೀಳು ಎಂಬ ಸನ್ನಿವೇಶ ಸಾಮಾನ್ಯ. ಹಾಗಾಗಿ ತನ್ನ ಹುದ್ದೆಯ ಮೇಲಿನವರು ನಡೆದುಕೊಳ್ಳುತ್ತಿದ್ದ ರೀತಿ ಅವರಿಗೆ ಸಾಕಷ್ಟು ಬೇಸರ ತರಿಸಿತ್ತು. ತನ್ನ ಮಗಳು ಆ ಸ್ಥಿತಿ ಅನುಭವಿಸಬಾರದೆಂಬ ಉದ್ದೇಶ ಅವರಲ್ಲಿತ್ತು. ಹಾಗಾಗಿ ಇಂಜಿನಿಯರ್ ಮಾಡಿ, ನನ್ನನ್ನೂ ಅಧಿಕಾರಿ ಮಟ್ಟದಲ್ಲಿ ನೋಡಲು ಅವರಿಗೆ ಸಾಕಷ್ಟು ಆಸೆಯಿತ್ತು, ಅವರ ಆಸೆಗೆ ತಕ್ಕಂತೆ ಎಲ್ಲ ಸವಾಲುಗಳನ್ನು ಮೆಟ್ಟಿ 2013ರಲ್ಲಿ ಸಾಫ್ಟ್ ವೇರ್ ದೈತ್ಯ ವಿಪ್ರೋದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಕನಸಿನ ಆರಂಭಕ್ಕೆ ಮುನ್ನುಡಿ ಬರೆದೆ.
ಕಲ್ಪ: ಅವರ ಕನಸನ್ನು ನನಸು ಮಾಡಿದ್ದು ಸರಿ, ಸಮಾಜ ಸೇವೆಯತ್ತ ಮನಸ್ಸು ಏತಕ್ಕೆ ಹರಿಯಿತು?
ನವ್ಯ: ಚಿಕ್ಕಂದಿನಿಂದಲೂ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕೆಂಬ ತುಡಿತ ನನ್ನಲ್ಲಿತ್ತು. ಅದಕ್ಕೆ ವೇದಿಕೆಯಾಗಿದ್ದು ಪತ್ರಿಕೋದ್ಯಮ. 2011ರಲ್ಲಿ ಪತ್ರಿಕೋದ್ಯಮಕ್ಕೆ ಬಂದ ನಾನು ಅಲ್ಲಿಂದ ಸಮಾಜದಲ್ಲಿನ ಸಮಸ್ಯೆಗಳು, ಅಸಮಾನತೆ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ತಂದೆಯ ಕನಸು ನನಸು ಮಾಡಿದ ನಂತರ ಸಮಾಜಕ್ಕೆ ಕೊಡುಗೆ ನೀಡುವ ಮನಸ್ಸು ಮಾಡಿದೆ. ಅದರಂತೆ ನನ್ನದೇ ಸಂಸ್ಥೆ ಕಟ್ಟಿಕೊಂಡ ಅದರ ಮೂಲಕ ಹಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಮಾಜಿಕ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದೇನೆ.
ಕಲ್ಪ: ರಾಜಕಾರಣ ನಿಮಗೆ ಬೇಕಿತ್ತಾ? ತಂದೆಯ ಪಾತ್ರವೇನು?
ನವ್ಯ: ರಾಜಕಾರಣವೆಂದರೆ ನನಗೆ ಪಂಚಚ್ರಾಣ, ರಾಜಕಾರಣಿಯಾಗಬೇಕೆಂಬ ಆಸೆ ಚಿಗುರೊಡೆದಿದ್ದೇ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ನಂತರ. ಸಮಾಜದ ಸೇವೆ ಮಾಡಲು ಅಧಿಕಾರ ಸಿಕ್ಕರೆ ಜನರಿಗೆ ಹತ್ತಿರವಾಗಬಹುದೆಂಬ ಮಹತ್ವಾಕಾಂಕ್ಷೆ ನನ್ನದಾಗಿತ್ತು. ರಾಜಕಾರಣಕ್ಕೆ ಪ್ರವೇಶ ಮಾಡಬೇಕೆಂಬ ಆಸೆಗೆ ಇನ್ನಷ್ಟು ಪುಷ್ಟಿ ನೀಡಿದ್ದು ಅಭಿಮಾನಿಗಳ ಬೆಂಬಲ. ಹೌದು ನೂರಾರು ಮಂದಿ ರಾಜಕಾರಣಕ್ಕೆ ನಿಮ್ಮಂತಹ ಯುವ ಪ್ರತಿಭೆ ಬೇಕು ಎಂದು ಹೇಳಿದ್ದು ಇಷ್ಟು ಬೇಗನೇ ರಾಜಕಾರಣಕ್ಕೆ ಬರಲು ಕಾರಣವಾಯಿತು.
