ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಸಂಚಾರವನ್ನು ಕಲ್ಪಿಸಿರುವ ‘ಶಕ್ತಿ’ ಯೋಜನೆಗೆ ಇದೀಗ ಮಹತ್ವದ ಪರಿಷ್ಕರಣೆ ತರಲು ಸರ್ಕಾರ ಮುಂದಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ಜಾರಿಯಲ್ಲಿರುವ ಈ ಯೋಜನೆಯಲ್ಲಿ ನಡೆಯುತ್ತಿರುವ ದುರುಪಯೋಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.
ಯೋಜನೆ ಆರಂಭವಾದ ಬಳಿಕ ನಕಲಿ ಆಧಾರ್ ಕಾರ್ಡ್‌ಗಳ ಬಳಕೆ ಮೂಲಕ ಬೇರೆ ರಾಜ್ಯಗಳ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಪಡೆಯುತ್ತಿರುವ ಕುರಿತು ದೂರುಗಳು ಹೆಚ್ಚಾಗಿದ್ದವು. ಇದರಿಂದ ಸಾರಿಗೆ ನಿಗಮಗಳಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರವಾಗಿ ಸ್ಮಾರ್ಟ್ ಕಾರ್ಡ್ ವಿತರಣಾ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದೆ.
ಸರ್ಕಾರದ ಯೋಜನೆಯ ಪ್ರಕಾರ, ರಾಜ್ಯದ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಹೊಂದಿರುವ ಮಹಿಳೆಯರಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಫಲಾನುಭವಿಗಳು ತಮ್ಮ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಸಲ್ಲಿಸಿ ಈ ಕಾರ್ಡ್ ಪಡೆಯಬೇಕಾಗುತ್ತದೆ. ಕಾರ್ಡ್‌ನಲ್ಲಿ ಫಲಾನುಭವಿಯ ಹೆಸರು, ಭಾವಚಿತ್ರ, ಆಧಾರ್ ಸಂಖ್ಯೆ ಹಾಗೂ ವಿಳಾಸದ ವಿವರಗಳು ಮುದ್ರಿತವಾಗಿದ್ದು, ಈ ಕಾರ್ಡ್ ಅನ್ನು ಇತರರಿಗೆ ವರ್ಗಾಯಿಸಲು ಅವಕಾಶ ಇರುವುದಿಲ್ಲ.
ರಾಜ್ಯಾದ್ಯಂತ ಸುಮಾರು 3 ಕೋಟಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ.
Also read: ಶಿವಮೊಗ್ಗ ತಾಲ್ಲೂಕು ಕಚೇರಿ ಪಡಸಾಲೆಯಲ್ಲಿ ಜನವೋ… ಜನ..! ಪ್ರಮಾಣಪತ್ರಕ್ಕಾಗಿ ಜನರ ಪರದಾಟ
ಬಿಎಂಟಿಸಿಯಲ್ಲಿ ಪ್ರಾಯೋಗಿಕ ಜಾರಿ
ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಬೆಂಗಳೂರಿನ ಬಿಎಂಟಿಸಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ. ನಂತರ ಉಳಿದ ಮೂರು ಸಾರಿಗೆ ನಿಗಮಗಳಿಗೆ ವಿಸ್ತರಿಸಲಾಗುವುದು. ಬಿಎಂಟಿಸಿ ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಸುಮಾರು 11,000 ಸುಧಾರಿತ ಇಟಿಎಂ ಯಂತ್ರಗಳನ್ನು ಪಡೆದಿದೆ.
ಈ ಸ್ಮಾರ್ಟ್ ಕಾರ್ಡ್‌ಗಳಲ್ಲಿ ಅತ್ಯಾಧುನಿಕ ಎನ್‌ಎಫ್‌ಸಿ (NFC) ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಬಸ್‌ಗಳ ಜೊತೆಗೆ ‘ನಮ್ಮ ಮೆಟ್ರೋ’ ಸಂಚಾರಕ್ಕೂ ಬಳಸಲು ಅವಕಾಶ ಕಲ್ಪಿಸಲಾಗಿದೆ.
ಉಚಿತ ವಿತರಣೆ – ಅರ್ಜಿ ಸಲ್ಲಿಕೆ
ಅರ್ಹ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ಸಂಪೂರ್ಣ ಉಚಿತವಾಗಿ ವಿತರಿಸಲಾಗುತ್ತದೆ. ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು ಹಾಗೂ ಸೈಬರ್ ಸೆಂಟರ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಜೊತೆಗೆ ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ವಿತರಣಾ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.
ಸರ್ಕಾರದ ಈ ಕ್ರಮವನ್ನು ಮಹಿಳಾ ಪ್ರಯಾಣಿಕರು ಸ್ವಾಗತಿಸಿದ್ದು, ನಿಜವಾದ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ತಲುಪಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















