ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಂಡ್ಲಿ ಬಳಿಯಲ್ಲಿ ರಾಕ್ ಕ್ಲೈಂಬಿಂಗ್, ಜಿಪ್ ಲೈನಿಂಗ್ ನಿರ್ಮಿಸಿ, ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡುವ ಎಲ್ಲ ಕೆಲಸಗಳು ಆರಂಭವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕಲ್ಲೂರು ಮಂಡ್ಲಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ಮಂಜೂರಾಗಿದ್ದು ಚಾರಣ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ಮಾಡಿ ಚರ್ಚಿಸಿದ ನಂತರ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಸಂಸದರು ಮಾತನಾಡಿದರು.
ಶಿವಮೊಗ್ಗಕ್ಕೆ ಆಗಮಿಸಿ ಯಾವುದೇ ಪ್ರವಾಸಿಗರು ಇಲ್ಲಿ ಕನಿಷ್ಠ ನಾಲ್ಕೈದು ದಿನಗಳ ಕಾಲ ಇರಬೇಕು ಎಂಬ ಉದ್ದೇಶದ ಆಧಾರದಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಪ್ರಕೃತಿ ನೀಡಿರುವ ಈ ಸುಂದರ ಕಲ್ಲೂರು ಮಂಡ್ಲಿ ಪ್ರದೇಶದಲ್ಲಿ ರಾಕ್ ಕೈಂಬ್ಲಿಂಗ್, ಸೈಕ್ಲಿಂಗ್, ಜಿಪ್ ಲೈನಿಂಗ್, ಬರ್ಡ್ ವಾಚ್, ಬೋಟಿಂಗ್ ಅಭಿವೃದ್ದಿ ಮಾಡುವ ಜೊತೆಯಲ್ಲಿ ಇಲ್ಲೊಂದು ಯೂಥ್ ಹಾಸ್ಟೆಲ್ ನಿರ್ಮಿಸಿ, ಇಲ್ಲಿಗೆ ಆಗಮಿಸುವ ಪ್ರವಾಸಿಗರು ಹಾಗೂ ಸಾಹಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡುವ ಯೋಜನೆಯೂ ಸಹ ಇದೆ ಎಂದರು.
ಇವುಗಳ ನಿರ್ಮಾಣಕ್ಕಾಗಿ ಈಗಾಗಲೇ ನಿರ್ಮಿತಿ ಕೇಂದ್ರಕ್ಕೆ ಸೂಚನೆ ನೀಡಲಾಗಿದ್ದು, ಅಗತ್ಯವಿರುವ ಡಿಪಿಆರ್ ತಯಾರಾಗಿದೆ. ಆದಷ್ಟು ಶೀಘ್ರ ಕೆಲಸ ಆರಂಭಿಸಿ, ಮುಕ್ತಾಯಗೊಳಿಸಲಾಗುತ್ತದೆ ಎಂದರು.
ಇನ್ನು, ಈ ಪ್ರದೇಶದಲ್ಲಿ ಸಾಹಸ ಚಾರಣ ಮುಂತಾದ ಚಟುವಟಿಕೆಗಳಿಗೆ ಸಂಪೂರ್ಣ ಅವಕಾಶಗಳಿವೆ. ಅಲ್ಲಿನ ನೈಸರ್ಗಿಕ ಪರಿಸರ ಸಾಹಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಂತಹ ಪ್ರದೇಶವು ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈ ಲಭ್ಯತೆಯನ್ನು ಮನಗಂಡವರು ಶಿವಮೊಗ್ಗ ಹೆಮ್ಮೆಯ ಸಂಸದ ಬಿ.ವೈ. ರಾಘವೇಂದ್ರ.
ಕೆಲವು ತಿಂಗಳ ಹಿಂದೆಯಷ್ಟೇ ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿಯವರೊಂದಿಗೆ ಚರ್ಚಿಸಿದರು. ಅದಕ್ಕೆ ಅಗತ್ಯವಾದ ದಾಖಲೆ, ನಕ್ಷೆ, ವರದಿ ತಯಾರು ಮಾಡಿಸಿದರು. ತಜ್ಞರು ಆಗಮಿಸಿ ಸ್ಥಳ ಪರಿಶೀಲಿಸಲು ವ್ಯವಸ್ಥೆ ಮಾಡಿದರು.
ಅದರ ಫಲವಾಗಿ ಈಗ ಒಂದು ಕೋಟಿ ರೂಪಾಯಿಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು.
ಅಧಿಕಾರಿಗಳು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷರೂ ಆಗಿರುವ ಲ.ನಾ.ಕಾಶಿ, ಎಸ್. ದತ್ತಾತ್ರಿ, ಮಾಲತೇಶ್, ನಮ್ಮ ಕನಸಿನ ಶಿವಮೊಗ್ಗ ಗೋಪಿನಾಥ್, ಸಾಹಸ ಅಕಾಡೆಮಿಯ ವಿಜೇಂದ್ರರಾವ್ ಮುಂತಾದವರು ಸಂಸದರೊಂದಿಗೆ ತೆರಳಿದ್ದರು.
Get in Touch With Us info@kalpa.news Whatsapp: 9481252093
Discussion about this post