ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆರ್ಯವೈಶ್ಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ, ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಹಾಗೂ ಅವರ ಕುಟುಂಬದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ-ಸೌಲಭ್ಯವನ್ನು ನೀಡುತ್ತಿರುವ ನಿಗಮದ ಉದ್ದೇಶ ಸಕಾಲಿಕವೂ ಅರ್ಥಪೂರ್ಣವೂ ಆಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ಆರ್ಯವೈಶ್ಯ ಸಮುದಾಯದ ಅರ್ಹ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಹಾಗೂ ಶೈಕ್ಷಣಿಕವಾಗಿ ಮುಂದುವರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಯವೈಶ್ಯ ಸಮುದಾಯದವರು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಗತ್ಯವಿರುವವರು ನಿಗಮದ ವಿವಿಧ ಯೋಜನೆಗಳಡಿಯಲ್ಲಿ ಸೌಲಭ್ಯ ಪಡೆದು ಸುಂದರ ಜೀವನ ರೂಪಿಸಿಕೊಳ್ಳುವಂತೆ ಸೂಚಿಸಿದ ಅವರು, ಶೈಕ್ಷಣಿಕವಾಗಿ ಮುಂದುವರೆಯುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಎಂದರು.
ಕೊರೋನದಿಂದ ಬದುಕು ಆತಂಕಕ್ಕೆ ಒಳಗಾಗುತ್ತಿರುವ ಇಂದಿನ ಸಂದಿಗ್ಧ ಸಂದರ್ಭದಲ್ಲಿ ನಿಗಮದ ಯೋಜನೆಗಳು ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿವೆ ಮಾತ್ರವಲ್ಲ ಅವರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿವೆ, ನಿಗಮದ ವಿವಿಧ ಯೋಜನೆಗಳಡಿಯಲ್ಲಿ ಫಲಾನುಭವಿಗಳು ಪಡೆದ ಸಾಲವನ್ನು ಮರುಪಾವತಿಸಿ ನಿಗಮದ ಉಳಿವಿಗೆ ಸಹಕರಿಸುವಂತೆ ಅವರು ಸೂಚಿಸಿದರು.
ಸರ್ಕಾರವು ಇಂತಹ ಹಲವು ಜನಪರ ಯೋಜನೆಗಳೊಂದಿಗೆ ಜಿಲ್ಲೆಯ ಸರ್ವಾಂಗೀಣ ವಿಕಾಸದತ್ತವೂ ದಾಪುಗಾಲು ಇಡುತ್ತಿದೆ. ಪ್ರಸ್ತುತ ಕೋಟ್ಯಾಂತರ ರೂ.ಗಳ ಹಲವು ಯೋಜನೆಗಳು ಕಾರ್ಯಾರಂಭಗೊಂಡಿವೆ. ವಿಶೇಷವಾಗಿ ವಿಮಾನ ನಿಲ್ದಾಣ, ಹೊಸ ರೈಲ್ವೇ ಸಂಪರ್ಕ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಸೇತುವೆಗಳು, ನೀರಾವರಿ ಯೋಜನೆಗಳು ಸೇರಿದಂತೆ ಅನೇಕ ಜನಪರ ಯೋಜನೆಗಳು ಪ್ರಗತಿಯಲ್ಲಿದ್ದು, ಕೆಲವೇ ವರ್ಷಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಚಿತ್ರಣವೇ ಬದಲಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಸಮುದಾಯದ ಉನ್ನತಿಗೆ ಸರ್ಕಾರವು ಬಿಡುಗಡೆ ಮಾಡಿರುವ ಅನುದಾನದ ಮೊತ್ತವನ್ನು 50 ಕೋಟಿ ರೂ.ಗಳಿಗೆ ಹೆಚ್ಚಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಈ ಸಮುದಾಯದಲ್ಲಿ ಎಲ್ಲರೂ ಧನಿಕರಿಲ್ಲ. ಸಾಮಾನ್ಯ ಜೀವನ ನಡೆಸುತ್ತಿರುವ ಆರ್ಯವೈಶ್ಯ ಸಮುದಾಯದ ಅಭ್ಯರ್ಥಿಗಳಿಗೆ ನಿಗಮದ ಯೋಜನೆಗಳು ಭರವಸೆಯ ಬೆಳಕಾಗಲಿವೆ ಎಂದರು.
ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಮಾತನಾಡಿ, ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಸಮುದಾಯದಲ್ಲಿ ಇಂದು ನಿರೀಕ್ಷೆಯಂತಿಲ್ಲ. ಅನೇಕ ಕುಟುಂಬಗಳಲ್ಲಿ ಬಡತನವಿದೆ. ನಿರುದ್ಯೋಗವಿದೆ. ಸಮುದಾಯದಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರವಾಗಿ ರಚನಾತ್ಮಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ಈಗಾಗಲೇ ರಾಜ್ಯದ 20 ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಅಗತ್ಯತೆಗಳು, ಅವರ ಬದುಕು, ವ್ಯವಹಾರ ಮುಂತಾದವುಗಳನ್ನು ಅರಿಯುವ ಪ್ರಯತ್ನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಇನ್ನಷ್ಟು ಸಹಕಾರ ಪಡೆದು, ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದರು.
ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ. ಶಾಂತರಾಜು, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ತಾ.ಪಂ.ಅಧ್ಯಕ್ಷೆ ಗೀತಾ ಜಯಶೇಖರ್, ಚನ್ನಬಸಪ್ಪ, ದತ್ತಾತ್ರಿ, ವೆಂಕಟ ಸುಬ್ಬಯ್ಯ ಮುಂತಾದವರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post