ಗೀತೆಯ ಬಗೆಗೆ ನಮ್ಮ ಮತದ ಅನುಸಾರ ಭಾಷ್ಯ ಮಂಡಿಸುರುವ ಪೂವಾಚಾರ್ಯರುಗಳ ದೃಷ್ಟಿಯಲ್ಲಿ ಗೀತೆಯು ಮೋಕ್ಷ ಶಾಸ್ತ್ರದಂತೆಯೇ ಭಾಸವಾದೀತು. ಆದರೆ ನಾವು ಈಗ ಹೇಳುತ್ತಿರುವುದು, ಇದು ಮೊದಲು ಜೀವನ ಶಾಸ್ತ್ರ, ಜೀವನ ಪಕ್ವವಾದಂತೆಯೇ ಮೋಕ್ಷಶಾಸ್ತ್ರವೆಂದು! ಇದಕ್ಕೆ ಯಾರನ ವಿರುದ್ಧವಾಗಿಯೂ ಅಲ್ಲದೆ, ಎಲ್ಲಾ ಪ್ರಾಚೀನ ಮತ್ತು ಆಧುನಿಕ ಗೀತಾ-ವಿಮರ್ಶಕರ ಅಭಿಪ್ರಾಯವನ್ನೂ ಪರಿಗಣಿಸಿ ಮುಂದೆ ಸಾಗೋಣ.
1. ಮೋಕ್ಷ ಅಂದರೇನು? ಯಾವ ಒಂದು ಸ್ಥಿತಿಯಲ್ಲಿ ನಮಗೆ ಪುನರ್ಜನ್ಮಪ್ರಾಪ್ತಿಯಿಂದ ಮುಕ್ತಿ ಸಿಗುವುದೋ ಅದು ಮೋಕ್ಷ! ಅಂದರೆ ಜೀವನದ ಹಂಗು ತೊರೆಯುವ ಸ್ಥಿತಿಯೇ ಮೋಕ್ಷ. ವೈರಾಗ್ಯ ಸಂಬಂಧೀ ಭಾವ ಮೋಕ್ಷ.
2. ಸದ್ಯಕ್ಕೆ ನಮಗೆ ಬೇಕಾದುದು ಏನು? ಮೋಕ್ಷ ಬದುಕಿದ್ದಾಗಲೇ ಸಿಗುವ ಸ್ಥಿತಿಯಲ್ಲಾ! ಹಾಗಾದರೆ ಸದ್ಯ ನಮ್ಮ ಅವಶ್ಯಕತೆ ಮೋಕ್ಷವಲ್ಲ – ಜೀವನ! ಜೀವನ ಸ್ವಾಸ್ಥ್ಯವಾಗಿ ನಿರ್ವಹಿಸಿದ ನಂತರದ ಮಾತು ಮೋಕ್ಷಸಾಧನೆ.
ಈ ಲೇಖನದ, ಅಥವಾ ಈ ಶಬ್ದ ತಂತುಗಳಲ್ಲಿನ ಸ್ವಾರಸ್ಯವೂ ಅದೇ! ಭಗವದ್ಗೀತೆಯ ಜೀವನ ನಿರ್ವಹಣಾ ಶಾಸ್ತ್ರವಾಗುವುದರ ಬಗೆ ಮತ ಭೇಧಗಳಿಗೆ, ಹಲವಾರು ಧರ್ಮದ ಚಿಂತಕರಿಗೆ ಭಗವದ್ಗೀತೆಯೇನೂ ಸಿಗದೇ ಉಳಿದಿಲ್ಲ. ಎಲ್ಲ ಮತಪ್ರಚಾರಕರೂ, ಪ್ರಾಚೀನಚಾರ್ಯರೂ ವ್ಯಾಕ್ಯ, ಭಾಷ್ಯಗಳನ್ನೂ ಬರೆದಿದ್ದಾರೆ, ಪ್ರವಚನಗಳನ್ನು ಮಾಡಿದ್ದಾರೆ. ಇನ್ನು ಅನ್ಯ ಧರ್ಮದವರೂ ಬಹಳಷ್ಟು ಓದುವ ಕೃತಿ ಇದು. ಆದರೆ ನಾವು ಯಾವುದನ್ನು ಪಾಲಿಸೋಣ? ಅದಕ್ಕೂ ಧರ್ಮದಲ್ಲಿ ಉತ್ತರವಿದೆ.
ಭಗವತ್ ಉಪಾಸನೆಯಲ್ಲಿ ಯಾವುದು ಮುಖ್ಯ?