ರಾಜಕಾರಣಕ್ಕೆ ಬರಬೇಕೆಂದು ನಿರ್ಧಾರ ಮಾಡಿದಾಗ ಪ್ರಮುಖ ಪಕ್ಷಗಳು ನನ್ನನ್ನು ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ಮಾಡಿದವು. ಆದರೆ ಆ ಬಗ್ಗೆ ನಿರ್ಧಾರ ಮಾಡುವಷ್ಟರಲ್ಲಿ ವಿಧಾನಸಭೆ ಚುನಾವಣೆ ಎದುರಾಯಿತು. ರಾಜಕಾರಣಕ್ಕೆ ಎಂಟ್ರಿ ಕೊಡಲು ಇದು ಸದಾವಕಾಶ ಎಂದು ತಿಳಿದು ಚುನಾವಣೆಯಲ್ಲಿ ಸ್ಪರ್ಧೆಯನ್ನೇ ಮಾಡಿ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದೇನೆ.
ಇನ್ನು ತಂದೆಯ ಪಾತ್ರದ ಬಗ್ಗೆ ಹೇಳುವುದಾದರೆ ರಾಜಕಾರಣ ಪ್ರವೇಶ ಅವರಿಗೆ ಸಾಕಷ್ಟು ಖುಷಿ ತಂದುಕೊಟ್ಟಿತ್ತು. ಅವರ ಕನಸಿನ ನಂತರ ಹೊಸ ಕನಸು ಟಿಸಿಲೊಡೆದದ್ದು ಅವರಿಗೆ ಹೇಳಲಸಾಧ್ಯವಾಗಿತ್ತು. ತಮ್ಮ ವಂಶದಲ್ಲೇ ಯಾರೂ ರಾಜಕಾರಣಕ್ಕೆ ಬರಲಿಲ್ಲ ನೀನಾದರೂ ಬಂದೆಯಲ್ಲ ಮಗಳೇ ಎಂದು ಬೆನ್ನುತಟ್ಟಿದ್ದರು. ಆದರೆ ಅನಾರೋಗ್ಯದ ಕಾರಣ ಅವರು ನನ್ನೊಂದಿಗೆ ಹೆಚ್ಚು ಪಾಳ್ಗೊಳ್ಳಲು ಸಾಧ್ಯವಾಗಲಿಲ್ಲ, ಆ ನೋವು ಇಂದಿಗೂ ಅವರಲ್ಲಿದೆ.
ಕಲ್ಪ: ಚುನಾವಣೆ ಅನುಭವ ಹೇಗಿತ್ತು?
ನವ್ಯ: ಮೊದಲಾಗಿ ಚುನಾವಣೆಯ ವಿಧಾನ, ಸವಾಲಿಗೆ ಪ್ರತಿಸವಾಲು ಹೇಗೆ ಹೂಡಬೇಕು, ಚುನಾವಣೆಯ ಎಲ್ಲ ಆಯಾಮಗಳ ಬಗ್ಗೆ ಖುದ್ದಾಗಿ ಅರಿತುಕೊಂಡಿದ್ದೇನೆ. ಜನರ ನಾಡಿ ಮಿಡಿತ, ಅವರ ಆಕಾಂಕ್ಷೆಗಳೇನು, ಮನಸ್ಸಿನಲ್ಲಿ ಏನಿದೆ ಎಂಬ ಬಗ್ಗೆ ಪ್ರತಿ ಗ್ರಾಮಕ್ಕೆ ಪ್ರತಿ ಮನೆಗೆ ತೆರಳಿ ತಿಳಿದುಕೊಂಡೆ ಹಾಗೆಯೇ ಅಲ್ಲಲ್ಲಿ ನಕಾರಾತ್ಮಕ ಬೆಳವಣಿಗೆಗಳ ಬಗ್ಗೆಯೂ ತಿಳಿದುಕೊಂಡೆ. ಜನರ ಮನಸ್ಸನ್ನು ಹೇಗೆ ಗೆಲ್ಲಬೇಕೆಂಬ ತಂತ್ರವನ್ನು ಚುನಾವಣೆಯಲ್ಲಿ ಕಂಡುಕೊಂಡಿದ್ದೇನೆ. ಮುಂದೆ ಅದಕ್ಕೆಲ್ಲಾ ತಯಾರಾಗುತ್ತೇನೆ.
ಇದು, ನವ್ಯಶ್ರೀ ಅವರ ಸಂದರ್ಶನದ ಪೂರ್ಣ ಪಾಠ. ಪ್ರತಿ ಹಂತದಲ್ಲಿಯೂ ಅವರ ತಂದೆಯ ಸಹಕಾರ ಇದೆ ಎಂಬುದನ್ನು ಅವರು ಖಡಾಖಂಡಿತವಾಗಿ ಒಪ್ಪಿಕೊಳ್ಳುತ್ತಾರೆ. ಈ ಮೂಲಕ ಪ್ರತಿ ಮಗಳ ಹಿಂದೆ ತಂದೆಯ ಪಾತ್ರವಿದೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ.
Discussion about this post