ವ್ಯಕ್ತಿಗಳಿಗಿಂತ ವಿಚಾರ ಶ್ರೇಷ್ಠ, ವಿಚಾರಗಳಿಗಿಂತ ವ್ಯಕ್ತಿ ಮಾಡಿದ ಸಕರ್ಮ ಶ್ರೇಷ್ಠ ಎಂಬ ಮಾತು ಬಹುಶಃ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಂತವರನ್ನೇ ನೆನೆದು ಹೇಳಿದಂತಿದೆ. ಇಂದು ಎರಡು ರಾಜ್ಯಗಳ ಬಹುಪಾಲು ಮಡಿಲಿಗೆ ಕುಡಿಯಲು ಶುದ್ದ ನೀರು ಸಿಗುತ್ತಿದೆ ಎಂದರೆ ಅದು ಸರ್.ಎಂ.ವಿ.ರವರ ನಿಸ್ವಾರ್ಥ ಕೊಡುಗೆಯೇ. ಈ ಕಾರಣದಿಂದಾಗಿ ಅವರ ಪ್ರತಿ ಕಾರ್ಯವೂ ಶ್ಲಾಘನೀಯ ಮತ್ತು ಸ್ಮರಣೀಯ.
ಮೂಲತಃ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯವರಾದ ಇವರು ಜನಿಸಿದ್ದು 1861ರ ಸೆಪ್ಟೆಂಬರ್ 15ರಂದು. ತಂದೆ ಮೋಕ್ಷಗುಂಡಂ ಶ್ರೀನಿವಾಸ ಶಾಸ್ತ್ರಿ, ವೃತ್ತಿಯಲ್ಲಿ ಸಂಸ್ಕೃತ ವಿದ್ವಾಂಸರು. ತಾಯಿ ವೆಂಕಟಲಕ್ಷಮ್ಮ, ಗೃಹಿಣಿ. ಇವರಿಬ್ಬರೂ ಸಹ ಸರಳತೆ, ಸಜ್ಜನಿಕೆಗೆ ಹೆಸರಾದವರು.
ಆರ್ಥಿಕವಾಗಿ ಬಡವರಾಗಿದ್ದರೂ ಅವರು ಮೈಗೂಡಿಸಿಕೊಂಡಿದ್ದ ಸಂಸ್ಕಾರ ಶ್ರೀಮಂತವಾಗಿತ್ತು. ಸರ್.ಎಂ.ವಿ. ತಮ್ಮ ಹನ್ನೆರಡರ ಪ್ರಾಯದಲ್ಲಿ ತಂದೆಯನ್ನು ಕಳೆದುಕೊಂಡರು. ಆದರೂ ಎದೆಗುಂದದೇ ಬದುಕು ಎಸೆದ ಸವಾಲುಗಳನ್ನು ಧೈರ್ಯದಿಂದ ಎದುರಿಸಿದರು.
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಪೂರೈಸಿ, ಹೈಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದರು. 1881ರಲ್ಲಿ ತಮ್ಮ ಬಿ.ಎ. ಹಾನರ್ರ್‌ಸ್ ಪದವಿಯನ್ನು ಪಡೆದ ನಂತರ 1884ರಲ್ಲಿ ಪುಣೆಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನೀಯರ್ ಪದವಿ ಪಡೆದರು.
ನಂತರ ಮುಂಬಯಿಯ ಪಿಡಬ್ಲ್ಯೂಡಿಯಲ್ಲಿ ಸಹ ತಂತ್ರಜ್ಞರಾಗಿ ಕೆಲಸಕ್ಕೆ ಸೇರಿಕೊಂಡರು. ಇದೇ ಸಂದರ್ಭದಲ್ಲಿ ನಾಸಿಕ್, ಖಾಂಡೇಶ್, ಪುಣೆ ಸೇರಿದಂತೆ ಹಲವಾರು ಕಡೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದರು.
