ಗೌರಿಬಿದನೂರು: ತಾಲೂಕಿನ ನಗರಗೆರೆ ಹೋಬಳಿಯ ಜಿ.ಕೊತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಳಶೆಟ್ಟಿಹಳ್ಳಿ ಸಮೀಪದಲ್ಲಿರುವ ಖಾಸಗಿ ವ್ಯಕ್ತಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ದನಗಳ ಕೊಂಬು, ಮೂಳೆ, ತಲೆ ಸೇರಿದಂತೆ ಇನ್ನಿತರ ಅಂಗಗಳನ್ನು ತಂದು ಅದನ್ನು ಪುಡಿ ಮಾಡುವಂತಹ ಘಟಕವನ್ನು ಆರಂಭಿಸಿ ಸ್ಥಳೀಯರಿಗೆ ತೀವ್ರ ತೊಂದರೆ ಮಾಡಲಾಗಿದೆ.
ಈ ವಿಚಾರವಾಗಿ ಸ್ಥಳೀಯರು ಪೊಲೀಸರು, ಗ್ರಾಮ ಪಂಚಾಯಿತಿ ಮತ್ತು ತಾಲೂಕು ದಂಡಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಥಳೀಯರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟಕವನ್ನು ಸುಮಾರು ಎರಡು ತಿಂಗಳ ಹಿಂದೆಯೇ ಯಾವುದೇ ಅನುಮತಿ ಇಲ್ಲದೆ ಗುಡಿಬಂಡೆ ಮೂಲದವರಾದ ಅಬ್ದುಲ್ಲಾ ಮತ್ತು ಚಾಂದ್ ಬಾಷಾ ಎಂಬ ಇಬ್ಬರು ವ್ಯಾಪಾರಿಗಳು ಅವೈಜ್ಞಾನಿಕವಾಗಿ ತಾಲೂಕಿನ ಗಡಿ ಭಾಗದಲ್ಲಿ ರೈತರ ಜಮೀನನ್ನು ಬಾಡಿಗೆ ಪಡೆದಿದ್ದಾರೆ ಜೊತೆಗೆ ಪಕ್ಕದಲ್ಲಿರುವ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ದನಗಳು ಮತ್ತು ಇನ್ನಿತರ ಜಾನುವಾರುಗಳ ತಲೆ, ಕೊಂಬು, ಮೂಳೆ ಸೇರಿದಂತೆ ಇನ್ನಿತರರ ಅಂಗಾಂಗಗಳನ್ನು ತಂದು ಈ ಪ್ರದೇಶದಲ್ಲಿ ಶೇಖರಿಸಿ ಅದನ್ನು ಸಂಸ್ಕರಿಸಿ ತ್ಯಾಜ್ಯವನ್ನು ಪಕ್ಕದ ಜಮೀನುಗಳಿಗೆ ಎಸೆದು ಸುತ್ತಲಿನ ಪ್ರದೇಶವನ್ನು ಮಲಿನಗೊಳಿಸಿದ್ದಾರೆ ಎಂದು ದೂರಲಾಗಿದೆ.
ಇದಲ್ಲದೇ ಇದರಿಂದ ಸುಮಾರು 2-3 ಕಿಮೀ ದೂರದ ವರೆಗೆ ಬರುವ ಕೆಟ್ಟ ವಾಸನೆಯಿಂದ ಸ್ಥಳೀಯ ರೈತರು ತಮ್ಮ ಜಮೀನುಗಳ ಬಳಿ ತೆರಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ಘಟಕದ ಸಮೀಪದಲ್ಲೇ ಇರುವ ವಸತಿ ಶಾಲೆಯ ಮಕ್ಕಳು ಇದರ ಪರಿಣಾಮವಾಗಿ ಶಾಲೆಯನ್ನು ಬಿಟ್ಟಿದ್ದಾರೆ. ಇನ್ನು ರೈತರ ಜಮೀನುಗಳಲ್ಲಿ ಕೆಲಸ ಮಾಡುವ ಯಾವುದೇ ಕಾರ್ಮಿಕರು ಬರುವುದಿಲ್ಲ ಎಂಬುದು ಸ್ಥಳೀಯರು ಆರೋಪವಾಗಿದೆ.
