ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದು ಸಾರಿಗೆ ಸಂಸ್ಥೆ ನಾಲ್ಕು ಜಿಲ್ಲೆಗಳ ಮತ್ತು ಸುತ್ತಮುತ್ತಲ ಹಳ್ಳಿಗಾಡಿನ ಜನಗಳ ಸಾರಿಗೆ ಅಗತ್ಯವಾಗಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಏರುತಗ್ಗುಗಳ ಹಾದಿಯ ನೈಸರ್ಗಿಕ ತಾಣಗಳಲ್ಲಿ ಬಸ್’ಗಳು ಸಂಚರಿಸಿ ಇಡೀ ಜನಜೀವನದಲ್ಲಿ ಹಾಸು ಹೊಕ್ಕಾಗಿದೆ. ಇದೊಂದು ಗರ್ವದ ಮಾತು. ಆದರೆ ಅದೀಗ ಒಣಜಂಭದ ಮಾತಾಗುವ ಅಣಕಿಗೆ ಒಳಗಾಗಿಬಿಟ್ಟಿದೆ.
ಸುಮಾರು ಮೂವತ್ತು ವರ್ಷಗಳ ಇತಿಹಾಸ ಎಪ್ಪತ್ತಾರು ಬಸ್’ಗಳು. ಸುಮಾರು ಮುನ್ನೂರು ಮಂದಿ ಸಿಬ್ಬಂದಿ. ಪ್ರತಿದಿನ ಎಂಟುಸಾವಿರ ಪ್ರಯಾಣಿಕರು. ಹಳ್ಳಿಹಳ್ಳಿಗೆ ಬಸ್ ಸಂಪರ್ಕ. ಯಾವುದೇ ಖಾಸಗಿ ವ್ಯಕ್ತಿಯ ಮಾಲೀಕತ್ವವಿಲ್ಲ. ಸಂಪೂರ್ಣ ಸಹಕಾರ ತತ್ವದ ಮೇಲೆಯೇ ನಿರ್ಮಿತವಾದ ಸಹಕಾರ ಸಾರಿಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಸಹಕಾರ ಸಂಪದ. ನಮ್ಮ ಮಲೆನಾಡಿನ ಹೆಮ್ಮೆ. ಅಷ್ಟೇಕೆ ಒಂದು ಹೇಳಿಕೆಯಂತೆ ಇಡೀ ಏಷಿಯಾದಲ್ಲೇ ಸಹಕಾರ ತತ್ವದ ಮೇಲೆ ನಿರ್ವಹಿಸುತ್ತಿರುವ ಏಕೈಕ ಸಾರಿಗೆ ಎಂಬ ಹೆಗ್ಗಳಿಕೆ.
ಈಗ ನನಗೆ ನೆನಪಾಗುತ್ತದೆ. ಭದ್ರಾವತಿ ಆಕಾಶವಾಣಿಗೆ ರೂಪಕ ನಿರ್ಮಿಸಲು ನಾನು ಮತ್ತು ಸಹೋದ್ಯೋಗಿ ಮಿತ್ರರಾದ ಸದಾನಂದ ಹೊಳ್ಳ ಕೊಪ್ಪಕ್ಕೇ ಹೋಗಿದ್ದೆವು. ಆಗ ಕರೀಗೌಡ ಎಂಬುವವರು ಆಡಳಿತ ಮಂಡಳಿ ಪ್ರಮುಖರಾಗಿದ್ದರು. ಅಲ್ಲಿ ಪ್ರಮುಖರು ಎಂದರೆ ಸರ್ಕಾರಿ ಶ್ರೇಣೀಕೃತ ಹುದ್ದೆಯಲ್ಲ. ಕಾರ್ಮಿಕರೇ ಅಲ್ಲಿ ಪ್ರಭುಗಳು. ಮಾಲೀಕ ಕಾರ್ಮಿಕ ಬೇಧವೇ ಇಲ್ಲ. ಎಲ್ಲ ಕೈಗಳೂ ದುಡಿಯಬೇಕು. ಎಲ್ಲ ಹೊಟ್ಟೆಗಳೂ ಭರ್ತಿಯಾಗಬೇಕು. ಜನಗಳ ಅಗತ್ಯಕ್ಕೆ ಅದರಲ್ಲಂತೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಮಯಕ್ಕೆ ಸರಿಯಾಗಿ ಸಹಕಾರ ಸಾರಿಗೆ ಬಸ್’ಗಳು ಸಂಚರಿಸುತ್ತಿದ್ದವು. ರಿಯಾಯ್ತಿ ಪಾಸ್’ಗಳಿಂದಲೇ ಪ್ರಯಾಣಿಕರ ಜೀವನಾಡಿಯಾಗಿ ಬೆಳೆಯಿತು ಸಹಕಾರ ಸಾರಿಗೆ.