ಭಾರತೀಯ ನೀರಾವರಿ ಆಯೋಗಕ್ಕೆ ಸೇರಿದ ನಂತರ ಇವರಿಗೆ ದಕ್ಷಿಣ ಪ್ರಾಂತ್ಯ ನೀರಾವರಿ ವ್ಯವಸ್ಥೆಯನ್ನು ಸುಧಾರಿಸುವ ಯೋಜನೆಗಳನ್ನು ಜಾರಿಗೆ ತರುವಂತೆ ಕೇಳಿಕೊಳ್ಳಲಾಯಿತು. ನಂತರ ಸಿಂಧು ನದಿಯಿಂದ ಸುಕ್ಕೂರು ಎಂಬ ಹಳ್ಳಿಗೆ ನೀಡಿದ್ದ ಜಲಮಾರ್ಗದಲ್ಲಿ ನೀರು ಪೋಲಾಗದಂತಹ ವ್ಯವಸ್ಥೆ ಮಾಡಿದರು. ಇವರ ಈ ಕಾರ್ಯವನ್ನು ಇಡಿಯ ಭಾರತ ಹಾಡಿ ಹೊಗಳಿತ್ತು.
ನಂತರದ ದಿನಗಳಲ್ಲಿ ವಿಶಾಖಪಟ್ಟಣಂ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ ಇವರು 1909ರಲ್ಲಿ ಮೈಸೂರು ಸಂಸ್ಥಾನದ ಮುಖ್ಯ ತಂತ್ರಜ್ಞರಾಗಿ, 1912ರಲ್ಲಿ ಮೈಸೂರು ಪ್ರಾಂತ್ಯದ ದಿವಾನರಾಗಿ ಸೇರ್ಪಡೆಗೊಂಡರು. ಸುಮಾರು ಏಳು ವರ್ಷಗಳ ಕಾಲ ದಿವಾನರಾಗಿದ್ದ ಇವರ ಅವಧಿಯ ಕೈಗೊಂಡ ಎಲ್ಲ ಕಾರ್ಯಕ್ರಗಳು ಸಹ ಸ್ಮರಿಸುವಂತಹದ್ದು ಮಾತ್ರವಲ್ಲಿ ಇಡಿಯ ಭಾರತ ಎಂದೆಂದಿಗೂ ನೆನಪಿಟ್ಟುಕೊಳ್ಳಬೇಕಾದ್ದು.
1924ರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟುವ ಮೂಲಕ ಲಕ್ಷಾಂತರ ಜನರ ದಾಹ ತೀರಿಸಿದ ಆಧುನಿಕ ಭಗೀರಥ ಸರ್.ಎಂ.ವಿ.
ಇಂದು ಅಂದು ಕಟ್ಟಿದ ಕಟ್ಟಡ ನಾಳೆಯವರೆಗೂ ಗಟ್ಟಿಯಾಗಿ ನಿಲ್ಲುತ್ತದೋ ಇಲ್ಲವೇ ಎಂಬಂತಹ ತಂತ್ರಜ್ಞರಿರುವ ಕಾಲವಿದು. ತಂತ್ರಜ್ಞಾನ ಮುಂದುವರೆದರೂ ಈಗಿನ ತಂತ್ರಜ್ಞರ ಕಾರ್ಯವೈಖರಿ ಅಷ್ಟಕ್ಕಷ್ಟೆ. ಇಂತಹುದರಲ್ಲಿ ಬರಿಯ ಮಾನವಶಕ್ತಿಯ ಸಹಯೋಗದಲ್ಲಿ ಕಟ್ಟಿರುವ ಕೃಷ್ಣರಾಜ ಸಾಗರ ಅಣೆಕಟ್ಟು 94 ವರ್ಷವಾದರು ಒಂದಿಂಚೂ ಅಲುಗಾಡದೇ ಸ್ಥಿರವಾಗಿದೆಯೆಂದರೇ ಸರ್.ಎಂ.ವಿ. ಅವರ ಬುದ್ದಿಮತ್ತೆ, ಕಾರ್ಯವೈಖರಿ ಎಂತಹುದೆಂದು ತಿಳಿಯುತ್ತದೆ.