ಇದರ ಪರಿಣಾಮವಾಗಿ ಮಂಗಳವಾರ ಸ್ಥಳೀಯ ಗ್ರಾಮ ಪಂಚಾಯ್ತಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಇಲ್ಲಿನ ತ್ಯಾಜ್ಯವನ್ನು ಹಾಗೂ ಜಾನುವಾರುಗಳ ಅವಶೇಷಗಳನ್ನು ಕೂಡಲೇ ಸ್ಥಳಾಂತರಿಸಿ ಈ ಘಟಕವನ್ನು ಮುಚ್ಚುವಂತೆ ತಿಳಿಸಿದ್ದಾರೆ.
ಈ ಘಟಕದಿಂದ ಸೂಸುವ ಕೆಟ್ಟ ವಾಸನೆಯ ಪರಿಣಾಮವಾಗಿ ಸ್ಥಳೀಯರು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ. ಅಲ್ಲದೆ ಘಟಕದ ಸುತ್ತಲೂ ನೂರಾರು ನಾಯಿಗಳು ಜಮಾಯಿಸಿವೆ. ಇದರಿಂದ ಸ್ಥಳೀಯರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.
ಈ ವಿಚಾರವಾಗಿ ಸ್ಥಳೀಯ ಮುಖಂಡ ಮಾಳಪ್ಪ ಪ್ರತಿಕ್ರಿಯೆ ನೀಡಿ, ಈ ಘಟಕವು ಅಕ್ರಮವಾಗಿ ತಲೆ ಎತ್ತಿದ್ದು ಇದರಿಂದ ಸುತ್ತಲಿನ ಜನತೆಗೆ ಸಂಕಷ್ಟ ಎದುರಾಗಿದೆ. ಅಲ್ಲದೆ ತೀವ್ರ ಮಾಲಿನ್ಯದ ಪರಿಣಾಮವಾಗಿ ರೋಗಗಳ ಭೀತಿಯಲ್ಲಿ ಜನತೆ ಬದುಕುತ್ತಿದ್ದಾರೆ. ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಇದನ್ನು ತೆರವುಗೊಳಿಸದಿದ್ದಲ್ಲಿ ಸ್ಥಳೀಯರೇ ಮುಂದಾಗಿ ಘಟಕವನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ರೈತ ಗಂಗಪ್ಪ ಮಾತನಾಡಿ, ಇದೊಂದು ಅಪಾಯಕರವಾದ ಘಟಕವಾಗಿದ್ದು, ಇದರಿಂದ ನಿತ್ಯ ಹೊರಸೂಸುವ ದುರ್ನಾತದಿಂದ ಈ ಭಾಗದ ಜನತೆ ಕಟ್ಟಲಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಜನರ ಆರೋಗ್ಯವನ್ನು ಕಾಪಾಡಬೇಕಾಗಿದೆ ಎಂದರು.
ಇನ್ನು ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ತಹಶೀಲ್ದಾರ್ ಎಚ್. ಶ್ರೀನಿವಾಸ್, ತಾಲೂಕಿನ ಗಡಿ ಭಾಗದ ಹಳ್ಳಿಯೊಂದರಲ್ಲಿ ಅಕ್ರಮವಾಗಿ ಜಾನುವಾರುಗಳ ಕೊಂಬು, ತಲೆ ಮತ್ತು ಮೂಳೆಗಳನ್ನು ಪುಡಿ ಮಾಡುವ ಘಟಕ ಸ್ಥಾಪನೆಯಾಗಿರುವ ಬಗ್ಗೆ ಸ್ಥಳೀಯರಿಂದ ದೂರು ಬಂದಿದೆ. ಇದರಿಂದ ಇಲಾಖೆಯ ಅಧಿಕಾರಿಗಳ ಮೂಲಕ ಘಟಕದ ಮಾಲೀಕರಿಗೆ ಎಚ್ಚರಿಕೆ ನೀಡಿ ಗುರುವಾರ ಸಂಜೆಯ ಒಳಗಾಗಿ ಘಟಕ ಸೇರಿದಂತೆ ಅಲ್ಲಿನ ಎಲ್ಲ ತ್ಯಾಜ್ಯವನ್ನು ತೆರವುಗೊಳಿಸುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post