ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ 1436 ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಕಂದಾಯ ಗ್ರಾಮ ರಚನಾ ಕೋಶದ ನಿರ್ದೇಶಕ ಬಿ.ಹೀರಾನಾಯ್ಕ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂದಾಯ ಗ್ರಾಮಗಳ ರಚನೆ ಪ್ರಕ್ರಿಯೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 4800 ಜನವಸತಿ ಕೇಂದ್ರಗಳು ಇದ್ದು, ಪ್ರಸ್ತುತ 1436 ಜನವಸತಿ ಕೇಂದ್ರಗಳಿಗೆ ಸೂಕ್ತ ದಾಖಲೆಗಳಿಲ್ಲ. ಇಂತಹ ಜನವಸತಿ ಕೇಂದ್ರಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕದಂತಹ ಮೂಲಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿ ಸಿದ್ಧಪಡಿಸಿದೆ. ಮಾರ್ಗಸೂಚಿಗೆ ಒಳಪಡುವ ಜನವಸತಿ ಕೇಂದ್ರಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದವರು ಸೂಚನೆ ನೀಡಿದರು.
ಕನಿಷ್ಟ 10 ಮನೆಗಳಿರುವ ಜನವಸತಿ ಕೇಂದ್ರಗಳನ್ನು ಗ್ರಾಮಗುಚ್ಛವೆಂದು ಪರಿಗಣಿಸಬಹುದಾಗಿದೆ. ಇದೇ ರೀತಿ ಕನಿಷ್ಟ 50 ಮಂದಿಯ ಜನಸಂಖ್ಯೆಯನ್ನು ಜನವಸತಿ ಕೇಂದ್ರ ಒಳಗೊಂಡಿದ್ದರೆ ಅದನ್ನು ಕಂದಾಯ ಗ್ರಾಮವಾಗಿ ಪರಿಗಣಿಸಬಹುದಾಗಿದೆ. ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದ ಬಳಿಕ ಕಲಂ 94 ಅಡಿಯಲ್ಲಿ ನಿವಾಸಿಗಳಿಗೆ ಹಕ್ಕು ದಾಖಲೆಗಳನ್ನು ಒದಗಿಸಬೇಕು ಎಂದರು.
ಸರ್ಕಾರದ ಬಳಿ 2800 ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಸ್ತಾಪಗಳಿದ್ದು, 1400 ಪ್ರಕರಣಗಳಲ್ಲಿ ಅಧಿಸೂಚನೆ ಸಿದ್ಧಪಡಿಸಲಾಗಿದೆ. 800 ಪ್ರಕರಣಗಳು ಬಹುತೇಕ ಅಂತಿಮಗೊಂಡಿದ್ದು, ಹಕ್ಕುಪತ್ರ ನೀಡುವ ಹಂತದಲ್ಲಿದೆ. ಶಿವಮೊಗ್ಗ ಜಿಲ್ಲೆಯಿಂದ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕುರಿತು 34 ಪ್ರಸ್ತಾವನೆಗಳು ಸರ್ಕಾರದ ಹಂತದಲ್ಲಿವೆ ಎಂದರು.
ಅರಣ್ಯ ಭೂಮಿಯಲ್ಲಿ ನೆಲೆಗೊಂಡಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಬಗ್ಗೆ ಸರ್ಕಾರದಿಂದ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ತಕ್ಷಣ, ಅಲ್ಲಿನ ನಿವಾಸಿಗಳಿಗ ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು ಆರಂಭಿಸಬೇಕು. ಇದಕ್ಕಾಗಿ ಸಂಬಂಧಿಸಿದ ಜನವಸತಿಯಲ್ಲಿ ಗ್ರಾಮಸಭೆಯನ್ನು ಆಯೋಜಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಶಿವಮೊಗ್ಗ ಉಪ ವಿಭಾಗಾಧಿಕಾರಿ ಪ್ರಕಾಶ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post