ಇಡಿಯ ರಾಷ್ಟ್ರವು ಮತ್ತೆ ಮತ್ತೆ ನೆನಪಿಸಿಕೊಳ್ಳುವಂತಹ ವ್ಯಕ್ತಿತ್ವದವರು. ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಸರ್.ಎಂ.ವಿ ತಮ್ಮದೇ ಆದ ತತ್ವಗಳನ್ನು, ಮೌಲ್ಯಗಳನ್ನು ಇರಿಸಿಕೊಂಡು, ಉಸಿರಿರುವ ತನಕವೂ ತಾಯಿ ಭಾರತಿ, ತಾಯಿ ಭುವನೇಶ್ವರಿಯ ಸೇವೆ ಮಾಡಿದವರು.
ಇವರ ಪರಿಶ್ರಮದ ಫಲವಾಗಿ 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯವೊಂದು ಜನ್ಮತಾಳಿತು. ಇವರ ಸ್ಮರಣಾರ್ಥ ಆ ಮಹಾವಿದ್ಯಾಲಯಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಎಂದು ಮರುನಾಮಕರಣ ಮಾಡಲಾಯಿತು. ಪುಣೆ ತಾಂತ್ರಿಕ ಮಹಾವಿದ್ಯಾಲಯವೂ ಗೌರವಾರ್ಥ ಇವರ ವಿಗ್ರಹವೊಂದನ್ನು ಪ್ರತಿಷ್ಟಾಪನೆ ಮಾಡಿತು.
ಪೂಜ್ಯರ ನಿಸ್ವಾರ್ಥ ಸೇವೆಗಾಗಿ ಭಾರತ ಸರ್ಕಾರವು ದೇಶದ ಸರ್ವೋಚ್ಛ ಗೌರವ ಭಾರತರತ್ನವನ್ನು ಮರಣೋತ್ತರವಾಗಿ ನೀಡಿ ಗೌರವಿಸಿದೆ. ಇದರಿಂದಾಗಿ ಬಹುಶಃ ಆ ಗೌರವವೇ ಹೆಮ್ಮೆಪಟ್ಟಿರಬೇಕು. ಇಂತಹ ಅಪ್ರತಿಮ ವ್ಯಕ್ತಿತ್ವ ಮುಕುಟಕ್ಕೆ ಗರಿಯಾಗಲು.
ಇಷ್ಟೆಲ್ಲಾ ಮಹೋನ್ನತ ಕಾರ್ಯಗಳನ್ನು ಮಾಡಿದವರು 102 ವರ್ಷಗಳ ಕಾಲ ಸುದೀರ್ಘ, ಶ್ರೇಷ್ಠ ತುಂಬು ಜೀವನವನ್ನು ನಡೆಸಿ 1962ರ ಎಪ್ರಿಲ್ 14ರಂದು ಇಹಲೋಕ ತ್ಯಜಿಸಿದರು. ಸಮಾಜಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ಸರ್.ಎಂ.ವಿ. ಸಾವಿರ ಸಂವತ್ಸರಕ್ಕೆ ಒಬ್ಬರು. ಇಂತಹ ಶ್ರೇಷ್ಠ ವ್ಯಕ್ತಿತ್ವ ಧರೆಗಿಳಿದ ಪುಣ್ಯದಿನವಿಂದು. ಮತ್ತೆ ಮತ್ತೆ ಅವರ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತ ಇವರಂತೆಯೇ ಬಾಳಲು ಪ್ರಯತ್ನಿಸೋಣ.
-ತೇಜಶ್ರೀ ವೆಂಕಟೇಶ್,
ಪುತ್ತೂರು
Discussion about this post