ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಡಿಕೆಲ ಸುಬ್ಬಯ್ಯ ಟ್ರಸ್ಟ್ ಅಡಿಯ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆಗೆ ಸದಾ ಒತ್ತು ನೀಡುತ್ತಿದ್ದು, ಮುಂದೆಯೂ ಸಹ ಇಂತಹ ಕಾರ್ಯಗಳು ನಮ್ಮ ಸಂಸ್ಥೆಯಿಂದ ನಡೆಯಲು ಪ್ರೋತ್ಸಾಹವಿದೆ ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಹೇಳಿದರು.
ಆಲ್ ಇಂಡಿಯಾ ಆಫ್ತಾಲ್ಮಾಲಾಜಿಕಲ್ ಸೊಸೈಟಿ, ಕರ್ನಾಟಕ ಆಫ್ತಾಲ್ಮಿಕ ಸೊಸೈಟಿ ಇವರ ಸಹಯೋಗದಲ್ಲಿ, ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಸುಬ್ಬಯ್ಯ ಸಂಶೋಧನಾ ಸಂಸ್ಥೆ ಹಾಗೂ ಮಲ್ನಾಡ್ ಆಫ್ತಾಲ್ಮಿಕ್ ಅಸೋಸಿಯೇಶನ್ ವತಿಯಿಂದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ AIOS Prayogshala CONNECT – Practice, Prepare and Publish: Hands-on Research and Publication Workshop ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸುಬ್ಬಯ್ಯ ಸಂಶೋಧನಾ ಸಂಸ್ಥೆಯಲ್ಲಿ ಉತ್ಸಾಹದಿಂದ ಕೆಲಸ ಮಾಡುವ ತಜ್ಞರ ತಂಡವಿದೆ. ಈಗಾಗಲೇ ಹಲವು ಸಂಶೋಧನಾ ಕಾರ್ಯಗಳು ನಡೆಯತ್ತಿದ್ದು, ಯಾವುದೇ ರೀತಿಯ ಸಂಶೋಧನೆಗೆ ನಮ್ಮಲ್ಲಿ ಪ್ರೋತ್ಸಾಹವಿದೆ ಎಂದರು.
ದೇಶದಲ್ಲೇ ಪ್ರಥಮ | ಸುಬ್ಬಯ್ಯದಲ್ಲಿ ಕಾರ್ಯಾಗಾರ
ಸಾಮಾನ್ಯವಾಗಿ ಆಲ್ ಇಂಡಿಯಾ ಆಫ್ತಾಲ್ಮಾಲಾಜಿಕಲ್ ಸೊಸೈಟಿಯ ಯಾವುದೇ ಕಾರ್ಯಾಗಾರಗಳು ಕೇಂದ್ರ ಕಚೇರಿಯಲ್ಲಿ ಮಾತ್ರ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಕೇಂದ್ರ ಕಚೇರಿಯ ಹೊರತಾಗಿ ಮೊದಲ ಕಾರ್ಯಾಗಾರ ನಮ್ಮ ರಾಜ್ಯದಲ್ಲಿ ಅದರಲ್ಲೂ ನಮ್ಮ ಶಿವಮೊಗ್ಗ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ.
ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಸಂಪೂರ್ಣ ಪ್ರಾಯೋಗಿಕ ಸಂಶೋಧನಾ ಕಾರ್ಯಾಗಾರವಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬಂದ ಪ್ರತಿನಿಧಿಗಳು ಹಾಗೂ ಭಾರತದ ವಿವಿಧ ಭಾಗಗಳಿಂದ ಆಗಮಿಸಿದ ಖ್ಯಾತ ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರೋಗ್ರಾಂ ಡೈರೆಕ್ಟರ್ ಆಗಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ನೇತ್ರರೋಗ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರೂ ಆದ ಡಾ. ಮಹೇಶ್ ಬಾಬು ಕಾರ್ಯನಿರ್ವಹಿಸಿದರು.
ಏಮ್ಸ್ ಸಂಸ್ಥೆಯ ಡಾ.ಎಂ. ವನತಿ ಮಾತನಾಡಿ, ಈ ಕಾರ್ಯಾಗಾರವನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆದ ಅತ್ಯಂತ ವಿಶಿಷ್ಟ ಮತ್ತು ಶ್ಲಾಘನೀಯ ಶೈಕ್ಷಣಿಕ ಪ್ರಯತ್ನ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಏಮ್ಸ್’ ಡಾ. ಎಂ. ವನತಿ, ಕರ್ನಾಟಕ ಆಫ್ತಾಲ್ಮಿಕ ಸೊಸೈಟಿಯ ಅಧ್ಯಕ್ಷರಾದ ಡಾ.ಕೆ.ವಿ. ಶಿವರಾಮ್, ಕೆಒಎಸ್ ವೈಜ್ಞಾನಿಕ ಸಮಿತಿ ಅಧ್ಯಕ್ಷರಾದ ಡಾ.ಶಿವಯೋಗಿ ಆರ್. ಕುಸಗೂರು, ಸಂಕರ್ ಆಸ್ಪತ್ರೆಯ ಡಾ.ವಿ. ಕವಿತಾ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ತೆಲಂಗ್, ತಡಿಕೆಲ ಸುಬ್ಬಯ್ಯ ಟ್ರಸ್ಟ್’ನ ಟ್ರಸ್ಟಿ ಡಾ. ಎಸ್. ಶ್ರೀನಿವಾಸ್, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ವಿನಾಯಕ್, ಪ್ರಾಂಶುಪಾಲರಾದ ಡಾ.ಸಿ.ಎಂ. ಸಿದ್ದಲಿಂಗಪ್ಪ, ವೈದ್ಯಕೀಯ ಅಧೀಕ್ಷಕ ಡಾ. ಕೌಶಿಕ್ ಕೆ. ನಾರಾಯಣ್ ಪಾಲ್ಗೊಂಡಿದ್ದರು.
ಡಾ.ಎಂ. ಗಾಯತ್ರಿ ಅವರು ಧನ್ಯವಾದ ಭಾಷಣ ಮಾಡಿದರು. ರಾಷ್ಟ್ರೀಯ ಖ್ಯಾತಿಯ ಅಧ್ಯಾಪಕರು ಪೂರ್ಣ ದಿನದ ವೈಜ್ಞಾನಿಕ ಅಧಿವೇಶನಗಳನ್ನು ನಡೆಸಿದರು. ಪ್ರತಿನಿಧಿಗಳು ಸಂಶೋಧನೆ ಮತ್ತು ಪ್ರಕಟಣೆಯ ಪ್ರಾಯೋಗಿಕ ಅಂಶಗಳನ್ನು ಕಲಿತು ಧನಾತ್ಮಕ ಪ್ರತಿಕ್ರಿಯೆ ನೀಡಿದರು.
ಕಾರ್ಯಕ್ರಮವನ್ನು ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರರೋಗ ವಿಭಾಗ ಆಯೋಜಿಸಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















