ಚಿಣ್ಣರಿಂದ ಚೆಂದದ ನೃತ್ಯ
ಪುಟ್ಟ ಮಕ್ಕಳು ನಕ್ಕರೂ ಚೆನ್ನ ಅತ್ತರೂ ಚೆನ್ನ ಎಂದು ಸುಮ್ಮನೆ ಹೇಳಿಲ್ಲ. ಪುಟ್ಟ ಮಕ್ಕಳು ಮುದ್ದುಮುದ್ದಾಗಿ ಹೆಜ್ಜೆ ಹಾಕುತ್ತಿದ್ದರೆ ನೋಡಲು ಎರಡು ಕಣ್ಣುಗಳು ಸಾಲವು.
ನಗರದ ಸೇವಾಸದನದಲ್ಲಿ ಸಂಗೀತ ನೃತ್ಯ ಭಾರತಿ ಅಕಾಡೆಮಿಯ ಗುರು ಶ್ರೀಮತಿ ಪದ್ಮಾ ಹೇಮಂತ್ ರವರ ನೃತ್ಯ ಗರಡಿಯಲ್ಲಿ ಪಳಗಿದ 4 ಪುಟ್ಟಮಕ್ಕಳು ತಮ್ಮ ಗೆಜ್ಜೆ ಪೂಜೆಯಲ್ಲಿ ಹಸನ್ಮುಖತೆಯಿಂದ, ಮುಗ್ಧತೆಯಿಂದ ಹೆಜ್ಜೆ ಹಾಕಿ, ಅಭಿನಯಿಸಿ ತಾವು ನಲಿದು ಸಭಿಕರನ್ನು ನಲಿಸಿದರು ಎಂದರೆ ತಪ್ಪಾಗಲಾರದು. ಆರಂಭದ ಆರಭಿ ರಾಗ ಮತ್ತು ಆದಿ ತಾಣಕ್ಕೆ ನಿಬದ್ಧಗೊಂಡಿದ್ದ ಪುಷ್ಪಂಜಲಿಯಲ್ಲೇ ಅವರ ಆತ್ಮವಿಶ್ವಾಸವು ಎದ್ದುಕಾಣುತ್ತಿತ್ತು.
ಮುಂದುವರಿದ ಗಣೇಶ ಕೌತ್ವಂ ಪುಟ್ಟ ಮಕ್ಕಳಿಗೆ ಹೇಳಿಮಾಡಿಸಿದಂತಿತ್ತು. ಈ ಸಮೂಹ ನೃತ್ಯಗಳ ನಂತರ ಏಕವ್ಯಕ್ತಿ ಪ್ರದರ್ಶನದಲ್ಲಿ ದಾಸವರೇಣ್ಯರ ಮೋಹನ ರಾಗ ಮತ್ತು ಆದಿತಾಳಕ್ಕೆ ನಿಬದ್ಧಗೊಂಡಿದ್ದ ‘ಆಡುತ ಬಾರೋ ಗಣೇಶ …’ಎಂದು ನಲ್ಮೆಯಿಂದ ವೇದಿಕೆಗೆ ಬಂದು ನಲಿಸಿದವರು ಕುಮಾರಿ ಶ್ರೀ ತುಳಸಿ.
ಈ ಪ್ರಸ್ತುತಿಯಲ್ಲಿ ಹೊಟ್ಟೆ ತುಂಬಿದ ಗಣೇಶನನ್ನು ಕಂಡು ಅಹಂಕಾರದಿಂದ ಅಟ್ಟಹಾಸದ ನಗೆಯನ್ನು ಬೀರಿ ಚಂದ್ರದೇವನು ಗಣೇಶನ ಶಾಪಕ್ಕೆ ಗುರಿಯಾದ ಪ್ರಸಂಗವನ್ನು ಸಂಚಾರಿ ರೂಪದಲ್ಲಿ ಬಹಳ ಸೊಗಸಾಗಿ ಪ್ರಸ್ತುತಪಡಿಸಲಾಯಿತು. ಮುಂದುವರೆದ ಏಕವ್ಯಕ್ತಿ ಪ್ರದರ್ಶನದಲ್ಲಿ ಜನಪ್ರಿಯ ಶಿವಸ್ತುತಿ, ರೇವತಿ ರಾಗ ಮತ್ತು ಆದಿತಾಳಕ್ಕೆ ನಿಬದ್ಧಗೊಂಡಿದ್ದ ಶ್ರೀಯುತ ದಯಾನಂದ ಸರಸ್ವತಿರವರ ‘ಭೋ ಶಂಭೋ….’ ಎಂದು ದಿಟ್ಟ ಹೆಜ್ಜೆಗಳನ್ನು ಹಾಕುತ್ತ ಶಿವನ ಆಕರ್ಷಕ ಭಂಗಿಗಳಿಂದ ತನ್ನ ಮುಗ್ಧ ಅಭಿನಯದಿಂದ ಸಭಿಕರ ಮನ ಗೆದ್ದವರು ಕುಮಾರಿ ತನುಶ್ರೀ. ಈ ಪ್ರಸ್ತುತಿಯಲ್ಲಿ ಗಂಗಾವತರಣದ ಸಂಚಾರಿಯನ್ನು ಚಿಕ್ಕದಾಗಿ ಅಳವಡಿಸಿಕೊಳ್ಳಲಾಗಿತ್ತು.