1. ಕರ್ಮ
2. ಭಕ್ತಿ
3. ಜ್ಞಾನ
4. ಅಷ್ಟಾಂಗ – ಯೋಗಾದಿಗಳು
ಈ ಮೂರು ಕರ್ಮ, ಭಕ್ತಿ, ಜ್ಞಾನಗಳ ಜೊತೆಗೆ ಅಷ್ಟಾಂಗ ಯೋಗಾದಿಗಳು ನಮ್ಮ ಆಚರಣೆ ನಂಬುಗೆಯಲ್ಲಿ ಬಂದರೂ ಸಹಕಾರಿಯೇ ಹೊರತು ಅಪಾಯಕಾರಿಯಲ್ಲಾ! ಇವುಗಳ ಮಧ್ಯ ಸಹಚರ್ಯ ಸಾಧ್ಯ! ಯಾವ ಪ್ರಮಾಣದ ಹೆಚ್ಚು – ಕಡಿಮೆಗಳಾದರೂ ಏನೂ ಭಯವಿಲ್ಲಾ. ಹಾಗಾಗಿ ತೃಪ್ತಿಯಾಗುವ ಗ್ರಂಥಕರ್ತೃವಿನ ವಿಷಯ ಮಂಡನೆ ನೋಡಿ ನಮ್ಮ ಅನ್ವೀಕ್ಷಕಿ (ಸ್ವಂತ ಬುದ್ಧಿ) ಯಂತೆ ಭಗವದ್ಗೀತೆಯ ಭಾವವನ್ನು ಸ್ವೀಕರಿಸೋಣ.
ನಾಸ್ತಿಕ – ಹೇಗೆ ನಾಸ್ತಿಕನಿಗೂ ಈ ಗ್ರಂಥದ ರುಚಿ ಹತ್ತುತ್ತದೆ?
(ನಾಸ್ತಿಕ ಎಂದರೆ ವೇದಗಳು, ಉಪನಿಷತ್ತುಗಳು ಇರುವಿಕೆಯನ್ನು ಒಪ್ಪದ ವ್ಯಕ್ತಿ)
ಇಲ್ಲಿ ಜೀವನ ನಿರ್ವಹಣಾ ವಿಷಯವೇ ಮುಖ್ಯರಂಗದಲ್ಲಿರುವಾಗ ಎಲ್ಲಾ ವ್ಯಕ್ತಿಗಳಿಗೂ ಇದು ಅತ್ಯಾವಶ್ಯಕ ಕೃತಿಯಾಗಿದೆ.
ಉಪದೇಶಗಳಲ್ಲಿ ಎಷ್ಟು ವಿಧ? ನಮ್ಮಂತೆಯೇ ಯಾರುಯಾರು ಆಕಾಂಕ್ಷಿಗಳಿರುತ್ತಾರೆ?
ಉಪದೇಶ ಯಾವಾಗಲೂ ಎರಡು ವಿಧ. ಗೀತಾಚಾರ್ಯರೂ ಎರಡು ಅಂತಸ್ತುಗಳಲ್ಲಿ ಉಪದೇಶ ಮಾಡುತ್ತಾರೆ.
1 ಸಾಮಾನ್ಯ ಅಧಿಕಾರಿ ವ್ಯವಹಾರಿಕದ್ದು
2 ಉತ್ತಮ ಅಧಿಕಾರಿ ಪಾರಮಾರ್ಥಿಕದ್ದು
ಭಗವದ್ಗೀತೆಯನ್ನು ಪ್ರಾಕ್ಟಿಕಲ್ ಆಗಿ ಇಂದಿನ ಸಮಾಜ ಸ್ಥಿತಿಗೆ ಸಂಬಂಧಿಸಿದಂತೆ, ಇನ್ನು ಕೆಲವರೂ ನಕಾರಾತ್ಮಕವಾದ ಪ್ರತಿಕ್ರಿಯೆಗೆಂದೇ ಇರುತ್ತಾರೆ. ಆವರವಾದ ಸಂವಾದಕ್ಕೆ ಕಾಲ, ವ್ಯವಧಾನವಿತ್ತೆ? ಯುದ್ಧಭೂಮಿಯಲ್ಲಿ ಯಾರು ಇಷ್ಟು ದೀರ್ಘವಾಗಿ ಸಂಭಾಷಣೆಯಲ್ಲಿ ತೊಡಗುತ್ತಾರೆ? ಹೀಗೆ ಇತ್ಯಾದಿ.
ನೆನೆಪಿರಲಿ ಕುರುಕ್ಷೇತ್ರ ಒಂದು ಧರ್ಮಯುದ್ಧ! ಹಲವಾರು ನಿಯಮಗಳಿದ್ದವು.
1. ಅಲ್ಲಲ್ಲಿ ಆಗಾಗ – ವಿರಾಮ ವೇಳೆಗಳೂ ಇರುತ್ತಿದ್ದವು.
2. ಯಾರೂ ಯಾರೊಡನೆಯೂ ಸವಾಲು ಹಾಕದೆ ಸೆಣೆಸುವ ಹಾಗಿರಲಿಲ್ಲ.
3. ದಳ, ನಾಯಕ, ರಥಿ, ಅತಿರಥಿ, ಮಹಾರಥಿ, ಮಹಾಮಹಾರಥಿ ಎಂತೆಲ್ಲಾ ವಿಭಾಗಗಳಿದ್ದವು.
4. ರಥಿಯು ತನಗಿಂತ ಮೇಲು ವರ್ಗವದರೊಂದಿಗೆ ಸೆಣಸುವ ಹಾಗಿಲ್ಲ ಹೀಗೆ
5. ಸೂರ್ಯಸ್ಥದ ನಂತರ ವಿಶ್ರಾಂತಿಯಿರುತ್ತಿತ್ತು.
