ಕದ್ರಿ ಕಂಬಳದ ನಿವಾಸಿ ಕರ್ನಾಟಕ ಬ್ಯಾಂಕ್ ಉದ್ಯೋಗಿ ಶ್ರೀ ಕುಮಾರಸ್ವಾಮಿ ಮತ್ತು ಮನಃಶಾಸ್ತ್ರಜ್ಞೆ ಆಶಾ ಕುಮಾರಸ್ವಾಮಿ ಅವರ ಪುತ್ರಿಯಾಗಿ ಜನಿಸಿದ ಪೂರ್ವಿ ಪ್ರಸುತ್ತ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಏಳನೆಯ ತರಗತಿಯಲ್ಲಿ ಕಲಿಯುತ್ತಾ ಇದ್ದಾಳೆ.
ತನ್ನ ಎರಡನೆಯ ವರ್ಷಕ್ಕೆ ವೇದಿಕೆ ಮೇಲೆ ಹೆಜ್ಜೆ ಹಾಕಿದ ಅಮ್ಮನ ಪ್ರೋತ್ಸಾಹದಿಂದ ತದನಂತರ ನೃತ್ಯ ಸಂಗೀತ ಛದ್ಮವೇಷ ಯೋಗ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು ಸಾವಿರಕ್ಕೂ ಅಧಿಕ ಬಹುಮಾನಗಳನ್ನು ಪಡೆದಿರುತ್ತಾಳೆ. ಅತಿ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ವೇದಿಕೆ ಪಡೆದ ಹೆಮ್ಮೆ ಪೂರ್ವಿಯದು.
2013 ರಲ್ಲಿ ಕುವೈತ್ ಕನ್ನಡ ಕೂಟದವರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ 40 ನಿಮಿಷಗಳ ನಿರಂತರ ಕಾರ್ಯಕ್ರಮ ನೀಡಿದ ಈ ಬಾಲೆಗೆ ಕನ್ನಡದ ಖ್ಯಾತ ಅಂಕಣಗಾರ ಜಯಂತ್ ಕಾಯ್ಕಿಣಿ ಅವರು ಸನ್ಮಾನಿಸಿ ಗೌರವಿಸಿದ್ದರು. ರಾಜ್ಯ ಮತ್ತು ರಾಷ್ಟ್ರೀಯ ಪ್ರತಿಷ್ಠಿತ ವೇದಿಕೆಗಳಲ್ಲಿ ತನ್ನ ನೃತ್ಯ ಪ್ರದರ್ಶನ ಮತ್ತು ನಿರೂಪಣೆ ಮಾಡಿ ಜನರ ಮನ ಗೆದ್ದ ಜ್ಯೂನಿಯರ್ ಅಭಿನವ ಭಾರ್ಗವಿ ಪೂರ್ವಿಗೆ ಅವಕಾಶಗಳ ಮೇಲೆ ಅವಕಾಶ ಮೇಲೆ ಬರಲಾರಂಭಿಸಿತು.
ರಾಜ್ಯದ ಪ್ರತಿಷ್ಠಿತ ಟಿವಿ ಚಾನೆಲ್’ಗಳಾದ ಈಟಿವಿ ಯ ಡಿ ಜೂನಿಯರ್ಸ್ ಕಲರ್ಸ್ ಕನ್ನಡ ವಾಹಿನಿಯ ಡಾನ್ಸಿಂಗ್ ಸ್ಟಾರ್ ಜೂನಿಯರ್ಸ್ ಎಂಬ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ತನ್ನ ಅಪ್ರತಿಮ ಕಲಾಸಾಧನೆಯಿಂದ ನಮ್ಮ ಮಂಗಳೂರಿನ ಹೆಸರನ್ನು ನಾಡಿನೆಲ್ಲೆಡೆ ಪಸರಿಸಿದ್ದಾಳೆ.
ರಾಜ್ಯ ಕಂಡಂತಹ ಹಲವಾರು ಟಿವಿ ವಾಹಿನಿಗಳಲ್ಲಿ ನಿರೂಪಣೆ ಮಾಡಿ ಕರ್ನಾಟಕ ಕಂಡಂತಹ ಅತಿ ಕಿರಿಯ ಖ್ಯಾತ ನಿರೂಪಕಿ ಮಾತಿನಮಲ್ಲಿ ನಾಮಾಂಕಿತದಿಂದ ಗುರುತಿಸಿಕೊಂಡಿದ್ದಾಳೆ. ಮಂಗಳೂರಿನ ಪ್ರತಿಷ್ಠಿತ ಚಾನೆಲ್’ಗಳಲ್ಲಿ ರಿಯಾಲಿಟಿ ಶೋನ ನಿರೂಪಣೆ ಮಾಡಿ ಪ್ರಬುದ್ಧ ನಿರೂಪಕಿಯಾಗಿ ಬೆಳೆಯುತ್ತಿರುವ ಪೂರ್ವಿ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಭರತನಾಟ್ಯಂ ಜೂನಿಯರ್ ಪರೀಕ್ಷೆಯಲ್ಲಿ 97.2 ಅಂಕವನ್ನು ಪಡೆದಿದ್ದಾಳೆ.
