ಗೌರಿಬಿದನೂರು: ಅಧರ್ಮಕ್ಕಿಂತ ಧರ್ಮವೇ ಎದೆಂದಿಗೂ ಜಯಗಳಿಸುತ್ತದೆ ಎಂಬ ನಂಬಿಕೆಯಿಟ್ಟುಕೊಂಡಿದ್ದ ದೈವ ಪುರುಷ ಶ್ರೀಕೃಷ್ಣ ಪರಮಾತ್ಮರವರು ಹೇಳಿರುವ ಮಾತುಗಳು ಎಂದಿಗೂ ಜೀವಂತವಾಗಿದ್ದು, ಯುವ ಪೀಳಿಗೆ ಅವುಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ತಿಳಿಸಿದರು.
ನಗರದ ದಿ.ದೇವರಾಜು ಅರಸು ಭವನದಲ್ಲಿ ತಾಲೂಕು ಆಡಳಿತ ಹಾಗೂ ಯಾದವ ಸಮುದಾಯದ ವತಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀಕೃಷ್ಣ ಹೇಳಿರುವಂತೆ ಸಮಾಜದಲ್ಲಿ ಅಧರ್ಮಕ್ಕಿಂತ ಧರ್ಮವೇ ಜಯಗಳಿಸಲಿದ್ದು, ಧರ್ಮದಿಂದ ಎಲ್ಲವನ್ನೂ ಸಾಧಿಸಬಹುದೆಂಬ ನೀತಿಯನ್ನು ಸಾರಿದವರು. ಮಹಾಭಾರತದಲ್ಲಿ ಧರ್ಮವನ್ನು ಗೆಲ್ಲಿಸುವ ಸಲುವಾಗಿ ಯುದ್ದಭೂಮಿಯಲ್ಲೂ ಸಹ ಯಾವುದೇ ಶಸ್ತ್ರವನ್ನು ಹಿಡಿಯದೇ ತನ್ನ ಚಾಣಾಕ್ಷತನದಿಂದ ಅರ್ಜುನನ ರಥದ ಸಾರಥಿಯಾಗಿ ತನ್ನ ತಂತ್ರಗಾರಿಕೆ ಮತ್ತು ಉಪಾಯಗಳನ್ನು ಹೇಳುತ್ತಾ ಯುದ್ದವನ್ನು ಗೆಲ್ಲಿಸಿದವರು ಎಂದರು.
ಶ್ರೀಕೃಷ್ಣ ಗೊಲ್ಲ(ಯಾದವ) ಸಮುದಾಯದ ಪೂರ್ವಜ ನೆಂದು ಗೋವುಗಳನ್ನು ಸಾಕಿ ಸಲಹುವರೆಂದು ಪುರಾಣಗಳಲ್ಲಿ ಉಲ್ಲೇಖವಿದ್ದು ದಿ.ಕೃಷ್ಣಪ್ಪನವರ ಕಾಲದಲ್ಲಿ ಸಮುದಾಯಕ್ಕೆ ಹಲವಾರು ಅಭಿವೃದ್ದಿ ಕಾರ್ಯಗಳಾಗಿದ್ದು, ತಾಲೂಕಿನ ಯಾದವ ಸಮುದಾಯದ ಭವನಕ್ಕಾಗಿ ಈಗಾಗಲೇ ನಿವೇಶನವನ್ನು ಮಂಜೂರು ಮಾಡಿದ್ದು, ಸಮುದಾಯ ಭವನದ ಕಟ್ಟಡಕ್ಕಾಗಿ ನನ್ನ ಶಾಸಕ ನಿಧಿಯಿಂದ 10 ಲಕ್ಷ ರೂ.ಗಳನ್ನು ಮಂಜೂರು ಮಾಡುವುದಾಗಿ ಹಾಗೂ ತಾಲ್ಲೂಕಿನ ತೊಂಡೇಬಾವಿ ವೃತ್ತದಲ್ಲಿ ಬಿ.ಎನ್.ಕೆ. ಪಾಪಯ್ಯನವರ ಪ್ರತಿಮೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
ಸಮುದಾಯದ ಹಿರಿಯ ಮುಖಂಡ ಹಾಗೂ ಯಾದವ ಸಮುದಾಯದ ಅಧ್ಯಕ್ಷರಾದ ಬಿ.ಪಿ. ಕೃಷ್ಣಮೂರ್ತಿ ಮಾತನಾಡಿ, ಯಾದವ ಸಮುದಾಯ ಶ್ರೀಕೃಷ್ಣ ಪರಮಾತ್ಮನ ವಂಶವಾಗಿದ್ದು, ಇವರು ಧರ್ಮದ ಪ್ರತಿಪಾದಕರಾಗಿದ್ದು ಸಮುದಾಯದ ಎಲ್ಲರೂ ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು. ನಮ್ಮ ಸಮುದಾಯದ ಭವನಕ್ಕಾಗಿ ಶಾಸಕರ ಕೊಡುಗೆ ಅಪಾರವಾಗಿದ್ದು, ಈ ಹಿಂದೆ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಸಮುದಾಯದ ಸಮುದಾಯ ಭವನಕ್ಕಾಗಿ ನಿವೇಶನ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ನಿವೇಶನವನ್ನು ನೀಡಿ ಕಟ್ಟಡದ ಕಾಮಗಾರಿಗೆ ಅನುದಾನ ನೀಡುತ್ತಿರುವುದು ಪ್ರಶಂಸನೀಯವಾಗಿದೆ ಎಂದು ಹೇಳಿದರು.
