ಅದೊಂದು ಬೃಹತ್ತಾದ ಆಲದಮರ…. ಹಲವಾರು ಶತಮಾನಗಳಿಂದ ಬರಡಾದ ಭೂಮಿಯಲ್ಲಿ ಹಲವು ರಾಷ್ಟ್ರ ನಿಷ್ಠರ ತಪಸ್ಸಿನಿಂದ ಒಂದು ಚಿಗುರು ಟಿಸಿಲೊಡೆದು ಈ ಐದು ವರ್ಷದ ಅವಧಿಯಲ್ಲಿ ಹೆಮ್ಮರವಾಗಿ ಬೆಳೆದಿದೆ.
ಅದು ಹಲವು ರೆಂಬೆ-ಕೊಂಬೆಗಳ ಆಲದ ಮರ. ಎಲೆಗಳು ಒತ್ತತ್ತಾಗಿ ಬೆಳೆದು ಹಸಿರು ಸಂಮೃದ್ಧಿಯಾಗಿದೆ. ಆಲದ ಮರದ ನೆರಳು ದಟ್ಟವಾಗಿ ನೆಲ ತಂಪಾಗಿದೆ. ಬಿಸಿಲ ಝಳ, ಮಳೆಯ ಆರ್ಭಟ, ಗಾಳಿಯ ಉಪಟಳವನ್ನು ಎದುರಿಸಿ ಮರ ಹೆಬ್ಬಂಡೆಯಂತೆ ನಿಂತಿದೆ.
ಈ ಮರದ ಕೆಳಗೆ ಈಗ ಬದುಕು ಹಸನಾಗಿದೆ. ತಂಪು ಬದುಕಿಗೆ ಹೊಸ ಅರ್ಥ ಕಲ್ಪಿಸಿದೆ. ಒಂದಿಷ್ಟು ನೆಮ್ಮದಿ ನಿರಾಳತೆ ಆವರಿಸಿದೆ. ಮರ ಬಲಿಷ್ಠವಾದಂತೆ ಅಲ್ಲಿ ಕಾಗೆ, ಗುಬ್ಬಿ, ಗಿಳಿ, ಕೋಗಿಲೆ, ಗೂಬೆಗಳು ಮನೆ ಮಾಡಿವೆ. ತಮ್ಮ ತಮ್ಮ ಅಸ್ತಿತ್ವಕ್ಕೆ ಆ ಮರವನ್ನು ಆಶ್ರಯಿಸಿವೆ. ಸಮಯ ನೋಡಿ ಆಗಾಗ ವಲಸೆ ಹಕ್ಕಿಗಳೂ ಬಂದು ಸೇರುತ್ತಿವೆ. ಕಾಂಡ ಬಲಿತಂತೆ ಒಂದಿಷ್ಟು ಹುಳು ಹುಪ್ಪಡಿಗಳೂ ಸೇರಿವೆ. ಅಲ್ಲಲ್ಲಿ ಗೆದ್ದಲು ಗೂಡು ಕಟ್ಟಿವೆ….. ಎಲ್ಲವಕ್ಕೂ ಮರದ ಸಾಂಗತ್ಯ ಬೇಕೆ ಬೇಕು. ಅವುಗಳಿಗೆ ಚೆನ್ನಾಗಿ ಈ ಸತ್ಯದ ಅರಿವಿದೆ. ಹಾಗೆಂದೆ ತನ್ನ ಸ್ವಾರ್ಥದ ಚೌಕಟ್ಟನ್ನು ಮೀರಲಾಗದೆ ಪರಸ್ಪರ ಕತ್ತಿ ಮಸೆಯುತ್ತಿವೆ.
