ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಾರಾಯಣ ಹೆಲ್ತ್ ನ #NarayanaHealth ಎಐ ಸೌಲಭ್ಯವು ಕೇವಲ 10 ಸೆಕೆಂಡುಗಳಲ್ಲಿ ಹೃದಯ ಸಮಸ್ಯೆ ಪತ್ತೆ ಹಚ್ಚಿದ್ದು, ರೋಗ ನಿರ್ಣಯ ವಿಭಾಗದಲ್ಲಿ ಮಹತ್ವದ ಬೆಳವಣಿಗೆಗೆ ಮುನ್ನುಡಿ ಬರೆದಿದೆ.
ಬೆಂಗಳೂರು- ಪ್ರತಿಷ್ಠಿತ ನಾರಾಯಣ ಹೆಲ್ತ್ ಆಸ್ಪತ್ರೆಯ ನಾರಾಯಣ ಹೆಲ್ತ್ ಕ್ಲಿನಿಕಲ್ ರಿಸರ್ಚ್ ತಂಡ ಮತ್ತು ನಾರಾಯಣ ಹೆಲ್ತ್ ನ ಅನಾಲಿಟಿಕ್ಸ್ ಹಾಗೂ ಎಐ #AI ವಿಭಾಗವಾದ ಮೇಧಾ ಎಐ ಇಂದು ಮಹತ್ವದ ಘೋಷಣೆ ಮಾಡಿದ್ದು, ಈ ಎರಡೂ ತಂಡಗಳು ಸೇರಿ ತಕ್ಷಣವೇ ಹೃದಯ ಸಮಸ್ಯೆಯನ್ನು ಪತ್ತೆಹಚ್ಚಬಲ್ಲ ಎಐ ಮಾಡೆಲ್ ಅನ್ನು ಅಭಿವೃದ್ಧಿಪಡಿಸಿದೆ.
ಈ ಮಾಡೆಲ್ ಸಾಮಾನ್ಯ ಇಸಿಜಿ #ECG ಚಿತ್ರಣದಿಂದ ಹೃದಯದ ಕಾರ್ಯಕ್ಷಮತೆಯನ್ನು ಪತ್ತೆಹಚ್ಚಬಲ್ಲ, ಅದರಲ್ಲೂ ನಿರ್ದಿಷ್ಟವಾಗಿ ಲೆಫ್ಟ್ ವೆಂಟ್ರಿಕ್ಯುಲರ್ ಇಜೆಕ್ಷನ್ ಫ್ರಾಕ್ಷನ್ ಅನ್ನು ತಕ್ಷಣವೇ ಪತ್ತೆ ಹಚ್ಚಬಲ್ಲ ಒಂದು ಅತ್ಯಂತ ಪ್ರಮುಖ ಎಐ ಮಾಡೆಲ್ ಆಗಿದ್ದು, ರೋಗ ನಿರ್ಣಯ ವಿಭಾಗದಲ್ಲಿ ಮಹತ್ವದ ಗೆಲುವಾಗಿದೆ. ಈ ಮಾದರಿಯನ್ನು ವೈದ್ಯಕೀಯ ಕಾರ್ಯನಿರ್ವಹಣೆಯಲ್ಲಿ ಸುಗಮವಾಗಿ ಸಂಯೋಜಿಸುವಂತೆ ವಿನ್ಯಾಸಗೊಳಿಸಲಾಗಿದ್ದು, ಹೃದಯ ವೈಫಲ್ಯವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಲು ಮತ್ತು ಸೀಮಿತ ಸಂಪನ್ಮೂಲ ಇರುವ ಸ್ಥಳಗಳಲ್ಲಿ ರೋಗನಿರ್ಣಯ ವ್ಯವಸ್ಥೆಯನ್ನು ಸುಧಾರಿಸಲು ಈ ಮಾದರಿ ಬಳಕೆಯಾಗಲಿದೆ. ಈ ಅದ್ಭುತ ಆವಿಷ್ಕಾರವು ಲಕ್ಷಾಂತರ ರೋಗಿಗಳ ರೋಗನಿರ್ಣಯ ವಿಚಾರದಲ್ಲಿನ ಒಂದು ಪ್ರಮುಖ ಕೊರತೆಯನ್ನು ನೀಗಿಸಲಿದೆ. ಭಾರತದಾದ್ಯಂತ ಸುಮಾರು 10 ಮಿಲಿಯನ್ ಜನರಿಗೆ ಹೃದಯ ವೈಫಲ್ಯ ಸಮಸ್ಯೆ ಕಾಡುತ್ತದೆ. ಅದರಲ್ಲಿ ವಾರ್ಷಿಕವಾಗಿ 1.8 ಮಿಲಿಯನ್ ಮಂದಿ ಆಸ್ಪತ್ರೆಗೆ ಸೇರಿಕೊಳ್ಳುತ್ತಾರೆ. ಆದರೆ ಹೃದಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಬಲ್ಲ ಅತ್ಯಂತ ಉನ್ನತ ಸೌಲಭ್ಯವಾಗಿರುವ ಇಕೋಕಾರ್ಡಿಯೋಗ್ರಫಿ (ಇಕೋ) ಬಹಳಷ್ಟು ಕಡೆಗಳಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದೊರೆಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ನಾರಾಯಣ ಹೆಲ್ತ್ ನ ಎಐ ಮಾದರಿಯು ಎಲ್ಲೆಡೆ ಲಭ್ಯವಿರುವ ಇಸಿಜಿ ಯಂತ್ರಗಳು ಮತ್ತು ಕ್ಲೌಡ್ ಆಧಾರಿತ ವಿಶ್ಲೇಷಣೆಯ ಮೂಲಕ ರೋಗಿಗಳ ಹೃದಯ ಕಾಯಕ್ಷಮತೆಯನ್ನು ಎಲ್ಲಿ ಬೇಕಾದರೂ ಮೌಲ್ಯಮಾಪನ ಮಾಡಬಲ್ಲ ಅತ್ಯುನ್ನತ ವ್ಯವಸ್ಥೆಯನ್ನು ಒದಗಿಸುತ್ತದೆ.
1,00,000ಕ್ಕೂ ಹೆಚ್ಚು ಇಸಿಜಿ ಚಿತ್ರಣಗಳು ಮತ್ತು ಇಕೋಕಾರ್ಡಿಯೋಗ್ರಾಮ್ ವರದಿಗಳ ಜೋಡಣೆಯ ಆಧಾರದ ಮೇಲೆ ಎಐ ಮಾದರಿಯನ್ನು ತರಬೇತಿಗೊಳಿಸಲಾಗಿದ್ದು, ಈ ಮಾದರಿಯು ಅತ್ಯುತ್ತಮ ಫಲಿತಾಂಶವನ್ನು ಒದಗಿಸಿದೆ. 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 57,000ಕ್ಕೂ ಹೆಚ್ಚು ರೋಗಿಗಳನ್ನು ಈ ಮೂಲಕ ಪರೀಕ್ಷೆ ಮಾಡಲಿದ್ದು, ಈ ಮಾದರಿಯು ಅದರಲ್ಲಿ ತೀವ್ರ ಕಡಿಮೆ ಇಎಫ್ (≤35%) ಹೊಂದಿರುವ ಶೇ.97ರಷ್ಟು ಮಂದಿಯನ್ನು ಪತ್ತೆ ಹಚ್ಚಿದೆ. ವಿಶೇಷವೆಂದರೆ ಇದರಲ್ಲಿ ಬಹಳಷ್ಟು ರೋಗಿಗಳು ಇಕೋಕಾರ್ಡಿಯೋಗ್ರಫಿ ಹೊಂದುವ ಸರಾಸರಿ 58 ದಿನಗಳ ಮೊದಲೇ ಅವರಲ್ಲಿ ಹೃದಯ ಸಮಸ್ಯೆ ಇರುವುದಾಗಿ ಪತ್ತೆ ಹಚ್ಚಲಾಗಿತ್ತು.ಈ ಸಂದರ್ಭದಲ್ಲಿ ನಾರಾಯಣ್ ಹೆಲ್ತ್ ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಅವರು, ನಾರಾಯಣ ಹೆಲ್ತ್ ನ ಗ್ರೂಪ್ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಇಮ್ಯಾನುಯೆಲ್ ರೂಪರ್ಟ್ ಅವರು, ನಾರಾಯಣ ಹೆಲ್ತ್ ನ ಚೀಫ್ ಸೈಂಟಿಫಿಕ್ ಆಫೀಸರ್ ಮತ್ತು ಈ ಯೋಜನೆಯ ಪ್ರಮುಖ ಸಂಶೋಧಕರಾದ ಡಾ. ಪ್ರದೀಪ್ ನಾರಾಯಣ್ ಅವರು, ನಾರಾಯಣ ಹೆಲ್ತ್ ನ ಚೀಫ್ ಮೆಡಿಕಲ್ ಆಫೀಸರ್ ಡಾ. ಪಿ. ಎಂ. ಉತಪ್ಪ ಅವರು, ಮತ್ತು ನಾರಾಯಣ ಹೆಲ್ತ್ ನ ಸೀನಿಯರ್ ಕನ್ಸಲ್ಟೆಂಟ್ ಕಾರ್ಡಿಯಾಕ್ ಇಪಿ ಕೊಲೀಜಿಯಂನ ಸ್ಟ್ರಾಟೆಜಿಕ್ ಲೀಡ್ ಆಗಿರುವ ಡಾ. ದೀಪಕ್ ಪದ್ಮನಾಭನ್ ಉಪಸ್ಥಿತರಿದ್ದರು.
ಈ ಕುರಿತು ಮಾತನಾಡಿರುವ ನಾರಾಯಣ್ ಹೆಲ್ತ್ ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಅವರು, “ಈ ಆವಿಷ್ಕಾರವು ಕೇವಲ ಎಐ ಮಾಡೆಲ್ ಅನ್ನು ಮೀರಿದ ಆವಿಷ್ಕಾರವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ವೈದ್ಯಕೀಯ ಪರಿಣತಿಯನ್ನು, ಸಂಶೋಧನೆಯನ್ನು ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಸಂಯೋಜಿಸಿ ನೈಜ ಸಮಸ್ಯೆಗಳನ್ನು ದೊಡ್ಡ ಪ್ರಮಾಣದಲ್ಲಿ ಪರಿಹರಿಸಬೇಕು ಎಂಬ ನಾರಾಯಣ ಹೆಲ್ತ್ ಸಂಸ್ಥೆಯ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ.
ಸರಳ ಇಸಿಜಿಯ ಮೂಲಕ ಹೃದಯ ವೈಫಲ್ಯವನ್ನು ತಕ್ಷಣವೇ ಪತ್ತೆ ಮಾಡು ಈ ವ್ಯವಸ್ಥೆಯು ರೋಗನಿರ್ಣಯವನ್ನು ಉತ್ತಮಗೊಳಿಸುವುದು ಮಾತ್ರವೇ ಅಲ್ಲ ಜನಸಾಮಾನ್ಯರಿಗೆ ಈ ವ್ಯವಸ್ಥೆಯನ್ನು ಸುಲಭವಾಗಿ ಲಭ್ಯವಾಗಿಸುವ ವಿಚಾರದಲ್ಲಿ ಬಹಳ ದೊಡ್ಡ ಮುನ್ನಡೆಯಾಗಿದೆ. ಈ ಎಐ ಮಾಡೆಲ್ ಆಸ್ಪತ್ರೆಯ ಸೀಮಿತ ಆವರಣವನ್ನು ಮೀರಿ ಉತ್ತಮ-ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು, ತ್ವರಿತ ನಿರ್ಧಾರ ಕೈಗೊಳ್ಳಲು, ಆರಂಭಿಕ ಹಂತದಲ್ಲಿ ಸಮಸ್ಯೆ ಪತ್ತೆ ಹಚ್ಚಲು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ನೆರವಾಗುತ್ತದೆ. ಈ ಆವಿಷ್ಕಾರವು ಜಾಗತಿಕ ವೈದ್ಯಕೀಯ ಕ್ಷೇತ್ರದ ಭವಿಷ್ಯದಲ್ಲಿ ಮುಂಚೂಣಿಯಲ್ಲಿ ನಿಲ್ಲಬಲ್ಲ ಭಾರತದ ಸಾಮರ್ಥ್ಯವನ್ನು ತೋರಿಸಿದೆ” ಎಂದು ಹೇಳಿದರು.