ಗೀತೆಯನ್ನು ಯಾರು ಓದಬೇಕು:
ಯಾವ ಗ್ರಂಥವನ್ನೇ ಆದರೂ ಅಧಿಕಾರಿ, ವಿಷಯ, ಸಂಬಂಧ, ಪ್ರಯೋಜನ ಎಂಬ ನಾಲ್ಕು ವಿಭಾಗಗಳಾಗಿ ನೋಡಿದರೆ, ಆದರ ಸಂಬಂಧವಾಗಿ ಸ್ಥೂಲವಾಗಿ ತಿಳಿಯುತ್ತದೆ. ಹಾಗೆಯೇ ನಾವು ಗೀತೆಯನ್ನು ಈ 4 ವಿಭಾಗಗಳಾಗಿ ನೋಡೋಣ.
1. ಅಧಿಕಾರಿ – ಯಾರಿಗೆ ಸಂಕಷ್ಟ ಜೀವನ ಸ್ಥಿತಿ, ಯಾರಿ ಸುಖ ತ್ಯಾಗಿಗಳೋ, ಯಾರು ಸಂಗಜೀವಿಗಳೋ.
2. ವಿಷಯ – ಜೀವ, ಜಗತ್, ಈಶ್ವರ – ವಿಶ್ವತತ್ವ
3. ಸಂಬಂಧ – ಜೀವನ ನಿರ್ವಹಣೆಯ ಉತ್ತಮಸ್ಥಿತಿ, ಅಂತರಂಗಶುದ್ಧಿ
4. ಪ್ರಯೋಜನ – ಜೀವನದ ಸುಸ್ಥಿತಿ.
ಯಥಾರ್ಥ ಸತ್ಯವೇ ಧರ್ಮದ ಮೂಲ ಕಾರಣ! ಅಂದರೆ ವಸ್ತುವಿನ ಸ್ವಭಾವ ಹೇಗಿದೆಯೋ ಅದನ್ನು ಹಾಗೆ ಕಂಡುಕೊಳ್ಳುವುದೆ ಧರ್ಮದ ಮೂಲ. ಧರ್ಮವಿಲ್ಲದೇ ಮೋಕ್ಷವಿಲ್ಲ! ಧರ್ಮವಿದ್ದ ಕಡೆ ಮೋಕ್ಷ ತಾನಾಗಿಯೇ ಒಂದುಗೂಡಿ ಬರುತ್ತದೆ.
ಯಥಾರ್ಥ ಜ್ಞಾನವಿಲ್ಲದಿರೆ ಮೋಕ್ಷ ಸಾಧ್ಯವಿಲ್ಲ!
ಅಧಿಕಾರಿ – ವಿಷಯ – ಸಂಬಂಧ ಪರಸ್ಪರ ಅನೋನ್ಯಭಾವ ಜೀವನ ಬಯಸುವವನಿಗೆ ಜೀವನ ಪ್ರಾಪ್ತಿ. ಮೋಕ್ಷ ಬಯಸುವವನಿಗೆ ಮೋಕ್ಷಪ್ರಾಪ್ತಿ.
ಅರಿಕೆ –
ಓದುಗ ಮಿತ್ರರೇ, ಈ ಲೇಖನ ಮಾಲಿಕೆಯ ಬಹುಭಾಗ ಕನ್ನಡದ ಹೆಮ್ಮೆಯ ಸಾಹಿತ್ಯ ಚಿಂತಕ, ಕವಿ, ಶ್ರೀ ಡಿ.ವಿ. ಗುಂಡಪ್ಪನವರ ಜೀವನ ಧರ್ಮಯೋಗ’ ಎಂಬ ಭಗವದ್ಗೀತೆಯ ಮೇಲಿನ ಗ್ರಂಥದ ಮೇಲೆ ಆಧಾರಿತವಾಗಿದೆ. ಇದಲ್ಲದೆ ಹಲವಾರು ಮಹನೀಯರುಗಳ ಪ್ರವಚನ, ಗ್ರಂಥಗಳ ಮೇಲೆ ಆಧಾರಿತ ವಾಗಿದೆ. ಆಯಾ ಲೇಖನದ ಕೆಳಗೆ ತತ್ ಸಂಬಂಧೀ ಗ್ರಂಥ ಋಣದ ವಿಷಯವೂ ಇರುತ್ತದೆ.
ಗ್ರಂಥ ಋಣ:
1. ಜೀವನ ಧರ್ಮಯೋಗ ಡಿವಿಜಿ
2. ಉಪನಿಷದ್ ರಹಸ್ಯವು ದ.ರಾ. ಬೇಂದ್ರೆ
ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಲೇಖಕರಿಗೆ ತಿಳಿಸಬೇಕಾದಲ್ಲಿ k.ajaykiran@gmail.com ಗೆ ಇಮೇಲ್ ಮಾಡಿ.
Discussion about this post