ಮುಂದಿನ ಸಮೂಹ ನೃತ್ಯವಾಗಿ ಪ್ರಸ್ತುತಗೊಂಡ ಚತುರಶ್ರ ಜಾತಿಯ ಅಲರಿಪುವಿನಲ್ಲಿ ಆ 4 ಮಕ್ಕಳಲ್ಲಿದ್ದ ನೃತ್ತದ ಬಿಗಿತವನ್ನು ಕಾಣಬಹುದಾಗಿತ್ತು. ಮುಂದಿನ ಏಕವ್ಯಕ್ತಿ ಪ್ರದರ್ಶನದಲ್ಲಿ ವೇದಿಕೆಗೆ ಬಂದ ಕುಮಾರಿ ಯಶಸ್ವಿನಿ ಎಲ್ ಸೊಗಸಾದ ಬೌಲಿ ರಾಗ ಆದಿತಾಳಕ್ಕೆ ನಿಬದ್ಧಗೊಂಡಿದ್ದ ಶ್ರೀ ಅಣ್ಣಮಾಚಾರ್ಯರ ‘ಶ್ರೀಮನ್ನಾರಾಯಣ….’ ಕೃತಿಯನ್ನು ಸಾದರಪಡಿಸಿದರು. ಬಲಿಚಕ್ರವರ್ತಿಯನ್ನು ಮೆಟ್ಟಿದ ವಾಮನನಾಗಿ ಸೊಗಸಾಗಿ ನರ್ತಿಸಿದರು ಯಶಸ್ವಿನಿ. ಇನ್ನು ಕೊನೆಯ ಏಕವ್ಯಕ್ತಿ ಪ್ರದರ್ಶನದಲ್ಲಿ ಬಂದದ್ದು ರಕ್ಷಾ ಜೆ ಎಸ್. ಸಂತ ಶ್ರೇಷ್ಠ ಶ್ರೀ ಪುರಂದರದಾಸರ ನಾದನಾಮಕ್ರಿಯ ರಾಗ ಮತ್ತು ಆದಿ ತಾಳಕ್ಕೆ ನಿಬದ್ಧಗೊಂಡಿದ್ದ ‘ದಾಸನ ಮಾಡಿಕೊ ಎನ್ನ ….’ಎಂಬ ದೇವರ ನಾಮಕ್ಕೆ ಬಾವಾಜಿ ಕಥೆಯನ್ನು ಸಂಚಾರಿ ರೂಪದಲ್ಲಿ ಅಳವಡಿಸಿಕೊಂಡು ಪ್ರಸ್ತುತಪಡಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನೃತ್ಯಗುರು ಶ್ರೀಮತಿ ರೋಹಿಣಿ ಅನಂತ್ ರವರು ಮಾತನಾಡಿ ಮಕ್ಕಳ ಕಲಿಕೆಯ ಮಟ್ಟವನ್ನು ಶ್ಲಾಘಿಸುತ್ತಾ ಅವರ ಭವಿಷ್ಯಕ್ಕೆ ಶುಭಕೋರಿ ಅವರನ್ನು ಉನ್ನತಮಟ್ಟದ ಕಲಾವಿದರನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಗುರು ಶ್ರೀಮತಿ ಪದ್ಮಾ ಹೇಮಂತ್ ರವರ ಪಾಠಾಂತರದ ವೈಖರಿಯನ್ನು ಮೆಚ್ಚಿ ನುಡಿದರು.
ಯುವ ಪ್ರತಿಭಾವಂತ ಲಯ ವಾದಕ ಮೃದಂಗ ವಿದ್ವಾನ್ ಶ್ರೀ ಆನೂರು ವಿನೋದ್ ಶ್ಯಾಮ್ ರವರು ಮಾತನಾಡಿ ಪುಟಾಣಿಗಳನ್ನು ಅಭಿನಂದಿಸಿದರು.ಚಿಕ್ಕ-ಚೊಕ್ಕ ಸಭಾ ಕಾರ್ಯಕ್ರಮದ ನಂತರ ಕೊನೆಯ ಪ್ರಸ್ತುತಿಯಾಗಿ ಹಂಸಾನಂದಿ ರಾಗ ಮತ್ತು ಆದಿತಾಳಕ್ಕೆ ನಿಬದ್ಧಗೊಂಡಿದ್ದ ಶ್ರೀ ಪುರಂದರದಾಸರ ಕೃಷ್ಣನ ಕುರಿತಾದ ಮತ್ತೊಂದು ದೇವರನಾಮವನ್ನು ಸಮೂಹವಾಗಿ ಪ್ರಸ್ತುತಪಡಿಸಿ ಕೊನೆಗೆ ಮಂಗಳದೊಂದಿಗೆ ಕಾರ್ಯಕ್ರಮವನ್ನು ಪುಟಾಣಿಗಳು ಯಶಸ್ವಿಯಾಗಿ ಸಂಪನ್ನಗೊಳಿಸಿದರು.
ಈ ಪುಟಾಣಿಗಳಿಗೆ ಅಮೋಘವಾದ ಸಂಗೀತದ ಸಹಕಾರವನ್ನು ನೀಡಿದ ವಿದ್ವಾಂಸರು, ನಟುವಾಂಗದಲ್ಲಿ ಗುರು ಶ್ರೀಮತಿ ಪದ್ಮಾ ಹೇಮಂತ್, ಹಾಡುಗಾರಿಕೆಯಲ್ಲಿ ಕುಮಾರಿ ಶೀತಲ್ ಹೇಮಂತ್, ಮೃದಂಗದಲ್ಲಿ ವಿದ್ವಾನ್ ಆನೂರು ವಿನೋದ್ ಶ್ಯಾಮ್, ಕೊಳಲಿನಲ್ಲಿ ವಿದ್ವಾನ್ ಶಶಾಂಕ್ ಮತ್ತು ವೈಲಿನ್ ವಾದನದಲ್ಲಿ ವಿದ್ವಾನ್ ಬಿ ಆರ್ ಹೇಮಂತ್ ಕುಮಾರ್.
Discussion about this post