ಆಗ ಕರಿಗೌಡರು ನಮಗೆ ಇಡೀ ಸಂಸ್ಥೆಯ ರೂಪುರೇಷೆಗಳನ್ನು ವಿವರಿಸಿದ್ದರು. ಒಂದು ಕಾಲಕ್ಕೆ ಖಾಸಗಿ ಒಡೆತನದಲ್ಲಿದ್ದ ಈ ವಹಿವಾಟು ನಷ್ಟದ ದೃಷ್ಟಿಯಿಂದ ಮುಚ್ಚುವ ಸ್ಥಿತಿ ತಲುಪಿತು. ಆಗಿನ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ಚುಕ್ಕಾಣಿ ಹಿಡಿದರು. ಸಹಕಾರ ತತ್ವದ ಆಧಾರದ ಮೇಲೆ ತಲೆಯೆತ್ತಿತು ಸಾರಿಗೆ ಸಂಸ್ಥೆ. ಒಂದು ಉತ್ತಮ ಕಾರ್ಯಕ್ರಮ ನಿರ್ಮಿಸಿದ ತೃಪ್ತಿ ನಮ್ಮದಾಯಿತು.
ನಮ್ಮಲ್ಲಿ ಸಹಕಾರದ ಮಾತೆತ್ತಿದರೆ ಅಮುಲ್ ಸಂಸ್ಥೆಯ ಉದಾಹರಣೆ ಹೇಳುತ್ತೇವೆ. ಅದೇ ನಮ್ಮ ರಾಜ್ಯದಲ್ಲೇ ಅಮೂಲ್ಯ ಸಾರಿಗೆ ಸಂಸ್ಥೆಯ ಬಗ್ಗೆ ನಮ್ಮ ಆದ್ಯತೆಯೇ ಕಾಣುತ್ತಿಲ್ಲ. ದೀಪದ ಕೆಳಗೆ ಕತ್ತಲೆ. ಒಂದು ಇತಿಹಾಸದ ದಾಖಲೆಯಾಗಬಹುದಾಗಿರುವ ಸಹಕಾರ ಸಾರಿಗೆ ಉಸಿರುಗಟ್ಟಿರುವ ಪರಿಸ್ಥಿತಿ ನಮ್ಮ ಆಡಳಿತ ಷಾಹಿಯ ಕಣ್ಣಿಗೆ ಬಿದ್ದಿಲ್ಲವಲ್ಲ ಎಂಬ ಸಖೇದಾಶ್ಚರ್ಯವುಂಟಾಗುತ್ತದೆ.
ಈಗ್ಗೆ ಹಿಂದಿನ ಕಾಂಗ್ರೆಸ್, ಸಮ್ಮಿಶ್ರ ಮತ್ತು ಈಗಿನ ಭಾಜಪ ಸರ್ಕಾರದ ಮುಖ್ಯಮಂತ್ರಿಗಳವರೆಗೆ ಸಹಕಾರ ಸಾರಿಗೆಯ ಚಿಂತಾಜನಕ ಸ್ಥಿತಿಯ ಬಗ್ಗೆ ಗಮನ ಸೆಳೆಯಲಾಗಿದೆ. ಸ್ಥಳೀಯ ಶಾಸಕರು ಮುಖಂಡರು, ಸಾಮಾಜಿಕ ಕಾರ್ಯಕರ್ತರು ಇಲ್ಲಿನ ಸಂಸ್ಥೆಯ ಸ್ಥಿತಿಯನ್ನ ನೋಡಿದ್ದಾರೆ. ಆದರೆ ಏನೂ ಸುಧಾರಣೆ ಕಂಡುಬಂದಿಲ್ಲ.
ಸುಮಾರು ಮುನ್ನೂರು ಕುಟುಂಬಗಳಿಗೆ ನೇರ ಉದ್ಯೋಗ. ಸುಮಾರು ಎರಡು ಸಾವಿರ ಮಂದಿಗೆ ಜೀವಾನಾಧಾರ. ಆದರೆ ಈಗ ಅವರ ಬದುಕೆಲ್ಲ ಬೀದಿಗೆ ಬಿದ್ದಿದೆ. ಅತೀವ ನಷ್ಟಕ್ಕೀಡಾಗಿ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತಗೊಳಿಸಿದೆ.
ವೈಶಿಷ್ಟ್ಯವೆಂದರೆ ಈ ಸಂಸ್ಥೆ ಡೀಸೆಲ್ ದರ ಬದಲಾದಂತೆಲ್ಲ ಮರು ದರ ನಿಗದಿ ಮಾಡದೇ ಅನ್ಯಕ್ರಮಗಳ ಮೂಲಕ ಉಳಿತಾಯ ಮಾಡಿತು. ಪ್ರಯಾಣಿಕರಿಗೆ ಹೊರೆಯಾಗದಂತೆ ನಾಜೂಕಾಗಿ ಆಡಳಿತ ನಿರ್ವಹಿಸಿತು. ಈ ಜಾಣ್ಮೆ ನಮ್ಮ ಕೆಂಪು ಬಸ್ಸಿನವರಿಗೆ ಒಂದು ಅಧ್ಯಯನ ಯೋಗ್ಯ ವಿಷಯವೂ ಆಗಿದೆ. ಆದರೆ ಇಂಥದೊಂದು ಸಂಸ್ಥೆಯ ಯಶಸ್ಸಿನ ಹಾದಿಯನ್ನು ವಿಮರ್ಶಿಸಲೂ ಮುಂದಾಗಲಿಲ್ಲ. ಡೀಸೆಲ್ ದರ ಏರಿಕೆ- ಬಸ್ ಟಿಕೆಟ್ ದರ ಏರಿಕೆ ಈ ಅನುಪಾತದಲ್ಲೇ ನಡೆಯುತ್ತಿದೆ.
ಆದರೆ ಕಡಿಮೆ ಸಂಬಳ ಪಡೆದು ಸಂಸ್ಥೆಯ ಹಿತ ರಕ್ಷಿಸುವ ಅಲ್ಲಿ ನೌಕರರ ಮನೋಸಂಕಲ್ಪ ಅನುಕರಣೀಯ. ಮೇಲಾಧಿಕಾರಿ, ಕೈಕೆಳಗಿನ ನೌಕರ ಎಂಬ ಮನೋಭಾವನೆಗಳನ್ನು ಬಿಟ್ಟು ಆಪ್ತರಾಗಿ ಪರಸ್ಪರ ವರ್ತಿಸುವ ಅವರ ನಡವಳಿಕೆ ಒಂದು ಆದರ್ಶವೇ.
ವಿದ್ಯಾರ್ಥಿಗಳಂತೂ ತಮ್ಮ ವ್ಯಾಸಂಗದ ಅವಿನಾಭಾವ ಸಂಗಾತಿಯಾಗಿಬಿಟ್ಟಿದ್ದವು ಆ ಬಸ್’ಗಳು. ಚಾಲಕರು, ನಿರ್ವಾಹಕರು, ಹೀಗೆ ಅತ್ಯಂತ ದುರ್ಗಮವಾದ ಪರಿಸರದಲ್ಲಿ ಸಂಚರಿಸಿ ಕುಗ್ರಾಮಗಳ ಮಕ್ಕಳು, ಕೃಷಿಕರು ಮುತಾಂದವರ ಆಧಾರ ಸಾರಿಗೆಯಾಗಿ ಪರಿವರ್ತಿತವಾಗಿತ್ತು. ಎಂತೆಥವೋ ಸಕ್ಕರೆ ಕಾರ್ಖಾನೆ, ಸಹಕಾರ ಸಂಘಗಳು, ಶಿಕ್ಷಣ ಸಂಸ್ಥೆಗಳನ್ನು ಸೂಪರ್ ಸೀಡ್ ಮಾಡಿ ಆಡಳಿತಗಾರರನ್ನು ನೇಮಿಸಿ ಜನತೆಯ ಹಿತ ರಕ್ಷಿಸುವ ಸರ್ಕಾರ ಈಗ ಯಾಕೆ ಮೌನ ತಾಳಿದೆ ಅರ್ಥವಾಗುತ್ತಿಲ್ಲ. ಪಾಪ ನೌಕರರು ದಯನಿಯವಾಗಿ ಬೇಡುತ್ತಿದ್ದಾರೆ. ಅಲ್ಪಸಂಬಳ ಸ್ವೀಕರಿಸಿ ಹಣದಾಸೆಗೆ ಬಲಿಬೀಳದೇ ಸಂಸ್ಥೆಯನ್ನು ಬಲಗೊಂಡು ಬೆಳೆಸಿದ್ದಾರೆ. ಈಗಿನ ಸರ್ಕಾರದ ನೀತಿ, ಡೀಸೆಲ್ ಬೆಲೆ, ಬಿಡಿಭಾಗಗಳ ಬೆಲೆ ಏರಿಕೆ ಇವುಗಳಿಂದ ಸಾರಿಗೆ ನಿರ್ವಹಣೆ ಸೋತು ಸುಣ್ಣಾಗಿದೆ. ತಕ್ಷಣ ಇದರತ್ತ ಗಮನ ಹರಿಸಬೇಕು.
ಮಕ್ಕಳಿಗೆ ಪರೀಕ್ಷಾ ಸಮಯ. ಇದು ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವ ಸಮಯವಲ್ಲ. ರಾಜ್ಯ ಸಾರಿಗೆ ತಮಗೆ ಅನುಕೂಲವಿಲ್ಲ ಎಂದು ವಿದ್ಯಾರ್ಥಿಗಳೇ ಹೇಳುತ್ತಾರೆ. ಸಂಸ್ಥೆಯ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಶ್ರೀಧರ್ಮಪ್ಪ. ಆದರೆ ಕಾಯಕಲ್ಪ ಹೇಗೆ ಎಂಬ ಉತ್ತರವಿಲ್ಲ. ಕೇವಲ ಓಟುಗಳ ಲೆಕ್ಕದಿಂದ ನೋಡುವ ಸಮಸ್ಯೆ ಇದಲ್ಲ. ಒಂದು ಪ್ರದೇಶದ ದೈನಂದಿನ ಅಗತ್ಯವಾಗಿ ಹಾಸುಹೊಕ್ಕಾದ ಸಂಸ್ಥೆಯ ಅಳಿವು ಉಳಿವಿನ ಪ್ರಶ್ನೆ.
ಹಿಂದೆ ರಸ್ತೆ ರಾಷ್ಟ್ರೀಕರಣ ಸಂದರ್ಭದಲ್ಲಿ ರಾತ್ರೋರಾತ್ರಿ ಬಸ್’ಗಳ ಸಮೇತ ಕ್ರಮ ಜಾರಿಗೆ ಮಾಡಲಾಯಿತು. ಈಗ ಪರಿಸ್ಥಿತಿ ಬದಲಾಗಿದೆ. ಒಂದು ಅಪರೂಪದ ಸಹಕಾರಿ ಆಂದೋಲನವನ್ನು ದೇಶವ್ಯಾಪಿ ಜನಪ್ರಿಯಗೊಳಿಸಿದ ಸಹಕಾರ ಸಾರಿಗೆಯ ಬಗ್ಗೆ ವಿಶೇಷ ಕಾನೂನು ಹೊರಡಿಸಿ ರಕ್ಷಣೆ ನೀಡಬೇಕು. ಸರ್ಕಾರವೇ ವಹಿಸಿಕೊಂಡರೆ ಬಹಳ ಒಳ್ಳೆಯ ಕೆಲಸ.
ಜಿಲ್ಲೆಯ ಸಚಿವರಿದ್ದಾರೆ, ಪ್ರಭಾವೀ ರಾಜಕೀಯ ಮುಖಂಡರಿದ್ದಾರೆ, ಜನಸ್ಪಂದನೆಯ ಮುಖ್ಯಮಂತ್ರಿಗಳೇ ಇದ್ದಾರೆ. ಮಠಮಾನ್ಯಗಳಿಗೆ ಅನುದಾನ ನೀಡುವ ಪರಿಪಾಠವಿದೆ. ಇರಲಿ. ಅದರ ಜೊತೆಗೇ ಇದೂ ಒಂದು ನೂಲು ಮೇಲಿನ ಪುಣ್ಯದ ಕೆಲಸ. ಸಹಕಾರ ತತ್ವಕ್ಕೆ ಆನೆಬಲ ನೀಡುವ ಮಹತ್ವದ ಕೊಡುಗೆ ಇದಾಗುತ್ತದೆ. ನಮ್ಮ ಮುಖ್ಯಮಂತ್ರಿಗಳು ಆ ಪುಣ್ಯಕಟ್ಟಿಕೊಳ್ಳಲಿ ಎಂದು ಆಶಿಸೋಣ.
ಲೇಖನ: ಡಾ.ಎನ್. ಸುಧೀಂದ್ರ
Get in Touch With Us info@kalpa.news Whatsapp: 9481252093
Discussion about this post