ಟ್ರಿನಿಟಿ ಯೂನಿವರ್ಸಿಟಿ ಲಂಡನ್ ಇವರು ನಡೆಸಿದ ಕಮ್ಯುನಿಕೇಷನ್ ಸ್ಕಿಲ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಶ್ರೇಣಿಯಲ್ಲಿ ತೇರ್ಗಡೆಗೊಂಡು ಸಂಸ್ಥೆಗೆ ಪ್ರಥಮ ಹಾಗೂ ಯುನಿವರ್ಸಿಟಿಗೆ ಮೂರನೆಯ ಸ್ಥಾನವನ್ನು ಪಡೆದಿದ್ದಾಳೆ. ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ತಮಗೆ ಪ್ರಶಸ್ತಿಗಳ ಸುರಿಮಳೆಯೇ ಬಂದಿರುತ್ತದೆ.
ಕರ್ನಾಟಕ ಸರಕಾರದ ಜಿಲ್ಲಾ ಅಸಾಧಾರಣ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಇವರಿಂದ ರಾಜ್ಯೋತ್ಸವ ಸಾಧಕ ಪುರಸ್ಕಾರ, ಮಡಿಕೇರಿಯ ಕಾವೇರಿ ಪ್ರಶಸ್ತಿ, ಉತ್ತರ ಕರ್ನಾಟಕದ ರಾಜ್ಯ ಮಟ್ಟದ ಪ್ರತಿಷ್ಠಿತ ನವಿಲುಗರಿ ಪ್ರಶಸ್ತಿ, ಪರಮಪೂಜ್ಯ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಂದ ಚೈತನ್ಯ ಶ್ರೀ ಪ್ರತಿಭಾ ಪುರಸ್ಕಾರ, ರಾಜ್ಯ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ(ರಿ )ವಿಜಯಪುರ ಇವರಿಂದ ರಾಜ್ಯ ಮಟ್ಟದ ಸದ್ಭಾವನಾ ಪ್ರಶಸ್ತಿ, ಯೋಗ ಸಾಧನೆಗಾಗಿ ಯೋಗ ಕಲಾಚೇತನ ಪ್ರಶಸ್ತಿ, ಬಹುಮುಖ ಸಾಧನೆಗಾಗಿ ಲಯನ್ಸ್ ಅಚೀವರ್ ಅವಾರ್ಡ್, ನೃತ್ಯ ಸಾಧನೆಗಾಗಿ ರೋಟರಿ ಅಚೀವರ್ ಅವಾರ್ಡ್, ಜೆಸಿಐ ಪ್ರಿನ್ಸೆಸ್, ಎಂಎಂಸಿ ಅವರಿಂದ ನೃತ್ಯಾಂಜಲಿ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದು ಕಲಾಭಿಮಾನಿಗಳನ್ನು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದಾಳೆ.
ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಕಾಲಿರಿಸಿದ ಪೂರ್ವಿ ಎರಡು ಕನ್ನಡ ಚಿತ್ರ ಹಾಗೂ ಒಂದು ತುಳು ಚಿತ್ರದಲ್ಲಿ ನಟಿಸಿ, ತಮ್ಮ ಅದ್ಭುತ ನಟನೆಗಾಗಿ ಇತ್ತೀಚೆಗೆ ರೆಡ್ ಎಂ ಇವರಿಂದ ಉತ್ತಮ ಬಾಲ ನಟಿ ಪ್ರಶಸ್ತಿಯನ್ನು ಹಿರಿಮೆ ಇವಳಿಗಿದೆ.
ಅಂತಾರಾಷ್ಟ್ರೀಯ ಮಟ್ಟದ ಯೋಗಾಸನದಲ್ಲಿ ಎರಡನೆಯ ಸ್ಥಾನ ಪಡೆದಿರುವ ಈಕೆ ರಾಷ್ಟ್ರ ಮಟ್ಟದಲ್ಲಿ ಮೊದಲ ಸ್ಥಾನ ಪಡೆದು ಆರೋಗ್ಯ ಕಾಪಾಡಲು ಯೋಗ ಎಷ್ಟು ಮಹತ್ತರವಾದ ಪಾತ್ರ ವಹಿಸುತ್ತವೆಂಬುದನ್ನು ಇಲ್ಲಿ ತಿಳಿಯಬಹುದಾಗಿದೆ.
ಯೋಗ ನಟನೆ ನೃತ್ಯ ನಿರೂಪಣೆ ಹೀಗೆ ನಾಲ್ಕು ಕ್ಷೇತ್ರಗಳಲ್ಲಿ ಸಮಾನವಾಗಿ ಹೆಸರು ಮಾಡಿರುವ ಜ್ಯೂನಿಯರ್ ಅಭಿನವ ಭಾರ್ಗವಿ ಪ್ರಚಾರ ಬಯಸದ ಅಪರೂಪದ ಸಾಧಕಿಯೆನಿಸಿದ್ದಾಳೆ.
ಲೇಖನ/ಚಿತ್ರಕೃಪೆ/ವೀಡಿಯೊ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post