ಮರದ ಹೆಸರು ಹೇಳಿಕೊಂಡೇ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಅವುಗಳಿಗೆ ಇದೆ. ಈಗ ಆ ಮರ ಫಲ ಕೊಡುವ ಸಮಯ ಹೀಚು ಕಾಯಿಗಳು ಆ ಮರದ ಟೊಂಗೆಯಲ್ಲಿ ಮೂಡುತ್ತಿದೆ. ಅಷ್ಟರಲ್ಲಿ ಆಗಲೇ ಇಲ್ಲಿ ಒಳ ಜಗಳ ಕಿತ್ತಾಟ ಆರಂಭವಾಗಿದೆ. ಅನುರಾಗವೋ, ಅಭಿಮಾನವೋ, ಅನುಕಂಪವೋ, ಅಹಂಕಾರವೋ ಒಟ್ಟಿನಲ್ಲಿ ಕ್ಷುಲ್ಲಕ ವಿಷಯಗಳು ಮರದ ಆಶ್ರಯದಲ್ಲಿ ಬೆಳೆಯುತ್ತಿವೆ…
ಇಷ್ಟು ಸಾಲದಕ್ಕೆ ಆ ಮರದಲ್ಲಿರುವ ಹುಳ ಹುಪ್ಪಡಿಗಳು ಬುದ್ಧಿ ಇಲ್ಲದೇ ಅದೇ ಮರವನ್ನು ಕೊರೆಯುತ್ತಿವೆ. ಗೆದ್ದಲು ಇದೇ ಸಿಕ್ಕ ಸಮಯವೆಂದು ಅದೇ ಮರವನ್ನು ಕಿತ್ತು ತಿನ್ನಲು ಆರಂಭಿಸಿವೆ…. ಹೊರ ಜಗತ್ತಿಗೆ ಈ ಮರದ ಮೇಲೆ ಅಸೂಯೆ ಇದೆ. ಹೇಗಾದರು ಮಾಡಿ ಈ ಮರವನ್ನು ಬುಡಮೇಲು ಮಾಡುವ ಹುನ್ನಾರ ನಡೆದಿದೆ. ಆದರೆ ಇದಾವುದರ ಪರಿವಿಲ್ಲದೆ ಮರದ ಆಶ್ರಯ ಪಡೆದ ಜೀವಿಗಳು ಮಂಗಾಟ ನಡೆಸಿವೆ.
ದೂರದಲ್ಲಿ ಮರದ ನೆರಳನ್ನು ಅನುಭವಿಸುತ್ತಿರುವ ಮಂದಿಗೆ ಮರದ ಮಹತ್ವದ ಅರಿವಿದೆ ಆದರೆ ಆ ಮರಕ್ಕೇ ಅಂಟಿಕೊಂಡಿರುವ ಈ ಜೀವಿಗಳು ಒಂದು ಕ್ಷಣದ ಸ್ವಾರ್ಥ ಸುಖದ ಆಸೆಗೆ ಮುಂದಿನ ನುರಾರು ವರ್ಷದ ಉಜ್ವಲ ಭವಿಷ್ಯವನ್ನು ಕಡೆಗಣಿಸುತ್ತಿವೆ. ಆದರೆ ಈ ಮರಕ್ಕೆ ಇದಾವುದರ ಗೊಡವೆ ಇಲ್ಲ ಹೊರಗಿನ ಶತ್ರುಗಳಿಗೆ ಸಿಂಹ ಸ್ವಪ್ನವಾಗಿ ನಿಂತಿದೆ. ಆಂತರಿಕ ಕಿತ್ತಾಟಗಳ ಕುರಿತು ದಿವ್ಯ ಮೌನ ವಹಿಸಿದೆ. ಭಾಗವತದಲ್ಲಿ ಶ್ರೀ ಕೃಷ್ಣ ಹೇಳುವಂತೆ ಸದಾ ಪರೋಪಕಾರ ಮಾಡುವುದೇ ಗುರಿ ಎಂದು ದೃಢವಾಗಿ ನಿಂತಿದೆ.
ಇದು ಒಂದು ಕ್ಷಣ ನಿಂತು ಯೋಚಿಸುವ ಸಂಕೀರ್ಣತೆಯ ಸಮಯ. ಅಸಲಿಗೆ ಈ ಮರವಿಲ್ಲದೇ ಇವಾರಾರ ಬೇಳೆ ಬೇಯುವುದಿಲ್ಲ. ಈ ಮರವನ್ನು ಉಳಿಸಿಕೊಳ್ಳುವುದರ ಜೊತೆ ಜೊತೆಯಲ್ಲಿ ಈ ಮರದಂತಹ ನೂರಾರು ಸಸಿಗಳನ್ನು ನೆಟ್ಟು ಮರ ಮಾಡುವ ಸಂಕಲ್ಪ ನಾವು ಮಾಡಬೇಕು. ಫಲ ಕೈಗೆ ಬರುವ ಸಮಯದಲ್ಲಿ ಮರವನ್ನು ಕತ್ತರಿಸದೆ ಅದರ ಬುಡ ಭದ್ರ ಪಡಿಸುವಲ್ಲಿ ನಮ್ಮ ಯಶಸ್ಸು ಎಂಬ ಪರಮ ಸತ್ಯವನ್ನು ಎಷ್ಟು ಬೇಗ ಜೀರ್ಣಿಸಿಕೊಳ್ಳುತ್ತೇವೆಯೋ ಅಷ್ಟು ನಮಗೆ ಹಿತ…. ಜಾಣರಿಗೆ ಈ ಮರದ ಕುರಿತಾದ ಒಳ ಮರ್ಮ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ…..
ಲೇಖನ: ವಿನಯ್ ಶಿವಮೊಗ್ಗ
Discussion about this post