ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ #Raghaveshwara Shri 32ನೇ ಚಾತುರ್ಮಾಸ್ಯ ವ್ರತ ಆಷಾಢ ಶುದ್ಧ ಪೂರ್ಣಿಮೆಯಿಂದ ಅಂದರೆ 10ನೇ ಜುಲೈ 2025 ರಿಂದ ಭಾದ್ರಪದ ಶುದ್ಧ ಪೂರ್ಣಿಮೆಯವರಗೆ ಅಂದರೆ 7ನೇ ಸೆಪ್ಟೆಂಬರ್ 2025ರವರೆಗೆ ಗೋಕರ್ಣ ಅಶೋಕೆಯ ಪುಣ್ಯ ಪರಿಸರದಲ್ಲಿ ಸಂಪನ್ನಗೊಳ್ಳಲಿದೆ.
ಅಶೋಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾತುರ್ಮಾಸ್ಯ ವೈಶಿಷ್ಟ್ಯಗಳ ಬಗ್ಗೆ ವಿವರ ನೀಡಿದ ರಾಘವೇಶ್ವರ ಶ್ರೀಗಳು, “ಭಾಷೆ ಸಂವಹನದ ಸಾಧನ ಮಾತ್ರವಲ್ಲ; ಅದು ಸಂಸ್ಕøತಿ ವಾಹಕವೂ ಹೌದು; ಭಾಷೆಯೊಡನೆ ಪರಂಪರೆ ಸಾಗಿಬಂದಿರುತ್ತದೆ. ಹಾಗಾಗಿ ಸ್ವಭಾಷೆಯನ್ನು ಸಂರಕ್ಷಿಸಿಕೊಳ್ಳಬೇಕು. ಅದರಿಂದ ಸ್ವಸಂಸ್ಕøತಿಯ ಸಂರಕ್ಷಣೆಯಾಗುತ್ತದೆ. ಭಾಷೆಯನ್ನು ರಕ್ಷಿಸುವುದೆಂದರೆ ಅದರಲ್ಲಿ ಮಾತನಾಡುವುದು; ಶುದ್ಧವಾಗಿ ಮಾತನಾಡುವುದು. ಮರೆತುಹೋದ ಮನೆಮಾತನ್ನು ಮರಳಿ ನೆನಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು #Chathurmasa ಸ್ವಭಾಷಾ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಆಚರಿಸಲಾಗುತ್ತಿದೆ. ಈ ಚಾತುರ್ಮಾಸ್ಯ ಸ್ವಭಾಷೆಯನ್ನು ಪರಿಶುದ್ಧವಾಗಿ ಮಾತನಾಡಲು ಪ್ರೇರೇಪಿಸುತ್ತದೆ” ಎಂದು ಬಣ್ಣಿಸಿದರು.

ಇದೇ ಮೊಟ್ಟಮೊದಲ ಬಾರಿಗೆ ಇಂಥ ಸೂತ್ರ ಇಟ್ಟುಕೊಂಡು ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಚಾತುರ್ಮಾಸ್ಯ ಧರ್ಮಕ್ಕೆ ಸೀಮಿತ ಎಂದು ವಾದಿಸುವವರಿದ್ದಾರೆ. ಭಾಷೆಯನ್ನು ಉಳಿಸುವುದು ಕೂಡಾ ಧರ್ಮದ ಒಂದು ಅಂಗ. ಉರಿಯುವುದು ಬೆಂಕಿಯ ಧರ್ಮ; ಹರಿಯುವುದು ನೀರಿನ ಧರ್ಮ; ಅಂತೆಯೇ ನಮ್ಮ ಭಾಷೆ ಮಾತನಾಡುವುದು ನಮ್ಮ ಧರ್ಮ ಎಂದು ವಿಶ್ಲೇಷಿಸಿದರು.