ಇಸಿಜಿಗಳಿಂದ ಎಲ್.ವಿ.ಇ.ಎಫ್ ಅನ್ನು ಊಹಿಸಬಲ್ಲ ಮೇಧಾ ಎಐ ಮಾಡೆಲ್ ಅನ್ನು ನಾರಾಯಣ ಹೆಲ್ತ್ ಅಧೀನದ ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ (ಇಎಂಆರ್) ವ್ಯವಸ್ಥೆಯಾದ ಆತ್ಮದಲ್ಲಿ ಸಂಯೋಜಿಸಲಾಗಿದ್ದು, ಪ್ರಸ್ತುತ ಈ ವ್ಯವಸ್ಥೆಯನ್ನು ನಾರಾಯಣ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್, ನಾರಾಯಣ ಹೆಲ್ತ್ ಸಿಟಿಯಲ್ಲಿನ ಮಜುಮ್ದಾರ್ ಶಾ ಮೆಡಿಕಲ್ ಸೆಂಟರ್, ಬೆಂಗಳೂರಿನ ಕೆಲವು ಕ್ಲಿನಿಕ್‌ಗಳು ಮತ್ತು ಕೋಲ್ಕತ್ತಾದ ರವೀಂದ್ರನಾಥ ಟಾಗೋರ್ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ನಲ್ಲಿ ಕಠಿಣ ಮೌಲ್ಯೀಕರಣಕ್ಕೆ ಒಳಗಾಗುತ್ತಿದೆ. ತಕ್ಷಣ ಫಲಿತಾಂಶ ನೀಡಲೆಂದೇ ಈ ಮಾಡೆಲ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಸುಲಭವಾಗಿ ವೈದ್ಯಕೀಯ ಸೇವೆ ಒದಗಿಸಲು ಸಾಧ್ಯವಾಗುವಂತೆ ಕಾರ್ಯ ನಿರ್ವಹಿಸುತ್ತದೆ.
ಈ ಎಐ ಮಾಡೆಲ್ ಅನ್ನು ಹಾರ್ಟ್ ರಿದಮ್ ಸೊಸೈಟಿ ಕಾನ್ಫರೆನ್ಸ್ (ಬೋಸ್ಟನ್), ಎ.ಪಿ.ಎಚ್.ಆರ್.ಎಸ್ (ಸಿಡ್ನಿ), ಐ.ಎಚ್.ಆರ್.ಎಸ್.ಸಿ.ಓ.ಎನ್ (ಕೋಲ್ಕತ್ತಾ) ಮತ್ತು ಎಚ್.ಆರ್.ಎಕ್ಸ್ (ಅಟ್ಲಾಂಟಾ) ಸೇರಿದಂತೆ ಪ್ರಮುಖ ಕಾನ್ಫರೆನ್ಸ್ ಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಜೊತೆಗೆ ಇಂಡಿಯನ್ ಹಾರ್ಟ್ ಜರ್ನಲ್ ನಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ. ವಿಶೇಷವಾಗಿ ಬಿಎಂಜೆ ಸೌತ್ ಏಷಿಯಾ ಅವಾರ್ಡ್ ಫಾರ್ ಡಿಜಿಟಲ್ ಇನ್ನೋವೇಷನ್ ಅನ್ನು ಪಡೆದುಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post