ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಜ್ಯೋತಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಜೀವನದ ಎಲ್ಲ ಹಂತಗಳೂ ನಮಗೆ ಇದು ಪ್ರಯೋಜನಕ್ಕೆ ಬರುತ್ತದೆ. ಆದ್ದರಿಂದ ಒಳ್ಳೆಯ ಜೀವನ ಸಾಗಿಸಬೇಕಾದರೆ ಜ್ಯೋತಿಷ್ಯದ ಮೂಲತತ್ವಗಳನ್ನು ಅರಿತುಕೊಳ್ಳುವುದು ಅಗತ್ಯ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ #Raghaveshwara Shri ನುಡಿದರು.
ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 45ನೇ ದಿನವಾದ ಮಂಗಳವಾರ ಕಾಲ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ನಮ್ಮ ಪೂರ್ವಜರಲ್ಲಿ ಗ್ರಹಗತಿಗಳ ಪ್ರಜ್ಞೆ ಸದಾ ಇತ್ತು. ಈ ಪ್ರಜ್ಞೆ ಇದ್ದರೆ, ಪ್ರತಿ ಹಂತದಲ್ಲಿ ಅದು ನಮ್ಮ ನೆರವಿಗೆ ಬರುತ್ತದೆ. ಇಂಥ ಅಪೂರ್ವ ಶಾಸ್ತ್ರದ ತಲಸ್ಪರ್ಶಿಯಾಗಿ ಅಧ್ಯಯನ ಮಾಡಬೇಕು ಮತ್ತು ತಲಸ್ಪರ್ಶಿಯಾಗಿ ಅಗತ್ಯಕ್ಕೆ ತಕ್ಕಂತೆ ಬಳಸುವ ಜ್ಞಾನ ನಮಗೆ ಬೇಕು ಎಂದು ಹೇಳಿದರು.

Also read: ಅಮೆರಿಕ | ಟೆಕ್ಸಾಸ್‌ನಲ್ಲಿ ಭೀಕರ ಅಪಘಾತ | ನಾಲ್ವರು ಭಾರತೀಯರು ಸಾವು
ನಾವಿರುವ ಸ್ಥಳವೇ ಒಂದು ರಾಶಿಚಕ್ರ; ಇದನ್ನು ಭೂಮಿಚಕ್ರ ಎಂದೂ ಕರೆಯುತ್ತಾರೆ. ದೈವಜ್ಞರ ಸುತ್ತ ಗ್ರಹಮಂಡಲವೇ ಇರುತ್ತದೆ. ರಾಶಿಚಕ್ರದ ಯಾವ ಭಾಗದಿಂದ ಒಂದು ಪ್ರಶ್ನೆ ಬಂದಿದೆ ಎಂದು ತಿಳಿದುಕೊಂಡರೆ ಆ ಪ್ರಶ್ನೆಯನ್ನು ವಿಶ್ಲೇಷಿಸಬಹುದು. ಪ್ರಶ್ನೆ ಬಂದ ಸ್ಥಳವನ್ನು ಲಗ್ನ ಎಂದು ತಿಳಿಯಬೇಕು ಎಂದರು.

“ಶಾಪ ಎನ್ನುವುದು ಒಂದು ಆಯುಧ. ಬಿಲ್ಲು-ಬಾಣ ಅಥವಾ ಯಾವುದೇ ಶಸ್ತ್ರಾಸ್ತ್ರಗಳಿಲ್ಲದೇ ಒಂದು ವಾಗ್ಬಾಣವೇ ಈ ಕೆಲಸ ಮಾಡುತ್ತದೆ. ಶಾಪ ನಮ್ಮ ವಿರುದ್ಧ ಆಯುಧವಾಗಿ ಕೆಲಸ ಮಾಡುತ್ತದೆ. ಎಂಟನೇ ಭಾವದ ಅಧಿಪತಿ, ಆರನೇ ಭಾವದ ಜತೆ ಸಂಬಂಧ ಬೆಳೆಸಿದಾಗ ಶಾಪ ಘನಘೋರವಾಗುತ್ತದೆ” ಎಂದು ವಿಶ್ಲೇಷಿಸಿದರು.
ನವಾಂಶದಲ್ಲಿ ಅಷ್ಟಮಾಧಿಪತಿ ಮತ್ತು ಪಂಚಮಾಧಿಪತಿಗಳ ಸಂಗಮವಾದರೆ ಮನೋವ್ಯಾಧಿಗೆ ಕಾರಣವಾಗುತ್ತದೆ. ಅಂತೆಯೇ ಪರಸ್ಪರರ ದೃಷ್ಟಿಯಿಂದ ಕೂಡಾ ಇಂಥ ಮನೋರೋಗ ಬರುತ್ತದೆ. ಷಷ್ಠಭಾವ, ಭಾವಾಧಿಪತಿ, ದೃಷ್ಟಿ, ಭಾವಕಾರಣ ಗ್ರಹಗಳ ಚಿಂತನೆ ಮಾಡಿದರೆ ಸಮರ್ಪಕವಾಗಿ ವಿಶ್ಲೇಷಿಸಬಹುದು ಎಂದರು.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರಭಾರತೀಮಹಾಸ್ವಾಮೀಜಿಯವರ ಜೀವನ ಸಾಧನೆಗಳ ಅನಾವರಣ ಇಂದು ನಡೆದಿದೆ. 32ನೇ ಗುರುಗಳ ಕಾಲದಲ್ಲಿ ಮಠ ಅತ್ಯುನ್ನತ ಮಟ್ಟ ತಲುಪಿತ್ತು. ಶಿಷ್ಯರಲ್ಲದವರೂ, ಬ್ರಿಟಿಷರು ಕೂಡಾ ಪರಮಪೂಜ್ಯ ರಾಘವೇಂದ್ರ ಭಾರತೀಸ್ವಾಮಿಗಳನ್ನು ರಾಜಮರ್ಯಾದೆಯಿಂದ ಗೌರವಿಸಿದ್ದರು. ಅಷ್ಟರ ಮಟ್ಟಿಗೆ ಮಠವನ್ನು, ಧರ್ಮವನ್ನು ಅತ್ಯುನ್ನತ ಸ್ಥಿತಿಗೆ ಒಯ್ದವರು. ಹಿರಿಯ ದೈವಜ್ಞರಾದ ಮಿತ್ತೂರು ಕೇಶವ ಭಟ್ಟರು ಅನಾವರಣ ನಡೆದಿರುವುದು ಅತ್ಯಂತ ಅರ್ಥಪೂರ್ಣ ಎಂದು ಹೇಳಿದರು.
ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಗೃಹ ಸಚಿವ ಅರಗದ ಜ್ಞಾನೇಂದ್ರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ಅರವಿಂದ ಬಂಗಲಗಲ್ಲು, ಶ್ರೀಶ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಸುಧನ್ವ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post