ಕನ್ನಡವನ್ನು ಶುದ್ಧವಾಗಿ ಮಾತನಾಡಲು ಕಲಿಯೋಣ. ಭಾಷೆಯಲ್ಲಿ ಒಂದು ಪದ ಮರೆಯಾದರೆ ಅದಕ್ಕೆ ಸಂಬಂಧಿಸಿದ ಸಂಸ್ಕøತಿ- ಸಂಸ್ಕಾರ ಎಲ್ಲವೂ ನಾಶವಾಗುತ್ತದೆ. ಒಂದು ಪರಕೀಯ ಪದ ಆಯಾ ಭಾಷೆಯ ಸಂಸ್ಕಾರವನ್ನು ತರುತ್ತದೆ. ನಮಗೆ ಗೊತ್ತಾಗದಂತೆ ನಾವೇ ಪರಕೀಯರಾಗುತ್ತಿದ್ದೇವೆ. ಉದಾಹರಣೆಗೆ ಇಂಗ್ಲಿಷ್ ನಾವು ಆವಾಹಿಸಿಕೊಂಡಿರುವ ಆಕ್ರಮಣ. ನಮ್ಮತನವನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ಭಾಷೆ ಉಳಿಸಿಕೊಳ್ಳುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.
ಗುಲಾಮಗಿರಿ, ದಾಸ್ಯದ ಸಂಕೇತ ಏಕೆ ಎಂದು ಈಗ ಪ್ರಶ್ನಿಸದಿದ್ದರೆ ಮುಂದಿನ ದಿನ ಈ ಪ್ರಶ್ನೆ ಎತ್ತುವವರೂ ಇರಲಾರರು. ರಾಮಚಂದ್ರಾಪುರ ಮಠ ಶುದ್ಧ ದೇಸಿ ತಳಿಯ ಗೋವು ಉಳಿಸಲು ಬಹುದೊಡ್ಡ ಆಂದೋಲನ ನಡೆಸಿದೆ. ಭಾರತೀಯ ತಳಿಗಳ ಪರಿಶುದ್ಧತೆ ಉಳಿಯಬೇಕು ಎಂಬ ಕಾರಣಕ್ಕೆ ತಳಿಸಂಕರ ವಿರೋಧಿಸುತ್ತಾ ಬಂದಿದೆ. ಗೋವಿನಲ್ಲಿ ತಳಿಸಂಕರ ಹೇಗೆ ಪ್ರಮಾದವೋ ಭಾಷೆಯಲ್ಲಿ ಕೂಡಾ ಸಂಕರ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

ಗುರುವಾರ ಜುಲೈ 10ರಂದು ಶ್ರೀವ್ಯಾಸಪೂಜೆಯೊಂದಿಗೆ ಚಾತುರ್ಮಾಸ್ಯ ವ್ರತ ಆರಂಭವಾಗಲಿದೆ. ಚಾತುರ್ಮಾಸ್ಯ ಸಂದರ್ಭದಲ್ಲಿ 13ರಂದು ಶ್ರೀವರ್ಧಂತಿ ಕಾರ್ಯಕ್ರಮ ನಡೆಯಲಿದೆ. ಜುಲೈ 21 ಮತ್ತು ಆಗಸ್ಟ್ 19ರಂದು ಎರಡು ಸ್ವಭಾಷಾ ಗೋಷ್ಠಿ ನಡೆಯಲಿದೆ. ಆಗಸ್ಟ್ 16ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 27ರಂದು ಶ್ರೀಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಸೆಪ್ಟೆಂಬರ್ 7ರಂದು ಸೀಮೋಲ್ಲಂಘನದೊಂದಿಗೆ ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.
ಚಾತುರ್ಮಾಸ್ಯ ಸೇವಾಬಿಂದುಗಳಾದ ಮಂಜುನಾಥ ಸುವರ್ಣಗದ್ದೆ, ಪ್ರಸನ್ನ ಕುಮಾರ್ ಟಿ.ಜಿ, ಜಿ.ಕೆ.ಹೆಗಡೆ, ಶ್ರೀಕಾಂತ್ ಪಂಡಿತ್, ಉದಯಶಂಕರ ಭಟ್, ಮಧು ಜಿ.ಕೆ, ಜಿ.ಎಸ್.ಹೆಗಡೆ, ಸುಬ್ರಾಯ ಭಟ್, ಆರ್.ಜಿ.ಹೆಗಡೆ, ಕೆ.ಎಲ್.ಹೆಗಡೆ, ರಾಜು ಹೆಬ್ಬಾರ್, ಉದಯ ಭಟ್, ರಾಜಾರಾಂ ಭಟ್, ಜಿ.ವಿ.ಹೆಗಡೆ, ಮಹೇಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post