ಮುಖಂಡ ಬಿ.ಪಿ. ಅಶ್ವತ್ಥ ನಾರಾಯಣಗೌಡ ಮಾತನಾಡಿ, ಯಾದವ ಸಮುದಾಯದ ಪ್ರತಿಯೊಬ್ಬರೂ ತಮ್ಮ್ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಶ್ರಮಿಸಬೇಕಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಮುದಾಯವನ್ನು ಮನ್ನಡೆಸಿಕೊಂಡು ಹೋಗಬಲ್ಲ ಸಮರ್ಥ ಯುವ ನಾಯಕರು ಸಿದ್ಧರಾಗುತ್ತಾರೆ. ಇಡೀ ಸಮುದಾಯ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಇದಕ್ಕಾಗಿ ಎಲ್ಲರ ಸಹಕಾರ ನಿರಂತರವಾಗಿರುತ್ತದೆ. ತಾಲ್ಲೂಕಿನಲ್ಲಿ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಸಬಲರಾಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ. ಮಂಜುನಾಥ್, ತಹಸೀಲ್ದಾರ್ ಎಚ್. ಶ್ರೀನಿವಾಸ್, ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲೆ ಪಿ.ವಿ. ಅನ್ನಪೂರ್ಣಮ್ಮ ಮಾತನಾಡಿದರು.
ಸಮುದಾಯದ ವತಿಯಿಂದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ, ಬಿ.ಪಿ. ಕೃಷ್ಣಮೂರ್ತಿ ಸೇರಿದಂತೆ ಇತರ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸರಸ್ವತಮ್ಮ, ಎ. ಅರುಂಧತಿ, ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ರತ್ನಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್. ಮುನಿರಾಜು, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ನಾಗರಾಜು, ರಾಜಸ್ವ ನಿರೀಕ್ಷಕ ರವಿಕುಮಾರ್, ತಾಲೂಕು ಪಂಚಾಯ್ತಿ ಸದಸ್ಯ ಟಿ.ಕೆ. ಶ್ರೀನಿವಾಸಗೌಡ, ಯಾದವ ಸಮುದಾಯದ ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಮುಖಂಡರಾದ ಬಿ.ಆರ್. ಮಹದೇವ್, ಗೋಪಿ, ಬಾಲಪ್ಪ, ಶ್ರೀನಿವಾಸ್, ಆನಂದ್, ವೆಂಕಟಪ್ಪ, ಪುಟ್ಟರಾಜು, ಅಂಬರೀಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Discussion about this post